ರಾಷ್ಟ್ರಪತಿ ದ್ರೌಪದಿ ಮುರ್ಮು ಅವರು ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರನ್ನು ಮುಂದಿನ ಮುಖ್ಯ ಚುನಾವಣಾ ಆಯುಕ್ತರನ್ನಾಗಿ (ಸಿಇಸಿ) ಮತ್ತು ಹರಿಯಾಣದ ಮುಖ್ಯ ಕಾರ್ಯದರ್ಶಿ ಡಾ. ವಿವೇಕ್ ಜೋಶಿ ಅವರನ್ನು ಚುನಾವಣಾ ಆಯುಕ್ತರನ್ನಾಗಿ ನೇಮಿಸಿರುವುದು ‘ನಮ್ಮ ಸಂವಿಧಾನದ ಆಶಯ ಮತ್ತು ಸುಪ್ರೀಂ ಕೋರ್ಟ್ ತೀರ್ಪುಗಳಿಗೆ ವಿರುದ್ಧವಾದ ಮಧ್ಯರಾತ್ರಿಯ ಆತುರದ ನಡೆ’ ಎಂದು ಕಾಂಗ್ರೆಸ್ ಟೀಕಿಸಿದೆ.
ಚುನಾವಣಾ ಆಯುಕ್ತರ ಆಯ್ಕೆ ಪ್ರಕ್ರಿಯೆಯನ್ನು ಪ್ರಶ್ನಿಸಿ ಸಲ್ಲಿಸಲಾದ ಅರ್ಜಿಗಳನ್ನು ಸುಪ್ರೀಂ ಕೋರ್ಟ್ ನಿರ್ಧರಿಸುವವರೆಗೆ ನೇಮಕಾತಿ ಮುಂದೂಡುವಂತೆ ಪ್ರಧಾನಿ ನರೇಂದ್ರ ಮೋದಿ ನೇತೃತ್ವದ ಉನ್ನತ ಮಟ್ಟದ ಸಮಿತಿಯ ಸಭೆಯಲ್ಲಿ ಲೋಕಸಭೆಯ ವಿರೋಧ ಪಕ್ಷದ ನಾಯಕ (ಎಲ್‌ಒಪಿ) ರಾಹುಲ್ ಗಾಂಧಿ ಮನವಿ ಮಾಡಿದ್ದರು. ಇದಾದ ಕೆಲವೇ ಗಂಟೆಗಳ ನಂತರ ಹೊಸ ಆಯುಕ್ತರ ನೇಮಕ ಆಗಿದೆ. ಸುಪ್ರೀಂ ಕೋರ್ಟ್‌ಗೆ ಸಲ್ಲಿಸಿರುವ ಅರ್ಜಿಗಳ ವಿಚಾರಣೆ ಬುಧವಾರ (ಫೆ.19) ನಡೆಯಲಿದೆ.
“ಇದು ನಮ್ಮ ಸಂವಿಧಾನದ ಆಶಯಕ್ಕೆ ವಿರುದ್ಧವಾದ ನಡೆ. ಚುನಾವಣಾ ಪ್ರಕ್ರಿಯೆಯು ಸರಿಯಾಗಿ ನಡೆಯಬೇಕಾದರೆ, ಮುಖ್ಯ ಚುನಾವಣಾ ಆಯುಕ್ತ ನಿಷ್ಪಕ್ಷಪಾತ ಪಾಲುದಾರರಾಗಿರಬೇಕು ಎಂದು ಸುಪ್ರೀಂ ಕೋರ್ಟ್ ಹಲವು ಪ್ರಕರಣಗಳಲ್ಲಿ ಪುನರುಚ್ಚರಿಸಿದೆ” ಎಂದು ಕಾಂಗ್ರೆಸ್ ಸಂಸದ ಮತ್ತು ಎಐಸಿಸಿ ಪ್ರಧಾನ ಕಾರ್ಯದರ್ಶಿ (ಸಂಘಟನೆ) ಕೆ.ಸಿ ವೇಣುಗೋಪಾಲ್ ಹೇಳಿದ್ದಾರೆ.
