HomeUncategorizedಅನಂತ್ ಕುಮಾರ್ ಹೆಗಡೆಯ ಹರಕುಬಾಯಿ, ಜಗ್ಗೇಶ್ ಮಾತಿಗೆ ತಾತ್ಕಾಲಿಕವಾಗಿ ಬಿತ್ತು ಬ್ರೇಕ್

ಅನಂತ್ ಕುಮಾರ್ ಹೆಗಡೆಯ ಹರಕುಬಾಯಿ, ಜಗ್ಗೇಶ್ ಮಾತಿಗೆ ತಾತ್ಕಾಲಿಕವಾಗಿ ಬಿತ್ತು ಬ್ರೇಕ್

- Advertisement -
- Advertisement -

ರಾಜ್ಯದ 15 ವಿಧಾನಸಭೆ ಕ್ಷೇತ್ರಗಳ ಉಪಚುನಾವಣೆಗೆ ರಾಜಕೀಯ ಪಕ್ಷಗಳು ಸಿದ್ದತೆ ನಡೆಸುತ್ತಿರುವಾಗಲೇ ಬಿಜೆಪಿಯ ಸ್ಟಾರ್ ಪ್ರಚಾರಕರ ಪಟ್ಟಿಯಿಂದ ಕೆಲವು ಹರಕುಬಾಯಿಯ, ಕೊಳಕು ಮಾತುಗಳ ಸರದಾರರನ್ನು
ಸದ್ದಿಲ್ಲದೆ ಕೈಬಿಡಲಾಗಿದೆ. ಜನರನ್ನು ಪ್ರಚೋದಿಸುವುದು ಮತ್ತು ದ್ವಂದ್ವಾರ್ಥದ ಡೈಲಾಗ್ ಹೇಳಿ ಜನರನ್ನು ನಗಿಸುತ್ತಾ ತಾನು ನಗೆಪಾಟಲಿಗೆ ಒಳಗಾಗುತ್ತಿದ್ದ ವ್ಯಕ್ತಿಗಳನ್ನು ಪ್ರಚಾರಸಭೆಗಳಿಂದ ಕೈಬಿಟ್ಟು ಬಿಜೆಪಿ ಡ್ಯಾಮೇಜ್ ಕಂಟ್ರೋಲ್ ಮಾಡಲು ಹೊರಟಿದೆ.

ಹೌದು, ಸಂಸದ ಅನಂತಕುಮಾರ್ ಹೆಗಡೆ ಬಾಯಿ ಬಿಟ್ಟರೆ ಸಾಕು ಬರೀ ದ್ವೇಷದ ಬೆಂಕಿಯನ್ನೇ ಉಗುಳುತ್ತಿದ್ದ ವ್ಯಕ್ತಿ. ಅಲ್ಪಸಂಖ್ಯಾತರು ಅದರಲ್ಲೂ ಮುಸ್ಲೀಮರು ಮತ್ತು ದಲಿತರು, ಬಿಜೆಪಿಯೇತರ ಯಾವುದೇ  ಮುಖಂಡರಾಗಲಿ ಅವರ ವಿರುದ್ದ  ಕೆಂಡ ಕಾರುತ್ತಿದ್ದರು.

ಕರಾವಳಿಯವರನ್ನು ಬಿಟ್ಟರೆ ಬೇರೆ ಯಾರಿಗೂ ಕನ್ನಡ ಮಾತನಾಡುವುದೇ ಬರುವುದಿಲ್ಲ ಎಂದು ಹೇಳಿ ಭಾರೀ ಪ್ರಚಾರ ಪಡೆದಿದ್ದರು. ಆಸ್ಪತ್ರೆಗೆ ಭೇಟಿ ನೀಡಿ ವೈದ್ಯರ ಮೇಲೆ ಹಲ್ಲೆಯೂ ನಡೆಸಿದ್ದರು. ಸಂವಿಧಾನವನ್ನು ಬದಲಾಯಿಸಲೆಂದೇ ಬಿಜೆಪಿ ಅಧಿಕಾರಕ್ಕೆ ಬಂದಿರುವುದು ಎಂದು ಹೇಳಿ ವಿವಾದ ಮೈಮೇಲೆ ಎಳೆದುಕೊಂಡಿದ್ದರು. ಅನಂತಕುಮಾರ್ ಹೆಗಡೆ ಹೇಳಿಕೆಗೆ ರಾಜ್ಯ ಮತ್ತು ದೇಶಾದ್ಯಂತ ವ್ಯಾಪಕ ವಿರೋಧ ವ್ಯಕ್ತವಾಗಿತ್ತು. ಆದರೆ ಇಂತಹ ಪ್ರಚೋದನಾತ್ಮಕ ಮಾತುಗಳಿಂದಲೇ ಅಧಿಕಾರದ ಗದ್ದುಗೆ ಹಿಡಿಯುತ್ತಿರುವ ಬಿಜೆಪಿ ಅದ್ಯಾಕೋ ಅನಂತ ಎಂದರೆ ಅನಂತ ದೂರ ಎಂಬಂತೆ ದೂರದೂರ ಸರಿದಿದೆ.

