ಬಗರ್ ಹುಕುಂ ರೈತರಿಗೆ ಭೂಮಂಜೂರಾತಿಗೆ ಆಗ್ರಹಿಸಿ ಇದೇ ಮಾ.11ರಂದು ಬೆಂಗಳೂರಿನ ಫ್ರೀಡಂ ಪಾರ್ಕ್‍ನಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ ಎಂದು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿಯ ಕುಮಾರ್ ಸಮತಳ ತಿಳಿಸಿದ್ದಾರೆ.
ಈ ಕುರಿತು ಪತ್ರಿಕಾ ಹೇಳಿಕೆ ನೀಡಿರುವ ಅವರು, ಈ ರಾಜ್ಯದ ಅತ್ಯಂತ ಕಟ್ಟ ಕಡೆಯ ಕೆಳ ಸಮುದಾಯಗಳು ಅತೀ ಹೆಚ್ಚು ಭೂ ಹಿಡುವಳಿಯಿಂದ ವಂಚಿತರಾಗಿದ್ದಾರೆಂಬುದು ಹಗಲಿನ ಸೂರ್ಯನಷ್ಟೇ ಸತ್ಯ. 70ರ ದಶಕದಲ್ಲಿ ಜಾರಿಯಾಗಿದ್ದ “ಉಳುವವನೇ ಭೂ ಒಡೆಯ” ಅಂದಿನ ದೇವರಾಜ ಅರಸು ಸರ್ಕಾರದ ಕ್ರಾಂತಿಕಾರಿ ಘೋಷಣೆಯಿಂದ ಒಂದಷ್ಟು ಹಿಂದುಳಿದ ಸಮುದಾಯಗಳಿಗೆ, ಕಟ್ಟ ಕಡೆಯ ಅಸ್ಪೃಶ್ಯ ಸಮುದಾಯಗಳಿಗೆ ಭೂಮಿಯ ಒಡೆತನ ದೊರೆತದ್ದು ಈಗ ಇತಿಹಾಸ ಎಂದು ಅವರು ಹೇಳಿದ್ದಾರೆ.
ಸರ್ಕಾರದ ಒಡೆತನದಲ್ಲಿದ್ದ ಲಕ್ಷಾಂತರ ಎಕರೆ ಭೂಮಿಯನ್ನು ಸಕ್ರಮಗೊಳಿಸುವ ಬಗರ್ ಹುಕುಂ ಸಕ್ರಮ ಸಮಿತಿಗಳ ರಚನೆಯೂ ಭೂರಹಿತರರ ಪಾಲಿಗೆ ಜೀವಾಳವಾಗಿದ್ದೂ ಇದೆ. ಫಾರಂ.ನಂ.50, 53, ಹಾಗೂ ಇತ್ತೀಚೆಗೆ ಫಾರಂನಂ 57 ರ ಅರ್ಜಿಗಳನ್ನು ಸ್ವೀಕರಿಸಿ ಕೆಲ ನಿಬಂಧನೆಗಳ ಮೂಲಕ ಭೂಮಿಯನ್ನು ಮಂಜೂರಾತಿ ನೀಡುತ್ತಿರುವುದು ನಿಯಮ. ಇತ್ತೀಚೆಗೆ ಕಂದಾಯ ಮಂತ್ರಿ ಕೃಷ್ಣ ಭೈರೇಗೌಡರ ನೇತೃತ್ವದಲ್ಲಿ ಲಕ್ಷಾಂತರ ಸಂಖ್ಯೆ ಅರ್ಜಿಗಳನ್ನು ಪರಿಶೀಲಿಸಿ ಭೂಮಿ ಮಂಜೂರಾತಿ ಪ್ರಕ್ರಿಯೆ ನಡೆಯುತ್ತಿರುವುದು ಸಂತೋಷದ ವಿಷಯ. ಇದಕ್ಕಾಗಿ ಸರ್ಕಾರವನ್ನು ವಿಶೇಷವಾಗಿ ಕಂದಾಯ ಮಂತ್ರಿಗಳನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ಅಭಿನಂದಿಸುತ್ತದೆ ಎಂದು ಹೇಳಿಕೆಯು ತಿಳಿಸಿದೆ.
