‘ಕರ್ನಾಟಕದ ಬಜೆಟ್ ಕುರಿತು ಬಿಜೆಪಿ ಟೀಕೆಗಳನ್ನು ನೋಡಿದರೆ ಬೇಸರವಾಗುತ್ತದೆ. ಆರ್ಥಿಕ ವಿದ್ಯಮಾನ, ಅಭಿವೃದ್ಧಿ ಬಗ್ಗೆ ಮಾತನಾಡದೆ; ಅದನ್ನು ಮುಸ್ಲಿಂಲೀಗ್ ಬಜೆಟ್ ಹಾಗೂ ಹಲಾಲ್ ಬಜೆಟ್ ಎನ್ನುತ್ತಿದ್ದಾರೆ. ಮತಾಂಧತೆಯ ಪರಿಭಾಷೆಯಲ್ಲಿ ಬಜೆಟ್ ವಿಶ್ಲೇಷಣೆ ನಡೆಸುತ್ತಿರುವುದು ದುರಂತ’ ಎಂದು ಆರ್ಥಿಕ ತಜ್ಞರಾದ ಪ್ರೊ. ಟಿ.ಆರ್.ಚಂದ್ರಶೇಖರ್ ಬೇಸರ ವ್ಯಕ್ತಪಡಿಸಿದರು.
‘ಸಂಯುಕ್ತ ಹೋರಾಟ-ಕರ್ನಾಟಕ’ ಬೆಂಗಳೂರಿನ ಗಾಂಧಿ ಭವನದಲ್ಲಿ ಆಯೋಜಿಸಿರುವ ಎರಡು ದಿನಗಳ ‘ಜನ ಚಳವಳಿಗಳ ಬಜೆಟ್ ಅಧಿವೇಶನ’ದಲ್ಲಿ ಮಾತನಾಡಿದ ಅವರು, “ಬಜೆಟ್‌ನಲ್ಲಿರುವ ಉದ್ಯೋಗ, ತೆರಿಗೆ, ಆಹಾರ ಹಾಗೂ ಕೃಷಿ ಸಂಬಂಧಿಸಿದ ವಿಷಯಗಳ ಬಗ್ಗೆ ಚರ್ಚೆ ನಡೆಸದೆ, ಅಲ್ಪಸಂಖ್ಯಾತರಿಗೆ ಕೇವಲ ಒಂದು ಸಾವಿರ ಕೋಟಿ ರೂಪಾಯಿ ಕೊಟ್ಟಿದ್ದಕ್ಕೆ ಈ ಪರಿಭಾಷೆ ಬಳಸುತ್ತಿರುವುದು ಅಸಹ್ಯಕರ. ಇದು ಉತ್ತರ ಭಾರತದಿಂದ ಎರವಲು ಪಡೆದದ್ದು. ಅಲ್ಪಸಂಖ್ಯಾತರು ಈ ನಾಡಿನ ಅವಿಭಾಜ್ಯ ಅಂಗ, ನಾಡಿನ ಜಿಡಿಪಿ ಅಭಿವೃದ್ದಿಗೆ ಸಾಕಷ್ಟು ಕೊಡುಗೆ ನೀಡಿದ್ದಾರೆ” ಎಂದರು.
