ವಿದ್ಯಾರ್ಥಿಗಳ ವಿರುದ್ಧ ದೌರ್ಜನ್ಯ ಸೇರಿದಂತೆ ಹಲವಾರು ವಿಚಾರಗಳನ್ನು ಮುಂದಿಟ್ಟು ಪ್ರತಿಭಟನೆ ನಡೆಸುತ್ತಿದ್ದ ಜಾಮಿಯಾ ಮಿಲಿಯಾ ಇಸ್ಲಾಮಿಯಾದ ಕನಿಷ್ಠ 14 ವಿದ್ಯಾರ್ಥಿಗಳನ್ನು ದೆಹಲಿ ಪೊಲೀಸರು ಗುರುವಾರ ಬಂಧಿಸಿದ್ದಾರೆ ಎಂದು ವರದಿಯಾಗಿದೆ. ಜೊತೆಗೆ, ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಅನೇಕ ವಿದ್ಯಾರ್ಥಿಗಳನ್ನು ಅಮಾನತುಗೊಳಿಸಿದ್ದು, ಅವರು ಕ್ಯಾಂಪಸ್‌ಗೆ ಪ್ರವೇಶಿಸುವುದನ್ನು ನಿಷೇಧಿಸಿದೆ ಎಂದು ವಿದ್ಯಾರ್ಥಿ ಸಂಘಟನೆಗಳು ತಿಳಿಸಿವೆ. ದೆಹಲಿ | ಜಾಮಿಯಾ
ಇಬ್ಬರು ಪಿಎಚ್‌ಡಿ ವಿದ್ಯಾರ್ಥಿಗಳ ವಿರುದ್ಧ ವಿಶ್ವವಿದ್ಯಾಲಯದ ಶಿಸ್ತು ಕ್ರಮವನ್ನು ವಿರೋಧಿಸಿ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸುತ್ತಿದ್ದರು. ಇದರೊಂದಿಗೆ, ಇತರ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಫೆಬ್ರವರಿ 10 ರಿಂದ ಕ್ಯಾಂಪಸ್‌ನಲ್ಲಿ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿದ್ದರು. ಅದಾಗ್ಯೂ, ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ತಮ್ಮೊಂದಿಗೆ ಯಾವುದೆ ಮಾತುಕತೆ ನಡೆಸದೆ ನೇರವಾಗಿ ಅಮಾನತು ಕ್ರಮ ಕೈಗೊಂಡಿದ್ದು, ಪೊಲೀಸರು ಪ್ರತಿಭಟನಾಕಾರರನ್ನು ಬಂಧಿಸಿದ್ದಾರೆ ಎಂದು ವಿದ್ಯಾರ್ಥಿಗಳು ಆರೋಪಿಸಿದ್ದಾರೆ.
ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ
ಇಲ್ಲಿಕ್ಲಿಕ್ ಮಾಡಿ
ಫೆಬ್ರವರಿ 13 ರ ಗುರುವಾರ ಬೆಳಗಿನ ಜಾವ ದೆಹಲಿ ಪೊಲೀಸರು ವಿದ್ಯಾರ್ಥಿಗಳನ್ನು ಬಂಧಿಸಿದ್ದಾರೆ ಎಂದು ವಿದ್ಯಾರ್ಥಿಗಳ ಹೇಳಿದ್ದಾರೆ ಎಂದು ನ್ಯೂಸ್ ಕ್ಲಿಕ್ ವರದಿ ಮಾಡಿದೆ. ವಿಶ್ವವಿದ್ಯಾಲಯ ಆಡಳಿತ ಮಂಡಳಿಯು ಸ್ವತಃ “ಈ ವಿದ್ಯಾರ್ಥಿಗಳನ್ನು ದೆಹಲಿ ಪೊಲೀಸರಿಗೆ ಹಸ್ತಾಂತರಿಸಿದೆ” ಎಂದು ಅವರು ಆರೋಪಿಸಿದ್ದಾರೆ. ಪೊಲೀಸರು ಬಂಧಿತ ವಿದ್ಯಾರ್ಥಿಗಳನ್ನು ಎಲ್ಲಿ ಇರಿಸಿದ್ದಾರೆ ಎಂಬುದು ಇನ್ನೂ ತಿಳಿದಿಲ್ಲ, ಜೊತೆಗೆ ಬಂಧನಕ್ಕೊಳಗಾದವರಲ್ಲಿ ಅನೇಕ ಮಹಿಳಾ ವಿದ್ಯಾರ್ಥಿಗಳಿದ್ದಾರೆ ಎಂದು ಅವರು ಆತಂಕ ವ್ಯಕ್ತಪಡಿಸಿದ್ದಾರೆ.