ಭೂಮಿ ಮಂಜುರಾತಿಯ ಈ ಸಂದರ್ಭದಲ್ಲಿ ಸರ್ಕಾರ ಲಕ್ಷಾಂತರ ಸಂಖ್ಯೆಯ ಅರ್ಜಿಗಳನ್ನು ತಿರಸ್ಕರಿಸುವ ಮೂಲಕ ಲಕ್ಷಾಂತರ ಸಂಖ್ಯೆಯ ಬಡ ಕುಟುಂಬಗಳಿಗೆ ಅದರಲ್ಲೂ ಬಹುತೇಕ ಪರಿಶಿಷ್ಟ ಜಾತಿ ಪರಿಶಿಷ್ಟ ವರ್ಗಗಳು, ಹಿಂದುಳಿದ, ಅಲೆಮಾರಿ ಸಮುದಾಯಗಳೇ ಸಾಗುವಳಿ ಮಾಡುತ್ತಾ ಅರ್ಜಿ ಸಲ್ಲಿಸರುವ ಭೂರಹಿತ ಕುಟುಂಬಗಳಿಗೆ ಭೂಮಿಯ ಹಕ್ಕಿನಿಂದ ವಂಚಿಸುವುದೇ ಆಗಿದೆ. ಸಂವಿಧಾನ ಪರ, ಬಾಬಾ ಸಾಹೇಬ್ ಅಂಬೇಡ್ಕರ್‍ವಾದಿ, ಸಮಾಜವಾದಿ ಹೆಸರಿನಲ್ಲಿ ಅಧಿಕಾರ ನಡೆಸುತ್ತಿರುವ ಕಾಂಗ್ರೆಸ್ ಸರ್ಕಾರ ಸಾಮಾಜಿಕ ನ್ಯಾಯವನ್ನು ಎಲ್ಲಿ ಪಾಲಿಸುತ್ತದೆ? ಎಂಬ ಪ್ರಶ್ನೆ ಕಾಡುತ್ತಿದೆ ಎಂದು ಸಮತಳ್ ಹೇಳಿಕೆಯಲ್ಲಿ ಆತಂಕ ವ್ಯಕ್ತಪಡಿಸಿದ್ದಾರೆ.
ಕಾನೂನಿನ ಹೆಸರಿನಲ್ಲಿ ಭೂಮಂಜೂರಾತಿ ನೀಡದೇ ಅರ್ಜಿಗಳನ್ನು ಮಾನ್ಯ ಮಾಡುತ್ತಿಲ್ಲ. ಇದಕ್ಕೆ ಹಲವಾರು ರೀತಿಯ ಕಾರಣಗಳನ್ನು ನೀಡುತ್ತಿದ್ದು, ಕೃಷಿ ಯೋಗ್ಯವಲ್ಲದ ಭೂಮಿ, ಅರಣ್ಯ, ಖರಾಬ್, ಅ ಖರಾಬ್, ಬ ಖರಾಬ್, ರಾಳಗುಡ್ಡ, ಪಾರಂಪೋಕು, ಜೌಗು ಪ್ರದೇಶ, ಅರಳು ಪ್ರದೇಶ, ಸವಳು ಭೂಮಿ, ಉಸುಕು ಭೂಮಿ, ಹುಲ್ಲುಬನ್ನಿ, ಕಾವಲು, ಪೈಸಾರಿ, ಮಫತ್ ಭೂಮಿ, ಖಾರೀಜ್ ಖಾತಾ, ಇನಾಂ, ಲ್ಯಾಂಡ್ ಬ್ಯಾಂಕ್, ಗ್ರಾಮಠಾಣಾ, ಸೇಂಧಿವನ, ಸಿ ಅಂಡ್ ಡಿ, ಕಿರು ಅರಣ್ಯದ ಹೆಸರಿನಲ್ಲಿರುವ ಭೂಮಿಗಳು, ಮಲೆನಾಡಿನಲ್ಲಿ ಕರೆಯಲ್ಪಡುವ ಸೊಪ್ಪಿನ ಬೆಟ್ಟ (ಊರುಗುಪ್ಪೆ), ನೆಡುತೋಪು, ಬಾಣೆ, ದೇವರಕಾಡು ಹೆಸರಿನಲ್ಲಿರುವ ಭೂಮಿಗಳಾಗಿವೆ. ಇದೇ ಭೂಮಿಗಳಲ್ಲಿ ಭೂರಹಿತ ಜನರು ಕಷ್ಟಪಟ್ಟು ಹಸನುಗೊಳಿಸಿಕೊಂಡು ಬದುಕು ಕಟ್ಟಿಕೊಂಡಿದ್ದಾರೆ. ಹಲವು ವಿಧದ ಭೂಮಿಗಳು ಸರ್ಕಾರದ ದೃಷ್ಟಿಯಲ್ಲಿ ಯೋಗ್ಯವಲ್ಲದ ಭೂಮಿಗಳಾಗಿರಬಹುದು ಆದರೆ ಈ ಭೂಮಿಗಳಲ್ಲೇ ಲಕ್ಷಾಂತರ ಬಡ ಜನರು ದುಡಿಯುತ್ತಾ ಸ್ವಾಭಿಮಾನಿ ಬದುಕು ಕಟ್ಟಿಕೊಂಡಿದ್ದಾರೆ. ‘ಅರ್ಜಿಗಳ ತಿರಸ್ಕಾರ’ ಎಂಬುದು ಜನರ ನಿದ್ದೆ ಕೆಡಿಸಿದೆಯಲ್ಲದೆ ಜನರ ಬದುಕುವ ಹಕ್ಕನ್ನೇ ತಿರಸ್ಕರಿಸಿದಂತಾಗಿದೆ. ಇದೇ ತುಂಡು ಭೂಮಿ ಅವರ ಕುಟುಂಬಗಳಿಗೆ ಜೀವನಾಧಾರವಾಗಿದೆ. ದಶಕಗಳ ಕಾಲದಿಂದಲೂ ಬದುಕಿಗೆ ಆಸರೆಯಾಗಿದ್ದ ಭೂಮಿಗಳನ್ನೇ ನಂಬಿ ಅರ್ಜಿ ಸಲ್ಲಿಸಿ ಭೂಮಿಯ ಹಕ್ಕಿಗಾಗಿ ಕಾಯುತ್ತಿದ್ದವರಿಗೆ ನಿರಾಶೆಯ ಸಿಡಿಲು ಬಡಿದಂತಾಗಿದೆ. ಈ ಭೂಮಿಯನ್ನು ಉಳಿಸಿಕೊಳ್ಳುವುದಕ್ಕಾಗಿ ಜೀವನದುದ್ದಕ್ಕೂ ಅದೆಷ್ಟೋ ಹೋರಾಟಗಳನ್ನು ಮಾಡುತ್ತಾ ಜೀವ ಸವೆಸಿದ್ದಾರೆ ಎಂದು ಹೇಳಿಕೆಯಲ್ಲಿ ಅವರು ತಿಳಿಸಿದ್ದಾರೆ.
