ಪರಿಶಿಷ್ಟ ಜಾತಿಗಳಲ್ಲಿ (ಎಸ್‌ಸಿ) ಒಳ ಮೀಸಲಾತಿ ನಿಗದಿಪಡಿಸಲು ಸರ್ಕಾರ ರಚಿಸಿರುವ ಏಕ ಸದಸ್ಯ ಸಮಿತಿಯ ಅಧ್ಯಕ್ಷ ಜಸ್ಟೀಸ್ ನಾಗಮೋಹನ್ ದಾಸ್ ಅವರನ್ನು ಬುಧವಾರ (ಫೆ.12) ಭೇಟಿಯಾದ ಸಾಮಾಜಿಕ ನ್ಯಾಯಕ್ಕಾಗಿ ಪರಿಶಿಷ್ಟ ಜಾತಿಗಳ ಒಕ್ಕೂಟದ ರಾಜ್ಯ ಸಮಿತಿ ಪ್ರಮುಖರು ವಿವಿಧ ಬೇಡಿಕೆಗಳನ್ನು ಮುಂದಿಟ್ಟರು.
ಸುಪ್ರೀಂ ಕೋರ್ಟ್ ತೀರ್ಪಿನಂತೆ ಎಸ್‌ಸಿ ಒಳ ಮೀಸಲಾತಿ ನಿಗದಿಪಡಿಸಲು ರಾಜ್ಯ ಸರ್ಕಾರ ಸಮಿತಿ ರಚಿಸಿರುವುದು ಅಭಿನಂದನಾರ್ಹ. ಒಳ ಮೀಸಲಾತಿ ಜಾರಿ ಆಗುವವರೆಗೆ ಸರ್ಕಾರ ನೇಮಕಾತಿಗಳನ್ನು ತಡೆ ಹಿಡಿದಿದೆ. ಇದು ಸ್ವಾಗತಾರ್ಹವೇ ಆದರೂ, ಹೆಚ್ಚು ಸಮಯ ನೇಮಕಾತಿ ತಡೆ ಹಿಡಿಯುವುದರಿಂದ ಇತರರಿಗೆ ಸಮಸ್ಯೆಯಾಗಲಿದೆ. ಹಾಗಾಗಿ, ನಾಗಮೋಹನ್ ದಾಸ್ ಸಮಿತಿ ತುರ್ತಾಗಿ ತನ್ನ ವರದಿ ನೀಡಬೇಕು ಎಂದು ಒಕ್ಕೂಟ ಒತ್ತಾಯಿಸಿದೆ.
ತಾತ್ಕಾಲಿಕ ತಡೆ ಹಿಡಿದಿರುವ ನೇಮಕಾತಿಗಳನ್ನು ತುರ್ತಾಗಿ ಅನುಷ್ಠಾನಗೊಳಿಸಲು ಅನುವಾಗುವಂತೆ ಒಳ ಮೀಸಲಾತಿ ಮಧ್ಯಂತರ ವರದಿಯನ್ನು ಸರ್ಕಾರಕ್ಕೆ ಸಲ್ಲಿಸಬೇಕು ಎಂದು ಆಗ್ರಹಿಸಿದೆ.

ಇನ್ನುಳಿದಂತೆ ಈ ಕೆಳಗಿನ ಬೇಡಿಕೆಗಳನ್ನು ಒಕ್ಕೂಟ ನಾಗಮೋಹನ್ ದಾಸ್ ಅವರ ಮುಂದಿಟ್ಟಿದೆ.
- ಯಾವುದೇ ಕಾರಣಕ್ಕೂ ಯಾವುದೇ ಸಮುದಾಯಕ್ಕೂ ಅನ್ಯಾಯವಾಗದಂತೆ ಒಳ ಮೀಸಲಾತಿ ವರ್ಗೀಕರಣ ಮಾಡಬೇಕು.
- 2025-26ರ ಹಣಕಾಸು ವರ್ಷದ ಆಯವ್ಯಯದಲ್ಲಿ ಪರಿಶಿಷ್ಟ ಜಾತಿಗಳ ಜನಸಂಖ್ಯೆಗೆ ಅನುಗುಣವಾಗಿ ಹಣ ಮತ್ತು ಸಂಪನ್ಮೂಲವನ್ನು ಮೀಸಲಿಡಲು ಸರ್ಕಾರಕ್ಕೆ ಶಿಫಾರಸ್ಸು ಮಾಡಬೇಕು.
- ಹಲವು ವರ್ಷಗಳಿಂದ ಪರಿಶಿಷ್ಟರ ಜನಸಂಖ್ಯೆಯ ವಿಷಯದಲ್ಲಿ ಸಮಸ್ಯೆಯಾಗಿ ಉಳಿದಿರುವ ಎಕೆ, ಎಡಿ, ಎಎ ಜಾತಿಯಲ್ಲಿ ಮುಂದುವರಿಯುತ್ತಿರುವ ಅಸಂವಿಧಾನಿಕ ಸಮಸ್ಯೆಗೆ ಪರಿಹಾರ ಕಂಡುಕೊಳ್ಳಲು ತುರ್ತಾಗಿ ಆಯೋಗದಿಂದ ಈ ಸಮಸ್ಯೆಯ ವ್ಯಾಪ್ತಿಯಲ್ಲಿ ಬರುವ ಎಲ್ಲಾ ಜಿಲ್ಲೆಗಳಲ್ಲಿ ಮರು ಸಮೀಕ್ಷೆ ನಡೆಸಿ ನಿರ್ದಿಷ್ಟ ಶಿಫಾರಸ್ಸನ್ನು ಮಾಡಬೇಕು ಮತ್ತು ಈಗಿರುವ ಜನಸಂಖ್ಯೆಗೆ ಅನುಗುಣವಾಗಿ ಮೀಸಲಾತಿಯನ್ನು ಹೆಚ್ಚಳ ಮಾಡಿ ವರ್ಗೀಕರಣವನ್ನು ಜಾರಿಗೆ ತಂದು ಪರಿಶಿಷ್ಟರ ಐಕ್ಯತೆಯನ್ನು ಕಾಪಾಡಬೇಕು.
