ಕರ್ನಾಟಕ ಸರ್ಕಾರ ಬುಧವಾರ (ಫೆ.5) ಆಯೋಜಿಸಿದ್ದ ಉನ್ನತ ಶಿಕ್ಷಣ ಸಚಿವರ ಸಮಾವೇಶದಲ್ಲಿ ವಿಶ್ವವಿದ್ಯಾಲಯ ಅನುದಾನ ಆಯೋಗ (ಯುಜಿಸಿ) ರೂಪಿಸಿರುವ ಕರಡು ನಿಯಮಗಳನ್ನು ಹಿಂಪಡೆಯುವಂತೆ ಒತ್ತಾಯಿಸುವ 15 ಅಂಶಗಳ ನಿರ್ಣಯವನ್ನು ಅಂಗೀಕರಿಸಲಾಗಿದೆ.
ಉನ್ನತ ಶಿಕ್ಷಣದ ಮೇಲೆ ರಾಜ್ಯಗಳು ಹೊಂದಿರುವ ಅಧಿಕಾರವನ್ನು ಮೊಟಕುಗೊಳಿಸಲು ಹೊರಟಿರುವ ಕೇಂದ್ರ ಸರ್ಕಾರದ ನೀತಿಗಳ ವಿರುದ್ಧ ಆರು ರಾಜ್ಯ ಸರ್ಕಾರಗಳು ಒಗ್ಗಟ್ಟು ಪ್ರದರ್ಶಿಸಿದ್ದು, ಕರಡು ನಿಯಮಗಳನ್ನು ತಿರಸ್ಕರಿಸಲು ಒಮ್ಮತದ ನಿರ್ಣಯ ಕೈಗೊಂಡಿವೆ.
ಸಮಾವೇಶದ ನಂತರ ಮಾಧ್ಯಮಗಳನ್ನುದ್ದೇಶಿಸಿ ಮಾತನಾಡಿದ ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಡಾ. ಎಂ.ಸಿ ಸುಧಾಕರ್, “ರಾಜ್ಯಗಳು ಯುಜಿಸಿಯ ನಿರ್ಧಾರಕ್ಕಾಗಿ ಕಾಯುತ್ತಿವೆ. ಯುಜಿಸಿಯಿಂದ ಪ್ರತಿಕ್ರಿಯೆ ಬಂದ ಬಳಿಕ ಮುಂದಿನ ಕ್ರಮದ ಬಗ್ಗೆ ನಿರ್ಧರಿಸಲಿವೆ ಎಂದಿದ್ದಾರೆ.
“ಯುಜಿಸಿ ಪ್ರಕಟಿಸಿದ ಕರಡು ನಿಯಮಗಳನ್ನು ತಕ್ಷಣವೇ ಹಿಂತೆಗೆದುಕೊಳ್ಳಬೇಕೆಂದು ನಾವು ಒತ್ತಾಯಿಸುತ್ತೇವೆ. ಈ ಸಂಬಂಧ ರಾಜ್ಯಗಳೊಂದಿಗೆ ಸಭೆ ನಡೆಸಬೇಕು” ಎಂದು ಹೇಳಿದ್ದಾರೆ.
“ಒಕ್ಕೂಟ ವ್ಯವಸ್ಥೆಯನ್ನು ಕಾಪಾಡುವಲ್ಲಿ ಇದು ನಮ್ಮ ಮೊದಲ ಹೆಜ್ಜೆ. ಕೇಂದ್ರದ ವಿರುದ್ದದ ಹೋರಾಟದ ಆರಂಭ. ನಮ್ಮ ಮುಂದಿನ ಹೆಜ್ಜೆ ಯುಜಿಸಿಯ ನಿರ್ಧಾರವನ್ನು ಅವಲಂಬಿಸಿರುತ್ತದೆ. ಯುಜಿಸಿ ನಿಯಂತ್ರಕ ಸಂಸ್ಥೆಯಾಗಿರಬೇಕೇ ಹೊರತು, ಅದು ರಾಜ್ಯಗಳನ್ನು ನಿಯಂತ್ರಿಸಲು ಸಾಧ್ಯವಿಲ್ಲ”
ಸಮಾವೇಶದಲ್ಲಿ ಕರ್ನಾಟಕ, ತಮಿಳುನಾಡು, ತೆಲಂಗಾಣ, ಕೇರಳ, ಜಾರ್ಖಂಡ್, ಹಿಮಾಚಲ ಪ್ರದೇಶ ಸೇರಿದಂತೆ ಆರು ರಾಜ್ಯಗಳ ಉನ್ನತ ಶಿಕ್ಷಣ ಸಚಿವರು ಉಪಸ್ಥಿತರಿದ್ದರು. ಆನ್‌ಲೈನ್ ವೇದಿಕೆ ಮೂಲಕ ಹಾಜರಾಗಿದ್ದ ಮಹಾರಾಷ್ಟ್ರ ಪ್ರತಿನಿಧಿಯೊಬ್ಬರು ತಾಂತ್ರಿಕ ಸಮಸ್ಯೆಗಳಿಂದಾಗಿ ಸಂಪೂರ್ಣ ಸಮಾವೇಶದಲ್ಲಿ ಪಾಲ್ಗೊಳ್ಳಲು ಸಾಧ್ಯವಾಗಿಲ್ಲ.
