ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು 2025-26ನೇ ಸಾಲಿನ ರಾಜ್ಯ ಬಜೆಟ್ ಇಂದು (ಮಾ.7) ವಿಧಾನಸಭೆಯಲ್ಲಿ ಮಂಡಿಸಿದರು. ಈ ಬಾರಿ ರೂ. 4 ಲಕ್ಷ ಕೋಟಿ (409549) ಗಾತ್ರದ ಆಯವ್ಯಯ ಮಂಡನೆಯಾಗಿದ್ದು, ಸಿದ್ದರಾಮಯ್ಯ 16ನೇ ಬಜೆಟ್ ಮಂಡಿಸಿದ ದಾಖಲೆ ಬರೆದಿದ್ದಾರೆ.
ಈ ಬಾರಿಯ ಬಜೆಟ್‌ನಲ್ಲಿ ಪಶುಸಂಗೋಪನೆ, ಮೀನುಗಾರಿಗೆ ಮತ್ತು ಸಹಕಾರ ಕ್ಷೇತ್ರಗಳಿಗೆ ಸಂಬಂಧಿಸಿದಂತೆ ಮಾಡಿರುವ ಘೋಷಣೆಗಳು ಇಲ್ಲಿವೆ..
ಪಶು ಸಂಗೋಪನೆ
- ಜಾನುವಾರುಗಳ ಆಕಸ್ಮಿಕ ಸಾವಿನ ಸಂದರ್ಭದಲ್ಲಿ ರೈತರು ಅನುಭವಿಸುತ್ತಿರುವ ಸಂಕಷ್ಟ ನಿವಾರಣೆಗೆ ಜಾರಿಗೆ ತಂದಿರುವ ‘ಅನುಗ್ರಹ’ ಯೋಜನೆಯಡಿ ಹಸು, ಎಮ್ಮೆ ಮತ್ತು ಎತ್ತುಗಳಿಗೆ ಪ್ರಸ್ತುತ ನೀಡಲಾಗುತ್ತಿರುವ ಪರಿಹಾರದ ಮೊತ್ತ 10,000 ರೂ. ಗಳಿಂದ 15,000 ರೂ. ಗಳಿಗೆ ; ಕುರಿ/ಮೇಕೆಗಳಿಗೆ ನೀಡಲಾಗುತ್ತಿರುವ ಮೊತ್ತ 5,000 ರೂ. ಗಳಿಂದ 7,500 ರೂ. ಗಳಿಗೆ ಹಾಗೂ 3-6 ತಿಂಗಳ ಕುರಿ/ಮೇಕೆ ಮರಿಗಳಿಗೆ ನೀಡಲಾಗುತ್ತಿರುವ ಮೊತ್ತ 3,500 ರೂ.ಗಳಿಂದ 5,000 ರೂ.ಗಳಿಗೆ ಹೆಚ್ಚಳ.
- 2025-26ನೇ ಸಾಲಿನಲ್ಲಿ 50 ನೂತನ ಪಶು ಚಿಕಿತ್ಸಾಲಯಗಳನ್ನು ಪ್ರಾರಂಭ
- ನಬಾರ್ಡ್ ಸಹಯೋಗದೊಂದಿಗೆ 2025-26ನೇ ಸಾಲಿನಲ್ಲಿ 100 ಪಶು ವೈದ್ಯಕೀಯ ಸಂಸ್ಥೆಗಳ ನೂತನ ಕಟ್ಟಡಗಳ ನಿರ್ಮಾಣ
- ಅಮೃತ್ ಮಹಲ್ ಕಾವಲುಗಳಲ್ಲಿನ ಭೂ ಒತ್ತುವರಿ ತಡೆಯಲು ಹಾಗೂ ಅಮೃತ್ ಮಹಲ್ ರಾಸುಗಳಿಗೆ ಮೇವು ಲಭ್ಯವಾಗುವಂತೆ ಮಾಡಲು, ಅರಣ್ಯ ಇಲಾಖೆ ಹಾಗೂ ನರೇಗಾ ಸಹಯೋಗದೊಂದಿಗೆ ಮೇವಿನ ಮರಗಳ ನೆಡುತೋಪು ಅಭಿವೃದ್ಧಿ
- ರಾಜ್ಯದ ಹೆಮ್ಮೆಯ ದೇಶಿ ದನದ ತಳಿಗಳಾದ ಹಳ್ಳಿಕಾರ್, ಕಿಲಾರಿ, ಅಮೃತ್ ಮಹಲ್ ಹಾಗೂ ಬಂಡೂರು ಕುರಿ ತಳಿಯ ಸಂರಕ್ಷಣೆ ಹಾಗೂ ಅಭಿವೃದ್ಧಿಗಾಗಿ 2 ಕೋಟಿ ರೂ. ಒದಗಿಸುವುದು.
