ಒಡಿಶಾದ ಭುವನೇಶ್ವರದಲ್ಲಿರುವ ಕಳಿಂಗಾ ಕೈಗಾರಿಕಾ ತಂತ್ರಜ್ಞಾನ ಸಂಸ್ಥೆಯಲ್ಲಿ (ಕೆಐಐಟಿ) ನೇಪಾಳಿ ವಿದ್ಯಾರ್ಥಿನಿಯೊಬ್ಬರು ಭಾನುವಾರ (ಫೆ.16) ಸಂಜೆ ಹಾಸ್ಟೆಲ್ ಕೋಣೆಯಲ್ಲಿ ನೇಣು ಬಿಗಿದ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಆತ್ಮಹತ್ಯೆ ಮಾಡಿಕೊಂಡಿದ್ದಾರೆ ಎಂದು ವರದಿಯಾಗಿದೆ.
ಮೂರನೇ ವರ್ಷದ ಬಿಟೆಕ್ ವ್ಯಾಸಂಗ ಮಾಡುತ್ತಿದ್ದ ಪ್ರಕೃತಿ ಲಾಮ್ಸಾಲ್ ಅಸಹಜವಾಗಿ ಸಾವಿಗೀಡಾದ ವಿದ್ಯಾರ್ಥಿನಿ ಎಂದು ತಿಳಿದು ಬಂದಿದೆ.
ಈ ಘಟನೆಯಿಂದ ಕೆಐಐಟಿ ಕ್ಯಾಂಪಸ್‌ನಲ್ಲಿ ಕೋಲಾಹಲ ಸೃಷ್ಟಿಯಾಗಿದೆ. ವಿದ್ಯಾರ್ಥಿನಿಯ ಸಾವಿಗೆ ನ್ಯಾಯ ಒದಗಿಸಿಕೊಡುವಂತೆ ಆಗ್ರಹಿಸಿ 500ಕ್ಕೂ ಹೆಚ್ಚು ನೇಪಾಳಿ ವಿದ್ಯಾರ್ಥಿಗಳು ಸಂಸ್ಥೆಯ ವಿರುದ್ಧ ಭಾನುವಾರ ರಾತ್ರಿಯೇ ದಿಢೀರ್ ಪ್ರತಿಭಟನೆ ನಡೆಸಲು ಮುಂದಾಗಿದ್ದರು. ಇದರಿಂದ ಕೋಪಗೊಂಡ ಕೆಐಐಟಿ ಆಡಳಿತ ಮಂಡಳಿ, ಪ್ರತಿಭಟನೆಗೆ ಮುಂದಾದ ವಿದ್ಯಾರ್ಥಿಗಳನ್ನು ಕ್ಯಾಂಪಸ್ ಖಾಲಿ ಮಾಡಿಸಿ ವಾಪಸ್ ಊರಿಗೆ ಹೋಗುವಂತೆ ಒತ್ತಾಯಿಸಿದೆ.
ಅಲ್ಲದೇ ಅವರೆಲ್ಲರನ್ನೂ ಬಸ್ ಹತ್ತಿಸಿ ಕ್ಯಾಂಪಸ್‌ನಿಂದ 30 ಕಿಲೋ ಮೀಟರ್ ದೂರದ ಕಟ್ಟಕ್ ರೈಲು ನಿಲ್ದಾಣದಲ್ಲಿ ಇಳಿಸಿದ್ದಾರೆ. ಹುಡುಗಿಯರು ಸೇರಿಂದಂತೆ ಹಲವು ವಿದ್ಯಾರ್ಥಿಗಳು ಟಿಕೆಟ್ ಸಿಗದೆ ರೈಲಿನಲ್ಲಿ ಊರಿಗೆ ಹೋಗಲಾಗದೆ ನಿಲ್ದಾಣದ ಹೊರಗಡೆಯೇ ಅತಂತ್ರರಾಗಿ ನಿಂತಿದ್ದಾರೆ.