ವಿಶ್ವವಿದ್ಯಾಲಯ ಅನುದಾನ ಆಯೋಗವು (ಯುಜಿಸಿ) ಕುಲಪತಿಗಳ ನೇಮಕ ಹಾಗೂ ಉನ್ನತ ಶಿಕ್ಷಣ ಸಂಸ್ಥೆಗಳ ಸಂಬಂಧಪಟ್ಟಂತೆ ಹೊರಡಿಸಿರುವ ಕರಡು ನಿಯಮಾವಳಿಗಳ ಕುರಿತು ಚರ್ಚಿಸಲು ಬೆಂಗಳೂರಿನಲ್ಲಿ ಇಂದು ಏರ್ಪಡಿಸಲಾಗಿದ್ದ ಒಂದು ದಿನದ ಉನ್ನತ ಶಿಕ್ಷಣ ಸಚಿವರ ರಾಷ್ಟ್ರೀಯ ಮಟ್ಟದ ಸಮಾವೇಶದಲ್ಲಿ ಹಿಮಾಚಲ್ ಪ್ರದೇಶ, ಜಾರ್ಖಂಡ್, ತೆಲಂಗಾಣ, ತಮಿಳುನಾಡು 1/2 pic.twitter.com/w1qFoccAoh
— Dr MC Sudhakar (@drmcsudhakar) February 5, 2025
ತುರ್ತು ಸಭೆಗಳ ಕಾರಣಕ್ಕೆ ಸಮಾವೇಶದಲ್ಲಿ ಭಾಗವಹಿಸಲು ಸಾಧ್ಯವಿಲ್ಲ ಎಂದು ಜಮ್ಮು ಮತ್ತು ಕಾಶ್ಮೀರ ಸಚಿವರು ತಿಳಿಸಿದ್ದರು. ಸಮಾವೇಶಕ್ಕೆ ಹಾಜರಾಗಬೇಕಿದ್ದ ರಾಜ್ಯಸಭಾ ಸದಸ್ಯರು ಹಾಗೂ ಹಿರಿಯ ಕಾಂಗ್ರೆಸ್ ನಾಯಕರಾದ ದಿಗ್ವಿಜಯ್ ಸಿಂಗ್ ಮತ್ತು ಜೈರಾಮ್ ರಮೇಶ್ ತಮ್ಮ ಟಿಪ್ಪಣಿಗಳನ್ನು ಕಳುಹಿಸಿದ್ದರು.
ಬಿಜೆಪಿಯೊಂದಿಗೆ ಮೈತ್ರಿ ಮಾಡಿಕೊಂಡಿರುವ ಕೆಲವು ಪಕ್ಷಗಳು ಕೂಡ ಯುಜಿಸಿ ಕರಡು ನಿಯಮಗಳಿಗೆ ತಮ್ಮ ಆಕ್ಷೇಪಣೆಯನ್ನು ವ್ಯಕ್ತಪಡಿಸಿವೆ. ಟಿಡಿಪಿ, ಜೆಡಿಯು, ಎಲ್‌ಜೆಪಿ ಕರಡಿನ ವಿರುದ್ಧ ತಮ್ಮ ಅಭಿಪ್ರಾಯಗಳನ್ನು ನೀಡಿವೆ. ಪಶ್ಚಿಮ ಬಂಗಾಳ ಈ ಕುರಿತು ಪರಿಶೀಲನೆಗೆ ತಜ್ಞರ ಸಮಿತಿಯನ್ನು ರಚಿಸಿದೆ.
“ಯುಜಿಸಿ ಮತ್ತು ಕೇಂದ್ರ ಶಿಕ್ಷಣ ಸಚಿವಾಲಯ ಕರಡು ನಿಯಮಗಳನ್ನು ಪುನರ್ವಿಮರ್ಶೆ ನಡೆಸಿ ಎಲ್ಲಾ ರಾಜ್ಯಗಳನ್ನು ವಿವರವಾದ ಚರ್ಚೆಗೆ ಆಹ್ವಾನಿಸುತ್ತದೆ ಎಂಬ ವಿಶ್ವಾಸ ನಮಗಿದೆ” ಎಂದು ಕರ್ನಾಟಕದ ಉನ್ನತ ಶಿಕ್ಷಣ ಸಚಿವ ಸುಧಾಕರ್ ಹೇಳಿದ್ದಾರೆ.