“ಕುಂಭಮೇಳವನ್ನು ಅಭಿವೃದ್ಧಿ ಎಂದು ವರ್ಣಿಸಿದ ರಾಜ್ಯದ ಪರಿಸ್ಥಿತಿ ಏನಾಗಿದೆ ಎನ್ನುವುದು ನಮಗೆಲ್ಲಾ ಗೊತ್ತಿದೆ! ಉತ್ತರ ಪ್ರದೇಶದ ಜನಸಂಖ್ಯೆ 29 ಕೋಟಿ. ಆದರೆ, ದೇಶಕ್ಕೆ ಕರ್ನಾಟಕ ಕೊಡುತ್ತಿರುವಷ್ಟು ಜಿಡಿಪಿ ಕೊಡುಗೆ ಆ ರಾಜ್ಯ ಕೊಡುತ್ತಿಲ್ಲ. ಇಡೀ ದೇಶದಲ್ಲಿ ಕರ್ನಾಟಕ ನೇರ ತೆರಿಗೆ ಕೊಡುವುದರಲ್ಲಿ ಎರಡನೇ ಸ್ಥಾನದಲ್ಲಿದೆ; ಮಹಾರಾಷ್ಟ್ರ ಮೊದಲ ಸ್ಥಾನದಲ್ಲಿದೆ. ಕರ್ನಾಟಕ ಬಡ ರಾಜ್ಯವಲ್ಲ, ಶ್ರೀಮಂತ ರಾಜ್ಯವಾಗಿದ್ದು, ಇಡೀ ದೇಶದಲ್ಲಿ ಮೂರ್ನಾಲ್ಕು ರಾಜ್ಯಗಳು ಮಾತ್ರ ₹4 ಲಕ್ಷ ಕೋಟಿಗಿಂತ ಹೆಚ್ಚಿನ ವಾರ್ಷಿಕ ಬಜೆಟ್ ಹೊಂದಿವೆ. ಕರ್ನಾಟ ರಾಜ್ಯ ಸಮೃದ್ಧವಾಗಿದೆ; ಏಕೆಂದರೆ, ರಾಜ್ಯ ಅನುಸರಿಸುತ್ತಿರುವ ಸಾಮಾಜಿಕ ನ್ಯಾಯದಿಂದ” ಎಂದು ವಿಶ್ಲೇಷಿಸಿದರು.
“ಅಭಿವೃದ್ಧಿಯಲ್ಲಿ ಕರ್ನಾಟಕ ಮಾದರಿಯಾಗಿದೆ. ಇದೇ ಸಂದರ್ಭದಲ್ಲಿ ರಾಜ್ಯದ ಆಡಳಿತ ಎಷ್ಟು ಜನಪರ ಹಾಗೂ ಪ್ರಗತಿಪರವಾಗಿದೆ ಎಂಬುದನ್ನು ನೋಡಬೇಕು. ನಿರುದ್ಯೋಗ ನಿವಾರಣೆ ಮಾಡದ ಬಿಜೆಪಿಗೆ ಲೋಕಸಭೆ ಚುನಾಣೆಯಲ್ಲಿ ಜನರು ಬಹುಮತ ಕೊಡಲಿಲ್ಲ. ಆದರೂ, ಬಿಜೆಪಿ ಪಾಠ ಕಲಿತಿಲ್ಲ. ಬಡವರಿಗೆ ಬದುಕು ಕೊಡುವ ಯೋಜನೆ ಮನರೇಗಾ; ಕೇಂದ್ರದ ಬಿಜೆಪಿ ಸರ್ಕಾರ ಇದಕ್ಕೆ ಅನುದಾನ ಏರಿಕೆ ಮಾಡುತ್ತಲೇ ಇಲ್ಲ. ಕರ್ನಾಟಕ ಸರ್ಕಾರ ನಗರ ಪ್ರದೇಶದಲ್ಲೂ ಮನರೇಗಾ ಜಾರಿ ಮಾಡಬೇಕು. ಕೇರಳ, ಒಡಿಶಾ ಹಾಗೂ ತಮಿಳುನಾಡಿನಲ್ಲಿ ಈ ವಿಧಾನ ಜಾರಿಯಲ್ಲಿದೆ. ಆದ್ದರಿಂದ, ಕರ್ನಾಟಕ ಸರ್ಕಾರವೂ ಜಾರಿಗೊಳಿಸಬೇಕಿತ್ತು. ಈ ಬಜೆಟ್‌ನ ದೊಡ್ಡ ಮಿತಿ ಇದೇ..” ಎಂದರು.
