ಹೋರಾಟದ ಕಾರಣಕ್ಕೆ, ಬಿಜೆಪಿ ಆಡಳಿತ ನಡೆಸುವ ರಾಜ್ಯಗಳು ಸೇರಿದಂತೆ ದೇಶದ ಹಲವು ರಾಜ್ಯಗಳು ಈಗಲೂ ಸಿಎಎ ಕಾಯ್ದೆಯನ್ನು ಜಾರಿ ಮಾಡಿಲ್ಲ, ಆದ್ದರಿಂದ ಸಿಎಎ ವಿರೋಧಿ ಶಾಹೀನ್ ಬಾಗ್ ಮತ್ತು ರೈತರ ಹೋರಾಟದ ಮಾದರಿಯಲ್ಲಿ ವಕ್ಫ್ ತಿದ್ದುಪಡಿ ವಿರೋಧಿ ಹೋರಾಟ ಕಟ್ಟಬೇಕು ಎಂದು ಚಿಂತಕ ಶಿವಸುಂದರ್ ಅವರು ಹೇಳಿದರು. ಕರ್ನಾಟಕ ಮುಸ್ಲಿಂ ಮತ್ತು ಬ್ಯಾರಿ ಸಂಘಟನೆಗಳ ಒಕ್ಕೂಟಗಳ ಅಡಿಯಲ್ಲಿ ಕೇಂದ್ರ ಸರ್ಕಾರದ ಅಸಂವಿಧಾನಿಕ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶುಕ್ರವಾರ ನಡೆದ ಪ್ರತಿಭಟನೆಯಲ್ಲಿ ಅವರು ಮಾತನಾಡುತ್ತಿದ್ದರು. ವಕ್ಫ್ ತಿದ್ದುಪಡಿ ವಿರುದ್ಧ
ಕೇಂದ್ರ ಸರ್ಕಾರ ಮಾಡುತ್ತಿರುವ ವಕ್ಫ್ ತಿದ್ದುಪಡಿ ವಿರುದ್ಧ ಹೋರಾಟ ಕಟ್ಟಬೇಕಿದೆ ನಿಜವಾದರೂ, ಅದಕ್ಕೂ ಮೊದಲು ನಾವು ವಕ್ಫ್ ಬಗ್ಗೆ ತಿಳಿದು, ಹೋರಾಟದಲ್ಲಿ ಮುಸ್ಲಿಮೇತರರನ್ನು ಇದರಲ್ಲಿ ಒಳಗೊಳ್ಳಿಸಬೇಕು ಎಂದು ಅವರು ಹೇಳಿದರು. “ಬಿಜೆಪಿ ಮುಸ್ಲಿಮರ ಬಗ್ಗೆ ಅನುಮಾನಗಳನ್ನು ಹುಟ್ಟು ಹಾಕುವ ಮೂಲಕ ಅಪಪ್ರಚಾರ ಮಾಡುತ್ತಿದೆ. ಈ ಹಿಂದಿನಿಂದಲೂ ಮುಸ್ಲಿಮರು ಎಂದರೆ ಹೊರಗಿನವರು ಮತ್ತು ದಾಳಿಕೋರರು ಎಂಬಂತೆ ಬಿಂಬಿಸಿದ್ದರು. ಈಗ ವಕ್ಫ್ ಮೂಲಕ ಅದನ್ನು ಮುಂದುವರೆಸುತ್ತಾ ಇದ್ದಾರೆ” ಎಂದು ಶಿವಸುಂದರ್ ಹೇಳಿದರು.
ಪ್ರತಿಭಟನೆಯಲ್ಲಿ ಮಾತನಾಡಿದ ಅವರು, “ಮಾರ್ಚ್ 10ಕ್ಕೆ ಸಂಸತ್ತಿನಲ್ಲಿ ಜೆಪಿಸಿ ಕೊಟ್ಟ ವರದಿಯನ್ನು ಮಂಡಿಸಲು ಸರ್ಕಾರ ಪ್ರಯತ್ನಿಸುತ್ತಾ ಇದೆ. ಯಾಕೆಂದರೆ ಮುಸ್ಲಿಮರು ಆಗ ರಂಜಾನ್ ಉಪವಾಸ ಆಚರಣೆ ಮಾಡುವುದರಿಂದ ಪ್ರತಿಭಟನೆ ಕಡಿಮೆ ಇರಬಹುದು ಎಂಬುದು ಅವರ ಲೆಕ್ಕಾಚಾರ. ಆದರೆ ನಾವು ಅವರ ಲೆಕ್ಕಾಚಾರವನ್ನು ತಲೆಕೆಳಗು ಮಾಡಬೇಕು. ವಕ್ಫ್ ತಿದ್ದುಪಡಿ ಮಾಡುವುದು ಮುಸ್ಲಿಮರಿಗೆ ಮಾತ್ರ ಮಾಡುತ್ತಿರುವ ಅನ್ಯಾಯ ಮಾತ್ರವಲ್ಲ, ಜೊತೆಗೆ ಮುಸ್ಲಿಮರ ಮೂಲಕ ಅಲ್ಪಸಂಖ್ಯಾತರ ವಿರುದ್ಧದ ದಬ್ಬಾಳಿಕೆಯ ಪ್ರಾರಂಭ ಇದಾಗಿದೆ” ಎಂದು ಅವರು ಪ್ರತಿಪಾದಿಸಿದರು.