- ಸುಪ್ರೀಂ ಕೋರ್ಟ್ ತೀರ್ಪಿನಲ್ಲಿ ‘ಪ್ರಾಯೋಗಿಕ ದತ್ತಾಂಶ’ವನ್ನು ಮಾನದಂಡವನ್ನಾಗಿ ವಿಧಿಸಿರುವುದರಿಂದ ಮುಂದಿನ ಜನಗಣತಿಯವರೆಗೆ ಅವಶ್ಯಕವಿರುವ ಅಂಶಗಳಿಗೆಲ್ಲ ‘ಸ್ಯಾಂಪಲ್ ಸಮೀಕ್ಷೆ’ ಕೈಗೊಳ್ಳಬೇಕು. ಇದಕ್ಕೆ ರಾಜ್ಯ ಸರ್ಕಾರ ಶೀಘ್ರ ಅನುದಾನ ಬಿಡುಗಡೆ ಮಾಡಬೇಕು.
- ಉದ್ಯೋಗಗಳಲ್ಲಿ ಅತಿ ಕಡಿಮೆ ಆಯ್ಕೆ/ಅವಕಾಶಗಳಿದ್ದಾಗ, ಪ.ಜಾತಿಯ ಯಾವ ಗುಂಪಿಗೆ ಮೊದಲ ಆದ್ಯತೆ ನೀಡಬೇಕೆಂಬ ಶ್ರೇಣೀಕರಣ ನಿಗದಿಗೊಳಿಸಬೇಕು.
- ಬಡ್ತಿ ಮೀಸಲಾತಿಯಲ್ಲಿಯೂ ಒಳ ಮೀಸಲಾತಿಯನ್ನು ಪರಿಗಣಿಸಬೇಕು
- ರಾಜಕೀಯ ಮತಕ್ಷೇತ್ರ ಮೀಸಲಾತಿಯಲ್ಲಿಯೂ ಒಳ ಮೀಸಲಾತಿಯನ್ನು ಕಡ್ಡಾಯಗೊಳಿಸಲು ಶಿಫಾರಸು ಮಾಡಬೇಕು.
- ಗುತ್ತಿಗೆ ನೌಕರಿಗಳಲ್ಲಿಯೂ ಒಳ ಮೀಸಲಾತಿ ಪರಿಗಣಿಸಲು ಶಿಫಾರಸು ಮಾಡಬೇಕು.
- ಒಳ ಮೀಸಲಾತಿ ಅನುಷ್ಠಾನದಲ್ಲಿನ ಕುಂದು ಕೊರತೆಗಳು ಮತ್ತು ಪ್ರಗತಿಯ ಮೇಲ್ವಿಚಾರಣೆ ಮಾಡಲು ರಾಜ್ಯ ಪರಿಶಿಷ್ಟ ಆಯೋಗದಡಿಯಲ್ಲಿ ಒಂದು ಸ್ವತಂತ್ರ ಸಮಿತಿ ರಚಿಸಬೇಕು.
- ಇಂದಿರಾ ಸಹಾನಿ ತೀರ್ಪಿನನ್ವಯ ಮೀಸಲಾತಿಗೆ ವಿಧಿಸಿರುವ ಶೇ.50ರ ಮಿತಿಯನ್ನು ರದ್ದುಪಡಿಸಲು ರಾಜ್ಯ ಸರ್ಕಾರವು ಅಗತ್ಯ ಕ್ರಮ ಕೈಗೊಳ್ಳುವಂತೆ ಶಿಫಾರಸು ಮಾಡಬೇಕು.
- ಉದ್ಯೋಗಾಕಾಂಕ್ಷಿಗಳಿಗೆ ಸಮಸ್ಯೆಯಾಗದಂತೆ ನಿಗದಿತ ಗಡುವಿನೊಳಗೆ ಆಯೋಗವು ವರದಿ ನೀಡಬೇಕು.
ಜಸ್ಟೀಸ್ ನಾಗಮೋಹನ್ ದಾಸ್ ಅವರನ್ನು ಭೇಟಿಯಾದ ನಿಯೋಗದಲ್ಲಿ ಬಸವರಾಜ್ ಕೌತಾಳ್, ಶ್ರೀನಾಥ್ ಪೂಜಾರಿ, ಅಂಬಣ್ಣ ಅರೋಲಿಕರ್, ಕರಿಯಪ್ಪ ಗುಡಿಮನೆ, ಡಿ.ಟಿ ವೆಂಕಟೇಶ್, ಶಿವಣ್ಣ ಕನಕಪುರ, ಚಂದ್ರು ತರಹುಣಿಸೆ, ಪ್ರಸನ್ನ ಎಸಿ, ಶಿವು (ಡಿಎಂಸಿ), ಗಂಗಾಧರ್, ಮಂಜುನಾಥ್ ಮರಾಠ, ರಘು ಕಾಮಾಕ್ಷಿಪಾಳ್ಯ ಸೇರಿದಂತೆ ಹಲವು ಇದ್ದರು.


