ಆಪಾದಿತ ಮುಡಾ ನಿವೇಶನ ಹಂಚಿಕೆ ಅಕ್ರಮ ಪ್ರಕರಣದ ಆರೋಪಿಯಾಗಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪತ್ನಿ ಪಾರ್ವತಿ ಹಾಗೂ ಸಚಿವ ಬೈರತಿ ಸುರೇಶ್ ಅವರಿಗೆ ಜಾರಿ ನಿರ್ದೇಶನಾಲಯ (ಇಡಿ) ನೀಡಿದ್ದ ಸಮನ್ಸ್ ರದ್ದುಗೊಳಿಸಿ ಹೈಕೋರ್ಟ್ ಇಂದು (ಮಾ.7) ಆದೇಶಿಸಿದೆ.
ಮುಡಾ ಪ್ರಕರಣಕ್ಕೆ ಸಂಬಂಧಿಸಿದಂತೆ ವಿಚಾರಣೆ ಹಾಜರಾಗಲು ಪಾರ್ವತಿ ಹಾಗೂ ಬೈರತಿ ಸುರೇಶ್ ಅವರಿಗೆ ಇಡಿ ಸಮನ್ಸ್ ಜಾರಿ ಮಾಡಿತ್ತು. ಅದನ್ನು ರದ್ದುಪಡಿಸುವಂತೆ ಕೋರಿ ಇಬ್ಬರು ಹೈಕೋರ್ಟ್ ಗೆ ಪ್ರತ್ಯೇಕ ಅರ್ಜಿ ಸಲ್ಲಿಸಿದ್ದರು.
ಅರ್ಜಿ ವಿಚಾರಣೆ ನಡೆಸಿದ್ದ ಹೈಕೋರ್ಟ್, ಇಡಿ ಸಮನ್ಸ್ಗೆ ತಡೆಯಾಜ್ಞೆ ನೀಡಿತ್ತು. ಇಂದು ಸಮನ್ಸ್ ರದ್ದು ಮಾಡಿ ನ್ಯಾಯಮೂರ್ತಿ ಎಂ.ನಾಗಪ್ರಸನ್ನ ಅವರಿದ್ದ ಪೀಠ ಆದೇಶಿಸಿದೆ. ಇದರಿಂದ ಇಬ್ಬರು ನಿರಾಳರಾಗಿದ್ದಾರೆ.
ಸಿಎಂ ಪತ್ನಿ ಪಾರ್ವತಿ ಅವರು ಅಕ್ಟೋಬರ್ 1, 2024 ರಂದು ವಿವಾದಿತ 14 ನಿವೇಶನಗಳನ್ನು ಮುಡಾಗೆ ಹಿಂದಿರುಗಿಸಿದ್ದಾರೆ. ಈ 14 ನಿವೇಶನಗಳಲ್ಲದೆ 1,708 ನಿವೇಶನಗಳ ಬಗ್ಗೆಯೂ ತನಿಖೆ ನಡೆಯುತ್ತಿದೆ. ಈಗಾಗಲೇ 160 ನಿವೇಶನಗಳನ್ನು ಇಡಿ ತಾತ್ಕಾಲಿಕ ಜಪ್ತಿ ಮಾಡಿದೆ. ತನ್ನ ಕಾರ್ಯವ್ಯಾಪ್ತಿ ಮೀರಿ ಇಡಿ ಪರ್ಯಾಯ ತನಿಖೆ ನಡೆಸುತ್ತಿದೆ.
ಇಡಿ ತಾತ್ಕಾಲಿಕ ಜಪ್ತಿ ಆದೇಶದಲ್ಲಿ ಹಲವು ಅಂಶಗಳನ್ನು ಪ್ರಸ್ತಾಪಿಸಿದೆ. ಭೂಸ್ವಾಧೀನ, ಭೂಪರಿವರ್ತನೆ ಇತ್ಯಾದಿಗಳ ಬಗ್ಗೆಯೂ ತನಿಖೆ ನಡೆಸಿದೆ. ಲೋಕಾಯುಕ್ತ ಪೊಲೀಸರ ತನಿಖಾ ವ್ಯಾಪ್ತಿಯಲ್ಲಿ ಇಡಿ ಪ್ರವೇಶಿಸಿದೆ. ಮುಡಾಗೆ ಹಿಂತಿರುಗಿಸಿರುವ 14 ನಿವೇಶನಗಳನ್ನು ಇಡಿ ಜಪ್ತಿ ಮಾಡಿಲ್ಲ. ಆದರೆ, ಇತರೆ 160 ನಿವೇಶನಗಳನ್ನು ಜಪ್ತಿ ಮಾಡಿಕೊಂಡಿದೆ.
ಇನ್ನು ಮುಡಾ ಪ್ರಕರಣದಲ್ಲಿ ಈಗಾಗಲೇ ಲೋಕಾಯುಕ್ತ ಪೊಲೀಸರು ಬಿ ರಿಪೋರ್ಟ್ ಸಲ್ಲಿಸಿದ್ದಾರೆ. ತನಿಖೆಯಲ್ಲಿ ಯಾವುದೇ ಅಕ್ರಮ ಕಂಡು ಬಂದಿಲ್ಲವೆಂದು ನ್ಯಾಯಾಲಯಕ್ಕೆ ಮಧ್ಯಂತರ ವರದಿ ನೀಡಿದ್ದಾರೆ.
ಸಿದ್ದರಾಮಯ್ಯ ಮಂಡಿಸಿದ್ದು ‘ಸಾಬ್ರ’ ಬಜೆಟ್? ಮಾಧ್ಯಮ, ಬಿಜೆಪಿ ಆರೋಪ ನಿಜವೆ?