ಈ ಬೆಳವಣಿಗೆ ಈಗ ಭಾರತ ಮತ್ತು ನೇಪಾಳ ನಡುವಿನ ರಾಜತಾಂತ್ರಿಕ ವಿಷಯವಾಗಿ ಮಾರ್ಪಟ್ಟಿದೆ. “ಒಡಿಶಾದಲ್ಲಿ ತೊಂದರೆಗೊಳಗಾದ ನೇಪಾಳಿ ವಿದ್ಯಾರ್ಥಿಗಳಿಗೆ ಸಹಾಯ ಮಾಡಲು ನವದೆಹಲಿಯಲ್ಲಿರುವ ನಮ್ಮ ರಾಯಭಾರ ಕಚೇರಿಯ ಇಬ್ಬರು ಅಧಿಕಾರಿಗಳನ್ನು ಕಳುಹಿಸಿದ್ದೇವೆ. ವಿದ್ಯಾರ್ಥಿಗಳು ಅವರ ಆದ್ಯತೆಯ ಮೇರೆಗೆ ತಮ್ಮ ಹಾಸ್ಟೆಲ್‌ನಲ್ಲಿ ಉಳಿಯುವ ಅಥವಾ ಮನೆಗೆ ಮರಳುವ ಆಯ್ಕೆಯನ್ನು ಹೊಂದಿದ್ದಾರೆ” ಎಂದು ನೇಪಾಳ ಪ್ರಧಾನಿ ಕೆ.ಪಿ. ಶರ್ಮಾ ಓಲಿ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಪ್ರತಿಕ್ರಿಯಿಸಿದ್ದಾರೆ.
Our Embassy in New Delhi has dispatched two officers to counsel Nepali students affected in Odisha.
Additionally, arrangements have been made to ensure they have the option to either remain in their hostel or return home, based on their preference. #Nepal #Odisha
— K P Sharma Oli (@kpsharmaoli) February 17, 2025
ಆರಂಭದಲ್ಲಿ ವಿದ್ಯಾರ್ಥಿಗಳ ವಿಷಯದಲ್ಲಿ ಕಠಿಣ ನಿಲುವು ತಳೆದಿದ್ದ ಕೆಐಐಟಿ, ತನ್ನ ಕ್ರಮದ ವಿರುದ್ದ ವ್ಯಾಪಕ ಖಂಡನೆ ವ್ಯಕ್ತವಾದ ಹಿನ್ನೆಲೆ ಹಿಂದೆ ಸರಿದಿದೆ. “ಇನ್ನು ಮುಂದೆ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ತಡೆಯಲು. ಈಗ ನಡೆದಿರುವ ಪ್ರಕರಣದ ಬಗ್ಗೆ ಸುಗಮ ಮತ್ತು ಪಕ್ಷಪಾತವಿಲ್ಲದ ತನಿಖೆ ಕೈಗೊಳ್ಳಲು ಸಹಾಯವಾಗುವಂತೆ ನೇಪಾಳಿ ವಿದ್ಯಾರ್ಥಿಗಳು ಸ್ವಯಂಪ್ರೇರಣೆಯಿಂದ ತಮ್ಮ ಸ್ಥಳಗಳಿಗೆ ಮರಳಲು ಸೂಚಿಸಲಾಗಿದೆ” ಎಂದು ಹೇಳಿಕೆ ನೀಡಿದೆ.