“ವಿಷಾದದ ಸಂಗತಿಯೆಂದರೆ, ಗ್ಯಾರಂಟಿ ಬಗ್ಗೆ ಹಲವು ಟೀಕೆಗಳು ಬಂದವು. ಇದರಿಂದ ದುಡಿಯುವವರು ಸೋಮಾರಿಗಳಾಗುತ್ತಾರೆ ಎಂದು ಆರೋಪವನ್ನೂ ಮಾಡಿದರು. ಒಕ್ಕೂಟ ಸರ್ಕಾರದ ಅಧ್ಯಯನ ಪ್ರಕಾರ, ಈ ದೇಶದ ಗ್ರಾಮೀಣ ಕುಟುಂಬದ ಮಾಸಿಕ ಖರ್ಚು ಕೇವಲ ನಾಲ್ಕು ಸಾವಿರ ರೂಪಾಯಿ, ನಗರ ಪ್ರದೇಶದಲ್ಲಿ ಏಳು ಸಾವಿರ ರೂಪಾಯಿ ಇದೆ. ಇಷ್ಟು ಕಡಿಮೆ ಹಣದಲ್ಲಿ ಹೇಗೆ ಬದುಕು ಸಾಗಿಸಬಹುದು? ಕೋಟ್ಯಾಂತರ ಕಾರ್ಮಿಕರಿಗೆ ಅನುಕೂಲ ಮಾಡುವ ನಿಟ್ಟಿನಲ್ಲಿ ಅನ್ನಭಾಗ್ಯ ನೀಡಿದರೆ, ರಾಜ್ಯ ದಿವಾಳಿ ಆಗುತ್ತದೆ, ಖಜಾನೆ ಖಾಲಿ ಆಗುತ್ತದೆ ಎಂಬ ವಕ್ರ ಮಾತುಗಳನ್ನು ಆಡಿದ್ದು ನಾವು ಕಾಣಬಹುದು” ಎಂದು ಬೇಸರ ಹೊರಹಾಕಿದರು.

“ಕರ್ನಾಟಕದ ಜನ ಸೋಮಾರಿಗಳಾಗಿದ್ದರೆ ಕಳೆದ ವರ್ಷ 128 ಲಕ್ಷ ಟನ್ ಆಹಾರ ಉತ್ಪಾದನೆ ಆಗುತ್ತಿತ್ತಾ? ಓಎಫ್‌ಸಿ ಕೇಬಲ್ ಅಳವಡಿಸಲು ಆಳವಾದ ಗುಂಡಿ ತೆಗೆದ ಹೆಣ್ಣು ಮಕ್ಕಳು ಯಾರು? ಇದರಿಂದ ನಿಮ್ಮ ಮನೆಗೆ ಇಂಟರ್‌ನೆಟ್ ಬರುತ್ತಿದೆ” ಎಂದು ಗ್ಯಾರಂಟಿ ವಿರೋಧಿಸುವ ಜನರಿಗೆ ತಿರುಗೇಟು ಕೊಟ್ಟರು.
“ಕರ್ನಾಟಕದಲ್ಲಿ ಸ್ವ-ಉದ್ಯೋಗ ಮಾಡುತ್ತಿರುವ ಜನರ ಸಂಖ್ಯೆ 30 ಲಕ್ಷ ಇದೆ; ಅದರಲ್ಲಿ ಬೀದಿ ವ್ಯಾಪಾರಿಗಳು ಸೇರಿದ್ದಾರೆ. ಆದರೆ, ಅವರ ಮಾಸಿಕ ಆದಾಯ ಕೇವಲ ₹11 ಸಾವಿರ ಮಾತ್ರ; ಶೇ.52ರಷ್ಟಿದ್ದ ಸ್ವ-ಉದ್ಯೋಗ 58ಕ್ಕೆ ಏರಿಕೆಯಾಗಿದೆ ಎಂದು ಕೇಂದ್ರ ಸರ್ಕಾರ ಹೇಳುತ್ತದೆ. ತಿಂಗಳಿಗೆ 11 ಸಾವಿರ ಸಂಪಾದಿಸುವವರು ಉದ್ದಿಮೆದಾರರಾ? ದುಡಿಯುವವರ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗೌರವ ಇಲ್ಲ” ಎಂದರು.