ವಿದ್ಯಾರ್ಥಿ ಸಂಘಟನೆಗಳು ವಿಶ್ವವಿದ್ಯಾಲಯ ಆಡಳಿತ ಮಂಡಳಿ ಮತ್ತು ದೆಹಲಿ ಪೊಲೀಸರ ಈ ಕ್ರಮವನ್ನು ಖಂಡಿಸಿದ್ದು, ಇದು ಕಾನೂನುಬಾಹಿರ ಮತ್ತು ವಿದ್ಯಾರ್ಥಿಗಳ ಹಕ್ಕುಗಳ ದಮನ ಎಂದು ಕರೆದಿವೆ.
ಫೆಬ್ರವರಿ 10 ರಿಂದ ಅನಿರ್ದಿಷ್ಟಾವಧಿ ಧರಣಿ ನಡೆಸುತ್ತಿರುವ ವಿದ್ಯಾರ್ಥಿಗಳು ಆರು ಪ್ರಮುಖ ಬೇಡಿಕೆಗಳನ್ನು ಮುಂದಿಟ್ಟಿದ್ದಾರೆ:
— ಪಿಎಚ್‌ಡಿ ವಿದ್ಯಾರ್ಥಿಗಳಾದ ಸೌರಭ್ ಮತ್ತು ಜ್ಯೋತಿ ವಿರುದ್ಧ ಶಿಸ್ತು ಸಮಿತಿ ಸಭೆಯ ನಿರ್ಧಾರವನ್ನು ರದ್ದುಗೊಳಿಸಬೇಕು.
– ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದ ನಂತರ ಹೊರಡಿಸಲಾದ ಎಲ್ಲಾ ಶೋಕಾಸ್ ನೋಟಿಸ್‌ಗಳನ್ನು ಹಿಂಪಡೆಯಬೇಕು. ದೆಹಲಿ | ಜಾಮಿಯಾ
– ಆಗಸ್ಟ್ 29, 2022 ಮತ್ತು ನವೆಂಬರ್ 29, 2024 ರಂದು ಹೊರಡಿಸಲಾದ ಕಚೇರಿ ಜ್ಞಾಪಕ ಪತ್ರವನ್ನು ರದ್ದುಗೊಳಿಸಬೇಕು.
— ವಿದ್ಯಾರ್ಥಿಗಳು ಧ್ವನಿ ಎತ್ತಿದ್ದಕ್ಕಾಗಿ ತೆಗೆದುಕೊಳ್ಳಲಾಗುತ್ತಿರುವ ಎಲ್ಲಾ ರೀತಿಯ ದಮನಕಾರಿ ಕ್ರಮಗಳನ್ನು ನಿಲ್ಲಿಸಬೇಕು.
— ಜಾಮಿಯಾ ಗೋಡೆಗಳ ಮೇಲೆ ಪೋಸ್ಟರ್‌ಗಳನ್ನು ಹಾಕಿದ್ದಕ್ಕಾಗಿ ಮತ್ತು ಘೋಷಣಾ ಬರಹ ಬರೆದಿದ್ದಕ್ಕಾಗಿ ವಿದ್ಯಾರ್ಥಿಗಳನ್ನು ಶಿಕ್ಷಿಸುವ ಸೂಚನೆಯನ್ನು ರದ್ದುಗೊಳಿಸಬೇಕು.
— ಅಭಿವ್ಯಕ್ತಿ ಸ್ವಾತಂತ್ರ್ಯ, ಶಾಂತಿಯುತ ಸಭೆ ಮತ್ತು ಸಂಘಟನಾ ಸ್ವಾತಂತ್ರ್ಯವನ್ನು ಉಲ್ಲಂಘಿಸಿ ಸಭೆ ಸೇರಿ ಪ್ರತಿಭಟಿಸಿದ್ದಕ್ಕಾಗಿ ವಿದ್ಯಾರ್ಥಿಗಳಿಗೆ ಇನ್ನು ಮುಂದೆ ಶೋಕಾಸ್ ನೋಟಿಸ್‌ಗಳನ್ನು ಕಳುಹಿಸಬಾರದು.
ವಿಶ್ವವಿದ್ಯಾಲಯ ಆಡಳಿತ ಮಂಡಳಿಯೊಂದಿಗೆ ಸಂವಾದಕ್ಕಾಗಿ ನಿರಂತರ ಪ್ರಯತ್ನಗಳನ್ನು ಮಾಡಿದ್ದೇವೆ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ. ಆದರೆ, ಅವರು ಅದರಲ್ಲಿ ಯಾವುದೇ ಆಸಕ್ತಿ ತೋರಿಸಲಿಲ್ಲ. ಹಾಗಾಗಿ ನಾವು ಕ್ಯಾಂಪಸ್‌ನಲ್ಲಿ ಧರಣಿ ಪ್ರಾರಂಭಿಸುವಂತೆ ಆಯಿತು. ಜೊತೆಗೆ ನಮ್ಮ ಪ್ರತಿಭಟನೆ ಸಂಪೂರ್ಣವಾಗಿ ಶಾಂತಿಯುತವಾಗಿ ನಡೆಯುತ್ತಿತ್ತು ಎಂದು ಅವರು ಹೇಳಿದ್ದಾರೆ.