“ತಿದ್ದುಪಡಿ ಮಾಡಿದ ಕಾನೂನಿನಲ್ಲಿ ಮುಖ್ಯ ಚುನಾವಣಾ ಆಯುಕ್ತರ ಆಯ್ಕೆ ಸಮಿತಿಯಿಂದ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿಯನ್ನು ಹೊರಗಿಡಲಾಗಿದೆ. ಸರ್ಕಾರ ಮುಖ್ಯ ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡುವ ಮೊದಲು ಫೆಬ್ರವರಿ 19ರಂದು ನಡೆಯುವ ಸುಪ್ರೀಂ ಕೋರ್ಟ್‌ನ ವಿಚಾರಣೆಯವರೆಗೆ ಕಾಯಬೇಕಿತ್ತು” ಎಂದಿದ್ದಾರೆ.
“ಇಂದು ತರಾತುರಿಯಲ್ಲಿ ಸಭೆ ನಡೆಸಿ ಹೊಸ ಚುನಾವಣಾ ಆಯುಕ್ತರನ್ನು ನೇಮಿಸುವ ಅವರ (ಸರ್ಕಾರದ) ನಿರ್ಧಾರವು ಸುಪ್ರೀಂ ಕೋರ್ಟ್‌ನ ಪರಿಶೀಲನೆಯನ್ನು ತಪ್ಪಿಸಲು ಮತ್ತು ಸ್ಪಷ್ಟ ಆದೇಶ ಬರುವ ಮೊದಲು ನೇಮಕಾತಿಯನ್ನು ಪೂರ್ಣಗೊಳಿಸಲು ಅವರು ಉತ್ಸುಕರಾಗಿದ್ದಾರೆಂದು ತೋರಿಸುತ್ತದೆ” ಎಂದು ವೇಣುಗೋಪಾಲ್ ಎಕ್ಸ್‌ನಲ್ಲಿ ಪೋಸ್ಟ್‌ನಲ್ಲಿ ತಿಳಿಸಿದ್ದಾರೆ.
“ಇಂತಹ ನಡವಳಿಕೆಯು, ಆಡಳಿತ ನಡೆಸುತ್ತಿರುವ ಸರ್ಕಾರವು ಚುನಾವಣಾ ಪ್ರಕ್ರಿಯೆಯನ್ನು ಹೇಗೆ ನಾಶಪಡಿಸುತ್ತಿದೆ ಮತ್ತು ನಿಯಮಗಳನ್ನು ತನ್ನ ಲಾಭಕ್ಕಾಗಿ ಹೇಗೆ ಬದಲಾಯಿಸುತ್ತಿದೆ ಎಂಬುದರ ಬಗ್ಗೆ ಅನೇಕರು ವ್ಯಕ್ತಪಡಿಸಿರುವ ಅನುಮಾನಗಳನ್ನು ದೃಢಪಡಿಸುತ್ತದೆ. ಅದು ನಕಲಿ ಮತದಾರರ ಪಟ್ಟಿಗಳಾಗಿರಬಹುದು, ಬಿಜೆಪಿಗೆ ಅನುಕೂಲಕರವಾದ ವೇಳಾಪಟ್ಟಿಯಾಗಿರಬಹುದು ಅಥವಾ ಇವಿಎಂ ಹ್ಯಾಕಿಂಗ್ ಬಗ್ಗೆ ಕಳವಳಗಳಾಗಿರಬಹುದು – ಸರ್ಕಾರ ಮತ್ತು ಅದು ನೇಮಿಸುವ ಚುನಾವಣಾ ಆಯುಕ್ತರು ಇಂತಹ ಘಟನೆಗಳಿಂದಾಗಿ ಆಳವಾದ ಅನುಮಾನಕ್ಕೆ ಒಳಗಾಗುತ್ತಾರೆ” ಎಂದು ಹೇಳಿದ್ದಾರೆ.