ಬಗರ್ ಹುಕುಂ ಅರ್ಜಿಗಳನ್ನು ತಿರಸ್ಕರಿಸುವ ಮೂಲಕ ಸ್ವಾಭೀಮಾನದ ಬದುಕಿಗೆ ಸರಕಾರವು ಭಂಗ ತರುತ್ತಿದೆ. ಅಷ್ಟೇ ಅಲ್ಲದೆ ಬಡವರಿಗೊಂದು, ಶ್ರೀಮಂತರು ಮತ್ತು ಕಂಪನಿಗಳಿಗೊಂದು ಕಾನೂನು ಮಾಡುವ ಮೂಲಕ ಬಡವರಿಗೆ ಭೂಮಿ ಮಂಜೂರಾತಿ ನೀತಿಯನ್ನು ಗಾಳಿಗೆ ತೂರುತ್ತಿದೆ. ಈ ನೀತಿಯನ್ನು ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ತೀರ್ವವಾಗಿ ವಿರೋಧಿಸುತ್ತದೆ ಮತ್ತು ಬಗರ್ ಹುಕುಂ ಸಾಗುವಳಿದಾರರ ಅರ್ಜಿಗಳನ್ನು ಯಾವುದೇ ನೆಪದಲ್ಲಿ ತಿರಸ್ಕರಿಸಬಾರದೆಂದು “ ಅರ್ಜಿ ಸಲ್ಲಿಸಿ ಸಾಗುವಳಿ ಮಾಡುತ್ತಿರುವ ಭೂಹೀನರೆಲ್ಲರಿಗೂ ಒಂದು ಬಾರಿ ಅವಕಾಶ” ನೀಡುವ ಮೂಲಕ ಭೂಮಿಯ ಹಕ್ಕುನ್ನು ನೀಡಬೇಕೆಂಬ ಒತ್ತಾಯವನ್ನು ಸರ್ಕಾರಕ್ಕೆ ಮಾಡುತ್ತಾ ಭೂಮಿ ಮತ್ತು ವಸತಿ ಹಕ್ಕು ವಂಚಿತರ ಹೋರಾಟ ಸಮಿತಿ ನೇತೃತ್ವದಲ್ಲಿ ಬೆಂಗಳೂರಿನ ಪ್ರಿಡಂ ಪಾರ್ಕ್‍ನಲ್ಲಿ ಅನಿರ್ಧಿಷ್ಟಾವಧಿ ಪ್ರತಿಭಟನೆಯನ್ನು ಹಮ್ಮಿಕೊಳ್ಳಲಾಗಿದೆ.
ಮಾರ್ಚ್ 11 ರಂದು ಬೆಳಿಗ್ಗ 10 ಗಂಟೆಗೆ ಆರಂಭವಾಗಲಿರುವ ಪ್ರತಿಭಟನಾ ಧರಣಿಗೆ ರಾಜ್ಯದ ಎಲ್ಲಾ ಬಗರ್ ಹುಕುಂ ಸಾಗುವಳಿದಾರರು ಆಗಮಿಸಬೇಕೆಂದು ಈ ಮೂಲಕ ಮನವಿ ಮಾಡಿಕೊಳ್ಳುತ್ತದೆ ಎಂದು ಅವರು ಹೇಳಿಕೆಯಲ್ಲಿ ಮಾಹಿತಿ ನೀಡಿದ್ದಾರೆ.
‘ಪಾಕಿಸ್ತಾನಿ’ ಎಂದು ಕರೆಯುವುದು ಧಾರ್ಮಿಕ ಭಾವನೆಗಳಿಗೆ ನೋಯಿಸುವ ಅಪರಾಧವಲ್ಲ: ಸುಪ್ರೀಂ ಕೋರ್ಟ್


