Homeಮುಖಪುಟಒಂದೇ ವಾರದಲ್ಲಿ ಅನರ್ಹ ಶಾಸಕ ಎಂಟಿಬಿ ಅಕೌಂಟಿಗೆ 48 ಕೋಟಿ ಎಲ್ಲಿಂದ ಬಂತು?: ದಿನೇಶ್ ಗುಂಡೂರಾವ್...

ಒಂದೇ ವಾರದಲ್ಲಿ ಅನರ್ಹ ಶಾಸಕ ಎಂಟಿಬಿ ಅಕೌಂಟಿಗೆ 48 ಕೋಟಿ ಎಲ್ಲಿಂದ ಬಂತು?: ದಿನೇಶ್ ಗುಂಡೂರಾವ್ ಟ್ವೀಟ್….

- Advertisement -
- Advertisement -

ರಾಜ್ಯದ ಉಪಚುನಾವಣೆ ರಂಗೇರುತ್ತಿದೆ. ಇವತ್ತು ನಾಮಪತ್ರ ಸಲ್ಲಿಸಲು ಕಡೆಯ ದಿನ. ಎಲ್ಲಾ ಕಡೆ ನೂಕು ನುಗ್ಗುಲು. ಇದರ ನಡುವೆಯೇ ಕೆಪಿಸಿಸಿ ಅಧ್ಯಕ್ಷ ದಿನೇಶ್ ಗುಂಡೂರಾವ್ ಮಾಡಿರುವ ಟ್ವೀಟೊಂದು ದೊಡ್ಡ ಸಂಚಲನ ಸೃಷ್ಟಿಸುತ್ತಿದೆ.

ಅದು ನೇರಾನೇರ ಅನರ್ಹ ಶಾಸಕ ಎಂಟಿಬಿ ನಾಗರಾಜ್‌ರವರಿಗೆ ಸಂಬಂಧಿಸಿದ್ದು. ಆ ಮೂಲಕ ರಾಜೀನಾಮೆ ಕೊಟ್ಟು ಮೈತ್ರಿ ಸರ್ಕಾರವನ್ನು ಬೀಳಿಸಿದ ಎಲ್ಲಾ ಅನರ್ಹ ಶಾಸಕರ ಹಿಂದಿನ ಪ್ರೇರಣೆಯನ್ನು ಕೆಣಕಿರುವಂತದ್ದು. ಅಷ್ಟಕ್ಕೂ ದಿನೇಶ್ ಗುಂಡೂರಾವ್ ಯೂತ್ ಕಾಂಗ್ರೆಸ್ಸಿನ ರಾಷ್ಟ್ರೀಯ ಪ್ರಚಾರ ಸಮಿತಿಯ ಮುಖ್ಯಸ್ಥ ಶ್ರೀವತ್ಸ ಅವರ ಟ್ವೀಟನ್ನು ಮರುಟ್ವೀಟ್ ಮಾಡಿ ಕೇಳಿರುವುದಾದರು ಏನು ಗೊತ್ತಾ?

“ಆಪರೇಷನ್ ಕಮಲದ ಮೂಲಕ ಬಿಜೆಪಿ ಅಧಿಕಾರಕ್ಕೆ ಬಂದ ಕೆಲವೇ ದಿನಗಳಲ್ಲಿ ಅನರ್ಹ ಶಾಸಕರೊಬ್ಬರ ಅಕೌಂಟಿಗೆ ದೊಡ್ಡ ಮೊತ್ತದ ಹಣ ವರ್ಗಾವಣೆಯಾಗಿದೆ. ಪಕ್ಷಾಂತರ ಮಾಡಲು ಶಾಸಕರಿಗೆ ಬಿಜೆಪಿ ನಾಯಕರು ಹಣದ ಆಮಿಷ ಒಡ್ಡಿದ ಆಡಿಯೋ/ವಿಡಿಯೋ ಟೇಪ್‌ಗಳು ಈಗಾಗಲೇ ಲಭ್ಯವಿವೆ. ಇಂಥಾ ಅನುಮಾನಸ್ಪದ ಹಣದ ಮೂಲದ ತನಿಖೆ ಮಾಡೋದಿಲ್ಲವೇ? ಐಟಿ ಮತ್ತು ಇಡಿಗಳು ಯಾಕೆ ಮೌನವಾಗಿವೆ” ಎಂದು ಪ್ರಶ್ನಿಸಿದ್ದಾರೆ.

ದಿನೇಶ್ ಗುಂಡೂರಾವ್ ಯಾವ ಶಾಸಕ ಎಂದು ತನ್ನ ಟ್ವೀಟ್‌ನಲ್ಲಿ ಉಲ್ಲೇಖಿಸಿಲ್ಲವಾದರು, ಅವರ ಪೋಸ್ಟ್ ಮಾಡಿರುವ ಶ್ರೀವತ್ಸ ಅವರ ಟ್ವೀಟಿನಲ್ಲಿ ಸ್ಪಷ್ಟವಾಗಿ ಆ ಶಾಸಕ ಎಂಟಿಬಿ ನಾಗರಾಜ್ ಎಂದು ದಾಖಲಾಗಿದೆ ಮಾತ್ರವಲ್ಲ, ಆಗಸ್ಟ್ ೨ನೇ ತಾರೀಕಿನಿಂದ ೮ನೇ ತಾರೀಕಿನವರೆಗೆ ಯಾವ ಯಾವ ದಿನಾಂಕದಂದು ಎಷ್ಟೆಷ್ಟು ಅಕೌಂಟುಗಳಿಂದ ಹಣ ವರ್ಗಾವಣೆ ಎಂಬ ಬ್ಯಾಲೆನ್ಸ್ ಶೀಟೇ ಇದೆ!