“ವಿರೋಧ ಪಕ್ಷದ ನಾಯಕರು ಸರಿಯಾಗಿಯೇ ಹೇಳಿದಂತೆ, ಸುಪ್ರೀಂ ಕೋರ್ಟ್ ಸಂವಿಧಾನಕ್ಕೆ ಅನುಗುಣವಾಗಿ ಈ ವಿಷಯವನ್ನು ನಿರ್ಧರಿಸುವವರೆಗೆ ಈ ನಿರ್ಧಾರವನ್ನು ಪಕ್ಕಕ್ಕೆ ಇಡಬೇಕಾಗಿತ್ತು” ಎಂದಿದ್ದಾರೆ.
In a hasty midnight move, the Government has notified the appointment of the new Central Election Commissioner. This goes against the spirit of our Constitution, and what has been reiterated by the Supreme Court in many cases – for the electoral process to have sanctity, the CEC… https://t.co/tCdF8nPd3W
— K C Venugopal (@kcvenugopalmp) February 17, 2025
ನೂತನ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಬುಧವಾರ (ಫೆ.19) ಅಧಿಕಾರ ವಹಿಸಿಕೊಳ್ಳಲಿದ್ದಾರೆ. ಹಾಲಿ ಆಯುಕ್ತ ರಾಜೀವ್ ಕುಮಾರ್ ಮಂಗಳವಾರ (ಫೆ.18) ನಿವೃತ್ತರಾಗಲಿದ್ದಾರೆ.
ಮೂಲಗಳ ಪ್ರಕಾರ, 30 ನಿಮಿಷದ ಸಭೆಯಲ್ಲಿ ಹೊಸ ಮುಖ್ಯ ಚುನಾವಣಾ ಆಯುಕ್ತ ಮತ್ತು ಚುನಾವಣಾ ಆಯುಕ್ತರನ್ನು ಆಯ್ಕೆ ಮಾಡಲಾದ ಐದು ಹೆಸರುಗಳ ಪಟ್ಟಿಯನ್ನು ಸಮಿತಿಯ ಮುಂದೆ ಪರಿಗಣನೆಗೆ ಇಡಲಾಗಿತ್ತು.
ಕಾಂಗ್ರೆಸ್ ಸಂಸದ ಮತ್ತು ಲೋಕಸಭೆಯ ಸಚೇತಕ ಮಾಣಿಕ್ಕಂ ಟ್ಯಾಗೋರ್ ಕೂಡ ವೇಣುಗೋಪಾಲ್ ಹೇಳಿದ್ದನ್ನು ಪುನರುಚ್ಚರಿಸಿದ್ದಾರೆ. ಚುನಾವಣಾ ಆಯುಕ್ತರ ಈ ನೇಮಕ ‘ನಮ್ಮ ಸಂವಿಧಾನದ ಆಶಯ ಮತ್ತು ಮುಕ್ತ ಚುನಾವಣೆಗಳನ್ನು ದುರ್ಬಲಗೊಳಿಸುತ್ತದೆ’ ಎಂದಿದ್ದಾರೆ.
“ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಹೇಳಿದಂತೆ, ಫೆಬ್ರವರಿ 19ರಂದು ನಡೆಯುವ ಸುಪ್ರೀಂ ಕೋರ್ಟ್ ವಿಚಾರಣೆಯವರೆಗೆ ಕಾಯಬೇಕಿತ್ತು. ಆದರೆ, ಅವಸರದಿಂದ ನೇಮಕ ಮಾಡಿರುವುದು ಪರಿಶೀಲನೆಯನ್ನು ತಪ್ಪಿಸುವ ಅವರ ಉದ್ದೇಶವನ್ನು ತೋರಿಸುತ್ತದೆ. ಪ್ರಜಾಪ್ರಭುತ್ವವು ಇದಕ್ಕಿಂತ ಉತ್ತಮವಾದುದಕ್ಕೆ ಅರ್ಹವಾಗಿದೆ” ಎಂದು ಟ್ಯಾಗೋರ್ ಹೇಳಿದ್ದಾರೆ.
ರಿಲಯನ್ಸ್ ವಿರುದ್ಧದ ವಂಚನೆ ಆರೋಪಗಳನ್ನು ಮರುಸ್ಥಾಪಿಸಿದ ದೆಹಲಿ ಹೈಕೋರ್ಟ್


