ಮಣಿಪುರದಲ್ಲಿ ರಾಷ್ಟ್ರಪತಿ ಆಡಳಿತ ಹೇರುವ ಮೂಲಕ ತಡವಾಗಿಯಾದರೂ ನಾವು ಸರ್ಕಾರ ನಡೆಸಲು ಅನರ್ಹ ಎಂಬುವುದನ್ನು ಬಿಜೆಪಿ ಒಪ್ಪಿಕೊಂಡಿದೆ ಎಂದು ಲೋಕಸಭೆಯ ಪ್ರತಿಪಕ್ಷ ನಾಯಕ ರಾಹುಲ್ ಗಾಂಧಿ ಹೇಳಿದ್ದಾರೆ.
ಇನ್ನು ಮೋದಿಯವರು ಮಣಿಪುರದ ನೇರ ಜವಾಬ್ದಾರಿ ಹೊತ್ತುಕೊಳ್ಳುವುದರಿಂದ ನುಣುಚಿಕೊಳ್ಳಲು ಸಾಧ್ಯವಿಲ್ಲ. ಕೊನೆಗೂ ಅವರು ಮಣಿಪುರಕ್ಕೆ ಭೇಟಿ ಕೊಡುತ್ತಾರಾ? ಆ ರಾಜ್ಯದಲ್ಲಿ ಶಾಂತಿ ಸ್ಥಾಪಿಸಲು ಏನು ಮಾಡುತ್ತೀರಿ ಎಂದು ಅಲ್ಲಿನ ಮತ್ತು ದೇಶದ ಜನರಿಗೆ ತಿಳಿಸುತ್ತಾರಾ? ಎಂದು ಎಕ್ಸ್ ಪೋಸ್ಟ್‌ನಲ್ಲಿ ರಾಹುಲ್ ಗಾಂಧಿ ಪ್ರಶ್ನಿಸಿದ್ದಾರೆ.
The imposition of President’s Rule in Manipur is a belated admission by the BJP of their complete inability to govern in Manipur.
Now, PM Modi can no longer deny his direct responsibility for Manipur.
Has he finally made up his mind to visit the state, and explain to the…
— Rahul Gandhi (@RahulGandhi) February 13, 2025
“ಫೆಬ್ರವರಿ 10ರಂದು ಕಾಂಗ್ರೆಸ್ ಅವಿಶ್ವಾಸ ನಿರ್ಣಯ ಮಂಡಿಸುತ್ತಿತ್ತು. ಆದರೆ, ಮುಖ್ಯಮಂತ್ರಿ ತಮ್ಮದೇ ಬಿಜೆಪಿ ಮತ್ತು ಎನ್‌ಡಿಎ ಸಹೋದ್ಯೋಗಿಗಳ ವಿಶ್ವಾಸ ಕಳೆದುಕೊಂಡಿದ್ದಾರೆಂದು ಅವರಿಗೆ ತಿಳಿದಿತ್ತು. ಫೆಬ್ರವರಿ 9ರಂದು ಮುಖ್ಯಮಂತ್ರಿ ರಾಜೀನಾಮೆ ನೀಡಬೇಕಾಯಿತು ಎಂದು ಕಾಂಗ್ರೆಸ್ ಪ್ರಧಾನ ಕಾರ್ಯದರ್ಶಿ (ಸಂವಹನ) ಜೈರಾಮ್ ರಮೇಶ್ ಪ್ರತ್ಯೇಕ ಪೋಸ್ಟ್‌ನಲ್ಲಿ ಹೇಳಿದ್ದಾರೆ.
ಹಿಂದಿನ ಅಧಿವೇಶನ ನಡೆದು ಆರು ತಿಂಗಳೊಳಗೆ ಮುಂದಿನ ಅಧಿವೇಶನವನ್ನು ಕರೆಯಬೇಕೆಂಬ ನಿಯಮವನ್ನು ಫೆಬ್ರವರಿ 12 ರಂದು ಉಲ್ಲಂಘಿಸಲಾಗಿದೆ ಎಂದು ಜೈರಾಮ್ ರಮೇಶ್ ಆರೋಪಿಸಿದ್ದಾರೆ.
“ಮಣಿಪುರದಲ್ಲಿ ರಾಷ್ಟ್ರಪತಿ ಆಳ್ವಿಕೆಯನ್ನು ಹೇರಿದ್ದಾರೆ. ಅಲ್ಲಿ ಮಧ್ಯಂತರ ಚುನಾವಣೆಗೆ ಒತ್ತಾಯಿಸಬೇಕೆ ಎಂದು ಚರ್ಚಿಸಲು ನಾವು ನಮ್ಮ ಪಕ್ಷದ ಸಹೋದ್ಯೋಗಿಗಳೊಂದಿಗೆ ಸಮಾಲೋಚಿಸಿ ಆಂತರಿಕ ಸಭೆಗಳನ್ನು ನಡೆಸುತ್ತೇವೆ. ಆದಾಗ್ಯೂ, ಪ್ರಧಾನಿ ಮಣಿಪುರಕ್ಕೆ ಭೇಟಿ ನೀಡಬೇಕೆಂಬುದು ನಮ್ಮ ತಕ್ಷಣದ ಬೇಡಿಕೆಯಾಗಿದೆ” ಎಂದು ತಿಳಿಸಿದ್ದಾರೆ.
