ಹೆಜಮಾಡಿ ಟೋಲ್ ಗೇಟ್‌ನಲ್ಲಿ ಬಸ್ಸುಗಳಿಂದ ಅವೈಜ್ಞಾನಿಕವಾಗಿ ಟೋಲ್ ಕಡಿತ ಮಾಡಲಾಗುತ್ತಿದೆ; ಎರಡು ದಿನಗಳ ಒಳಗೆ ಈ ಸಮಸ್ಯೆಗೆ ಪರಿಹಾರ ಕಲ್ಪಿಸದಿದ್ದಲ್ಲಿ ಪ್ರತಿಭಟನೆಯನ್ನು ತೀವ್ರಗೊಳಿಸಿ, ನಮ್ಮ ಶಕ್ತಿ ಪ್ರದರ್ಶನ ಮಾಡುವುದಾಗಿ ದಕ್ಷಿಣ ಕನ್ನಡ ಜಿಲ್ಲೆಯ ಬಸ್ ಮಾಲೀಕರು ಎಚ್ಚರಿಕೆ ನೀಡಿದ್ದಾರೆ.
‘ಹೆಜಮಾಡಿ ಟೋಲ್ ಗೇಟ್‌ನಲ್ಲಿ ಹಗಲು ದರೋಡೆ ಮಾಡಲಾಗುತ್ತಿದೆ’ ಎಂದು ಆರೋಪಿಸಿ ಕೆನರಾ ಬಸ್ ಮಾಲಕರ ಸಂಘ ಹಾಗೂ ಕರಾವಳಿ ಬಸ್ಸು ಮಾಲಕರ ಸಂಘದ ಪದಾಧಿಕಾರಿಗಳು ಬುಧವಾರ ಸಾಂಕೇತಿಕವಾಗಿ ಪ್ರತಿಭಟಿಸಿದರು.
ತಮ್ಮ ಮಿನಿ ಬಸ್ಸುಗಳಿಗೂ ಸಹ ದೊಡ್ಡ ವಾಹನಗಳ ಟೋಲನ್ನು ಕಡಿತಗೊಳಿಸಲಾಗುತ್ತಿದೆ. ಅವೈಜ್ಞಾನಿಕವಾಗಿರುವ ಈ ಕ್ರಮವನ್ನು ಕೂಡಲೇ ನಿಲ್ಲಿಸಬೇಕು. ಇಲ್ಲವಾದಲ್ಲಿ ಬಸ್ಸುಗಳನ್ನೆಲ್ಲಾ ಟೋಲ್ ಗೆ ಅಡ್ಡವಾಗಿರಿಸಿ ತೀವ್ರ ಪ್ರತಿಭಟನೆ ನಡೆಸುತ್ತೇವೆ ಎಂದು ಅಧಿಕಾರಿಗಳಿಗೆ ಎಚ್ಚರಿಕೆ ನೀಡಿದ್ದಾರೆ.
ಫಾಸ್ಟ್ ಟ್ಯಾಗ್ ಮೊತ್ತದ ಹೊರತಾಗಿಯೂ ನಮಗೆ ಮತ್ತೆ ಟೋಲ್ ಬರೆ ಬೀಳುತ್ತಿದೆ; ದೇಶದ ಎಲ್ಲೂ ಇಲ್ಲದ ಪರಿಸ್ಥಿತಿ ಇಲ್ಲಿದೆ. ನಮಗೆ ಬೇಡಿಕೆಗಳಿಗೆ ಸ್ಪಂದಿಸದಿದ್ದಲ್ಲಿ ಟೋಲ್ ಗೇಟ್ ಬಂದ್ ಮಾಡಿ ಪ್ರತಿಭಟನೆ ಮಾಡುತ್ತೇವೆ ಎಂದು ಬಸ್ ಮಾಲೀಕರ ಸಂಘದ ದಿಲ್ ರಾಜ್ ಆಳ್ವ ಹೇಳಿದರು.
ಕೆನರಾ ಬಸ್ ಮಾಲೀಕರ ಸಂಘದ ಅಧ್ಯಕ್ಷ ರಾಜವರ್ಮ ಬಲ್ಲಾಳ್ ಮಾತನಾಡಿ. “ಹೆಜಮಾಡಿ, ಸಾಸ್ತಾನ, ಶಿರೂರುಗಳಲ್ಲಿ ಪ್ರತಿ ಬಸ್ ಗಳಿಂದ ದಿನಕ್ಕೆ ₹700 ರಷ್ಟು ಮೊತ್ತ ಟೋಲ್ ಹೆಸರಲ್ಲಿ ಸುಲಿಗೆಯಾಗುತ್ತಿದೆ” ಎಂದು ಆರೋಪಿಸಿದರು.
ಕೆನರಾ ಬಸ್ ಮಾಲಕರ ಸಂಘದ ಅಧ್ಯಕ್ಷ ರಾಘವೇಂದ್ರ ಭಟ್ ಮಾತನಾಡಿ, “ಟೋಲ್ ಹೆಸರಿನಲ್ಲಿ ಹಗಲು ದರೋಡೆಯಾಗುತ್ತಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.
ಇದನ್ನೂ ಓದಿ; ರೈತ ವಿರೋಧಿ ಕಾಯ್ದೆಗೆ ಜೋತು ಬಿದ್ದ ರಾಜ್ಯ ಕಾಂಗ್ರೆಸ್ ಸರ್ಕಾರ : ನಿಲುವು ಸ್ಪಷ್ಟಡಿಸುವಂತೆ ಸಿಎಂಗೆ ತುರ್ತು ಬಹಿರಂಗ ಪತ್ರ