“ಕುಂಭಮೇಳದಿಂದ ಕೋಟ್ಯಾಂತರ ಮಾನವ ದಿನಗಳು ನಷ್ಟ ಆಗಿದೆ. ಆದರೆ, ನಾರಾಯಣಮೂರ್ತಿ ವಾರಕ್ಕೆ 78 ಗಂಟೆ ದುಡಿಯಬೇಕು ಎಂದು ಮಾತನಾಡುತ್ತಾರೆ. ಕೇವಲ ವರಮಾನದ ಆಧಾರದಲ್ಲಿ ನೋಡುವುದಾದದರೆ, ಕರ್ನಾಟಕ ಆರ್ಥಿಕವಾಗಿ ಸಮೃದ್ಧವಾಗಿದೆ. ಆದರೆ, ಜನರು ಹಾಗೂ ಕೂಲಿಕಾರರು ಸಮೃದ್ಧವಾಗಿಲ್ಲ; ಮಹಿಳೆಯರ ಆರೋಗ್ಯ ಉತ್ತಮವಾಗಿಲ್ಲ. 2015-16ರಲ್ಲಿ ಮಹಿಳೆಯರ ರಕ್ತಹೀನತೆ ಪ್ರಮಾಣ ಏರಿಕೆ ಆಗಿದೆ. ಕರ್ನಾಟಕದ ಹಿಂದುಳಿದ ಜಿಲ್ಲೆಗಳಲ್ಲಿ 6 ವರ್ಷಕ್ಕಿಂತ ಕಡಿಮೆ ವಯಸ್ಸಿನ ಮಕ್ಕಳಲ್ಲಿ ಶೇ.70ರಷ್ಟು ರಕ್ತಹೀನತೆ ಇದೆ. ಇದರ ಬಗ್ಗೆ ಸರ್ಕಾರ ತೆಗೆದುಕೊಂಡ ಕ್ರಮ ಏನು? ಆಸ್ಪತ್ರೆಗಳಲ್ಲಿ ಕೊಟ್ಟ ಕಳಪೆ ಮಾತ್ರೆಗಳಿಂದ ಹಲವಾರು ಬಾಣಂತಿಯರು ಪ್ರಾಣ ಕಳೆದುಕೊಂಡಿದ್ದಾರೆ. ಸಿದ್ದರಾಮಯ್ಯ ಬಜೆಟ್‌ನಲ್ಲಿ ಇದರ ಬಗ್ಗೆ ಯಾವುದೇ ಯೋಜನೆಗಳಿಲ್ಲ” ಎಂದರು.

“ರಾಜ್ಯದ ವಾರ್ಷಿಕ ವರಮಾನ ₹21 ಲಕ್ಷ ಕೋಟಿ, ಗ್ಯಾರಂಟಿಗೆ ಕೊಟ್ಟಿರುವುದು ಕೇವಲ ₹51 ಸಾವಿರ ಕೋಟಿ; ಗ್ಯಾರಂಟಿ ನೀಡುವುದರಿಂದ ಕರ್ನಾಟಕ ದಿವಾಳಿ ಆಗುವುದಿಲ್ಲ. ಇದರಿಂದ ಆರ್ಥಿಕ ಚಟುವಟಿಕೆಗಳಲ್ಲಿ ಮಹಿಳೆಯ ಭಾಗವಹಿಸುವವಿಕೆ ಹೆಚ್ಚಾಗುತ್ತದೆ, ಅದನ್ನು ಸರಿಯಾದ ರೀತಿಯಲ್ಲಿ ಅರ್ಥ ಮಾಡಿಕೊಳ್ಳದೆ ವಿಪಕ್ಷಗಳು ಟೀಕೆ ಮಾಡುತ್ತಿವೆ. ಗ್ಯಾರಂಟಿ ಯೋಜನೆ ಜನರ ಬದುಕಿಗೆ ಸಂಬಂಧಿಸಿದ ಬಂಡವಾಳ ನಿಯೋಜನೆ; ಇದರಿಂದ ರಾಜ್ಯದ ಆರ್ಥಿಕತೆಗೆ ಯಾವುದೇ ತೊಂದರೆ ಇಲ್ಲ” ಎಂದರು.
“ಕೇಂದ್ರ ಸರ್ಕಾರ ಅಭಿವೃದ್ಧಿ ಮಾದರಿಯನ್ನು ಹೆದ್ದಾರಿ, ಬಂದರು, ವಿಮಾನ ನಿಲ್ದಾಣದಲ್ಲಿ ನೋಡುತ್ತಿದೆ.. ಜನರ ಅಭಿವೃದ್ಧಿ ನೆಲೆಯಲ್ಲಿ ಮೋದಿ ಸರ್ಕಾರ ನೋಡುತ್ತಿಲ್ಲ. ಕರ್ನಾಟಕ ಸರ್ಕಾರದ ಬಜೆಟ್‌ನಲ್ಲಿ ಜನಪರ ಆಯಾಮಕ್ಕೆ ಹೆಚ್ಚಿನ ಗಮನ ಕೊಡದೇ ಇರುವುದಕ್ಕೆ ಸಾಧ್ಯವಾಗುತ್ತಿಲ್ಲ, ಅದಕ್ಕೆ ಕಾರಣ ಹಣಕಾಸಿನ ಕೊರತೆ. ಅಂದರೆ, ಕರ್ನಾಟಕ ಸರ್ಕಾರ ಸರಿಯಾಗಿ ನಿರ್ವಹಿಸುತ್ತಿಲ್ಲ ಎಂದಲ್ಲ, ಅದಕ್ಕೆ ಮುಖ್ಯವಾದ ಕಾರಣ ಕೇಂದ್ರ ಸರ್ಕಾರ ಕರ್ನಾಟಕಕ್ಕೆ ಕೊಡಬೇಕಾದ ಹಕ್ಕಿನ ಪಾಲು ನೀಡುತ್ತಿಲ್ಲ. 15ನೇ ಹಣಕಾಸು ಆಯೋಗದಲ್ಲಿ ಪ್ರತಿವರ್ಷ 11 ಸಾವಿರ ಕೋಟಿ ಕಡಿತ ಮಾಡಿದೆ” ಎಂದು ವಿವರಿಸಿದರು.
