ಪ್ರಯಾಗ್‌ರಾಜ್ ನದಿ ನೀರಿನಲ್ಲಿ ಮಾನವ ಹಾಗೂ ಪ್ರಾಣಿಗಳ ಮಲದಲ್ಲಿ ಸಾಮಾನ್ಯವಾಗಿ ಕಂಡು ಬರುವ ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳ ಮಟ್ಟ ಅಧಿಕವಾಗಿರುವುದರಿಂದ ಸ್ನಾನಕ್ಕೆ ಯೋಗ್ಯವಾಗಿಲ್ಲ ಎಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ತಿಳಿಸಿದೆ.
ಸಿಪಿಸಿಬಿ ಜನವರಿ 12 ಮತ್ತು 13ರಂದು ಗಂಗಾ ನದಿಯ ನೀರಿನ ಸ್ಯಾಂಪಲ್ ಸಂಗ್ರಹಿಸಿ ಪರೀಕ್ಷೆ ನಡೆಸಿತ್ತು. ಅದು ತನ್ನ ವರದಿಯನ್ನು ರಾಷ್ಟ್ರೀಯ ಹಸಿರು ನ್ಯಾಯಾಧೀಕರಣಕ್ಕೆ (ಎನ್‌ಜಿಟಿ) ಸೋಮವಾರ (ಫೆ.17) ಸಲ್ಲಿಸಿದೆ.
ಪ್ರಯಾಗ್‌ರಾಜ್‌ನಲ್ಲಿ ಗಂಗಾ ಹಾಗೂ ಯಮುನಾ ನದಿಗಳಿಗೆ ಒಳ ಚರಂಡಿ ನೀರು ಬಿಡುವುದನ್ನು ತಡೆಯುವ ಕ್ರಮಗಳ ಕುರಿತು ರಾಷ್ಟ್ರೀಯ ಹಸಿರು ನ್ಯಾಯ ಮಂಡಳಿಯ (ಎನ್‌ಜಿಟಿ) ಅಧ್ಯಕ್ಷರಾಗಿರುವ ಪ್ರಕಾಶ್ ಶ್ರೀವಾತ್ಸವ ನೇತೃತ್ವದ ಸಮಿತಿ ಪರಿಶೀಲನೆ ನಡೆಸಿದೆ. ನೀರಿನ ಗುಣಮಟ್ಟವನ್ನು ಕಾಪಾಡದೇ ಇರುವುದರ ಕುರಿತು ಸಿಪಿಸಿಬಿ ಫೆಬ್ರವರಿ 3ರಂದು ನೀಡಿದ ವರದಿಯಲ್ಲಿ ಉಲ್ಲೇಖಿಸಿರುವುದನ್ನು ಸಮಿತಿ ಗಮನಿಸಿದೆ. ಪರಿಶೀಲಿಸಲಾದ ಎಲ್ಲಾ ಸ್ಥಳಗಳು ಕೋಲಿಫಾರ್ಮ್ ಬ್ಯಾಕ್ಟೀರಿಯಾಗಳಿಂದ ಕಲುಷಿತವಾಗಿರುವುದರಿಂದ ನದಿ ನೀರು ಸ್ನಾನ ಯೋಗ್ಯವಾಗಿಲ್ಲ ಎಂದು ಸಿಪಿಸಿಬಿ ವರದಿ ಹೇಳಿದೆ.
ಎನ್‌ಜಿಟಿ ಪ್ರಧಾನ ಪೀಠವು ಡಿಸೆಂಬರ್ 24,2024 ರಂದು ಕೇಂದ್ರ ಮಾಲಿನ್ಯ ನಿಯಂತ್ರಣ ಮಂಡಳಿ (ಸಿಪಿಸಿಬಿ) ಮತ್ತು ಯುಪಿಪಿಸಿಬಿ ಎರಡಕ್ಕೂ ನೀರಿನ ಮಾದರಿಗಳನ್ನು ತೆಗೆದುಕೊಂಡು, ಫಲಿತಾಂಶವನ್ನು ತಮ್ಮ ವೆಬ್‌ಸೈಟ್‌ನಲ್ಲಿ ಪ್ರದರ್ಶಿಸಲು ಮತ್ತು ಜನವರಿ 31 ಮತ್ತು ಫೆಬ್ರವರಿ 28ರಂದು ಎನ್‌ಜಿಟಿ ರಿಜಿಸ್ಟ್ರಾರ್ ಜನರಲ್‌ಗೆ ವರದಿಯನ್ನು ಕಳುಹಿಸಲು ನಿರ್ದೇಶಿಸಿತ್ತು.
“ಸಮಗ್ರ ಕ್ರಮ ಕೈಗೊಂಡ ವರದಿಯನ್ನು ಸಲ್ಲಿಸುವಂತೆ ಸೂಚಿಸಿದ್ದ ನ್ಯಾಯಮಂಡಳಿಯ ಆದೇಶವನ್ನು ಯುಪಿಪಿಸಿಬಿ ಪಾಲಿಸಿಲ್ಲ” ಎಂದು ಅಧ್ಯಕ್ಷ ನ್ಯಾಯಮೂರ್ತಿ ಪ್ರಕಾಶ್ ಶ್ರೀವಾಸ್ತವ, ನ್ಯಾಯಾಂಗ ಸದಸ್ಯ ನ್ಯಾಯಮೂರ್ತಿ ಸುಧೀರ್ ಅಗರ್ವಾಲ್ ಮತ್ತು ತಜ್ಞ ಸದಸ್ಯ ಎ ಸೆಂಥಿಲ್ ವೆಲ್ ಅವರನ್ನು ಒಳಗೊಂಡ ಎನ್‌ಜಿಟಿ ಪ್ರಧಾನ ಪೀಠದ ತಿಳಿಸಿದೆ.
