ಬೆಂಗಳೂರು ಅರಮನೆ (ಭೂ ಬಳಕೆ ಮತ್ತು ನಿಯಂತ್ರಣ) ವಿಧೇಯಕ-2025 ವಿಪಕ್ಷ ಬಿಜೆಪಿ ಸದಸ್ಯರ ತೀವ್ರ ವಿರೋಧದ ನಡುವೆಯೂ ಗುರುವಾರ (ಮಾ.6) ವಿಧಾನಸಭೆಯಲ್ಲಿ ಅಂಗೀಕಾರಗೊಂಡಿದೆ.
ಈ ಮಸೂದೆ ಮೂಲಕ ಬೆಂಗಳೂರು ಅರಮನೆ ಮೈದಾನದ ಬಳಕೆ ಮತ್ತು ನಿಯಂತ್ರಣ ಅಧಿಕಾರವನ್ನು ತನ್ನ ಬಳಿಯೇ ಇಟ್ಟುಕೊಳ್ಳುವ ಉದ್ದೇಶವನ್ನು ಸರ್ಕಾರ ಹೊಂದಿದೆ.
ಸುಗ್ರೀವಾಜ್ಞೆ ರೂಪದಲ್ಲಿದ್ದ ಮಸೂದೆಗೆ ಕೆಲ ಸಣ್ಣ ತಿದ್ದುಪಡಿಗಳೊಂದಿಗೆ ಗುರುವಾರ ಕಾನೂನು ಸಚಿವ ಹೆಚ್.ಕೆ.ಪಾಟೀಲ್ ಅವರು ವಿಧಾನಸಭೆಯಲ್ಲಿ ಮಂಡಿಸಿದರು.
ರಸ್ತೆ ವಿಸ್ತರಣೆಯ ಉದ್ದೇಶಕ್ಕಾಗಿ ಬಳಕೆಯಾಗುವ ಅರಮನೆ ಮೈದಾನದ 15 ಎಕರೆ 36 ಗುಂಟೆ ಭೂಮಿಗೆ ಪರಿಹಾರವಾಗಿ ಟಿಡಿಆರ್ (ಅಭಿವೃದ್ಧಿ ಹಕ್ಕು ವರ್ಗಾವಣೆ) 3,014 ಕೋಟಿ ರೂಪಾಯಿ ನೀಡಬೇಕು ಎಂದು ಸುಪ್ರೀಂ ಕೋರ್ಟ್ ಆದೇಶ ನೀಡಿತ್ತು. ಸಣ್ಣ ಜಾಗಕ್ಕೆ ಭಾರಿ ಮೊತ್ತವನ್ನು ಪಾವತಿಸಬೇಕಾದ ಹೊರೆಯಿಂದ ತಪ್ಪಿಸಿಕೊಳ್ಳಲು ಸರ್ಕಾರ ಈ ವಿಧೇಯಕ ತಂದಿದೆ ಎಂದು ತಿಳಿಸಿದರು.
ತಿದ್ದುಪಡಿ ಕುರಿತು ಮಾತನಾಡಿದ ಅವರು, “ಈ ವಿಧೇಯಕ ಜಾರಿಗೆ ಬರುವುದಕ್ಕೆ ಮೊದಲು ಮತ್ತು ನ್ಯಾಯಾಲಯದ ತೀರ್ಪು ಅಥವಾ ಆದೇಶಕ್ಕೆ ಅನುಗುಣವಾಗಿ ಸರ್ಕಾರದ ತೀರ್ಮಾನದ ಪ್ರಕಾರ ನಷ್ಟ ಪರಿಹಾರ ಪಾವತಿಸಿದ್ದರೆ, ಮತ್ತೊಮ್ಮೆ ನಷ್ಟ ಪರಿಹಾರ ಪಾವತಿಸುವ ಅಗತ್ಯವಿಲ್ಲ. ಅಂದರೆ, ಈಗಾಗಲೇ 11 ಕೋಟಿ ರೂಪಾಯಿ ಪರಿಹಾರ ಎಂದು ನಿಗದಿ ಮಾಡಿದ್ದರಿಂದ ಮತ್ತೆ ಪರಿಹಾರ ಮೊತ್ತ ಪರಿಷ್ಕರಣೆ ಮಾಡುವುದರಿಂದ ರಕ್ಷಣೆ ಪಡೆಯಲು ಈ ತಿದ್ದುಪಡಿ ಎಂದು ತಿಳಿಸಿದರು.