“ಒಕ್ಕೂಟ ವ್ಯವಸ್ಥೆಯಲ್ಲಿ ಸೆಸ್ ಮತ್ತು ಸರ್ಚಾರ್ಜ್‌ಗಳನ್ನು ರಾಜ್ಯದೊಂದಿಗೆ ಹಂಚಿಕೊಳ್ಳಬೇಕು. ಆದರೆ, ಅದು ಆಗುತ್ತಿಲ್ಲ. ಒಕ್ಕೂಟ ಸರ್ಕಾರದ ಬಗ್ಗೆ ಕೇಂದ್ರ ಸರ್ಕಾರಕ್ಕೆ ಗೌರವ ಇಲ್ಲ. ತಮಿಳುನಾಡು ಮಾದರಿಯಲ್ಲಿ ಕರ್ನಾಟಕ ಸರ್ಕಾರವೂ ಹೋರಾಟ ನಡೆಸುವುದು ಅನಿವಾರ್ಯ; ರಾಜ್ಯದ ಮೇಲೆ ಹಿಂದಿ ಹೇರಿಕೆ, ಎನ್‌ಇಪಿ ಜಾರಿ ವಿರುದ್ಧ ಪ್ರತಿಭಟಿಸಬೇಕು. ಆದರೆ, ಒಂದು ಇತಿಮಿತಿಯೊಳಗೆ ಕರ್ನಾಟಕ ಬಜೆಟ್ ಜನಪರ ಹಾಗೂ ಅಭಿವೃದ್ಧಿ ಪರವಾಗಿದೆ” ಎಂದರು.
ಶಾಸಕಾಂಗ-ಕಾರ್ಯಾಂಗ ವಿಫಲವಾಗಿರುವುದರಿಂದ ‘ಜನಚಳವಳಿಗಳ ಬಜೆಟ್’
ರಾಜ್ಯ ರೈತ ಸಂಘದ ಬಡಗಲಪುರ ನಾಗೇಂದ್ರ ಮಾತನಾಡಿ, “ಪ್ರಜಾಪ್ರಭುತ್ವದಲ್ಲಿ ಶಾಸಕಾಂಗ, ಕಾರ್ಯಾಂಗ, ನ್ಯಾಯಾಂಗ ಪ್ರಮುಖ ಅಂಗಗಳು. ನ್ಯಾಯಾಂಗಕ್ಕೆ ಶಾಸಕಾಂಗದಲ್ಲಿ ಹಸ್ತಕ್ಷೇಪ ಮಾಡುವ ಅಧಿಕಾರದಲ್ಲಿ ಮಿತಿಯಿದೆ. ಆದರೆ, ಪ್ರಜಾಪ್ರಭುತ್ವದಲ್ಲಿ ಶಾಸಕಾಂಗಕ್ಕೆ ಪರಮೋಚ್ಚ ಅಧಿಕಾರ ಇದೆ. ಏಕೆಂದರೆ, ಅವರು ಜನರಿಂದ ಆಯ್ಕೆಯಾದವರು. ಶಾಸಕಾಂಗ ವಿಫಲವಾದರೆ ಕಾರ್ಯಂಗ ಏನೂ ಮಾಡಲು ಸಾಧ್ಯವಿಲ್ಲ. ಇದು ಪ್ರಜಾಪ್ರಭುತ್ವ ಸರ್ಕಾರವಾಗಿದ್ದು, ಎಲ್ಲ ಅಂಗಗಳು ವಿಫಲವಾದಾಗ ಜನರು ಅದನ್ನು ಸರಿಪಡಿಸಬೇಕು. ಆದ್ದರಿಂದಲೇ, ಈ ಜನ ಚಳವಳಿಗಳ ಬಜೆಟ್ ಅಧಿವೇಶನ. ಶಾಸಕಾಂಗ ಹಾಗೂ ಕಾರ್ಯಾಂಗ ಇದರಲ್ಲಿ ಸಂಪೂರ್ಣ ವಿಫಲವಾಗಿದೆ” ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ಕಿಡಿಕಾರಿದರು.
