ದೆಹಲಿ ವಿಧಾನಸಭೆ ಚುನಾವಣೆಯ ಮತ ಎಣಿಕೆ ಕಾರ್ಯ ಪ್ರಗತಿಯಲ್ಲಿದೆ. ಆರಂಭಿಕ ಟ್ರೆಂಡ್‌ನಲ್ಲಿ ಬಿಜೆಪಿ ಭಾರೀ ಮುನ್ನಡೆ ಸಾಧಿಸಿದ್ದು, ಎಎಪಿ ಎರಡನೇ ಸ್ಥಾನಕ್ಕೆ ಕುಸಿದರೆ, ಕಾಂಗ್ರೆಸ್ ಮತ್ತೊಮ್ಮೆ ಶೂನ್ಯ ಸುತ್ತಿದೆ.
ಬೆಳಿಗ್ಗೆ 11 ಗಂಟೆಯ ಹೊತ್ತಿಗೆ ಬಿಜೆಪಿ ಮ್ಯಾಜಿಕ್ ನಂಬರ್ 37 ಅನ್ನು ದಾಟಿ 40ಕ್ಕೂ ಹೆಚ್ಚು ಸ್ಥಾನಗಳಲ್ಲಿ ಮುನ್ನಡೆ ಸಾಧಿಸಿತ್ತು. ಎಎಪಿ 25ಕ್ಕಿಂತ ಸ್ಥಾನಗಳಲ್ಲಿ ಮಾತ್ರ ಮುನ್ನಡೆ ಕಾಯ್ದುಕೊಂಡಿತ್ತು. ಇನ್ನು ಕಾಂಗ್ರೆಸ್ ಕಳೆದ ಬಾರಿಯಂತೆ ಶೂನ್ಯ ಸುತ್ತುತ್ತಿತ್ತು.
ರಾಷ್ಟ್ರ ಮಟ್ಟದಲ್ಲಿ ಇಂಡಿಯಾ ಒಕ್ಕೂಟದ ಪಕ್ಷಗಳಾಗಿರುವ ಕಾಂಗ್ರೆಸ್ ಮತ್ತು ಎಎಪಿ ದೆಹಲಿ ಚುನಾವಣೆಯಲ್ಲಿ ಪರಸ್ಪರ ವಿರೋಧಿಗಳಾಗಿ ಸ್ಪರ್ಧೆ ಮಾಡಿರುವುದು ಬಿಜೆಪಿಯ ಮುನ್ನಡೆಗೆ ಪ್ರಮುಖ ಕಾರಣ ಎಂದು ಹೇಳಲಾಗ್ತಿದೆ. ಇದೇ ವಿಷಯವನ್ನು ಪರೋಕ್ಷವಾಗಿ ಉಲ್ಲೇಖಿಸಿ ಎರಡೂ ಪಕ್ಷಗಳ ವಿರುದ್ದ ಜಮ್ಮು ಕಾಶ್ಮೀರದ ಮುಖ್ಯಮಂತ್ರಿ ಉಮರ್ ಅಬ್ದುಲ್ಲಾ ವಾಗ್ದಾಳಿ ನಡೆಸಿದ್ದಾರೆ.
ಎಕ್ಸ್ ನಲ್ಲಿ ಪೋಸ್ಟ್ ಹಾಕಿರುವ ಉಮರ್ ಅಬ್ದುಲ್ಲಾ, “ನೀವು ಪರಸ್ಪರ ಜಗಳವಾಡುತ್ತಿರಿ” ಎಂದಿದ್ದಾರೆ. “ಔರ್ ಲಡೋ, ಜೀ ಭರ್ ಕೆ ಲಡೋ, ಸಮಾಪ್ತ್ ಕರ್ ದೋ ಏಕ್ ದೂಸ್ರೆ ಕೋ” (ಇನ್ನೂ ಸ್ವಲ್ಪ ಜಗಳವಾಡಿ, ಮನಸ್ಸಿಗೆ ಬಂದಂತೆ ಕಿತ್ತಾಡಿ, ಒಬ್ಬರನ್ನೊಬ್ಬರು ಮುಗಿಸಿ) ಎಂದು ಮುನಿಯೊಬ್ಬರು ಹೇಳಲಾಗುವ ಜಿಫ್ (GIF)ಒಂದನ್ನು ಒಮರ್ ಅಬ್ದುಲ್ಲಾ ಬರೆದುಕೊಂಡಿದ್ದಾರೆ. ಈ ಮೂಲಕ ಎಎಪಿ, ಕಾಂಗ್ರೆಸ್‌ನ ಕಿತ್ತಾಟದ ವಿರುದ್ಧ ಬೇಸರ ವ್ಯಕ್ತಪಡಿಸಿದ್ದಾರೆ.
Aur lado aapas mein!!! https://t.co/f3wbM1DYxk pic.twitter.com/8Yu9WK4k0c
— Omar Abdullah (@OmarAbdullah) February 8, 2025
2020ರ ದೆಹಲಿ ವಿಧಾನಸಭೆ ಚುನಾವಣೆಯಲ್ಲಿ ಎಎಪಿ 67 ಸ್ಥಾನಗಳನ್ನು ಗೆದ್ದಿತ್ತು, ಉಳಿದ ಮೂರು ಬಿಜೆಪಿ ಪಾಲಾಗಿತ್ತು. ಕಾಂಗ್ರೆಸ್ ಶೂನ್ಯ ಸಾಧನೆ ಮಾಡಿತ್ತು. ಈ ಬಾರಿ ಆರಂಭದಲ್ಲೇ ಬಿಜೆಪಿ ಮ್ಯಾಜಿಕ್ ನಂಬರ್ ದಾಟಿದೆ.
ದೆಹಲಿಯಲ್ಲಿ ಈ ಹಿಂದೆ ಬಿಜೆಪಿ ಮತ್ತು ಕಾಂಗ್ರೆಸ್ ಪ್ರಮುಖ ಪಕ್ಷಗಳಾಗಿತ್ತು. ಎಎಪಿ ಉದಯಿಸಿದ ಬಳಿಕ, ಕಾಂಗ್ರೆಸ್‌ನ ಮತಗಳು ಬಹುತೇಕ ಎಎಪಿ ಪರ ವಾಲಿದೆ. ಮತ್ತೊಂದು ರೀತಿಯಲ್ಲಿ ಹೇಳುವುದಾದರೆ ಕಾಂಗ್ರೆಸ್ ಮತ್ತು ಎಎಪಿ ಎರಡೂ ಬಿಜೆಪಿ ವಿರೋಧಿ ಬಣದ ಪಕ್ಷಳಾಗಿರುವುದರಿಂದ ಮತಗಳು ಎರಡೂ ಕಡೆ ಹಂಚಿಕೆಯಾಗಿವೆ. ಆದರೆ, ಬಿಜೆಪಿ ಮತಗಳು ಎಲ್ಲೂ ಪೋಲಾಗದೆ ಒಂದೇ ಕಡೆಗೆ ಬಂದಿದೆ.
ದೆಹಲಿ ಫಲಿತಾಂಶ | ಮ್ಯಾಜಿಕ್ ನಂಬರ್ ದಾಟಿ ಮುನ್ನಡೆ ಕಾಯ್ದುಕೊಂಡ ಬಿಜೆಪಿ : ಎಎಪಿಯ ಘಟಾನುಘಟಿಗಳಿಗೆ ಹಿನ್ನಡೆ!


