ಉತ್ತರ ಪ್ರದೇಶದ ಕುಶಿನಗರದಲ್ಲಿ ಮದನಿ ಮಸೀದಿಯನ್ನು ಪೂರ್ವ ಸೂಚನೆ ನೀಡದೆ ಅಧಿಕಾರಿಗಳು ಕೆಡವಿದರು. ಇದು ಮಸೀದಿಯ ಮೇಲ್ವಿಚಾರಕ ಮತ್ತು ತಬ್ಲಿಘಿ ಜಮಾತ್ ಜಿಲ್ಲಾ ಅಮೀರ್ ಹಾಜಿ ಹಮೀದ್ ಅಲಿ ಅವರ ಆರೋಗ್ಯದಲ್ಲಿ ಏರುಪೇರಿಗೆ ಕಾರಣವಾಯಿತು. ಅವರನ್ನು ಗೋರಖ್‌ಪುರದ ಖಾಸಗಿ ಆಸ್ಪತ್ರೆಗೆ ಸಾಗಿಸಲಾಯಿತು, ಅಲ್ಲಿ ಅವರು ಪ್ರಸ್ತುತ ಚಿಕಿತ್ಸೆ ಪಡೆಯುತ್ತಿದ್ದಾರೆ. ಅವರು ಅಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ದೃಢಪಡಿಸಿದ್ದರೂ, ಅವರು ದೈಹಿಕವಾಗಿ ದುರ್ಬಲರಾಗಿದ್ದಾರೆ ಎಂದು ಹೇಳಿದ್ದಾರೆ.
ತಬ್ಲಿಘಿ ಜಮಾತ್‌ನ ಪ್ರಮುಖ ಧಾರ್ಮಿಕ ಮತ್ತು ಸಮುದಾಯ ಕೇಂದ್ರವಾದ ಮದನಿ ಮಸೀದಿಯ ಧ್ವಂಸವು ವಿವಿಧ ಭಾಗಗಳಿಂದ ತೀವ್ರ ಟೀಕೆಗೆ ಗುರಿಯಾಗಿದೆ. ಅಧಿಕಾರಿಗಳಿಂದ ಅನ್ಯಾಯ ಮತ್ತು ಏಕಪಕ್ಷೀಯ ನಿರ್ಧಾರ ತೆಗೆದುಕೊಳ್ಳಲಾಗಿದೆ ಎಂದು ನಿವಾಸಿಗಳು ಮತ್ತು ಸಮುದಾಯದ ಮುಖಂಡರು ತಮ್ಮ ಆಕ್ರೋಶವನ್ನು ವ್ಯಕ್ತಪಡಿಸಿದ್ದಾರೆ.
ಏಷ್ಯಾದ ಅತಿದೊಡ್ಡ ಮಸೀದಿಯಾಗಿ ನಿರ್ಮಿಸಲು ಯೋಜಿಸಲಾಗಿದ್ದ ದೊಡ್ಡ ಮಸೀದಿಯ ಕೆಲವು ಭಾಗಗಳನ್ನು ಕೆಡವಲು ಭಾನುವಾರ ಅಧಿಕಾರಿಗಳು ಆರು ಬುಲ್ಡೋಜರ್‌ಗಳನ್ನು ಬಳಸಿದರು.
ನಮಗೆ ಯಾವುದೇ ಅಧಿಕೃತ ಸೂಚನೆ ನೀಡಲಾಗಿಲ್ಲ. ಧ್ವಂಸವು ಇದ್ದಕ್ಕಿದ್ದಂತೆ ಸಂಭವಿಸಿದೆ. ನಮ್ಮನ್ನು ಅಸಹಾಯಕರನ್ನಾಗಿ ಮಾಡಿದೆ ಎಂದು ಸ್ಥಳೀಯ ನಿವಾಸಿಯೊಬ್ಬರು ಹೇಳಿದರು. “ಮಸೀದಿ ವರ್ಷಗಳಿಂದ ಇಲ್ಲಿದೆ ಮತ್ತು ಅದರ ಧ್ವಂಸವು ಮುಸ್ಲಿಂ ಸಮುದಾಯದ ಭಾವನೆಗಳನ್ನು ತೀವ್ರವಾಗಿ ನೋಯಿಸಿದೆ.” ಎಂದಿದ್ದಾರೆ.
ಈ ಆಕ್ರೋಶಕ್ಕೆ ಪ್ರತಿಕ್ರಿಯೆಯಾಗಿ, ಸಮಾಜವಾದಿ ಪಕ್ಷದ ರಾಷ್ಟ್ರೀಯ ಅಧ್ಯಕ್ಷ ರಿಲಾಶ್ ಯಾದವ್ ಅವರು ಪರಿಸ್ಥಿತಿಯನ್ನು ನಿರ್ಣಯಿಸಲು ಮತ್ತು ವಿವರವಾದ ವರದಿಯನ್ನು ನೀಡಲು 18 ಸದಸ್ಯರ ನಿಯೋಗವನ್ನು ಕಳುಹಿಸಿದ್ದಾರೆ. ಈ ನಿಯೋಗವು ಸ್ಥಳಕ್ಕೆ ಭೇಟಿ ನೀಡಲಿದ್ದು, ಆಸ್ಪತ್ರೆಯಲ್ಲಿ ಹಾಜಿ ಹಮೀದ್ ಅಲಿ ಅವರನ್ನು ಭೇಟಿ ಮಾಡಲಿದೆ.