“ಯುಪಿಪಿಸಿಬಿ ಸದಸ್ಯ ಕಾರ್ಯದರ್ಶಿ ಮತ್ತು ಪ್ರಯಾಗ್‌ರಾಜ್‌ನಲ್ಲಿ ಗಂಗಾ ನದಿಯಲ್ಲಿ ನೀರಿನ ಗುಣಮಟ್ಟವನ್ನು ಕಾಪಾಡಿಕೊಳ್ಳುವ ಜವಾಬ್ದಾರಿ ಹೊತ್ತಿರುವ ರಾಜ್ಯ ಪ್ರಾಧಿಕಾರಕ್ಕೆ ಫೆಬ್ರವರಿ 19 ರಂದು ಮುಂದಿನ ವಿಚಾರಣೆಯ ದಿನಾಂಕದಂದು ವರ್ಚುವಲ್ ಆಗಿ ಹಾಜರಾಗಲು ನಿರ್ದೇಶಿಸಲಾಗಿದೆ” ಎಂದು ಎನ್‌ಜಿಟಿ ಪ್ರಧಾನ ಪೀಠದ ಆದೇಶ ಹೇಳಿದೆ.
ಈ ಹಿಂದೆ ನಿರ್ದೇಶಿಸಿದಂತೆ ತೆಗೆದುಕೊಂಡ ಕ್ರಮಗಳ ಕುರಿತ ವಿಸ್ತೃತ ವರದಿ ಸಲ್ಲಿಸಲು ಯುಪಿಪಿಸಿಬಿ ವಿಫಲವಾಗಿರುವ ಕುರಿತು ಎನ್‌ಜಿಟಿ ಸಮಿತಿ ಗಮನಿಸಿದೆ. ವರದಿ ಬದಲು ಅದು ನೀರಿನ ಪರೀಕ್ಷೆಯ ಫಲಿತಾಂಶದೊಂದಿಗೆ ಪತ್ರವನ್ನು ಸಲ್ಲಿಸಿದೆ ಎಂದು ಎನ್‌ಜಿಟಿ ಸಮಿತಿ ಹೇಳಿದೆ.
ಸಿಪಿಸಿಬಿ ವರದಿಯ ಪ್ರಕಾರ, ಜನವರಿ 12, 13, 15, 19, 20 ಮತ್ತು 24 ರಂದು ಗಂಗಾ ಮತ್ತು ಯಮುನಾ ನದಿಯ ವಿವಿಧ ಸ್ಥಳಗಳಿಂದ ನೀರಿನ ಮಾದರಿಗಳನ್ನು ಸಂಗ್ರಹಿಸಲಾಗಿದೆ. ಅದರ ವರದಿಯು ಜಿಯೋಸಿಂಥೆಟಿಕ್ ಡೀವಾಟರಿಂಗ್ ಟ್ಯೂಬ್‌ಗಳಲ್ಲಿನ ಅನುಸರಣೆಯ ಕೊರತೆಯನ್ನು ಸಹ ಎತ್ತಿ ತೋರಿಸಿದೆ.
ಪ್ರಮುಖ ಚರಂಡಿಗಳ ಒಳಹರಿವು ಮತ್ತು ಹೊರಹರಿವು ಬಿಂದುಗಳಲ್ಲಿ ಹರಿವಿನ ಮೀಟರ್‌ಗಳು ಇಲ್ಲದಿರುವುದನ್ನು ವರದಿಯು ವಿವರಿಸಿದೆ. ಪ್ರಯಾಗ್‌ರಾಜ್‌ನಲ್ಲಿ ಒಟ್ಟು 340 ಎಂಎಲ್‌ಡಿ ಸಂಸ್ಕರಣಾ ಸಾಮರ್ಥ್ಯವಿರುವ 10 ಕಾರ್ಯಾಚರಣಾ ಎಸ್‌ಟಿಪಿಗಳಿವೆ ಎಂದು ವರದಿ ತಿಳಿಸಿದೆ. ಏಳು ಎಸ್‌ಟಿಪಿಗಳು ಸಂಸ್ಕರಿಸಿದ ತ್ಯಾಜ್ಯ ನೀರನ್ನು ಗಂಗಾ ನದಿಗೆ ಮತ್ತು ಮೂರು ಯಮುನಾ ನದಿಗೆ ಬಿಡುತ್ತಿವೆ ಎಂದಿದೆ.
ನದಿ ನೀರು ಸ್ನಾನಕ್ಕೆ ಯೋಗ್ಯವಾಗಿಲ್ಲ ಎಂದು ವರದಿ ಬರುವ ಮುನ್ನವೇ ಲಕ್ಷಾಂತರ ಜನರು ಮಹಾಕುಂಭಮೇಳದ ಪ್ರಯುಕ್ತ ಪವಿತ್ರ ಸ್ನಾನ ಮಾಡಿದ್ದಾರೆ. ಕಲುಷಿತ ನೀರಿನಿಂದ ಅವರಿಗೆ ಚರ್ಮ ರೋಗ ಬರಬಹುದು ಎಂದು ತಜ್ಞರನ್ನು ಉಲ್ಲೇಖಿಸಿ ವರದಿಗಳು ಹೇಳಿವೆ.
ಕೊಳದ ಮೇಲೆ ಅಕ್ರಮ ಮದರಸಾ ನಿರ್ಮಾಣ ಆರೋಪ: ಭಾರೀ ಪೊಲೀಸ್ ಬಂದೋಬಸ್ತಿನೊಂದಿಗೆ ಸಂಪೂರ್ಣ ಧ್ವಂಸ