ಯಾವಾಗಲೇ ಚುನಾವಣೆ ನಡೆಯಲಿ ಅನಂತಕುಮಾರ್ ಹೆಗಡೆ ಹೆಸರು ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಇರುತ್ತಿತ್ತು. ಆದರೆ ಬಿಜೆಪಿಗೆ ಜ್ಞಾನೋದಯವಾಗಿದೆಯೋ ಅಥವಾ ಬೇಕೆಂದೇ ಅನಂತ ಹೆಗಡೆ ಹೆಸರು ಬಿಟ್ಟಿದೆಯೋ ಗೊತ್ತಿಲ್ಲ. ಆದರೆ ಅವರ ಹೆಸರನ್ನು ಮೆಲ್ಲಗೆ ಇಲ್ಲದಂತೆ ಮಾಡಿದೆ. ಪ್ರಚೋದನೆಯ ಹೇಳಿಕೆಗಳು ಲಾಭವನ್ನು ತಂದುಕೊಡುವುದಿಲ್ಲ ಎಂಬ ಭಾವನೆ ಬಿಜೆಪಿಯಲ್ಲಿ ಬಂದಿದೆಯೋ ಎನ್ನುವ ಅನುಮಾನ ಕಾಡುತ್ತದೆ.

ತಾನು ಹೀಗೆ ಮಾತನಾಡಿದರೆ ಪ್ರಚಾರ ಪಡೆದುಕೊಳ್ಳಬಹುದು ಎಂದುಕೊಂಡಿದ್ದ ಅನಂತಕುಮಾರ್ ಹೆಗಡೆ ಇದೀಗ ಬಾಯಿ ಒಲಿದುಕೊಂಡು ಕೂರುವಂತೆ ಮಾಡಿದೆ ಬಿಜೆಪಿ. ಸಚಿವ ಸ್ಥಾನವೂ ಇಲ್ಲದೆ, ಪ್ರಚಾರ ಸಭೆಗಳಲ್ಲೂ ಭಾಗವಹಿಸದೇ ಅನಂತ ಇರಬೇಕಾಗಿದೆ. ಅಂದರೆ ಇಂತಹ ಹರಕುಬಾಯಿಯಿಂದ ಪಕ್ಷಕ್ಕೆ ಮತಗಳು ಬರುವುದಿಲ್ಲ. ಇವರನ್ನು ಪ್ರಚಾರಕ್ಕೆ ಕರೆದು ತಂದರೆ ಬರುವ ಮತಗಳು ಹೋಗುತ್ತವೆ. ಅವರೇನಿದ್ದರೂ ಉತ್ತರ ಕನ್ನಡ ಜಿಲ್ಲೆಗೆ ಮಾತ್ರ ಸೀಮಿತ ಎಂಬ ತೀರ್ಮಾನಕ್ಕೆ ಬಿಜೆಪಿ ಬಂದಂತಿದೆ.

