ವಿಶೇಷ ವಿವಾಹ ಕಾಯ್ದೆಯಡಿ ಮದುವೆ ನೋಂದಣಿ ಮಾಡಿಕೊಳ್ಳಲು ನೆರೆಮನೆಯ ಬ್ರಾಹ್ಮಣ ಯುವತಿಯೊಂದಿಗೆ ಆಗಮಿಸಿದ್ದ ಮುಸ್ಲಿಂ ಯುವಕನಿಗೆ ಬಲಪಂಥೀಯ ಹಿಂದುತ್ವ ಸಂಘಟನೆಯ ದುಷ್ಕರ್ಮಿಗಳು ಕ್ರೂರವಾಗಿ ಹಲ್ಲೆ ನಡೆಸಿರುವ ಘಟನೆ ಶುಕ್ರವಾರ (ಫೆ.7) ಮಧ್ಯಪ್ರದೇಶದ ಭೋಪಾಲ್ ಜಿಲ್ಲಾ ನ್ಯಾಯಾಲಯದ ಆವರಣದಲ್ಲಿ ನಡೆದಿದೆ.
ನರ್ಮದಾಪುರಂ ಜಿಲ್ಲೆಯ ಪಿಪರಿಯಾ ಪ್ರದೇಶದ ಯುವಕ ಮತ್ತು ಯುವತಿ ತಮ್ಮ ವಿವಾಹ ನೋಂದಣಿಗೆ ನ್ಯಾಯಾಲಯಕ್ಕೆ ಆಗಮಿಸಿದ್ದರು. ಈ ವೇಳೆ ವಿಶ್ವ ಹಿಂದೂ ಪರಿಷತ್ (ವಿಹೆಚ್‌ಪಿ), ಸಂಸ್ಕೃತಿ ಬಚಾವೊ ಮಂಚ್ ಸೇರಿದಂತೆ ಬಲಪಂಥೀಯ ಹಿಂದುತ್ವ ಸಂಘಟನೆಯವರು ಯುವಕನಿಗೆ ಹಲ್ಲೆ ನಡೆಸಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಯುವಕನ ಮೇಲೆ ಹಲ್ಲೆ ನಡೆಸಿದ್ದು ಎನ್ನಲಾದ ವಿಡಿಯೋವೊಂದು ವೈರಲ್ ಆಗಿದ್ದು, ಅದರಲ್ಲಿ ಇಬ್ಬರು ವ್ಯಕ್ತಿಗಳು ಯುವಕನನ್ನು ನೆಲಕ್ಕೆ ಕೆಡವಿ, ಬೂಟುಗಾಲಿನಿಂದ ಆತನ ಮುಖಕ್ಕೆ ತುಳಿಯುತ್ತಿರುವ ದೃಶ್ಯವಿದೆ.
This is sick. Adults have the right to love and marry whosoever they choose. https://t.co/I1r23lXc5P
— SANJAY HEGDE (@sanjayuvacha) February 7, 2025
ಘಟನೆಗೆ ಸಂಬಂಧಿಸಿದಂತೆ ಮತ್ತೊಂದು ವಿಡಿಯೋ ವೈರಲ್ ಆಗಿದ್ದು, ಅದರಲ್ಲಿ ಯುವಕನ ಬಲ ಹುಬ್ಬಿನ ಬಳಿ ರಕ್ತಸ್ರಾವವಾಗುತ್ತಿರುವುದು ಕಂಡು ಬಂದಿದೆ. ವಿಡಿಯೋದಲ್ಲಿ “ನೀವು ಹಿಂದೂ ಹುಡುಗಿಯರ ಹಿಂದೆ ಏಕೆ ಇದ್ದೀರಿ? ಮತ್ತೆ ಲವ್ ಜಿಹಾದ್ ಮಾಡ್ತಿದ್ದೀರಾ? ನೀವು ಸುರಕ್ಷಿತವಾಗಿರಲು ಬಯಸಿದರೆ ಮುಸ್ಲಿಂ ಹುಡುಗಿಯನ್ನು ಮದುವೆಯಾಗಿ” ಎಂದು ದುಷ್ಕರ್ಮಿಗಳು ಹೇಳುವುದನ್ನು ಕೇಳಬಹುದು ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ತಿಳಿಸಿದೆ.
ಮಗದೊಂದು ವಿಡಿಯೋದಲ್ಲಿ ಪೊಲೀಸರು ಹಲ್ಲೆಗೊಳಗಾದ ಯುವಕನನ್ನು ಸ್ಥಳೀಯ ಎಂಪಿ ನಗರ ಪೊಲೀಸ್ ಠಾಣೆಗೆ ಕರೆದೊಯ್ಯಲು ವಾಹನದ ಕಡೆಗೆ ಕರೆದೊಯ್ಯುವಾಗಲೂ, ದುಷ್ಕರ್ಮಿಗಳು ಆತನಿಗೆ ಅವಾಚ್ಯ ಶಬ್ದಗಳಿಂದ ನಿಂದಿಸುವುದನ್ನು ಕಾಣಬಹುದು ಎಂದು ವರದಿ ಹೇಳಿದೆ.
ಸ್ಥಳೀಯ ಹಿಂದುತ್ವ ಸಂಘಟನೆ ಸಂಸ್ಕೃತಿ ಬಚಾವೋ ಮಂಚ್ ಅನ್ನು ಪ್ರತಿನಿಧಿಸುವ ಚಂದ್ರಶೇಖರ್ ತಿವಾರಿ ಎಂಬಾತ “ಹಿಂದೂ ಯುವತಿಯನ್ನು ಮದುವೆಯಾಗಲು ಮುಂದಾಗಿದ್ದ ಮುಸ್ಲಿಂ ಯುವಕನ ಪ್ರಯತ್ನವನ್ನು ತಂತ್ರದ ಮೂಲಕ ವಿಫಲಗೊಳಿಸಿದ್ದೇವೆ” ಎಂದು ಹೇಳಿಕೊಂಡಿದ್ದಾರೆ.