ಕೇಂದ್ರ ಸರ್ಕಾರ ತನ್ನ ಕಾರ್ಯಸೂಚಿಯನ್ನು ಜಾರಿಗೆ ತರಲು ಪ್ರಯತ್ನಿಸುತ್ತಿದೆ. ಯುಜಿಸಿಯ ಕರಡು ನಿಯಮಗಳು ಶಿಕ್ಷಣ ವ್ಯವಸ್ಥೆಯಲ್ಲಿ ಸಿದ್ಧಾಂತವನ್ನು ಹೇರುವುದರ ಭಾಗವಾಗಿದೆ ಎಂದು ಸುಧಾಕರ್ ಮತ್ತು ಇತರ ರಾಜ್ಯಗಳ ಸಚಿವರು ದೂರಿದ್ದಾರೆ.
ಫೆಬ್ರವರಿ 20ರಂದು ಕೇರಳ ರಾಜ್ಯವು ಇದೇ ರೀತಿಯ ಸಮಾವೇಶವನ್ನು ಆಯೋಜಿಸಲಿದ್ದು, ರಾಜ್ಯಗಳು ಅಲ್ಲಿ ಮುಂದಿನ ಹೆಜ್ಜೆಯನ್ನು ನಿರ್ಧರಿಸುವ ಸಾಧ್ಯತೆಯಿದೆ.
ಸಮಾವೇಶದಲ್ಲಿ ಕೈಗೊಂಡ ನಿರ್ಣಯದ ಪ್ರಮುಖ ಅಂಶಗಳು :
- ರಾಜ್ಯ ವಿಶ್ವವಿದ್ಯಾಲಯಗಳಿಗೆ ಉಪಕುಲಪತಿಗಳ ನೇಮಕದಲ್ಲಿ ರಾಜ್ಯಗಳಿಗೆ ಪ್ರಮುಖ ಪಾತ್ರ ನೀಡಬೇಕು.
- ಕುಲಪತಿ ಆಯ್ಕೆಗೆ ಸಮಿತಿ ರಚಿಸುವ ಅಧಿಕಾರ ಈಗ ಇರುವಂತೆಯೇ ಮುಂದುವರಿಯಬೇಕು
- ಶೈಕ್ಷಣಿ ವಲಯದ ಹೊರಗಿನವರನ್ನು ಕುಲಪತಿಗಳಾಗಿ ನೇಮಿಸುವುದಕ್ಕೆ ಸಂಬಂಧಿಸಿದ ನಿಬಂಧನೆಯನ್ನು ಹಿಂತೆಗೆದುಕೊಳ್ಳಬೇಕು
- ಈಗಿರುವ ಶಿಕ್ಷಕರ ಕಾರ್ಯಕ್ಷಮತೆ ಮೌಲ್ಯಮಾಪನ ಮತ್ತು ಶೈಕ್ಷಣಿಕ ಸೂಚಕ (ಎಪಿಐ) ವ್ಯವಸ್ಥೆ ತೆಗೆದುಹಾಕಬಾರದು
- ಸಹಾಯಕ ಪ್ರಾಧ್ಯಾಪಕರ ನೇಮಕಾತಿ ಉಪ ನಿಮಯಗಳನ್ನು ಮರು
ಪರಿಶೀಲಿಸಬೇಕು - ಸರ್ಕಾರಿ ಉನ್ನತ ಶಿಕ್ಷಣ ಸಂಸ್ಥೆಗಳನ್ನು ಕಡೆಗಣಿಸಿ, ಖಾಸಗಿ ಸಂಸ್ಥೆಗಳಿಗೆ ಉತ್ತೇಜನ ನೀಡುವ ನಿಯಮಗಳನ್ನು ಕೈಬಿಡಬೇಕು
- ಯುಜಿಸಿ ಮಾರ್ಗಸೂಚಿ ಅನುಸರಿಸದಿದ್ದರೆ ಕೈಗೊಳ್ಳುವ ಕ್ರಮಗಳು ಪ್ರಜಾಸತ್ತಾತ್ಮಕವಾಗಿ ಇರಬೇಕು
- ಕುಲಪತಿಗಳ ನೇಮಕಾತಿಯ ಅರ್ಹತೆ, ಅವಧಿಯ ಬಗ್ಗೆ ಗಂಭೀರವಾದ ಮರುಪರಿಶೀಲನೆಯ ಅಗತ್ಯವಿದೆ.
- ಮೂಲ ಪದವಿಪೂರ್ವ ಕೋರ್ಸ್‌ಗೆ ಪ್ರವೇಶ ಪರೀಕ್ಷೆಯನ್ನು ಕಡ್ಡಾಯಗೊಳಿಸುವುದು ಜಿಇಆರ್ ಹೆಚ್ಚಿಸಲು ದೊಡ್ಡ ಅಡಚಣೆಯಾಗಿದೆ.
ದೆಹಲಿ ವಿಧಾನಸಭೆ ಚುನಾವಣೆ | ಬಿಜೆಪಿಗೆ ಬಹುಮತ ಎಂದ ಬಹುತೇಕ ಮತದಾನೋತ್ತರ ಸಮೀಕ್ಷೆಗಳು