- ಆಧುನಿಕ ಕುರಿ ಸಾಕಾಣಿಕೆ ಪದ್ಧತಿಗಳು ಮತ್ತು ನೈಸರ್ಗಿಕ ವಿಕೋಪಗಳ ಸಂದರ್ಭದಲ್ಲಿ ಅನುಸರಿಸಬೇಕಾದ ಮುಂಜಾಗ್ರತಾ ಕ್ರಮಗಳ ಕುರಿತು ವಲಸೆ ಕುರಿಗಾರರಿಗೆ ಕರ್ನಾಟಕ ಪಶುವೈದ್ಯಕೀಯ ಹಾಗೂ ಮೀನುಗಾರಿಕೆ ವಿಜ್ಞಾನಗಳ ವಿಶ್ವವಿದ್ಯಾಲಯದ ಸಹಯೋಗದಲ್ಲಿ ತರಬೇತಿ.
ಮೀನುಗಾರಿಕೆ :
- ರಾಜ್ಯದ ಮತ್ಸ್ಯ ಸಂಪತ್ತಿನ ರಕ್ಷಣೆಯೊಂದಿಗೆ ಸುಸ್ಥಿರ ಮೀನುಗಾರಿಕೆ ಹಾಗೂ ಮೀನುಗಾರರ ಆರ್ಥಿಕ ಅಭಿವೃದ್ಧಿಗೆ ಉತ್ತೇಜನ ನೀಡಲು ಮೀನುಗಾರಿಕಾ ನೀತಿ ರೂಪಿಸುವುದು.ಮಂಗಳೂರಿನಲ್ಲಿರುವ ಮೀನುಗಾರಿಕೆ ಕಾಲೇಜಿಗೆ ಪ್ರಸ್ತುತ ನಿಗದಿಪಡಿಸಿರುವ ವಿದ್ಯಾರ್ಥಿಗಳ ಸಂಖ್ಯಾಬಲವನ್ನು ದ್ವಿಗುಣಗೊಳಿಸಲಾಗುವುದು.
- ಕರಾವಳಿ ಜಿಲ್ಲೆಗಳಲ್ಲಿನ ಮೀನುಗಾರಿಕೆ ಕೊಂಡಿ ರಸ್ತೆಗಳನ್ನು ನಬಾರ್ಡ್ ಸಹಯೋಗದೊಂದಿಗೆ ಅಭಿವೃದ್ಧಿಪಡಿಸಲು 30 ಕೋಟಿ ರೂ.
- ಪರಿಶಿಷ್ಟ ಜಾತಿ /ಪರಿಶಿಷ್ಟ ಪಂಗಡದ ಆಯ್ದ ಮೀನು ಮಾರಾಟಗಾರರಿಗೆ ನಾಲ್ಕು ಚಕ್ರ ವಾಹನ ಖರೀದಿಸಲು ಶೇ.50ರಷ್ಟು ಅಥವಾ ಗರಿಷ್ಠ 3 ಲಕ್ಷ ರೂ. ಆರ್ಥಿಕ ನೆರವು ನೀಡುವುದು.
- ರಾಜ್ಯದಲ್ಲಿ ನೋಂದಣಿಯಾಗಿರುವ ಮೋಟರೀಕೃತ ದೋಣಿಗಳಲ್ಲಿ 15 ವರ್ಷ ಕಾಲಾವಧಿ ಮೀರಿರುವ ಹಳೆಯ ಇಂಜಿನ್‌ಗಳನ್ನು ಬದಲಾಯಿಸಿ ಹೊಸ ಇಂಜಿನ್ ಖರೀದಿಸಲು ಶೇ.50 ರಷ್ಟು ಒಂದು ಲಕ್ಷ ರೂ. ಮಿತಿಗೊಳಪಟ್ಟು ಸಹಾಯಧನ.
