ಕೊಪ್ಪಳ ಜಿಲ್ಲಾ ಕೇಂದ್ರದ ಸಮೀಪವೇ ಬಲ್ಲೋಟಾ ಸ್ಟೀಲ್ ಮತ್ತು ಪವರ್ ಲಿಮಿಟೆಡ್ (ಬಿಎಸ್‌ಪಿಎಲ್) ಕಂಪನಿಯು 1.50 ಕೋಟಿ ಟನ್ ಉತ್ಪಾದನಾ ಸಾಮರ್ಥ್ಯದ ಇಂಟಿಗ್ರೇಟೆಡ್ ಉಕ್ಕಿನ ಕಾರ್ಖಾನೆ ಸ್ಥಾಪನೆ ಮಾಡಲು ಮುಂದಾಗಿರುವುದನ್ನು ವಿರೋಧಿಸಿ ಕೊಪ್ಪಳ ತಾಲ್ಲೂಕು ಪರಿಸರ ಹಿತರಕ್ಷಣಾ ವೇದಿಕೆ ಕರೆ ನೀಡಿದ್ದ ಕೊಪ್ಪಳ ಬಂದ್ ಸೋಮವಾರ ಯಶಸ್ವಿಯಾಗಿದೆ. ಬಲ್ದೋಟಾ ಸ್ಟೀಲ್ ಕಾರ್ಖಾನೆ
ಬಂದ್ ಪರಿಣಾಮ ಅಂಗಡಿಗಳು ಬಂದ್ ಆಗಿದ್ದು, ಕೊಪ್ಪಳ ಮಾರುಕಟ್ಟೆ ಬಿಕೋ ಎನ್ನುತ್ತಿತ್ತು. ಮುನ್ನೆಚ್ಚರಿಕೆಯ ಕ್ರಮವಾಗಿ ಶಾಲಾ ಕಾಲೇಜುಗಳಿಗೆ ರಜೆ ಘೋಷಿಸಲಾಗಿತ್ತು. ವಕೀಲರು ಕೋರ್ಟ್ ಕಲಾಪಗಳನ್ನು ಬಹಿಷ್ಕರಿಸಿದ್ದರು. ನಗರದ ಲೇಬರ್ ವೃತ್ತ, ಜವಾಹರ ರಸ್ತೆ, ಗಂಜ್ ಸರ್ಕಲ್, ಅಶೋಕ ಸರ್ಕಲ್‌ನಲ್ಲಿ ಜನ ಓಡಾಟವಿಲ್ಲದೆ ಬಣಗುಟ್ಟುತ್ತಿತ್ತು. ಬಲ್ದೋಟಾ ಸ್ಟೀಲ್ ಕಾರ್ಖಾನೆ
ಬಂದ್ ಹಿನ್ನಲೆ, ಗವಿಮಠದ ಎದುರಿನ ಕ್ರೀಡಾಂಗಣದಿಂದ ಮೆರವಣಿಗೆ ಆರಂಭವಾಗಿ ತಾಲ್ಲೂಕು ಕ್ರೀಡಾಂಗಣದಲ್ಲಿ ಬಹಿರಂಗ ಸಭೆ ನಡೆಯಿತು. ಗವಿಮಠದ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಸೇರಿದಂತೆ ಎಲ್ಲ ಧರ್ಮಗಳ ಗುರುಗಳು, ಎಲ್ಲ ಪಕ್ಷಗಳ ಜನಪ್ರತಿನಿಧಿಗಳು ಮತ್ತು ಬೆಂಬಲ ನೀಡಿರುವ ನೂರಕ್ಕೂ ಹೆಚ್ಚು ಸಂಘಟನೆಗಳ ಪದಾಧಿಕಾರಿಗಳು ಭಾಗವಹಿಸಿದ್ದರು.