“ವೈಯಕ್ತಿಕವಾಗಿ ಸಿದ್ದರಾಮಯ್ಯ ಅವರ ಬಗ್ಗೆ ನನಗೆ ಗೌರವ ಇದೆ. ಆದರೆ, ಸರ್ಕಾರ ಏನು ಮಾಡುತ್ತಿದೆ ಎಂಬುದನ್ನು ನಾವು ವಿಮರ್ಷೆ ಮಾಡಬೇಕು. ಏಕೆಂದರೆ, ಅದು ನಮ್ಮ ಹೊಣೆಗಾರಿಕೆ ಹಾಗೂ ಕರ್ತವ್ಯ. ನಾವು ಕೇಂದ್ರ ಸರ್ಕಾರವನ್ನು ವಿರೋಧಿಸುವುದಕ್ಕೆ ಸಾಧ್ಯವಿಲ್ಲ; ಅವರದ್ದು ಕಾರ್ಪೊರೇಟ್ ಪರವಾದ ನೀತಿ, ಅದನ್ನು ಅವರು ಅಂದುಕೊಂಡಂತೆ ಜಾರಿ ಮಾಡುತ್ತಿದ್ದಾರೆ. ಬಂಡವಾಳಶಾಹಿ ನೀತಿ ಒಪ್ಪಿಕೊಂಡಿರುವ ಸರ್ಕಾರ ಈಗ ಕೇಂದ್ರದಲ್ಲಿದೆ. ಈ ವಿಚಾರದಲ್ಲಿ ನಾವು ಅಸಹಾಯಕರಾಗಿದ್ದೇವೆ ಎಂದು ಹೇಳಿದರೆ ಸರಿಯಾಗುವುದಿಲ್ಲ. ನಾವು ಪರ್ಯಾಯವಾಗಿ ಒಂದು ಚಳವಳಿ ಕಟ್ಟಬೇಕು, ಅದಕ್ಕಾಗಿಯೇ ಈ ಜನ ಚಳವಳಿಗಳ ಬಜೆಟ್ ಅಧಿವೇಶನ” ಎಂದರು.
“ಮೇಲ್ನೋಟಕ್ಕೆ ಸಿದ್ದರಾಮಯ್ಯ ಬಜೆಟ್ ಎಲ್ಲರಿಗೂ ನ್ಯಾಯ ಒದಗಿಸುತ್ತದೆ. ಆದರೆ, ಆಳವಾಗಿ ನೋಡಿದರೆ ಇದಕ್ಕೆ ಒಂದು ನೀತಿ ಹಾಗೂ ದಿಕ್ಕಿಲ್ಲ. ಓರ್ವ ರೈತ ನಾಯಕನಾಗಿ ನಾನು ಇದನ್ನು ಹೇಳುತ್ತಿದ್ದೇನೆ, ಸಂಪೂರ್ಣವಾಗಿ ಇದು ದುಡಿಯುವ ವರ್ಗದ ವಿರೋಧಿ ಬಜೆಟ್; ಕರ್ನಾಟಕದಲ್ಲಿ ದುಮಾರು 4.5 ಕೋಟಿ ರೈತರಿದ್ದೇವೆ. ಅದರಲ್ಲಿ ಭೂಮಿ ಇಲ್ಲದ ಬಹುಪಾಲು ಜನರಿದ್ದಾರೆ. ಪಶುಸಂಗೋಪನೆ ಹಾಗೂ ಮೀನುಗಾರಿಕೆಗೆ ಒಂದು ಪರ್ಸೆಂಟ್ ಕೊಟ್ಟಿದ್ದಾರೆ. ಕೃಷಿಗೆ ಕೇವಲ ಶೇ.2 ಇದೆ. ಶೇ.60ರಷ್ಟಿರುವ ಜನರಿಗೆ ಇಷ್ಟು ಕಡಿಮೆ ಹಣ ಮೀಸಲಿಟ್ಟಿದ್ದು ಸರಿಯೇ? ಆದರೆ, ಗ್ಯಾರಂಟಿಯನ್ನು ನಾವು ಒಪ್ಪಿಕೊಂಡು ಸಾಮಾಜಿಕ ಬಂಡವಾಳ ಹೂಡಿಕೆ ಎಂದು ಸ್ವಾಗತಿಸಿದ್ದೇವೆ” ಎಂದು ಹೇಳಿದರು.