“ನೇಪಾಳಿ ವಿದ್ಯಾರ್ಥಿಗಳು ಕ್ಯಾಂಪಸ್‌ಗೆ ಮರಳಲು ವ್ಯವಸ್ಥೆ ಮಾಡಲಾಗುವುದು. ಅವರು ಈ ಹಿಂದಿನಂತೆ ತರಗತಿಗಳಲ್ಲಿ ಭಾಗವಹಿಸಬಹುದು. ಅವರ ಶಿಕ್ಷಣಕ್ಕೆ ತೊಂದೆಯಾಗದಂತೆ ವಿಶ್ವವಿದ್ಯಾಲಯ ನೋಡಿಕೊಳ್ಳಲಿದೆ. ತರಗತಿಗಳು ಮತ್ತು ಹಾಸ್ಟೆಲ್‌ಗಳಿಂದ ಅವರನ್ನುಅಮಾನತು ಮಾಡಿರುವ ಆದೇಶ ತಕ್ಷಣದಿಂದಲೇ ಹಿಂತೆಗೆದುಕೊಳ್ಳಲಾಗಿದೆ” ಎಂದು ಕೆಐಐಟಿ ತಿಳಿಸಿದೆ.
ಇದಕ್ಕೂ ಮೊದಲು, ಕೆಐಐಟಿ ಹೊರಡಿಸಿದ ನೋಟಿಸ್‌ನಲ್ಲಿ, “ನೇಪಾಳದ ಎಲ್ಲಾ ಅಂತಾರಾಷ್ಟ್ರೀಯ ವಿದ್ಯಾರ್ಥಿಗಳಿಗೆ ವಿಶ್ವವಿದ್ಯಾಲಯವು ಅನಿರ್ದಿಷ್ಟಾವಧಿಗೆ ಮುಚ್ಚಲ್ಪಟ್ಟಿದೆ. ಫೆಬ್ರವರಿ 17, 2025 ರಂದು ಇಂದು ವಿಶ್ವವಿದ್ಯಾಲಯದ ಕ್ಯಾಂಪಸ್ ಅನ್ನು ತಕ್ಷಣವೇ ಖಾಲಿ ಮಾಡುವಂತೆ ಅವರಿಗೆ ನಿರ್ದೇಶಿಸಲಾಗಿದೆ” ಎಂದು ಹೇಳಿತ್ತು.
ಪೊಲೀಸರ ಪ್ರಕಾರ, ವಿದ್ಯಾರ್ಥಿನಿ ಪ್ರಕೃತಿಗೆ ಕ್ಯಾಂಪಸ್‌ನಲ್ಲಿ ಸ್ಥಳೀಯ ವಿದ್ಯಾರ್ಥಿಯೊಬ್ಬ ಪೀಡಿಸುತ್ತಿದ್ದ. ಆದರೆ, ಪ್ರಕೃತಿ ಇನ್ನೊಬ್ಬ ಹುಡುಗನನ್ನು ಇಷ್ಟಪಟ್ಟಿದ್ದರು. ಪೀಡಿಸುತ್ತಿದ್ದ ಸ್ಥಳೀಯ ವಿದ್ಯಾರ್ಥಿಯ ಕಿರುಕುಳಕ್ಕೆ ಬೇಸತ್ತು ಅವರು ಫೆ.16ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ.
“ಫೆಬ್ರವರಿ 16ರಂದು ನೇಪಾಳಿ ವಿದ್ಯಾರ್ಥಿನಿಯ ಆತ್ಮಹತ್ಯೆಯ ಬಗ್ಗೆ ನಮಗೆ ದೂರು ಬಂದಿತ್ತು. ನಾವು ಹಾಸ್ಟೆಲ್ ಕೋಣೆಗೆ ಧಾವಿಸಿ ಘಟನೆಯಿಂದ ಆಕ್ರೋಶಗೊಂಡ ವಿದ್ಯಾರ್ಥಿಗಳನ್ನು ಸಮಾಧಾನಪಡಿಸಲು ಪ್ರಯತ್ನಿಸಿದೆವು” ಎಂದು ಭುವನೇಶ್ವರದ ಉಪ ಪೊಲೀಸ್ ಆಯುಕ್ತ ಪಿನಾಕ್ ಮಿಶ್ರಾ ಹೇಳಿದ್ದಾರೆ.



College administrative action is not good. after pressure coming from central govt. they accept all students to attend the classes. first find out the reason,