ಇನ್ನೊಂದು ಕಡೆ ಸಿನಿಮಾ ನಟ ಜಗ್ಗೇಶ್ ಅವರ ಹೆಸರನ್ನು ಸ್ಟಾರ್ ಪ್ರಚಾರಕರ ಪಟ್ಟಿಯಿಂದ ತೆಗೆದು ಹಾಕಲಾಗಿದೆ. ತುರುವೇಕೆರೆ ಜಡೇಮಾಯಸಂದ್ರದ ಜಗ್ಗೇಶಣ್ಣ ಪ್ರಚಾರ ಪಟ್ಟಿಗೆ ಸೇರ್ಪಡೆ ಮಾಡಲು ಬಿಜೆಪಿ ರಾಜ್ಯ ನಾಯಕತ್ವ ಹಿಂದೇಟು ಹಾಕಿದೆ. ನಟಿಯರಾದ ತಾರ ಮತ್ತು ಶ್ರುತಿ ಅವರ ಜೊತೆ ಜಗ್ಗೇಶ್ ಕೂಡ ಇರುತ್ತಿದ್ದರು. ಈಗ ಅವರು ಬಿಜೆಪಿಯಲ್ಲಿ ಲೆಕ್ಕಕ್ಕೂ, ಆಟಕ್ಕೂ ಇಲ್ಲದ ವ್ಯಕ್ತಿಯಾಗಿದ್ದಾರೆ.

ಸಿನಿಮಾ ಡೈಲಾಗ್ ಹೊಡೆದು ಜನರನ್ನು ರಂಜಿಸುತ್ತಿದ್ದ ಜಗ್ಗೇಶ್ ಈಗ ಸ್ಟಾರ್ ಅಲ್ಲ ಎಂಬುದನ್ನು ಬಿಜೆಪಿ ಕಂಡುಕೊಂಡಿದೆ. ಇದುವರೆಗೂ ಚುನಾವಣೆಗಳಲ್ಲಿ ಅವರನ್ನು ಬಳಸಿಕೊಂಡು ಕಸದಂತೆ ಬಿಸಾಕಿದೆ. ಬಿಜೆಪಿಯಲ್ಲಿ ಗಿಮಿಕ್ ಮಾಡಬಹುದು ಅಂದುಕೊಂಡಿದ್ದ ಜಗ್ಗೇಶಣ್ಣ ಸಿನಿಮಾದ ಜಪ ಮಾಡುತ್ತಿದ್ದಾರೆ ಎಂದು ಕೆಲವರು ಗೇಲಿ ಮಾಡುತ್ತಿದ್ದಾರೆ. ಜಗ್ಗೇಶ್ ಕೂಡಾ ಕೊಳಕು ಮಾತುಗಳನ್ನು ಆಡುತ್ತಿದ್ದರು. ಈಗ ಬಿಜೆಪಿಯಲ್ಲಿ ಅವರ ಪಾತ್ರವೇನು ಎನ್ನುವ ಪ್ರಶ್ನೆ ಎದುರಾಗಿದೆ.

ಕುಮಾರಸ್ವಾಮಿ ಸರ್ಕಾರ ಅಧಿಕಾರದಿಂದ ಇಳಿದು ಯಡಿಯೂರಪ್ಪ ಸರ್ಕಾರ ಅಸ್ತಿತ್ವಕ್ಕೆ ಬಂದಾಗ ಬಿಜೆಪಿಯನ್ನು ಸಮರ್ಥವಾಗಿ ಸಮರ್ಥಿಸಿಕೊಂಡಿದ್ದ ಕಾನೂನು ಮತ್ತು ಸಂಸದೀಯ ವ್ಯವಹಾರಗಳ ಸಚಿವ ಜೆ.ಸಿ.ಮಾಧುಸ್ವಾಮಿ ಪ್ರಚಾರಕರ ಪಟ್ಟಿಯಲ್ಲಿ ಕೊನೆಯ ಸ್ಥಾನಕ್ಕೆ ತೃಪ್ತಿಪಡುವಂತಾಗಿದೆ. ಆರ್. ಅಶೋಕ ಅವರ ಹೆಸರೂ ಕೂಡ 18ನೇ ಸ್ಥಾನಕ್ಕೆ ಕುಸಿದಿದೆ. ‘ತೆಂಗಿನಕಾಯಿ’ ಬೆಲೆಗಿಂತಲೂ ಕಡಿಮೆ ಎಂದು ಅಶೋಕ್ ಸ್ಥಾನದ ಕುರಿತು ಗೇಲಿ ಮಾಡಿದ್ದಾರೆ.