On the 10th of February, the Congress was bringing a no-confidence motion. They knew the chief minister had lost the confidence of his own BJP and NDA colleagues. Consequently, the chief minister was forced to resign on February 9.
The requirement to convene the next session… pic.twitter.com/KuPyNdoaNq
— Congress (@INCIndia) February 13, 2025
ಈ ನಡುವೆ ಮಣಿಪುರದ ಕುಕಿ-ಝೋ ಬುಡಕಟ್ಟು ಜನಾಂಗದವರ ಸರ್ವೋಚ್ಚ ಸಂಸ್ಥೆಯಾದ ಸ್ಥಳೀಯ ಬುಡಕಟ್ಟು ನಾಯಕರ ವೇದಿಕೆ (ಐಟಿಎಲ್‌ಎಫ್)ರಾಜ್ಯದಲ್ಲಿ ರಾಷ್ಟ್ರಪತಿ ಆಳ್ವಿಕೆ ಹೇರಿಕೆಯನ್ನು ಬೆಂಬಲಿಸಿದೆ. ಮುಖ್ಯಮಂತ್ರಿ ಬದಲಾವಣೆಗಿಂತ ರಾಷ್ಟ್ರಪತಿ ಆಳ್ವಿಕೆ ಹೆಚ್ಚು ಯೋಗ್ಯವಾಗಿದೆ ಎಂದು ಐಟಿಎಲ್‌ಎಫ್ ವಕ್ತಾರ ಗಿಂಜಾ ವುಯಲ್‌ಜಾಂಗ್ ಹೇಳಿದ್ದಾರೆ.
“ಕುಕಿ-ಝೋ ಜನಾಂಗದವರು ಇನ್ನು ಮುಂದೆ ಮೈತೇಯಿಯನ್ನು ನಂಬುವುದಿಲ್ಲ. ಆದ್ದರಿಂದ ಹೊಸ ಮೈತೇಯಿ ಮುಖ್ಯಮಂತ್ರಿ ನೇಮಕ ಮಾಡುವುದಕ್ಕೆ ನಮ್ಮ ಒಪ್ಪಿಗೆಯಿಲ್ಲ. ರಾಷ್ಟ್ರಪತಿ ಆಳ್ವಿಕೆಯು ಕುಕಿ-ಝೋ ಸಮುದಾಯಕ್ಕೆ ಭರವಸೆಯ ಬೆಳಕನ್ನು ನೀಡಿದೆ. ಇದು ನಮ್ಮ ರಾಜಕೀಯ ಪರಿಹಾರಕ್ಕೆ ಒಂದು ಹೆಜ್ಜೆ ಹತ್ತಿರವಾಗಲಿದೆ ಎಂದು ನಾವು ನಂಬುತ್ತೇವೆ” ಎಂದು ವುಯಲ್‌ಜಾಂಗ್ ತಿಳಿಸಿದ್ದಾರೆ.
“ರಾಷ್ಟ್ರಪತಿ ಆಳ್ವಿಕೆಯೊಂದಿಗೆ, ಹಿಂಸಾಚಾರವನ್ನು ಕೊನೆಗೊಳಿಸುವ ಪ್ರಕ್ರಿಯೆ ಪ್ರಾರಂಭವಾಗಿದೆ ಎಂದು ನಾನು ನಂಬುತ್ತೇನೆ. ಇದು ರಾಜಕೀಯ ಸಂವಾದಕ್ಕೆ ಅನುಕೂಲಕರ ವಾತಾವರಣಕ್ಕೆ ದಾರಿ ಮಾಡಿಕೊಡುತ್ತದೆ” ಎಂದು ವುಯಲ್‌ಜಾಂಗ್ ಹೇಳಿದ್ದಾರೆ.
ಜನಾಂಗೀಯ ಹಿಂಸಾಚಾರ ಭುಗಿಲೆದ್ದಾಗಿನಿಂದ ಐಟಿಎಲ್ಎಫ್, ಕುಕಿ ಇನ್ಪಿ ಮಣಿಪುರ (ಕೆಐಎಂ), ಕುಕಿ-ಝೋ ಬುಡಕಟ್ಟು ಜನಾಂಗದ ಹಲವಾರು ಇತರ ಸಂಘಟನೆಗಳು ಮತ್ತು ಕುಕಿ-ಝೋ ಸಮುದಾಯಕ್ಕೆ ಸೇರಿದ ಹತ್ತು ಬುಡಕಟ್ಟು ಶಾಸಕರು ಮಣಿಪುರದಲ್ಲಿ ಬುಡಕಟ್ಟು ಜನಾಂಗದವರಿಗೆ ಪ್ರತ್ಯೇಕ ಆಡಳಿತ ಅಥವಾ ಕೇಂದ್ರಾಡಳಿತ ಪ್ರದೇಶಕ್ಕಾಗಿ ಒತ್ತಾಯಿಸುತ್ತಿದ್ದಾರೆ.