ವಕ್ಫ್ ತಿದ್ದುಪಡಿ ವಿರುದ್ಧ ಶಾಹೀನ್ ಬಾಗ್, ರೈತ ಹೋರಾಟದ ಮಾದರಿಯ ಚಳವಳಿ ಕಟ್ಟಬೇಕು – ಶಿವಸುಂದರ್
ಕರ್ನಾಟಕ ಮುಸ್ಲಿಂ ಮತ್ತು ಬ್ಯಾರಿ ಸಂಘಟನೆಗಳ ಒಕ್ಕೂಟಗಳ ಅಡಿಯಲ್ಲಿ ಕೇಂದ್ರದ ಅಸಂವಿಧಾನಿಕ ವಕ್ಫ್ ತಿದ್ದುಪಡಿ ಮಸೂದೆಯ ವಿರುದ್ಧ ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಶುಕ್ರವಾರ ನಡೆದ ಪ್ರತಿಭಟನೆ.
ಸುದ್ದಿ➣➣ https://t.co/eOXoQAMGHk pic.twitter.com/JVOQFUbyLm
— Naanu Gauri (@naanugauri) February 28, 2025
“ವಕ್ಫ್ ಎಂದರೆ, ಭಗವಂತನ ಒಡೆತನದಲ್ಲಿ ಸಮುದಾಯದ ಸೇವೆಗೆ ತಮ್ಮ ಆಸ್ತಿಯನ್ನು ಬಿಟ್ಟು ಕೊಡುವುದಾಗಿದೆ. ಇಂತಹ ಉದಾತ್ತ ಮೌಲ್ಯಗಳನ್ನು ಸಾವಿರ ವರ್ಷಗಳಿಂದ ಮುಸ್ಲಿಮರು ಆಚರಿಸುತ್ತಲೇ ಬಂದಿದ್ದಾರೆ. ಭಾರತದಲ್ಲಿ ಮುಸ್ಲಿಮೇತರ ರಾಜರು, ಶ್ರೀಮಂತರು ಕೂಡಾ ವಕ್ಫ್ ಆಸ್ತಿಗಳನ್ನು ಬಿಟ್ಟುಕೊಟ್ಟಿದ್ದಾರೆ. ಅಲ್ಲದೆ, ಧರ್ಮದ ಹೆಸರಿನಲ್ಲ ದಾನ ದತ್ತಿಗಳು ಹಿಂದಿನಿಂದಲೂ ನಡೆದುಕೊಂಡೆ ಬಂದಿದೆ. ಆದ್ದರಿಂದ, ವಕ್ಫ್ ವಕ್ಫ್ ತಿದ್ದುಪಡಿ ವಿವಾದವು ಕೇವಲ ಮುಸ್ಲಿಮರ ಮಾತ್ರ ಸಮಸ್ಯೆ ಅಲ್ಲ. ಅದು ಎಲ್ಲರ ಸಮಸ್ಯೆ” ಎಂದು ಅವರು ಹೇಳಿದರು.
“ಈ ದತ್ತಿಯನ್ನು ಅವರು ಬಿಟ್ಟು ಕೊಟ್ಟ ಉದ್ದೇಶಗಳಿಗಾಗಿ ವಿನಿಯೋಗಿಸಲಾಗುತ್ತದೆಯೆ ಎಂದು ಪರಿಶೀಲಿಸಲು ವಕ್ಫ್ ಬೋರ್ಡ್ ಅನ್ನು ಬ್ರಿಟಿಷರು ರೂಪಿಸಿದರು. ಸಮುದಾಯದ ಸೇವೆಗಾಗಿ ವಕ್ಫ್ ಕೊಡಲು, ಅದನ್ನು ನಿರ್ವಹಿಸಲು ನಮಗೆ ಸಂವಿಧಾನ ಹಕ್ಕು ಕೊಟ್ಟಿದೆ. ಆದರೆ ವಕ್ಫ್ ಆಸ್ತಿ ರಕ್ಷಣೆ ಮಾಡುತ್ತೇವೆ ಎಂದು ಬಿಜೆಪಿ ವಕ್ಫ್ ಬೋರ್ಡ್ ವಿಚಾರವನ್ನು ಕೋಮುವಾದಿಕರಣ ಮಾಡುದ ಉದ್ದೇಶದಿಂದ ಅದಕ್ಕೆ ತಿದ್ದುಪಡಿ ಮಾಡುತ್ತಿದೆ” ಎಂದರು.
