‘ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಮತ್ತು ಮಾಹಿತಿ ಆಯುಕ್ತರನ್ನು ನೇಮಕ ಮಾಡುವ ಮುನ್ನ ಶೋಧನಾ ಸಮಿತಿ ರಚನೆ ಮಾಡಿರಲಿಲ್ಲ’ ಎಂದು ರಾಜ್ಯ ಸರ್ಕಾರ ಹೈಕೋರ್ಟ್‌ಗೆ ತಿಳಿಸಿದೆ. ನೇಮಕಾತಿಗೆ ತಡೆ ಕೋರಿರುವ ಅರ್ಜಿದಾರರ ಮಧ್ಯಂತರ ಕೋರಿಕೆಗೆ ಸಂಬಂಧಿಸಿದಂತ ಹೈಕೋರ್ಟ್ ತನ್ನ ಆದೇಶವನ್ನು ಕಾಯ್ದಿರಿಸಿದೆ.
ಮಾಹಿತಿ ಆಯುಕ್ತರ ಹುದ್ದೆಯ ಆಕಾಂಕ್ಷಿಯಾಗಿದ್ದ ಬೆಂಗಳೂರಿನ ಜೆ.ಪಿ ನಗರ 7ನೇ ಹಂತದ ನಿವಾಸಿ ಸಾಮಾಜಿಕ ಕಾರ್ಯಕರ್ತ ಕೆ.ಮಲ್ಲಿಕಾರ್ಜುನ ರಾಜು ಸಲ್ಲಿಸಿರುವ ರಿಟ್ ಅರ್ಜಿಯನ್ನು ನ್ಯಾಯಮೂರ್ತಿ ಆರ್.ದೇವದಾಸ್ ಅವರಿದ್ದ ಏಕಸದಸ್ಯ ನ್ಯಾಯಪೀಠ ಮಂಗಳವಾರ (ಫೆ. 18) ವಿಚಾರಣೆ ನಡೆಸಿದೆ.
ಈ ವೇಳೆ ಹಾಜರಿದ್ದ ಅಡ್ವೊಕೇಟ್ ಜನರಲ್ ಕೆ.ಶಶಿಕಿರಣ್ ಶೆಟ್ಟಿ ಅವರು, “ಶೋಧನಾ ಸಮಿತಿಯನ್ನು ಕಡ್ಡಾಯವಾಗಿ ರಚಿಸುವಂತೆ ಸುಪ್ರೀಂ ಕೋರ್ಟ್ ಹೇಳಿಲ್ಲ. ಈ ನಿಟ್ಟಿನಲ್ಲಿ ರಾಜ್ಯ ಸರ್ಕಾರಕ್ಕೆ ನಿರ್ದಿಷ್ಟ ನಿರ್ದೇಶನವನ್ನೂ ನೀಡಿಲ್ಲ. ಶೋಧನಾ ಸಮಿತಿ ರಚಿಸುವುದು ಸೂಕ್ತ ಎಂದು ಹೇಳಿದೆಯಷ್ಟೇ” ಎಂದಿದ್ದಾರೆ.
“ನೇಮಕಾತಿಯಲ್ಲಿ ಯಾವ ಪ್ರಕ್ರಿಯೆ ಅನುಸರಿಸಲಾಗಿದೆ ಎಂಬುವುದರ ಬಗ್ಗೆ ರಾಜ್ಯ ಸರ್ಕಾರ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಬೇಕಿದೆ. ಅದನ್ನು ಸಲ್ಲಿಸಿ ಒಪ್ಪಿಗೆ ಪಡೆಯಲಾಗುವುದು. ಅರ್ಜಿಯು ಸುಪ್ರೀಂ ಕೋರ್ಟ್ ಪರಿಗಣನೆಗೆ ಒಳಪಟ್ಟಿರುವಾಗ ಇಲ್ಲಿ ಈ ಅರ್ಜಿಯನ್ನು ಪುರಸ್ಕರಿಸುವುದು ಸೂಕ್ತವಲ್ಲ” ಎಂದು ಹೇಳಿದ್ದಾರೆ.