ಸಜ್ಜನ ರಾಜಕಾರಣಿಯೆಂದು ಘೋಷಿಸಿಕೊಂಡಿರುವ ಎಸ್. ಸುರೇಶ್ ಕುಮಾರ್ ಅವರಿಗೂ ಪಟ್ಟಿಯಲ್ಲಿ ಸ್ಥಾನ ಸಿಕ್ಕಿಲ್ಲ. ಕಾಂಗ್ರೆಸ್ ನಲ್ಲಿ ಪಾಂಚಜನ್ಯ ಮೊಳಗಿಸಿ ಕೊನೆಗಾಲದಲ್ಲಿ ಬಿಜೆಪಿ ಸೇರ್ಪಡೆಗೊಂಡ ಎಸ್.ಎಂ.ಕೃಷ್ಣ ಅವರನ್ನು ಬಿಜೆಪಿಯ ಗರ್ಭಗುಡಿಗೆ ಬಿಟ್ಟುಕೊಂಡಿಲ್ಲ. ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ವಿರುದ್ದ ಆಕ್ರೋಶ ಹೊರಹಾಕಿ ಹೊರನಡೆದ ದಲಿತ ನಾಯಕ ವಿ.ಶ್ರೀನಿವಾಸ್ ಪ್ರಸಾದ್ ಅವರಿಗೂ ಪಕ್ಷದ ಹತ್ತಿರ ಸುಳಿಯಗೊಟ್ಟಿಲ್ಲ.

ಆರ್ ಎಸ್ ಎಸ್ ನಿಂದ ರಾಜಕಾರಣಕ್ಕೆ ಬಂದ ಬಿ.ಎಲ್.ಸಂತೋಷ್, ಎಬಿವಿಪಿಯಿಂದ ಬಂದ ಎನ್. ರವಿಕುಮಾರ್ ಮತ್ತು, ಪ್ರಹ್ಲಾದ ಜೋಶಿ ಸೇರಿದಂತೆ ಪ್ರಮುಖ ಬ್ರಾಹ್ಮಣರು ಮತ್ತು ಲಿಂಗಾಯತ ನಾಯಕರಿಗೆ ಹೆಚ್ಚಿನ ಆದ್ಯತೆ ನೀಡಲಾಗಿದೆ. ಪ್ರತಾಪ್ ಸಿಂಹ ಪ್ರಚಾರಕರ ಪಟ್ಟಿಯಲ್ಲಿ ಸ್ಥಾನ ಪಡೆದಿದ್ದರೂ ಹಿಂದೆ ಕೂರುವಂತಹ ಪರಿಸ್ಥಿತಿ ಇದೆ.

ಗರ್ಭಗುಡಿ ಸಂಸ್ಕೃತಿಯಲ್ಲಿ ಆರ್ ಎಸ್ಎಸ್ ಮೂಲದವರಿಗೆ ಮೊದಲ ಆದ್ಯತೆ ನೀಡಿರುವುದು ಎದ್ದು ಕಾಣುತ್ತದೆ. ಯಡಿಯೂರಪ್ಪ ಬೆಂಬಲಿಗರನ್ನು ಕೊನೆಯ ಸ್ಥಾನಕ್ಕೆ ತಳ್ಳಲ್ಪಟ್ಟಿದ್ದು ಬಿ.ಎಲ್. ಸಂತೋಷ್ ಮತ್ತು ಅಧ್ಯಕ್ಷರ ಕೈ ಮೇಲಾಗಿರುವುದು ಪಟ್ಟಿಯಲ್ಲಿರುವ ಹೆಸರುಗಳನ್ನು ನೋಡಿದರೆ ಗೊತ್ತಾಗುತ್ತದೆ. ಇನ್ನು ಕಾಂಗ್ರೆಸ್ ನಲ್ಲಿ ಸ್ಟಾರ್ ಪ್ರಚಾರಕರಾಗಿದ್ದ,  ಜೆಡಿಎಸ್ ನಲ್ಲಿ ಅಧ್ಯಕ್ಷ ಸ್ಥಾನ ಅಲಂಕರಿಸಿದ್ದ ಎಚ್.ವಿಶ್ವನಾಥ್ ಬಿಜೆಪಿಯಲ್ಲಿ ಕೇವಲ ಸ್ಥಳೀಯ ಮುಖಂಡರಂತೆ ಇರಬೇಕಾಗಿದೆ.

