ದೆಹಲಿ ವಿಧಾನಸಭಾ ಚುನಾವಣೆಯಲ್ಲಿ ಹೀನಾಯ ಸೋಲಿನ ನಂತರ, ಎಎಪಿ ಪಂಜಾಬ್ ಘಟಕ ಆಂತರಿಕ ಕಲಹ ಮತ್ತು ಸಂಭಾವ್ಯ ವಿಭಜನೆ ಎದುರಿಸುವ ಸಾಧ್ಯತೆಯಿದೆ ಎಂದು ಕಾಂಗ್ರೆಸ್ ನಾಯಕ ಹಾಗೂ ಪಂಜಾಬ್ ವಿಧಾನಸಭೆಯ ಪ್ರತಿಪಕ್ಷ ನಾಯಕ ಪ್ರತಾಪ್ ಸಿಂಗ್ ಬಾಜ್ವಾ ಭಾನುವಾರ (ಫೆ.9) ಹೇಳಿದ್ದಾರೆ.
ಕಳೆದ ಒಂದು ವರ್ಷದಿಂದ 30ಕ್ಕೂ ಹೆಚ್ಚು ಎಎಪಿ ಶಾಸಕರು ನಮ್ಮ ಪಕ್ಷದೊಂದಿಗೆ ಸಂಪರ್ಕದಲ್ಲಿದ್ದು, ಪಕ್ಷ ಬದಲಾಯಿಸಲು ಸಿದ್ಧರಾಗಿದ್ದಾರೆ ಎಂದು ಹಿರಿಯ ಕಾಂಗ್ರೆಸ್ ನಾಯಕ ಹೊಸ ಬಾಂಬ್ ಸಿಡಿಸಿದ್ದಾರೆ.
“ಎಎಪಿಯ ದೆಹಲಿ ನಾಯಕತ್ವ ಭಗವಂತ್ ಮಾನ್ ಅವರನ್ನು ಸಿಎಂ ಸ್ಥಾನದಿಂದ ಕೆಳಗಿಳಿಸಬಹುದು. ವಿಶೇಷವಾಗಿ ಪಂಜಾಬ್‌ನ ಎಲ್ಲಾ ಎಎಪಿ ಶಾಸಕರು ಮತ್ತು ಕಾರ್ಯಕರ್ತರು ಪಕ್ಷದ ರಾಷ್ಟ್ರೀಯ ಸಂಚಾಲಕ ಅರವಿಂದ್ ಕೇಜ್ರಿವಾಲ್ ಅವರ ಜೊತೆ ಇದ್ದಾರೆ. ಹಾಗಾಗಿ, ಎಎಪಿಯಲ್ಲಿ ನಾಯಕತ್ವದ ಕಲಹ ಸನ್ನಿಹಿತವಾಗಿದೆ. ಲುಧಿಯಾನ (ಪಶ್ಚಿಮ) ವಿಧಾನಸಭಾ ಕ್ಷೇತ್ರದಲ್ಲಿ ಉಪಚುನಾವಣೆ ನಡೆಯಲಿದೆ. ರಾಜ್ಯ ವಿಧಾನಸಭೆಗೆ ಸೇರಲು ಕೇಜ್ರಿವಾಲ್ ಈ ಕ್ಷೇತ್ರದ ಮೇಲೆ ಕಣ್ಣಿಟ್ಟಿರಬಹುದು” ಎಂದು ಪ್ರತಾಪ್ ಸಿಂಗ್ ಬಜ್ವಾ ಹೇಳಿದ್ದಾರೆ.