- ಪ್ರವಾಸಿಗರಿಗೆ ಶುಚಿ-ರುಚಿಯಾದ ಪೌಷ್ಟಿಕ ಮೀನು ಖಾದ್ಯಗಳನ್ನು ಒದಗಿಸಲು ಮೈಸೂರಿನಲ್ಲಿ ಹೈ-ಟೆಕ್ ಮತ್ಸ್ಯದರ್ಶಿನಿ ಪ್ರಾರಂಭ
- ಮಲ್ಪೆ ಮೀನುಗಾರಿಕಾ ಬಂದರಿನಲ್ಲಿ ವಾಹನ ದಟ್ಟಣೆಯನ್ನು ನಿರ್ವಹಿಸಲು ‘ಮಲ್ಟಿ-ಲೆವೆಲ್ ಪಾರ್ಕಿಂಗ್’ ವ್ಯವಸ್ಥೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ನಿರ್ಮಿಸುವುದು.
- ಆಳ ಸಮುದ್ರ ಮೀನುಗಾರಿಕೆಯನ್ನು ಪ್ರೋತ್ಸಾಹಿಸಲು ಪ್ರಸ್ತುತ ಇರುವ ಮೀನುಗಾರಿಕೆ ದೋಣಿಗಳ ಉದ್ದದ ಮಿತಿಯನ್ನು ಸಡಿಲಿಸಲು ಕ್ರಮವಹಿಸುವುದು.
ಸಹಕಾರ :
- ಪ್ರಸಕ್ತ ಸಾಲಿನಲ್ಲಿ 37 ಲಕ್ಷ ರೈತರಿಗೆ 28,000 ಕೋಟಿ ರೂಪಾಯಿ ಕೃಷಿ ಸಾಲವನ್ನು ವಿತರಿಸುವ ಗುರಿಯನ್ನು ಹೊಂದಲಾಗಿದೆ.
- 2023-24ನೇ ಸಾಲಿನ ಬೆಳಗಾವಿ ಅಧಿವೇಶನದಲ್ಲಿ ಘೋಷಿಸಿದಂತೆ, ಡಿಸಿಸಿ (DCC) ಹಾಗೂ ಪಿಕಾರ್ಡ್ (PCARD) ಬ್ಯಾಂಕುಗಳಿಗೆ ಸಂಬಂಧಿಸಿದ ಮಧ್ಯಮಾವಧಿ ಮತ್ತು ದೀರ್ಘಾವಧಿ ಸುಸ್ತಿ ಸಾಲಗಳ ಮೇಲಿನ 240 ಕೋಟಿ ರೂ. ಬಡ್ಡಿಯನ್ನು ಮನ್ನಾ ಮಾಡಲಾಗಿದೆ.ಯಶಸ್ವಿನಿ ಯೋಜನೆಯಡಿ ಇಲ್ಲಿಯವರೆಗೆ 700 ನೆಟ್‌ವರ್ಕ್ ಆಸ್ಪತ್ರೆಗಳು ನೋಂದಣಿಯಾಗಿದ್ದು, ಈ ಆಸ್ಪತ್ರೆಗಳಲ್ಲಿ ಇದುವರೆಗೂ ರಾಜ್ಯಾದ್ಯಂತ 59,000 ಫಲಾನುಭವಿಗಳು 103 ಕೋಟಿ ರೂ. ಮೊತ್ತದ ಚಿಕಿತ್ಸೆ ಪಡೆದಿರುತ್ತಾರೆ.
- ಪ್ರಾಥಮಿಕ ಕೃಷಿ ಪತ್ತಿನ ಸಹಕಾರ ಸಂಘಗಳ (PACS) ಕೇಂದ್ರ ಪುರಸ್ಕೃತ ಗಣಕೀಕರಣ ಯೋಜನೆಯಡಿ 93 ಕೋಟಿ ರೂ.ಗಳಷ್ಟು ಬಿಡುಗಡೆ ಮಾಡಿ, ರಾಜ್ಯದಲ್ಲಿ 110 ಸಂಘಗಳ ಗಣಕೀಕರಣವನ್ನು ಪೂರ್ಣಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ, 3,000 ಸಂಘಗಳನ್ನು ಸಂಪೂರ್ಣವಾಗಿ ಗಣಕೀಕರಣಗೊಳಿಸಲು ಉದ್ದೇಶಿಸಲಾಗಿದೆ.
- ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ತೊಗರಿ ಖರೀದಿಗೆ ಪ್ರತಿ ಕ್ವಿಂಟಾಲ್‌ಗೆ 7,550 ರೂ. ಜೊತೆಗೆ ರಾಜ್ಯ ಸರ್ಕಾರದ ವತಿಯಿಂದ ಹೆಚ್ಚುವರಿ ಪ್ರೋತ್ಸಾಹಧನ 450 ರೂ.ಗಳಂತೆ ಒಟ್ಟು 138 ಕೋಟಿ ರೂ. ನೀಡಲು ತೀರ್ಮಾನಿಸಲಾಗಿದೆ. ಇದರಿಂದ, ತೊಗರಿ ಬೆಳೆಯುವ ಪ್ರಮುಖ ಜಿಲ್ಲೆಗಳಾದ ಕಲಬುರಗಿ, ಬೀದರ್, ಯಾದಗಿರಿ, ವಿಜಯಪುರ, ಬಾಗಲಕೋಟೆ, ರಾಯಚೂರು, ಕೊಪ್ಪಳ, ಕೋಲಾರ, ಚಿತ್ರದುರ್ಗ ಹಾಗೂ ಚಿಕ್ಕಬಳ್ಳಾಪುರ ಭಾಗದ ರೈತರಿಗೆ ಅನುಕೂಲವಾಗಲಿದೆ.
ಸಹಕಾರ ಇಲಾಖೆಯಲ್ಲಿ ಕಾರ್ಯಕ್ಷಮತೆ, ಪಾರದರ್ಶಕತೆ ಹಾಗೂ ಜನಸ್ನೇಹಿ ಸೇವೆಗಳನ್ನು ನೀಡಲು ಈ ಕೆಳಕಂಡ ಸುಧಾರಣಾ ಕ್ರಮಗಳನ್ನು ಜಾರಿಗೆ ತರುವುದು:
i) ರಾಜ್ಯದ ಎಲ್ಲಾ ನೊಂದಾಯಿತ ಗೃಹ ನಿರ್ಮಾಣ ಸಹಕಾರ ಸಂಘಗಳ ಮಾಹಿತಿಯನ್ನು ಕರ್ನಾಟಕ ರಾಜ್ಯ ಸಹಕಾರ ವಸತಿ ಮಹಾಮಂಡಳದ ವತಿಯಿಂದ ಆನ್‌ಲೈನ್‌ನಲ್ಲಿ ಅಳವಡಿಸುವುದು.
ii) ಠೇವಣಿದಾರರ ಹಿತಾಸಕ್ತಿಯನ್ನು ಕಾಪಾಡಲು ಹಾಗೂ ಅವ್ಯವಹಾರವನ್ನು ತಡೆಯಲು ಸಹಾಯವಾಣಿಯನ್ನು ಪ್ರಾರಂಭಿಸುವುದು.
iii) ಸಹಕಾರ ಸಂಘಗಳ ಲೆಕ್ಕ ಪರಿಶೋಧನೆ ವರದಿಗಳನ್ನು ಡಿಜಿಟಲೀಕರಣಗೊಳಿಸಲಾಗುವುದು.
- ಕರ್ನಾಟಕ ರಾಜ್ಯ ಉಗ್ರಾಣ ನಿಗಮದ ಅಪೂರ್ಣಗೊಂಡಿರುವ ಉಗ್ರಾಣಗಳ ನಿರ್ಮಾಣ ಹಾಗೂ ಮೂಲಸೌಕರ್ಯ ಕಾಮಗಾರಿಗಳನ್ನು ಪೂರ್ಣಗೊಳಿಸಲು 376 ಕೋಟಿ ರೂ. ಸಹಾಯಾನುದಾನವನ್ನು ಹಿಂದಿನ ಆಯವ್ಯಯದಲ್ಲಿ ಘೋಷಿಸಲಾಗಿತ್ತು. ಅದರಂತೆ, ಈಗಾಗಲೇ 329 ಕೋಟಿ ರೂ. ಬಿಡುಗಡೆಗೊಳಿಸಲಾಗಿದೆ. ಪ್ರಸಕ್ತ ಸಾಲಿನಲ್ಲಿ, ಬಾಕಿ ಇರುವ 47 ಕೋಟಿ ರೂ. ಮೊತ್ತವನ್ನು ಒದಗಿಸುವುದು.
- ರಾಜ್ಯದ ಎಲ್ಲಾ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಗಳಲ್ಲಿ ಪರವಾನಿಗೆ ಪಡೆದು ಕಾರ್ಯನಿರ್ವಹಿಸುತ್ತಿರುವ ಶ್ರಮಿಕರು ಮೃತರಾದಾಗ ಅವರ ವಾರಸುದಾರರಿಗೆ ಒಂದು ಲಕ್ಷ ರೂ. ವಿಮಾ ಮೊತ್ತವನ್ನು ನೀಡಲಾಗುತ್ತಿದ್ದು, ಸದರಿ ವಿಮಾ ಮೊತ್ತವನ್ನು ಐದು ಲಕ್ಷ ರೂ.ಗಳಿಗೆ ಹೆಚ್ಚಿಸುವುದು.
