ಉತ್ತರ ಪ್ರದೇಶದ ಪ್ರಯಾಗರಾಜ್‌ನ ಮಹಾ ಕುಂಭದ ಸೆಕ್ಟರ್ 18 ರಲ್ಲಿ ಶುಕ್ರವಾರ ಬೆಂಕಿ ಕಾಣಿಸಿಕೊಂಡಿದೆ. ಶಂಕರಾಚಾರ್ಯ ಮಾರ್ಗದಲ್ಲಿರುವ ಹರಿಹರಾನಂದ ಶಿಬಿರದಲ್ಲಿರುವ 20 ಕ್ಕೂ ಹೆಚ್ಚು ಟೆಂಟ್‌ಗಳಿಗೆ ಬೆಂಕಿ ಹರಡಿದೆ. ಅಗ್ನಿಶಾಮಕ ದಳದವರು ತಕ್ಷಣ ಸ್ಥಳಕ್ಕೆ ಧಾವಿಸಿ ಬೆಂಕಿಯನ್ನು ನಂದಿಸಿದ್ದಾರೆ.
ಹಲವಾರು ಟೆಂಟ್‌ಗಳು ಬೆಂಕಿಯಿಂದ ಹಾನಿಗೊಳಗಾಗಿರುವುದನ್ನು ದೃಶ್ಯಗಳು ತೋರಿಸಿವೆ. ಹಲವಾರು ಭಕ್ತರು ಬೆಂಕಿಗೆ ಹೆದರಿ ಓಡಿಹೋಗುತ್ತಿರುವುದು ಕಂಡುಬಂದಿದೆ. ಘಟನೆಯಿಂದ ವಿಚಲಿತರಾದ ಒಬ್ಬ ಸಾಧುವಿಗೆ ಅಲ್ಲಿದ್ದ ಜನರು ಸಾಂತ್ವನ ಹೇಳುತ್ತಿದ್ದಾರೆ.
ಬೆಂಕಿಯಿಂದಾಗಿ ಇಲ್ಲಿಯವರೆಗೆ ಯಾವುದೇ ಸಾವುನೋವುಗಳು ವರದಿಯಾಗಿಲ್ಲ. ಬೆಂಕಿಯ ಹಿಂದಿನ ಕಾರಣ ಇನ್ನೂ ಸ್ಪಷ್ಟವಾಗಿಲ್ಲ.
ಪೊಲೀಸ್ ಅಧಿಕಾರಿಯೊಬ್ಬರು, “ಬೆಂಕಿಯನ್ನು ನಿಯಂತ್ರಣಕ್ಕೆ ತರಲಾಗಿದೆ. ಇದು ಇಸ್ಕಾನ್‌ನಿಂದ ಪ್ರಾರಂಭವಾಯಿತು ಮತ್ತು ನಂತರ ಇತರ ಟೆಂಟ್‌ಗಳು ಸಹ ಬೆಂಕಿಗೆ ಆಹುತಿಯಾಗಿವೆ. ಯಾವುದೇ ಜೀವಹಾನಿ ಅಥವಾ ಸುಟ್ಟ ಗಾಯಗಳಾಗಿಲ್ಲ; 20-22 ಟೆಂಟ್‌ಗಳು ಸುಟ್ಟುಹೋಗಿವೆ” ಎಂದರು.
ಜನವರಿ 30 ರಂದು ನಡೆದ ಮಹಾ ಕುಂಭಮೇಳದಲ್ಲಿ 15 ಟೆಂಟ್‌ಗಳಲ್ಲಿ ಬೆಂಕಿ ಕಾಣಿಸಿಕೊಂಡ ಒಂದು ವಾರದ ನಂತರ ಇದು ಸಂಭವಿಸಿದೆ.
ಇದಕ್ಕೂ ಮೊದಲು, ಜನವರಿ 19 ರಂದು ಸೆಕ್ಟರ್ 19 ಕ್ಯಾಂಪ್‌ಸೈಟ್ ಪ್ರದೇಶದಲ್ಲಿ ಸುಮಾರು ಮೂರು ಗ್ಯಾಸ್ ಸಿಲಿಂಡರ್‌ಗಳು ಸ್ಫೋಟಗೊಂಡ ನಂತರ ಮಹಾ ಕುಂಭದಲ್ಲಿ ಭಾರಿ ಬೆಂಕಿ ಕಾಣಿಸಿಕೊಂಡಿತ್ತು. ಅಗ್ನಿಶಾಮಕ ಇಲಾಖೆಯು ತ್ವರಿತವಾಗಿ ಪ್ರತಿಕ್ರಿಯಿಸಿ ಬೆಂಕಿಯನ್ನು ನಿಯಂತ್ರಣಕ್ಕೆ ತರುವಲ್ಲಿ ಯಶಸ್ವಿಯಾಯಿತು. ಬೆಂಕಿಯಿಂದಾಗಿ ಯಾವುದೇ ಸಾವುನೋವುಗಳು ವರದಿಯಾಗಿಲ್ಲ.
ಇದನ್ನೂ ಓದಿ; ರಾಜ್ಯಪಾಲರು ಮೂರು ವರ್ಷಗಳಿಂದ ಮಸೂದೆಗಳನ್ನು ತಮ್ಮ ಬಳಿಯೇ ಇಟ್ಟುಕೊಂಡಿದ್ದೇಕೆ? ವಿವರಣೆ ಕೇಳಿದ ಸುಪ್ರೀಂ ಕೋರ್ಟ್