ಘಟನೆಯ ವೀಡಿಯೊ ಜೊತೆಗೆ ಎಕ್ಸ್‌ನಲ್ಲಿ ಬರೆದಿರುವ ಭಾರತ ವಿದ್ಯಾರ್ಥಿ ಫಡರೇಷನ್ (SFI), “ದಿಲ್ಲಿ ಪೊಲೀಸರು JMI ಮೇಲೆ ಮಧ್ಯರಾತ್ರಿ ದಾಳಿ ನಡೆಸಿದ್ದಾರೆ. JMI ನಲ್ಲಿ ಶಾಂತಿಯುತವಾಗಿ ಪ್ರತಿಭಟನೆ ನಡೆಸುತ್ತಿದ್ದ ವಿದ್ಯಾರ್ಥಿಗಳನ್ನು ದೆಹಲಿ ಪೊಲೀಸರು ಕ್ರೂರವಾಗಿ ಬಂಧಿಸಿದ್ದಾರೆ. JMI ಪ್ರೊಕ್ಟೋರಿಯಲ್ ಸಿಬ್ಬಂದಿ ಕ್ಯಾಂಪಸ್‌ನಿಂದ ಬಲವಂತವಾಗಿ ಹೊರಗೆಳೆದಿದ್ದಾರೆ. ಬಂಧಿಸಿ ಅಜ್ಞಾತ ಸ್ಥಳಕ್ಕೆ ಕರೆದೊಯ್ಯಲಾಗಿದೆ.” ಎಂದು ಹೇಳಿದೆ.
ಧರಣಿ ನೇತೃತ್ವವನ್ನು ಆಲ್ ಇಂಡಿಯಾ ಸ್ಟೂಡೆಂಟ್ಸ್ ಅಸೋಸಿಯೇಷನ್ (AISA), ದಯಾರ್-ಎ-ಶೌಕ್ ಸ್ಟೂಡೆಂಟ್ ಕೇಡರ್ (DISC), ಸ್ಟೂಡೆಂಟ್ ಫೆಡರೇಶನ್ ಆಫ್ ಇಂಡಿಯಾ (SFI) ಮತ್ತು ಆಲ್ ಇಂಡಿಯಾ ರೆವಲ್ಯೂಷನರಿ ಸ್ಟೂಡೆಂಟ್ಸ್ ಆರ್ಗನೈಸೇಶನ್ (AIRSO) ಸೇರಿದಂತೆ ಅನೇಕ ಎಡಪಂಥೀಯ ಮತ್ತು ಇತರ ವಿದ್ಯಾರ್ಥಿ ಸಂಘಟನೆಗಳು ವಹಿಸಿದ್ದವು.
ಆದಾಗ್ಯೂ, ಜಾಮಿಯಾ ಆಡಳಿತ ಮಂಡಳಿಯು, ವಿದ್ಯಾರ್ಥಿಗಳು ಕಾಲೇಜು ಶಿಸ್ತನ್ನು “ಉಲ್ಲಂಘಿಸಿದ್ದಾರೆ” ಎಂದು ಹೇಳಿದೆ ಎಂದು ಸುದ್ದಿ ಸಂಸ್ಥೆ ANI ವರದಿ ಮಾಡಿದೆ. ಪ್ರತಿಭಟನಾ ನಿರತ ವಿದ್ಯಾರ್ಥಿಗಳು ವಾತಾವರಣವನ್ನು “ಹಾಳು ಮಾಡಿದ್ದಾರೆ”, ವಿದ್ಯಾರ್ಥಿಗಳು ತರಗತಿಗೆ ಹೋಗದಂತೆ “ತಡೆದಿದ್ದಾರೆ” ಮತ್ತು ವಿಶ್ವವಿದ್ಯಾಲಯದ ಆಸ್ತಿಯನ್ನು “ಧ್ವಂಸಗೊಳಿಸಿದ್ದಾರೆ” ಎಂದು ಅದು ಹೇಳಿಕೊಂಡಿದೆ.