ಸಿಐಸಿ ಮತ್ತು ಕೆಲ ಮಾಹಿತಿ ಆಯುಕ್ತರನ್ನು ಪ್ರತಿನಿಧಿಸಿದ್ದ ಹಿರಿಯ ವಕೀಲ ಪ್ರೊ. ರವಿವರ್ಮ ಕುಮಾರ್ ಅವರು “ಅರ್ಜಿದಾರರು ಸಿಐಸಿ ಹುದ್ದೆಗೆ ಅರ್ಜಿ ಹಾಕಿರಲಿಲ್ಲ ಎಂದಾಗಲಿ, ಸಿಐಸಿಯಾಗಿ ನೇಮಕವಾಗಲು ಆಶಿತ್ ಮೋಹನ್ ಪ್ರಸಾದ್ ಅರ್ಹರಲ್ಲ ಎಂಬುದಕ್ಕೆ ಸಂಬಂಧಿಸಿದಂತೆಯಾಗಲಿ ಯಾವುದೇ ಗುಮಾನಿಯೂ ಅರ್ಜಿಯಲಿಲ್ಲ. ಹೀಗಾಗಿ, ಅರ್ಜಿ ವಜಾ ಮಾಡಬೇಕು” ಎಂದು ಕೋರಿದ್ದಾರೆ.
ಅರ್ಜಿದಾರರನ್ನು ಪ್ರತಿನಿಧಿಸಿದ್ದ ವಕೀಲ ಅಶೋಕ್ ಪಾಟೀಲ್ ಅವರು “ಸುಪ್ರೀಂ ಕೋರ್ಟ್ ನಿರ್ದೇಶನದಂತೆ ಮುಖ್ಯ ಮಾಹಿತಿ ಆಯುಕ್ತರು ಮತ್ತು ಮಾಹಿತಿ ಆಯುಕ್ತರ ನೇಮಕಾತಿಗೂ ಮುನ್ನ ತಮಿಳುನಾಡು, ಮಹಾರಾಷ್ಟ್ರ, ಹರಿಯಾಣ ಮತ್ತು ತ್ರಿಪುರದಲ್ಲಿ ಶೋಧನಾ ಸಮಿತಿ ರಚಿಸಲಾಗಿದೆ. ಹೀಗಾಗಿ, ಸುಪ್ರೀಂ ಕೋರ್ಟ್ ನಿರ್ದೇಶನಗಳು ಕರ್ನಾಟಕಕ್ಕೆ ಅನ್ವಯಿಸುವುದಿಲ್ಲ ಎನ್ನಲಾಗದು. ರಾಜ್ಯ ಸರ್ಕಾರವು 2024ರ ಜೂನ್ 11ರಂದು ಮುಖ್ಯ ಮಾಹಿತಿ ಆಯುಕ್ತರು ಮತ್ತು ಒಂದು ಮಾಹಿತಿ ಆಯುಕ್ತರ ಹುದ್ದೆಗೆ ಅರ್ಜಿ ಆಹ್ವಾನಿಸಿತ್ತು. ಆದರೆ, ಸಿಐಸಿ ಮತ್ತು ಏಳು ಮಾಹಿತಿ ಆಯುಕ್ತರನ್ನು ನೇಮಿಸಲಾಗಿದೆ. ಇಲ್ಲಿ ಎರಡು ಅಧಿಸೂಚನೆಗಳನ್ನು ಒಟ್ಟುಗೂಡಿಸಿ ಶೋಧನಾ ಸಮಿತಿ ಇಲ್ಲದೇ ನೇಮಕಾತಿ ಮಾಡಲಾಗಿದೆ. ಕಾನೂನು ಪಾಲಿಸದೇ ನೇಮಕ ಮಾಡಿರುವವರು ಪ್ರಮಾಣ ಸ್ವೀಕರಿಸಿ, ಕೆಲಸ ಮಾಡುತ್ತಿರುವುದರಿಂದ ಮಧ್ಯಂತರ ಆದೇಶ ಮಾಡಬೇಕು. ಆನಂತರ ಅವರು ಆಕ್ಷೇಪಣೆ ಸಲ್ಲಿಸಬಹುದು” ಎಂದಿದ್ದಾರೆ.