ಗೋವಿಂದ ಕಾರಜೋಳ ಸೇರಿದಂತೆ ಒಂದಿಬ್ಬರು ಮೂವರು ದಲಿತ ನಾಯಕರ ಹೆಸರನ್ನು ಮತ ಗಳಿಕೆಗೆ ಮಾತ್ರ ಸ್ಟಾರ್ ಪ್ರಚಾರಕರ ಪಟ್ಟಿಯಲ್ಲಿ ಹಾಕಲಾಗಿದೆ. ಅದು ನೆಪ ಮಾತ್ರ. ಹಿಂದೆ ಯಡಿಯೂರಪ್ಪ ಸರ್ಕಾರದಲ್ಲಿ ಎ. ನಾರಾಯಣಸ್ವಾಮಿ ಅವರನ್ನು ಪ್ರಚಾರಕರ ಪಟ್ಟಿಯಲ್ಲಿ ಹಾಕಿಕೊಂಡಿದ್ದರು. ಈಗ ಅವರ ಹೆಸರನ್ನು ಕೈಬಿಟ್ಟು ಕೇವಲ ಬ್ರಾಹ್ಮಣರು ಮತ್ತು ಲಿಂಗಾಯತರು ಅದರಲ್ಲೂ ಆರ್ ಎಸ್ ಎಸ್ ಹಿನ್ನೆಲೆಯಿಂದ ಬಂದವರ ಹೆಸರನ್ನು ಪಟ್ಟಿಯಲ್ಲಿ ಸೇರಿಸಿಕೊಂಡಿದ್ದಾರೆ.

ಕೆ.ಈ.ಸಿದ್ದಯ್ಯ

 

(ಅತಿಥಿ ಲೇಖಕರ ಬರಹಗಳಲ್ಲಿನ ಅಭಿಪ್ರಾಯಗಳು ಅವರ ಸ್ವಂತದ್ದೇ ಹೊರತು, ನಾನುಗೌರಿ.ಕಾಂನ ಸಂಪಾದಕೀಯ ತಂಡದ ಅನಿಸಿಕೆಗಳಾಗಿರಬೇಕೆಂದೇನಿಲ್ಲ.)

ಸತ್ಯದ ಪಥಕ್ಕೆ ಬಲ ತುಂಬಲು ದೇಣಿಗೆ ನೀಡಿ. ನಿಮ್ಮಗಳ ಬೆಂಬಲವೇ ನಮಗೆ ಬಲ. ಈ ಕೆಳಗಿನ ಲಿಂಕ್ ಮೂಲಕ ದೇಣಿಗೆ ನೀಡಿ

LEAVE A REPLY

Please enter your comment!
Please enter your name here

- Advertisment -

Must Read

ಬಿಹಾರದಲ್ಲಿ ಜೆಡಿಯು ಮುಖಂಡನ ಗುಂಡಿಟ್ಟು ಹತ್ಯೆ: ಭುಗಿಲೆದ್ದ ಪ್ರತಿಭಟನೆ

0
ಜೆಡಿಯು ಯುವ ಮುಖಂಡನನ್ನು ಅಪರಿಚಿತ ದಾಳಿಕೋರರು ಗುಂಡಿಕ್ಕಿ  ಹತ್ಯೆ ಮಾಡಿರುವ ಘಟನೆ ಬಿಹಾರದ ಪಾಟ್ನಾದಲ್ಲಿ ನಡೆದಿದ್ದು, ಸುದ್ದಿ ತಿಳಿಯುತ್ತಿದ್ದಂತೆ ಸ್ಥಳೀಯ ನಿವಾಸಿಗಳು ಬೀದಿಗಿಳಿದು ಪ್ರತಿಭಟನೆಯನ್ನು ನಡೆಸಿದ್ದಾರೆ. ಸೌರಭ್ ಕುಮಾರ್ ಹತ್ಯೆಗೀಡಾದ ಜೆಡಿಯು ಯುವ ಮುಖಂಡ....