ಪಕ್ಷದ ರಾಜ್ಯ ಅಧ್ಯಕ್ಷ ಶ್ಯಾಮ್ ಲಾಲ್ ಪಾಲ್ ಅವರ ಹೇಳಿಕೆಯ ಪ್ರಕಾರ, ನಿಯೋಗದಲ್ಲಿ ಮಾತಾ ಪ್ರಸಾದ್ ಪಾಂಡೆ, ಬ್ರಹ್ಮ ಶಂಕರ್ ತಿವಾರಿ, ರಾಧೆ ಶ್ಯಾಮ್ ಸಿಂಗ್, ಬಾಲೇಶ್ವರ್ ಯಾದವ್, ಅಜಯ್ ಪ್ರತಾಪ್ ಸಿಂಗ್, ಶುಕ್ರುಲ್ಲಾ ಅನ್ಸಾರಿ, ಡಾ. ಹಸನ್, ಇಲ್ಯಾಸ್ ಅನ್ಸಾರಿ, ಜಾಫರ್ ಅಮೀನ್, ಡಿಕ್ಕೊ ಶಬ್ಬೀರ್ ಖುರೇಷಿ ಮತ್ತು ಸಚೀಂದ್ರ ಯಾದವ್ ಮುಂತಾದ ಪ್ರಮುಖ ಸದಸ್ಯರು ಇದ್ದಾರೆ ಎನ್ನಲಾಗಿದೆ.
ಸ್ಥಳೀಯ ನಾಯಕರು ಮತ್ತು ಕಾರ್ಯಕರ್ತರು ಸರಕಾರಿ ಆಡಳಿತದ ಹೊಣೆಗಾರಿಕೆಗೆ ಕರೆ ನೀಡಿದ್ದು, ಧ್ವಂಸಕ್ಕೆ ವಿವರಣೆಯನ್ನು ಕೋರಿದ್ದಾರೆ. “ನಮಗೆ ಉತ್ತರಗಳು ಬೇಕು. ಸರಿಯಾದ ಪ್ರಕ್ರಿಯೆಯನ್ನು ಅನುಸರಿಸದೆ ಪೂಜಾ ಸ್ಥಳವನ್ನು ಹೇಗೆ ನಾಶಪಡಿಸಬಹುದು?” ಎಂದು ಸಮುದಾಯದ ಕಾರ್ಯಕರ್ತರೊಬ್ಬರು ಪ್ರಶ್ನಿಸಿದ್ದಾರೆ.
ಈ ಘಟನೆಯು ಈ ಪ್ರದೇಶದಲ್ಲಿ ಉದ್ವಿಗ್ನತೆಯನ್ನು ಹೆಚ್ಚಿಸಿದೆ, ಪ್ರತಿಭಟನೆಗಳು ನ್ಯಾಯಾಂಗ ತನಿಖೆಗೆ ಒತ್ತಾಯಿಸಿವೆ. ಇಂತಹ ಕ್ರಮಗಳು ಅಪಾಯಕಾರಿ ಪೂರ್ವನಿದರ್ಶನವನ್ನು ಉಂಟುಮಾಡುತ್ತವೆ ಮತ್ತು ಇದನ್ನು ತ್ವರಿತವಾಗಿ ಮತ್ತು ನ್ಯಾಯಯುತವಾಗಿ ಪರಿಹರಿಸದಿದ್ದರೆ ಮತ್ತಷ್ಟು ಅಶಾಂತಿಗೆ ಕಾರಣವಾಗಬಹುದು ಎಂದು ಹಲವರು ಭೀತಿ ವ್ಯಕ್ತಪಡಿಸಿದ್ದಾರೆ.
ನಿಯೋಗವು ತನ್ನ ವರದಿಯನ್ನು ಸಿದ್ಧಪಡಿಸುತ್ತಿದ್ದಂತೆ, ಎಲ್ಲರ ಕಣ್ಣುಗಳು ಈಗ ಆಡಳಿತದ ಮುಂದಿನ ಕ್ರಮಗಳ ಮೇಲೆ ನೆಟ್ಟಿವೆ. ಸಂತ್ರಸ್ತ ಸಮುದಾಯವು ನ್ಯಾಯಕ್ಕಾಗಿ ಕಾಯುತ್ತಿದೆ, ಭವಿಷ್ಯದಲ್ಲಿ ಇಂತಹ ಘಟನೆಗಳು ಪುನರಾವರ್ತನೆಯಾಗುವುದಿಲ್ಲ ಎಂಬ ಭರವಸೆಯನ್ನು ನಿರೀಕ್ಷಿಸುತ್ತಿದೆ.