ಪ್ರಾಸಂಗಿಕವಾಗಿ, ಶಿಸ್ತು ಕ್ರಮ ಕೈಗೊಳ್ಳಲಾದ ಪಿಎಚ್‌ಡಿ ವಿದ್ಯಾರ್ಥಿಗಳು 2024 ರಲ್ಲಿ ಪ್ರತಿಭಟನೆಯನ್ನು ಆಯೋಜಿಸಿದ್ದರು ಎಂದು ಆರೋಪಿಸಲಾಗಿದೆ. 2019 ರ ಸಿಎಎ (ಪೌರತ್ವ ತಿದ್ದುಪಡಿ ಕಾಯ್ದೆ) ಕಾಯ್ದೆ ವಿರೋಧಿಸಿ ದೇಶಾದ್ಯಂತ ನಡೆದ ಪ್ರತಿಭಟನೆಗಳ ಸ್ಮರಣಾರ್ಥ ಪ್ರತಿರೋಧ ದಿನವೆಂದು ಈ ಪ್ರತಿಭಟನೆಯನ್ನು ನಡೆಸಲಾಗಿತ್ತು.
ಡಿಸೆಂಬರ್ 15, 2019 ರಂದು ದೆಹಲಿ ಪೊಲೀಸರು ವಿಶ್ವವಿದ್ಯಾಲಯದ ಆವರಣಕ್ಕೆ ಪ್ರವೇಶಿಸಿ ಗ್ರಂಥಾಲಯದೊಳಗೆ ನುಗ್ಗಿ ವಿದ್ಯಾರ್ಥಿಗಳ ಮೇಲೆ ಕ್ರೂರವಾಗಿ ಲಾಠಿಚಾರ್ಜ್ ನಡೆಸಿದ್ದರು. ಈ ಘಟನೆಯ ಸಿಸಿಟಿವಿ ದೃಶ್ಯಾವಳಿಗಳು ವೈರಲ್ ಆಗಿತ್ತು. ನಂತರ ಇದನ್ನು ವಿರೋಧಿಸಿ ದೇಶಾದ್ಯಂತ ಪ್ರತಿಭಟನೆಗಳು ನಡೆದಿದ್ದವು.
ಪ್ರತಿಭಟನಾ ನಿರತ ವಿದ್ಯಾರ್ಥಿಗಳು ಪಿಎಚ್‌ಡಿ ವಿದ್ಯಾರ್ಥಿಗಳ ವಿರುದ್ಧ ಕ್ರಮ ಹಿಂತೆಗೆದುಕೊಳ್ಳುವಂತೆ ಒತ್ತಾಯಿಸುತ್ತಿದ್ದರು. ಶಿಸ್ತು ಸಮಿತಿಯ ಸಭೆಯನ್ನು ಫೆಬ್ರವರಿ 25 ರಂದು ನಿಗದಿಪಡಿಸಲಾಗಿತ್ತು, ಆದರೆ ವಿಶ್ವವಿದ್ಯಾಲಯ ಆಡಳಿತವು ಇನ್ನೂ ತಮ್ಮ ಬೇಡಿಕೆಗಳಿಗೆ ಸ್ಪಂದಿಸಿಲ್ಲ ಎಂದು ವಿದ್ಯಾರ್ಥಿಗಳು ಹೇಳಿದ್ದಾರೆ.
ಮತ್ತೊಂದು ಘಟನೆಯಲ್ಲಿ, ಫೆಬ್ರವರಿ 11 ರ ಮಂಗಳವಾರ, ಎಐಎಸ್ಎ ರಾಷ್ಟ್ರೀಯ ಅಧ್ಯಕ್ಷೆ ನೇಹಾ ಅವರನ್ನು ಜಾಮಿಯಾ ಆಡಳಿತ ಮಂಡಳಿಯು ಬಲವಂತವಾಗಿ ಕ್ಯಾಂಪಸ್‌ನಿಂದ ಹೊರಹಾಕಿದೆ ಎಂದು ಆರೋಪಿಸಲಾಗಿದೆ. ವಿದ್ಯಾರ್ಥಿಗಳ ಬೇಡಿಕೆಗಳನ್ನು ಬೆಂಬಲಿಸಿ ನೇಹಾ ಜಾಮಿಯಾಕ್ಕೆ ಬಂದಿದ್ದರು.
ಇದನ್ನೂಓದಿ: ಸಿದ್ದರಾಮಯ್ಯ ಬಗ್ಗೆ ಸುಳ್ಳು ಸುದ್ದಿ – ಅರ್ನಾಬ್ ಗೋಸ್ವಾಮಿ ವಿರುದ್ಧದ ಪ್ರಕರಣ ರದ್ದು ಮಾಡಿದ ಕರ್ನಾಟಕ ಹೈಕೋರ್ಟ್
ಸಿದ್ದರಾಮಯ್ಯ ಬಗ್ಗೆ ಸುಳ್ಳು ಸುದ್ದಿ – ಅರ್ನಾಬ್ ಗೋಸ್ವಾಮಿ ವಿರುದ್ಧದ ಪ್ರಕರಣ ರದ್ದು ಮಾಡಿದ ಕರ್ನಾಟಕ ಹೈಕೋರ್ಟ್