ಗವಿಮಠದ ಆವರಣದಲ್ಲಿ ಅಭಿನವ ಗವಿಸಿದ್ದೇಶ್ವರ ಸ್ವಾಮೀಜಿ ಜಾಥಾಕ್ಕೆ ಚಾಲನೆ ನೀಡಿದ್ದರು. ಗವಿಮಠ ಆವರಣ ಗಡಿಯಾರ ಕಂಬ, ಜವಾಹರ ರಸ್ತೆ ಹಾಗೂ ಅಶೋಕ ಸರ್ಕಲ್ ಮೂಲಕ ತಾಲ್ಲೂಕು ಕ್ರೀಡಾಂಗಣದ ತನಕ ಜಾಥಾ ಜರುಗಿತು. ಕಾರ್ಖಾನೆ ಓಡಿಸಿ ಕೊಪ್ಪಳ ಉಳಿಸಿ, ದೂಳು ಮುಕ್ತ ಕೊಪ್ಪಳ ನಮ್ಮ ಗುರಿ ಎನ್ನುವ ಘೋಷಣೆಗಳನ್ನು ಜಾಥಾದಲ್ಲಿ ಪಾಲ್ಗೊಂಡಿದ್ದ ವಿವಿಧ ಸಂಘ ಸಂಸ್ಥೆಗಳ ಮುಖಂಡರು, ರಾಜಕೀಯ ಪಕ್ಷಗಳ ನಾಯಕರು ಹಾಗೂ ಹಲವು ಧರ್ಮಗಳ ಗುರುಗಳು ಕೂಗಿದರು.
ಬಂದ್ ಹಿನ್ನೆಲೆಯಲ್ಲಿ ನಗರದ ವಕೀಲರು ನ್ಯಾಯಾಲಯದ ಕಲಾಪದಿಂದ ದೂರ ಉಳಿದು ಬಂದ್ ಗೆ ಬೆಂಬಲ ಸೂಚಿಸಿದರು. ಕಾಂಗ್ರೆಸ್ ಶಾಸಕ ರಾಘವೇಂದ್ರ ಹಿಟ್ನಾಳ, ಸಂಸದ ರಾಜಶೇಖರ ಹಿಟ್ನಾಳ, ಬಿಜೆಪಿ ಶಾಸಕ ಜನಾರ್ದನ ರೆಡ್ಡಿ, ಜೆಡಿಎಸ್ ರಾಜ್ಯ ಕೋರ್ ಕಮಿಟಿ ಸದಸ್ಯ ಸಿ.ವಿ. ಚಂದ್ರಶೇಖರ್, ವಿಧಾನ ಪರಿಷತ್ ಸದಸ್ಯೆ ಹೇಮಲತಾ ನಾಯಕ, ಮಾಜಿ ಸಂಸದ ಸಂಗಣ್ಣ ಕರಡಿ, ಬಿಜೆಪಿ ರಾಜ್ಯ ಕಾರ್ಯಕಾರಿಣಿ ಸದಸ್ಯ ಡಾ. ಬಸವರಾಜ ಕ್ಯಾಂಟರ್ ಸೇರಿದಂತೆ ಎಲ್ಲ ಪಕ್ಷಗಳ ಮುಖಂಡರು ಪಾಲ್ಗೊಂಡಿದ್ದರು ಎಂದು ಕನ್ನಡ ಪ್ಲಾನೆಟ್ ವರದಿ ಮಾಡಿದೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಜಿಪಂ, ತಾಪಂ ಚುನಾವಣೆಗಳವರೆಗೆ ನಾಯಕತ್ವ ಬದಲಾವಣೆ ಅಸಂಭವ: ಟಿ.ಬಿ. ಜಯಚಂದ್ರ
ಜಿಪಂ, ತಾಪಂ ಚುನಾವಣೆಗಳವರೆಗೆ ನಾಯಕತ್ವ ಬದಲಾವಣೆ ಅಸಂಭವ: ಟಿ.ಬಿ. ಜಯಚಂದ್ರ