ವಿರೋಧ ಪಕ್ಷದ ಉಪನಾಯಕ ಅರವಿಂದ ಬೆಲ್ಲದ ಮಾತನಾಡಿ, “ರಾಜಮನೆತದವರು ಬಿಜೆಪಿ ಸಂಸದರಾದರು ಎಂಬ ಕಾರಣಕ್ಕೆ ದ್ವೇಷದಿಂದ ಈ ಮಸೂದೆ ತರಲಾಗಿದೆ. ಮೈಸೂರು ರಾಜಮನೆತನ ಕರ್ನಾಟಕಕ್ಕೆ ನೀಡಿದ ಕೊಡುಗೆಯನ್ನೂ ಯಾರೂ ಮರೆಯುವಂತಿಲ್ಲ. ನಿಮಗೇಕೆ ಬೆಂಗಳೂರು ಅರಮನೆ ಮೇಲೆ ಕಣ್ಣು” ಎಂದು ಪ್ರಶ್ನಿಸಿದರು.
ಡಾ.ಸಿ.ಎನ್.ಅಶ್ವತ್ಥನಾರಾಯಣ ಮಾತನಾಡಿ, ಅರಮನೆ ಮಾಲೀಕತ್ವದ ವಿಷಯ ಇತ್ಯರ್ಥವಾಗದೇ ಈ ಮಸೂದೆ ಮಂಡಿಸುವುದರಲ್ಲಿ ಅರ್ಥವಿಲ್ಲ. ಸುಪ್ರೀಂಕೋರ್ಟ್ ತೀರ್ಪಿನಂತೆ ಟಿಡಿಆರ್ ಪಾವತಿ ಮಾಡಿ ಎಂದು ಹೇಳಿದರು.
ಇದಕ್ಕೆ ಬಿಜೆಪಿಯ ಬಿ.ವೈ.ವಿಜಯೇಂದ್ರ, ಬೈರತಿ ಬಸವರಾಜ, ಆರಗ ಜ್ಞಾನೇಂದ್ರ ಧ್ವನಿಗೂಡಿಸಿದರು. ಮಸೂದೆಯನ್ನು ಮತಕ್ಕೆ ಹಾಕುವುದಾಗಿ ಸಭಾಧ್ಯಕ್ಷ ಯು.ಟಿ.ಖಾದರ್ ಹೇಳಿದಾಗ, ಸರ್ಕಾರ ಮಸೂದೆ ಹಿಂಪಡೆಯಬೇಕು ಎಂದು ಒತ್ತಾಯಿಸಿ ಬಿಜೆಪಿ ಮತ್ತು ಜೆಡಿಎಸ್ ಸದಸ್ಯರು ಸಭಾತ್ಯಾಗ ಮಾಡಿದರು. ಧ್ವನಿಮತದೊಂದಿಗೆ ಬೆಂಗಳೂರು ಅರಮನೆ ವಿಧೇಯಕ ಅಂಗೀಕಾರಗೊಂಡಿತು.
ಧರ್ಮಸ್ಥಳ ಸೌಜನ್ಯ ಅತ್ಯಾಚಾರ ಪ್ರಕರಣದ ವಿಡಿಯೊ ಪ್ರಕರಣ; ಯೂಟ್ಯೂಬರ್ ಸಮೀರ್‌ಗೆ ಹೈಕೋರ್ಟ್ ರಿಲೀಫ್