- ಬೆಂಗಳೂರಿನಲ್ಲಿರುವ ಮಾರುಕಟ್ಟೆ ಸಮಿತಿಗಳಲ್ಲಿ ವಾಹನಗಳ ದಟ್ಟಣೆ ಹೆಚ್ಚಾಗಿರುವುದರಿಂದ ಬೆಂಗಳೂರಿನ ಹೊರವಲಯದಲ್ಲಿ ಹೊಸ Satellite Market ಅನ್ನು ಸ್ಥಾಪಿಸುವುದು.
- ಕೊಪ್ಪಳ ಜಿಲ್ಲೆಯ ಬೂದುಗುಂಪ ಗ್ರಾಮದಲ್ಲಿ ಕುರಿ ಮತ್ತು ಮೇಕೆ ಮಾರುಕಟ್ಟೆಯನ್ನು KKRDB ವತಿಯಿಂದ 25 ಕೋಟಿ ರೂ. ವೆಚ್ಚದಲ್ಲಿ ಅಗತ್ಯ ಮೂಲಸೌಲಭ್ಯಗಳೊಂದಿಗೆ ಸ್ಥಾಪಿಸುವುದು.
- ಕಲ್ಯಾಣ ಕರ್ನಾಟಕ ಭಾಗದಲ್ಲಿ ಹೈನುಗಾರಿಕೆಯನ್ನು ಉತ್ತೇಜಿಸಲು 10 ಕೋಟಿ ರೂ. ಅನುದಾನವನ್ನು ಪ್ರಥಮ ಹಂತದಲ್ಲಿ ನೀಡುವುದು. ಕಲಬುರಗಿಯಲ್ಲಿ ನೂತನ ಮೆಗಾ ಡೈರಿಯನ್ನು ಪ್ರಾರಂಭಿಸಲು KKRDB ವತಿಯಿಂದ 50 ಕೋಟಿ ರೂ. ಅನುದಾನ ಒದಗಿಸುವುದು.
- KKRDB ವತಿಯಿಂದ ಕಲಬುರಗಿಯಲ್ಲಿ ಪ್ರಾದೇಶಿಕ ಸಹಕಾರ ಭವನವನ್ನು 10 ಕೋಟಿ ರೂ. ವೆಚ್ಚದಲ್ಲಿ ನಿರ್ಮಿಸುವುದು.
- KKRDB ಸಹಯೋಗದಿಂದ ಗ್ರಾಮೀಣ ಉಗ್ರಾಣಗಳನ್ನು 60 ಕೋಟಿ ರೂ. ವೆಚ್ಚದಲ್ಲಿ ನಿರ್ಮಾಣ ಮಾಡುವುದು.
- ಕುರಿ ಮತ್ತು ಮೇಕೆ ಸಾಕಾಣಿಕೆದಾರರಿಗೆ ಅನುವಾಗುವಂತೆ ಬೆಂಗಳೂರಿನಲ್ಲಿ ಸುಸಜ್ಜಿತ ಕುರಿ ಮತ್ತು ಮೇಕೆ ಮಾರುಕಟ್ಟೆಯನ್ನು ಪ್ರಾರಂಭಿಸುವುದು.
- ಚಿಕ್ಕಬಳ್ಳಾಪುರದಲ್ಲಿ ಕೃಷಿ ಉತ್ಪನ್ನ ಮಾರುಕಟ್ಟೆ ಸಮಿತಿಯ ವತಿಯಿಂದ ಅಂತಾರಾಷ್ಟ್ರೀಯ ಮಟ್ಟದ ಹೈಟೆಕ್ ಹೂವಿನ ಮಾರುಕಟ್ಟೆಯನ್ನು ಹಾಗೂ ಕೆ.ಜಿ.ಎಫ್. ನಲ್ಲಿ ರೈತರ ಆಧುನಿಕ ಮಾರುಕಟ್ಟೆಯನ್ನು ಸಾರ್ವಜನಿಕ-ಖಾಸಗಿ ಸಹಭಾಗಿತ್ವದಲ್ಲಿ ಸ್ಥಾಪಿಸುವುದು.
Karnataka Budget 2025-26 | ಕೃಷಿ, ತೋಟಗಾರಿಕೆ ಕ್ಷೇತ್ರದ ಘೋಷಣೆಗಳು; ಸಂಕ್ಷಿಪ್ತ ವಿವರ


