ಉತ್ತರ ಪ್ರದೇಶದ ಕುಶಿನಗರದಲ್ಲಿ ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ಅಧಿಕಾರಿಗಳು ಮಸೀದಿಯ ಒಂದು ಭಾಗವನ್ನು ಕೆಡವಿದ ಎರಡು ದಿನಗಳ ನಂತರ, ಸಮಾಜವಾದಿ ಪಕ್ಷದ (ಎಸ್ಪಿ) 18 ಸದಸ್ಯರ ನಿಯೋಗ ಮಂಗಳವಾರ (ಫೆ.11) ಸ್ಥಳಕ್ಕೆ ಭೇಟಿ ನೀಡಿ ಪರಿಶೀಲನೆ ನಡೆಸಿದೆ.
ಉತ್ತರ ಪ್ರದೇಶ ವಿಧಾನಪರಿಷತ್ತಿನ ವಿರೋಧ ಪಕ್ಷದ ನಾಯಕ ಲಾಲ್ ಬಿಹಾರಿ ಯಾದವ್ ಅವರು ನಿಯೋಗದ ನೇತೃತ್ವ ವಹಿಸಿದ್ದರು. ನಿಯೋಗವು ತನ್ನ ವರದಿಯನ್ನು ಪಕ್ಷದ ಮುಖ್ಯಸ್ಥ ಅಖಿಲೇಶ್ ಯಾದವ್ ಅವರಿಗೆ ಸಲ್ಲಿಸಲಿದೆ.
ಹೈಕೋರ್ಟ್ ತಡೆಯಾಜ್ಞೆ ತೆರವಾದ ಮರುದಿನವೇ ಕುಶಿನಗರ ಜಿಲ್ಲಾಡಳಿತ ಹಟಾ ಪ್ರದೇಶದ ಮದ್ನಿ ಮಸೀದಿಯ ಒಂದು ಭಾಗವನ್ನು ಅಕ್ರಮವಾಗಿ ನಿರ್ಮಿಸಲಾಗಿದೆ ಎಂದು ಆರೋಪಿಸಿ ನೆಲಸಮಗೊಳಿಸಿದೆ.
ಮಸೀದಿಯ ವಿರುದ್ಧ ಅಧಿಕಾರಿಗಳು ತೆಗೆದುಕೊಂಡ ಕ್ರಮಗಳ ಬಗ್ಗೆ ಮಾಹಿತಿಯನ್ನು ಸಂಗ್ರಹಿಸಿದ ನಿಯೋಗ, ತನ್ನ ವರದಿಯನ್ನು ಸಿದ್ಧಪಡಿಸಿದೆ. ನಿಯೋಗದಲ್ಲಿ ಮಾಜಿ ಸಚಿವ ಬ್ರಹ್ಮಶಂಕರ್ ತ್ರಿಪಾಠಿ, ರಾಧೇಶ್ಯಾಮ್ ಸಿಂಗ್ ಮತ್ತು ಮಾಜಿ ಸಂಸದ ಬಾಲೇಶ್ವರ್ ಯಾದವ್ ಅವರಂತಹ ಹಿರಿಯ ಎಸ್ಪಿ ನಾಯಕರು ಇದ್ದರು.
ಕಳೆದ ಭಾನುವಾರ (ಫೆ.9) ಭಾರೀ ಭದ್ರತೆಯಲ್ಲಿ ಮಸೀದಿಯ ಧ್ವಂಸ ಕಾರ್ಯಾಚರಣೆ ನಡೆದಿದೆ. ಕೆಡವಲಾದ ಕಟ್ಟಡವನ್ನು ಸರ್ಕಾರಿ ಭೂಮಿಯಲ್ಲಿ ಅಕ್ರಮವಾಗಿ ನಿರ್ಮಿಸಲಾಗಿತ್ತು ಎಂದು ಅಧಿಕಾರಿಗಳು ಹೇಳಿದ್ದಾರೆ. ಆದರೆ, ಮಸೀದಿ ಸಮಿತಿ ಅಧಿಕಾರಿಗಳ ಕ್ರಮ ಸುಪ್ರೀಂ ಕೋರ್ಟ್ ಮತ್ತು ಹೈಕೋರ್ಟ್ ಆದೇಶಗಳ ಉಲ್ಲಂಘನೆ ಎಂದು ಆರೋಪಿಸಿದೆ.
“ನ್ಯಾಯಾಲಯದ ತಡೆಯಾಜ್ಞೆಯ ಹೊರತಾಗಿಯೂ ಧ್ವಂಸ ಮಾಡಲಾಗಿದೆ. ಯಾವುದೇ ಮುನ್ಸೂಚನೆ ನೀಡದೆ ಫೆ. 9ರಂದು ಮಸೀದಿ ಕಟ್ಟಡದ ಒಂದು ಭಾಗವನ್ನು ಕೆಡವಿದ್ದಾರೆ” ಎಂದು ಮಸೀದಿ ಸಮಿತಿ ಹೇಳಿದೆ. ತಪ್ಪಿತಸ್ಥ ಅಧಿಕಾರಿಗಳ ವಿರುದ್ದ ಕ್ರಮ ಕೈಗೊಳ್ಳಬೇಕು. ಮಸೀದಿಯ ಪುನರ್‌ನಿರ್ಮಾಣಕ್ಕೆ ಅನುಮತಿ ನೀಡಬೇಕು ಎಂದು ಸಮಿತಿ ಆಗ್ರಹಿಸಿದೆ.
ಎಸ್ಪಿ ನಿಯೋಗದ ಮುಖ್ಯಸ್ಥ ಲಾಲ್ ಬಿಹಾರಿ ಯಾದವ್ ಅವರು ಮಸೀದಿಯನ್ನು ಕಾನೂನುಬದ್ಧವಾಗಿ ನೋಂದಾಯಿತ ಭೂಮಿಯಲ್ಲಿ ನಿರ್ಮಿಸಲಾಗಿದೆ ಎಂದು ಪ್ರತಿಪಾದಿಸಿದ್ದಾರೆ. ಅಧಿಕಾರಿಗಳ ಆರೋಪವನ್ನು ತಳ್ಳಿ ಹಾಕಿದ ಅವರು, ಮಸೀದಿಯನ್ನು ಅಕ್ರಮವಾಗಿ ನಿರ್ಮಿಸಿಲ್ಲ. ಅಧಿಕಾರಿಗಳು ಸುಪ್ರೀಂ ಕೋರ್ಟ್ ನಿರ್ದೇಶನಗಳನ್ನು ನಿರ್ಲಕ್ಷಿಸಿದ್ದಾರೆ ಎಂದು ಆರೋಪಿಸಿದ್ದಾರೆ. ವಿಧಾನಸಭೆ ಮತ್ತು ವಿಧಾನ ಪರಿಷತ್ತಿನಲ್ಲಿ ಈ ವಿಷಯವನ್ನು ಪ್ರಸ್ತಾಪಿಸುವುದಾಗಿ ಹೇಳಿದ್ದಾರೆ.
ಮುಸ್ಲಿಮರಿಂದ ವಕ್ಫ್ ಆಸ್ತಿ ಕಸಿದುಕೊಂಡು ನಾಶಕ್ಕೆ ಯತ್ನ: ಅಸಾದುದ್ದೀನ್ ಓವೈಸಿ ಆರೋಪ