ವಾದ-ಪ್ರತಿವಾದ ಆಲಿಸಿದ ನ್ಯಾಯಾಲಯವು ಮಧ್ಯಂತರ ಕೋರಿಕೆಯ ಕುರಿತು ಆದೇಶ ಕಾಯ್ದಿರಿಸಿದೆ. ರಾಜ್ಯ ಮುಖ್ಯ ಮಾಹಿತಿ ಆಯುಕ್ತ ಮತ್ತು ಮಾಹಿತಿ ಆಯುಕ್ತರು ಪ್ರಮಾಣ ವಚನ ಸ್ವೀಕರಿಸಿದ ಮಾತ್ರಕ್ಕೆ ಅರ್ಜಿದಾರರು ಮಧ್ಯಂತರ ಆದೇಶ ಕೋರಿರುವುದನ್ನು ಪರಿಗಣಿಸಬಾರದು ಎಂದೇನಿಲ್ಲ. ರಾಜ್ಯ ಸರ್ಕಾರವು ದಾಖಲೆಗಳನ್ನು ಸಲ್ಲಿಸಿದ ಬಳಿಕ ನ್ಯಾಯಾಲಯವು ಸೂಕ್ತ ಆದೇಶ ಮಾಡಲಿದೆ ಎಂದು ಫೆಬ್ರವರಿ 4ರಂದು ನ್ಯಾಯಾಲಯ ಹೇಳಿತ್ತು.
ಕರ್ನಾಟಕ ಮಾಹಿತಿ ಹಕ್ಕು ಆಯೋಗದ ಮುಖ್ಯ ಆಯುಕ್ತರಾಗಿ ಎ.ಎಂ.ಪ್ರಸಾದ್ ಹಾಗೂ ಆಯುಕ್ತರಾಗಿ ಕೆ.ರಾಮನ್, ಡಾ.ಹರೀಶ್ ಕುಮಾರ್, ರುದ್ರಣ್ಣ ಹರ್ತಿಕೋಟೆ, ನಾರಾಯಣ ಜಿ.ಚನ್ನಾಳ, ಎಸ್.ರಾಜಶೇಖರ, ಕೆ.ಬದ್ರುದ್ದೀನ್ ಮತ್ತು ಬಿ.ಆರ್.ಮಮತಾ ಅವರನ್ನು ನೇಮಕ ಮಾಡಿ ರಾಜ್ಯ ಸರ್ಕಾರ ಹೊರಡಿಸಿರುವ ಆದೇಶವನ್ನು ರದ್ದುಪಡಿಸುವಂತೆ ಅರ್ಜಿದಾರರು ಕೋರಿದ್ದಾರೆ. ಮಾಹಿತಿ ಹಕ್ಕು ಆಯೋಗದ ಮುಖ್ಯ ಆಯುಕ್ತ ಮತ್ತು ಇತರ ಆಯುಕ್ತರು ಫೆಬ್ರವರಿ 4ರಂದು ಪ್ರಮಾಣವಚನ ಸ್ವೀಕರಿಸಿದ್ದಾರೆ.
ಸೌಜನ್ಯ : ಬಾರ್ & ಬೆಂಚ್
ಕುಡಿಯುವ ನೀರು ಪೋಲು ಮಾಡಿದವರಿಗೆ ದಂಡ ವಿಧಿಸಲು ನಿರ್ಧರಿಸಿದ ಬೆಂಗಳೂರು ಜಲಮಂಡಳಿ