“2027ರ ಪಂಜಾಬ್ ವಿಧಾನಸಭೆ ಚುನಾವಣೆಗೆ ಎಎಪಿಯನ್ನು ಪ್ರಮುಖ ಪ್ರತಿಸ್ಪರ್ಧಿ ಎಂದು ಪರಿಗಣಿಸಿರುವುದರಿಂದ ಕಾಂಗ್ರೆಸ್ ಮತ್ತು ಬಿಜೆಪಿ ಎರಡೂ ಪಕ್ಷಗಳು ಪಂಜಾಬ್‌ನಲ್ಲಿ ಎಎಪಿ ವಿಭಜನೆಯಾಗಬೇಕೆಂದು ಬಯಸುತ್ತಿವೆ. ಕೇಜ್ರಿವಾಲ್ ಲುಧಿಯಾನ (ಪಶ್ಚಿಮ) ದಿಂದ ಸ್ಪರ್ಧಿಸಲು ನಿರ್ಧರಿಸಿದರೆ, ಅದು ಪಕ್ಷಕ್ಕೆ ಹಾನಿಕಾರಕವಾಗಬಹುದು ಮತ್ತು ಅವರ ರಾಷ್ಟ್ರೀಯ ಮಹತ್ವಾಕಾಂಕ್ಷೆಗಳ ಅಂತ್ಯವನ್ನು ಸೂಚಿಸಬಹುದು” ಎಂದು ಪ್ರಮುಖ ರಾಜಕೀಯ ವಿಶ್ಲೇಷಕ ಕುಲದೀಪ್ ಸಿಂಗ್ ವಿವರಿಸಿದ್ದಾರೆ.
ಕಾಂಗ್ರೆಸ್ ನಾಯಕನ ಹೇಳಿಕೆಯನ್ನು ತಳ್ಳಿ ಹಾಕಿರುವ ಪಂಜಾಬ್ ಎಎಪಿ ವಕ್ತಾರ ನೀಲ್ ಗರ್ಗ್, “ಕೇಜ್ರಿವಾಲ್ ನಮ್ಮ ರಾಷ್ಟ್ರೀಯ ಸಂಚಾಲಕರು ಮತ್ತು ಮಾನ್ ಪಂಜಾಬ್ ಸಿಎಂ. ಕಾಂಗ್ರೆಸ್‌ನ ಗ್ರಾಫ್ ವೇಗವಾಗಿ ಕುಸಿಯುತ್ತಿದೆ. ದೆಹಲಿಯಲ್ಲಿ, ಅದು ಸತತ ಮೂರನೇ ಬಾರಿಗೆ ಶೂನ್ಯ ಸ್ಥಾನ ಗಳಿಸಿದೆ. 2022ರ ಪಂಜಾಬ್ ಚುನಾವಣೆಯಲ್ಲಿ, ಅದು ಕೇವಲ 18 ಸ್ಥಾನಗಳನ್ನು ಮಾತ್ರ ಗೆದ್ದಿತ್ತು. 2027ರ ಚುನಾವಣೆಯಲ್ಲಿ ಈ ಸಂಖ್ಯೆ ಮತ್ತಷ್ಟು ಕಡಿಮೆಯಾಗಲಿದೆ. ಕಾಂಗ್ರೆಸ್‌ನ ಕಾರ್ಯಕ್ಷಮತೆ ಹೇಗಿದೆ ಎಂಬುವುದಕ್ಕೆ ರಾಜ್ಯದಲ್ಲಿ ಇತ್ತೀಚೆಗೆ ನಡೆದ ಪುರಸಭೆ ಚುನಾವಣೆಗಳನ್ನು ನೋಡಿ” ಎಂದಿದ್ದಾರೆ.
“ದೆಹಲಿಯಲ್ಲಿ ಕಾಂಗ್ರೆಸ್ ಒಂದೇ ಒಂದು ಸ್ಥಾನ ಗೆಲ್ಲದಿರುವುದರ ಬಗ್ಗೆ ಬಾಜ್ವಾ ಕಳವಳ ವ್ಯಕ್ತಪಡಿಸಬೇಕು, ಹೊರತು ಪಂಜಾಬ್‌ನ ಬಗ್ಗೆ ಅಲ್ಲ” ಎಂದು ಗರ್ಗ್ ಹೇಳಿದ್ದಾರೆ.
Biren Singh resigns | ಮಣಿಪುರ ಮುಖ್ಯಮಂತ್ರಿ ಬಿರೇನ್ ಸಿಂಗ್ ರಾಜೀನಾಮೆ


