ಬೆಳಗಾವಿ ತಾಲೂಕಿನ ಸಣ್ಣ ಬಾಳೇಕುಂದ್ರಿ ಗ್ರಾಮದಲ್ಲಿ ಶುಕ್ರವಾರ (ಫೆ.21) ವಾಯುವ್ಯ ಕರ್ನಾಟಕ ಸಾರಿಗೆ ಸಂಸ್ಥೆಯ ಬಸ್ ನಿರ್ವಾಹಕನ ಮೇಲೆ ಹಲ್ಲೆ ಪ್ರಕರಣ ಸಂಬಂಧ ಮತ್ತೊಬ್ಬ ಆರೋಪಿಯ ಬಂಧನವಾಗಿದೆ. ಈ ಮೂಲಕ ಬಂಧಿತರ ಸಂಖ್ಯೆ ಐದಕ್ಕೆ ಏರಿಕೆಯಾಗಿದೆ.
ಬಾಳೇಕುಂದ್ರಿಯ ಮೋಹನ ಹಂಚಿನಾಳ ಅವರನ್ನು ಮಾರಿಹಾಳ ಪೊಲೀಸರು ಭಾನುವಾರ (ಫೆ.23) ಬಂಧಿಸಿದ್ದಾರೆ ಎಂದು ತಿಳಿದು ಬಂದಿದೆ.
ಕರ್ನಾಟಕ-ಮಹಾರಾಷ್ಟ್ರ ನಡುವೆ ಭಾನುವಾರ ಬಸ್ ಸಂಚಾರ ಸ್ಥಗಿತಗೊಂಡಿತ್ತು. ಸೋಮವಾರ (ಫೆ.24) ಕೂಡ ಬಸ್ ಸಂಚಾರ ಸ್ಥಗಿತ ಮುಂದುವರಿದಿದೆ ಎಂದು ವರದಿಯಾಗಿದೆ.
ಭಾನುವಾರ ಬಸ್ ಸಂಚಾರವಿಲ್ಲದ ಕಾರಣ ಪ್ರಯಾಣಿಕರು ಪರದಾಡಿದರು. ಬೆಳಗಾವಿಯಿಂದ ಕೊಲ್ಹಾಪುರ, ಸತಾರಾ, ಮುಂಬೈ ಮತ್ತಿತರ ಕಡೆ ತೆರಳುವವರು ಸಂಕಷ್ಟ ಅನುಭವಿಸಿದರು. ಎರಡೂ ರಾಜ್ಯಗಳ ಸಾರಿಗೆ ಸಂಸ್ಥೆ ಬಸ್‌ಗಳು ತಮ್ಮ ಗಡಿಯವರೆಗೆ ಮಾತ್ರ ಕಾರ್ಯಾಚರಣೆ ನಡೆಸಿದವು.
ಕರ್ನಾಟಕದ ಬಸ್‌ಗೆ ಮಸಿ ; ತೀವ್ರ ಆಕ್ರೋಶ
ಭಾಷಾ ಜಗಳದ ನಡುವೆ ಕರ್ನಾಟಕ ರಾಜ್ಯ ರಸ್ತೆ ಸಾರಿಗೆ ಸಂಸ್ಥೆಯ ವೋಲ್ವೋ ಬಸ್‌ಗೆ ಮಹಾರಾಷ್ಟ್ರದ ನಾಸಿಕ್‌ನಲ್ಲಿ ಕಪ್ಪು ಮಸಿ ಬಳಿಯಲಾಗಿದೆ. ಬೆಳಗಾವಿಯಿಂದ ನಾಸಿಕ್‌ಗೆ ಹೋಗಿದ್ದ ಬಸ್‌ಗೆ ಮಸಿ ಬಳಿದು ‘ಮನಸೇ ಮರಾಠಿ ಹಾಗೂ ಜೈ ಮಹಾರಾಷ್ಟ್ರ’ ಎಂದು ಬರೆಯಲಾಗಿದೆ.
ಇದನ್ನು ತೀವ್ರವಾಗಿ ಖಂಡಿಸಿರುವ ಕರ್ನಾಟಕ ರಕ್ಷಣಾ ವೇದಿಕೆ ಕಠಿಣ ಕ್ರಮಕ್ಕೆ ಆಗ್ರಹಿಸಿದೆ. ಹಲ್ಲೆಗೊಳಗಾಗಿರುವ ಕರ್ನಾಟಕದ ಬಸ್ ನಿರ್ವಾಹಕ ಹಾಗೂ ಚಾಲಕನ ಮೇಲೆ ದಾಖಲಿಸಲಾದ ಪೋಕ್ಸೋ ಪ್ರಕರಣ ಹಿಂಪಡೆಯಬೇಕು ಎಂದು ಆಗ್ರಹಿಸಿದೆ. ಅಲ್ಲದೆ, ಹಲ್ಲೆ ಮತ್ತು ಬಸ್‌ಗೆ ಮಸಿ ಬಳಿದ ಘಟನೆ ಖಂಡಿಸಿ ಫೆಬ್ರವರಿ 25ರಂದು ಬೆಳಗಾವಿ ನಗರ ಪೊಲೀಸ್ ಆಯುಕ್ತ ಕಚೇರಿಗೆ ಮುತ್ತಿಗೆ ಹಾಕಿ, ಬಳಿಕ ಸಣ್ಣ ಬಾಳೇಕುಂದ್ರಿಯವರೆಗೆ ಮೆರವಣಿಗೆ ಮಾಡಿ ಪ್ರತಿಭಟಿಸುಲು ಮುಂದಾಗಿದೆ.
ರಾಮಲಿಂಗಾ ರೆಡ್ಡಿ ಭೇಟಿ ಸಾಧ್ಯತೆ
ಮುಧೋಳದಲ್ಲಿ ರನ್ನ ಉತ್ಸವದಲ್ಲಿ ಪಾಲ್ಗೊಳ್ಳಲು ತೆರಳುವ ಮಾರ್ಗ ಮಧ್ಯೆ ಸಾರಿಗೆ ಸಚಿವ ರಾಮಲಿಂಗಾರೆಡ್ಡಿಯವರು ಹಲ್ಲೆಗೊಳಗಾದ ನಿರ್ವಾಹಕನನ್ನು ಭೇಟಿಯಾಗಿ ಆರೋಗ್ಯ ವಿಚಾರಿಸುವ ಸಾಧ್ಯತೆ ಇದೆ. ಸಾರಿಗೆ ಇಲಾಖೆಯ ಹಿರಿಯ ಅಧಿಕಾರಿಗಳು ಈಗಾಗಲೇ ನಿರ್ವಾಹಕನನ್ನು ಭೇಟಿಯಾಗಿದ್ದಾರೆ ಎಂದು ವರದಿಯಾಗಿದೆ.