“ವಕ್ಫ್ ಕಾಯ್ದೆಗೆ 2013ರ ವರೆಗೆ ಬಂದ ಎಲ್ಲಾ ತಿದ್ದುಪಡಿಗಳು ವಕ್ಫ್ ಆಸ್ತಿಗಳನ್ನು ಉಳಿಸಲು, ಅದನ್ನು ಸರಿಯಾಗಿ ನಡೆಸಿಕೊಳ್ಳಲು ಅಥವಾ ಅದರಲ್ಲಿನ ಭ್ರಷ್ಟಾಚಾರ ನಿರ್ಮೂಲನೆ ಮಾಡಲು ಮಾಡಲಾಗಿತ್ತು. ಆದರೆ ಬಿಜೆಪಿ ಸರ್ಕಾರ ಮಾತ್ರ ವಕ್ಫ್ ಉಳಿಸುತ್ತೇವೆ ಎಂದು ನಾಶ ಮಾಡಲು ಹೊರಟಿದೆ. ಸಿಎಎ ಹೋರಾಟದ ಕಾರಣಕ್ಕೆ ಹಲವಾರು ರಾಜ್ಯಗಳು ಸಿಎಎ ಜಾರಿ ಮಾಡಿಲ್ಲ. ಅದರಂತೆ ಸಿಎಎ ವಿರೋಧಿ ಶಹೀನ್ ಭಾಗ್ ಮತ್ತು ರೈತರ ಹೋರಾಟದ ಮಾದರಿಯಲ್ಲಿ ಹೋರಾಟ ಕಟ್ಟಬೇಕು” ಎಂದು ಶಿವಸುಂದರ್ ಅವರು ಹೇಳಿದರು.
ಸಾಮಾಜಿಕ ಹೋರಾಟಗಾರ್ತಿ ಅಖಿಲಾ ವಿದ್ಯಾಸಂದ್ರ ಮಾತನಾಡಿ, “ವಕ್ಫ್ ಬೋರ್ಡ್‌ನಲ್ಲಿ ಚುನಾವಣೆ ಬೇಡ ಎಂದು ಕೇಂದ್ರ ಸರ್ಕಾರ ಹೇಳುತ್ತಾ ಇದೆ. ಮುಸ್ಲಿಮೇತರರನ್ನು ವಕ್ಫ್ ಬೋರ್ಡ್‌ನಲ್ಲಿ ಸೇರಿಸುವುದು ಸರಿಯಲ್ಲ. ವಕ್ಫ್‌ನಲ್ಲಿ ಈಗ ಎಂತಹ ಮುಸ್ಲಿಮೇತರ ಸದಸ್ಯರನ್ನು ತರುತ್ತಿದೆ ಎಂಬ ವಿಚಾರವಿದೆ. ವಕ್ಫ್ ಆಸ್ತಿ ಕಬಳಿಸಿದವರಿಗೆ ನೀಡುವ ಶಿಕ್ಷೆಯನ್ನು ಇಳಿಸಲಾಗಿದೆ. ಹಾಗಾದರೆ ಈ ಕಾಯ್ದೆ ವಕ್ಫ್ ಆಸ್ತಿಗಳನ್ನು ಉಳಿಸಲೆ ಅಥವಾ ನಾಶ ಮಾಡಲೆ” ಎಂದು ಅವರು ಕೇಳಿದರು.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಸಂಭಾಲ್ ಮಸೀದಿ ಸ್ವಚ್ಛಗೊಳಿಸುವಂತೆ ಪುರಾತತ್ವ ಇಲಾಖೆಗೆ ಹೈಕೋರ್ಟ್ ಸೂಚನೆ
ಸಂಭಾಲ್ ಮಸೀದಿ ಸ್ವಚ್ಛಗೊಳಿಸುವಂತೆ ಪುರಾತತ್ವ ಇಲಾಖೆಗೆ ಹೈಕೋರ್ಟ್ ಸೂಚನೆ