“ಯಡಿಯೂರಪ್ಪ ಮುಖ್ಯಮಂತ್ರಿಯಾದ ಕೆಲವೇ ದಿನಗಳಲ್ಲಿ, ಆಗಸ್ಟ್ 2ರಿಂದ 8ರನ ನಡುವೆ ಬಂಡಾಯ ಶಾಸಕ ಎಂಟಿಬಿ ನಾಗರಾಜ್ ಅಕೌಂಟಿಗೆ 48.32 ಕೋಟಿ ಸಂದಾಯವಾಗಿದೆ. ಪ್ರತಿ ಸಲವೂ 90 ಲಕ್ಷಕ್ಕಿಂತ ಹೆಚ್ಚು, ಆದ್ರೆ 1 ಕೋಟಿಗಿಂತ ಕಡಿಮೆ ಮೊತ್ತವನ್ನು ವರ್ಗಾವಣೆ ಮಾಡಲಾಗಿದೆ. ಈ ಹಣ ಅವರಿಗೆ ಎಲ್ಲಿಂದ ಬಂತು? ಸಿಬಿಐ-ಐಟಿ-ಇಡಿ ದಾಳಿ ಇಲ್ಲವೇ?” ಎಂದು ಶ್ರೀವತ್ಸ ತಮ್ಮ ಟ್ವೀಟ್‌ನಲ್ಲಿ ಪ್ರಶ್ನಿಸಿದ್ದಾರೆ.

ರಾಜೀನಾಮೆ ನೀಡಿ, ಮುಂಬೈ ವಾಸ್ತವ್ಯದಿಂದ ವಾಪಾಸದ ಕೆಲ ದಿನಗಳಲ್ಲೇ ದುಬಾರಿ ೧೧ ಕೋಟಿ ಬೆಲೆಬಾಳುವ ರಾಲ್ಸ್ ರಾಯ್ಸ್ ಕಾರನ್ನು ಖರೀದಿಸಿ ಎಲ್ಲರ ಹುಬ್ಬೇರುವಂತೆ ಮಾಡಿದ್ದ ಎಂಟಿಬಿ ನಾಗರಾಜ್, ಇದೀಗ ಕಾಂಗ್ರೆಸ್ಸಿಗರ ಟ್ವೀಟಿನಿಂದ ಮತ್ತಷ್ಟು ಮುಜುಗರಕ್ಕೆ ಈಡಾಗಿದ್ದಾರೆ. ಅಂದಹಾಗೆ, ಅವರು ಸ್ಪರ್ಧಿಸುತ್ತಿರುವ ಹೊಸಕೋಟೆಯಲ್ಲಿ ಬಿಜೆಪಿ ಸಂಸದ ಬಿ.ಎನ್.ಬಚ್ಚೇಗೌಡರ ಮಗ ಶರತ್ ಬಚ್ಚೇಗೌಡ ಬಂಡಾಯ ಅಭ್ಯರ್ಥಿಯಾಗಿ ಸ್ಪರ್ಧಿಸಿದ್ದು, ಜೆಡಿಎಸ್ ತನ್ನ ಅಭ್ಯರ್ಥಿಯನ್ನು ಹಾಕದೆ ಶರತ್‌ಗೆ ಬೆಂಬಲ ಘೋಷಿಸಿದೆ. ಇತ್ತ ಕಾಂಗ್ರೆಸ್‌ನಿಂದ ಸ್ಪರ್ಧಿಸಿರುವ ಹೆಬ್ಬಾಳ ಶಾಸಕ ಭೈರತಿ ಸುರೇಶ್ ಅವರ ಮಡದಿ ಪದ್ಮಾವತಿಯವರ ಸ್ಪರ್ಧೆಯೂ ಎಂಟಿಬಿ ನಾಗರಾಜ್‌ರ ಗೆಲುವಿನ ಸಂಭಾವ್ಯತೆ ಡೋಲಾಯಮಾನ ಆಗುವಂತೆ ಮಾಡಿದೆ.

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಲೈಂಗಿಕ ದೌರ್ಜನ್ಯ ಪ್ರಕರಣ : ರೇವಣ್ಣ, ಪ್ರಜ್ವಲ್‌ಗೆ ಎಸ್‌ಐಟಿ ನೋಟಿಸ್

0
ಲೈಂಗಿಕ ದೌರ್ಜನ್ಯ ಪ್ರಕರಣಕ್ಕೆ ಸಂಬಂಧಪಟ್ಟಂತೆ ತನಿಖೆಗೆ ಹಾಜರಾಗಲು ಆರೋಪಿಗಳಾದ ಹೆಚ್‌.ಡಿ ರೇವಣ್ಣ ಹಾಗೂ ಪ್ರಜ್ವಲ್ ರೇವಣ್ಣಗೆ ಎಸ್ಐಟಿ ಅಧಿಕಾರಿಗಳು ಇಂದು (ಏ.30) ನೋಟಿಸ್ ಜಾರಿ ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಹಾಸನದ ಹೊಳೆನರಸೀಪುರ ನಗರ...