“ಆತ ಲವ್ ಜಿಹಾದ್‌ನಲ್ಲಿ ತೊಡಗಿದ್ದ. ನಕಲಿ ಐಡಿ ಮೂಲಕ ಚಾಟ್ ಮಾಡಿ ಹಿಂದೂ ಯುವತಿಯನ್ನು ವಂಚಿಸಿದ್ದ. ಮದುವೆ ಮತ್ತು ನಂತರದ ಧಾರ್ಮಿಕ ಮತಾಂತರಕ್ಕಾಗಿ ಆಕೆಯನ್ನು ಅಕ್ರಮ ಸಂಬಂಧಕ್ಕೆ ಒತ್ತಾಯಿಸಿದ್ದ. ಮಧ್ಯಪ್ರದೇಶ ಧಾರ್ಮಿಕ ಸ್ವಾತಂತ್ರ್ಯ ಕಾಯ್ದೆಯಡಿ ನಾವು ಆತನ ವಿರುದ್ಧ ಕ್ರಮ ಕೈಗೊಳ್ಳುತ್ತೇವೆ” ಎಂದು ತಿವಾರಿ ಹೇಳಿದ್ದಾಗಿ ವರದಿ ವಿವರಿಸಿದೆ.
ಹಿಂದುತ್ವ ಗುಂಪಿನ ಜೊತೆಗಿದ್ದ ವಕೀಲರೊಬ್ಬರು, “ಮುಸ್ಲಿಂ ಯುವಕ ನಕಲಿ ಅಫಿಡವಿಟ್ ಆಧಾರದ ಮೇಲೆ ಹಿಂದೂ ಯುವತಿಯನ್ನು ಮದುವೆಯಾಗಲು ಪ್ರಯತ್ನಿಸಿದ್ದಾನೆ” ಎಂದು ಆರೋಪಿಸಿದ್ದಾರೆ.
“ಹಿಂದೂ ಅರ್ಚಕನ ಮಗಳಾದ ಯುವತಿಯನ್ನು ಧಾರ್ಮಿಕ ಮತಾಂತರದ ಏಕೈಕ ಉದ್ದೇಶಕ್ಕಾಗಿ ಮುಸ್ಲಿಂ ವ್ಯಕ್ತಿ ಲವ್ ಜಿಹಾದ್ ಮಾಡಿ ವಂಚಿಸಿದ್ದಾನೆ. ಆತನ ಮೇಲಿನ ಹಲ್ಲೆಯ ಬಗ್ಗೆ ಕೇಳುವ ಮೊದಲು, ಲವ್ ಜಿಹಾದ್ ಮೂಲಕ ಧಾರ್ಮಿಕ ಮತಾಂತರಕ್ಕಾಗಿ ಹಿಂದೂ ಅರ್ಚಕನ ಮಗಳನ್ನು ತನ್ನೊಂದಿಗೆ ಏಕೆ ಕರೆತಂದಿದ್ದಾನೆ ಎಂದು ಕೇಳಿ” ಎಂದು ವಕೀಲ ಹೇಳಿದ್ದಾರೆ.
“ಭಿನ್ನ ಧರ್ಮದ ಯುವಕ ಮತ್ತು ಯುವತಿ ವಿವಾಹ ನೋಂದಣಿ ಮಾಡಿಕೊಳ್ಳಲು ನ್ಯಾಯಾಲಯಕ್ಕೆ ಬರುತ್ತಿರುವ ಬಗ್ಗೆ ಕೆಲ ವಕೀಲರು ಪೊಲೀಸರಿಗೆ ಮಾಹಿತಿ ನೀಡಿದ್ದರು. ನಾವು ಅಂತರ್ಧರ್ಮೀಯ ದಂಪತಿಗಳ ಹೇಳಿಕೆಗಳನ್ನು ದಾಖಲಿಸುತ್ತಿದ್ದೇವೆ. ಅವರ ಹೇಳಿಕೆಯ ಆಧಾರದ ಮೇಲೆ ಸೂಕ್ತ ಕ್ರಮ ಕೈಗೊಳ್ಳಲಾಗುವುದು” ಎಂದು ಸಹಾಯಕ ಪೊಲೀಸ್ ಆಯುಕ್ತ (ಎಂಪಿ ನಗರ) ಅಕ್ಷಯ್ ಚೌಧರಿ ತಿಳಿಸಿದ್ದಾರೆ.
ಸಾಮಾಜಿಕ ಜಾಲತಾಣದಲ್ಲಿ ಯುವಕ ಮೇಲಿನ ಹಲ್ಲೆಯ ವಿಡಿಯೋ ಹಂಚಿಕೊಂಡಿರುವವರು ಪೊಲೀಸರು ಹಲ್ಲೆ ನಡೆಸಿದ ದುಷ್ಕರ್ಮಿಗಳ ಬದಲು, ಹಲ್ಲೆಗೊಳಗಾದ ಯುವಕನನ್ನೇ ವಿಚಾರಣೆಗೆ ಒಳಪಡಿಸಿದ್ದಾರೆ ಎಂದು ಆರೋಪಿಸಿದ್ದಾರೆ.
ತಮಿಳುನಾಡು| ಗರ್ಭಿಣಿ ಮಹಿಳೆಯ ಮೇಲೆ ಲೈಂಗಿಕ ದೌರ್ಜನ್ಯ; ರೈಲಿನಿಂದ ಹೊರಗೆ ತಳ್ಳಿದ ವಿಕೃತರು