“ಇದು ಬೆಂಗಳೂರು ಕೇಂದ್ರಿತ ಬಜೆಟ್, ಬೆಂಗಳೂರು ಬೆಳೆಯುತ್ತಿದೆ. ಸ್ಪಷ್ಟವಾದ ಗ್ರಾಮೀಣ ನೀತಿ ಇಲ್ಲದೇ ಇರುವುದರಿಂದ ರಾಜಧಾನಿ ಇಂದು ಬೆಳೆಯುತ್ತಿದೆ. ಆದರೆ, ಬೆಂಗಳೂರು ಮುಂದಿನ ದಿನಗಳಲ್ಲಿ ಕೊಳಗೇರಿ ಆಗುತ್ತದೆ. ಗ್ರಾಮೀಣ ಭಾಗದಲ್ಲಿ ಮೂಲಭೂತ ಸೌಕರ್ಯ ಕೊಟ್ಟರೆ ನಮ್ಮ ಜನ ಅಲ್ಲೇ ದುಡಿಯುತ್ತಾರೆ. ಅಲ್ಲಿಂದಲೇ ಆರ್ಥಿಕತೆಗೆ ಸಾಕಷ್ಟು ಕೊಡುಗೆ ನೀಡುತ್ತಾರೆ. ಇಲ್ಲದಿದ್ದರೆ, ಬೆಂಗಳೂರು ವಕ್ರವಾಗಿ ಬೆಳೆಯುತ್ತದೆ. ಒಟ್ಟು ಬಜೆಟ್‌ನಲ್ಲಿ ಶೇ.25 ರಷ್ಟು ಬೆಂಗಳೂರಿಗೆ ನೀಡಿದ್ದಾರೆ, ಉಳಿದ ಪ್ರದೇಶ ಏನಾಗಬೇಕು” ಎಂದು ಸರ್ಕಾರವನ್ನು ಪ್ರಶ್ನಿಸಿದರು.
“380 ದಿನಗಳ ಕಾಲ ನಾವು ಐತಿಹಾಸಿಕ ರೈತ ಆಂದೋಲನ ನಡೆಸಿದ್ದೇವೆ. ಪ್ರಭುತ್ವ ನಮ್ಮ ಚಳವಳಿ ದಮನ ಮಾಡುವುದಕ್ಕೆ ಹಲವು ರೀತಿಯ ಕೆಲಸ ಮಾಡಿದೆ. ಆದರೆ, ಬೇರೆಬೇರೆ ದೇಶಗಳ ಪಾರ್ಲಿಮೆಂಟ್ ನಮ್ಮ ಪರವಾಗಿ ಧ್ವನಿಯಾಗಿವೆ. ಏಕೆಂದರೆ, ಇದು ಸ್ವತಂತ್ರ ಚಳವಳಿಯ ಮುಂದುವರಿದ ಭಾಗವಾಗಿತ್ತು. ಆಗ ಕಾಂಗ್ರೆಸ್ ಕೂಡ ರೈತ ಚಳವಳಿಗೆ ಬೆಂಬಲಿಸಿತ್ತು. ಅಧಿಕಾರಕ್ಕೆ ಬಂದರೆ ಸ್ವಾಮಿನಾಥನ್ ವರದಿ ಜಾರಿ ಮಾಡುವುದಾಗಿ ಭರವಸೆ ನೀಡಿತ್ತು. ರಾಜ್ಯ ಕಾಂಗ್ರೆಸ್ ಸರ್ಕಾರ ಮಾಡುತ್ತಿರುವುದು ಏನು? ಹಿಂದಿನ ಅವಧಿಯಲ್ಲಿ ಸಿದ್ದರಾಮಯ್ಯ ಕೃಷಿ ಬೆಲೆ ಆಯೋಗ ಸ್ಥಾಪನೆ ಮಾಡಿದ್ದಾರೆ. ಆದರೆ, ಕೃಷಿ ಬೆಲೆ ಆಯೋಗಕ್ಕೆ ಶಾಸನಾತ್ಮಕ ಅಧಿಕಾರ ನೀಡಿಲ್ಲ. ಭೂ ಸುಧಾರಣಾ ಕಾಯ್ದೆ ವಾಪಸ್ ಪಡೆದರೆ ಈ ಸರ್ಕಾರಕ್ಕೆ ಹಣವೇನೂ ಖರ್ಚಾಗುವುದಿಲ್ಲ. ಆದರೆ, ಯಾಕೆ ಮಾಡುತ್ತಿಲ್ಲ? ಜಾನುವಾರು ಹತ್ಯೆ ನಿಷೇಧ ಕಾಯ್ದೆ ರೈತ ವಿರೋಧಿಯಾಗಿದೆ. ಬಿಜೆಪಿ ಧಾರ್ಮಿಕವಾಗಿ ಏನೇ ಹೇಳಿದರೂ ನೀವು ಅದನ್ನು ವಾಪಸ್ ಪಡೆಯಬೇಕಿತ್ತು. ನೀವು ಬಿಜೆಪಿಗಿಂತ ಹೇಗೆ ಭಿನ್ನ? ಕೇಂದ್ರ ಮೂರು ಕೃಷಿ ಕಾನೂನುಗಳನ್ನು ನೀವು ಮುಂದುರಿದ್ದೀರ” ಎಂದು ವಾಗ್ದಾಳಿ ನಡೆಸಿದರು.
“ಕೇಂದ್ರದ ಕಾನೂನುಗಳಿಗೆ ನಮ್ಮ ವಿರೋಧ ಇದೆ ಎಂದು ಕಾಂಗ್ರೆಸ್ ಸರ್ಕಾರ ಒಂದು ಮಾತೂ ಈ ಬಜೆಟ್‌ನಲ್ಲಿ ಹೇಳಿಲ್ಲ. ಯಾಕೆ ಸಾಧ್ಯವಿಲ್ಲ? ಬಿಜೆಪಿ ಸರ್ಕಾರದ ನೀತಿಯನ್ನು ನೀವು ಒಪ್ಪಿಕೊಂಡಿದ್ದೀರಾ ಎಂದಾಗುತ್ತದೆ. ಪಂಜಾಬ್ ಸೇರಿದಂತೆ ಹಲವು ರಾಜ್ಯಗಳ ವಿರೋಧಿಸಿರುವಾಗ ಸಿದ್ದರಾಮಯ್ಯ ಅವರಿಗೆ ಏಕೆ ಸಾಧ್ಯವಿಲ್ಲ. ಆದ್ದರಿಂದ, ಕರ್ನಾಟಕ ಸರ್ಕಾರದ ಮೂರನೇ ಬಜೆಟ್‌ಗೆ ಯಾವುದೇ ನೀತಿ ಇಲ್ಲ. ಇವರು ಬಿಜೆಪಿ ಸರ್ಕಾರದ ನೀತಿಗಳನ್ನು ಮುಂದುವರಿಸುತ್ತಿದ್ದಾರೆ” ಎಂದರು.
ಕೇಂದ್ರದಿಂದ ವಿಷದ ಬಾಟಲಿ, ರಾಜ್ಯ ಸರ್ಕಾರದಿಂದ ವಿಷದ ಮಾತ್ರೆ: ಎಚ್.ಆರ್. ಬಸವರಾಜಪ್ಪ
ಬಜೆಟ್‌ನಲ್ಲಿ ಕೇಂದ್ರ ಸರ್ಕಾರ ನಮಗೆ ವಿಷದ ಬಾಟಲಿ ಕೊಟ್ಟರೆ, ರಾಜ್ಯ ಸರ್ಕಾರದಿಂದ ವಿಷದ ಮಾತ್ರೆ ಕೊಟ್ಟಿದ್ದಾರೆ ಎಂದು ರೈತ ಸಂಘದ ಮುಖಂಡರಾದ ಎಚ್.ಆರ್. ಬಸವರಾಜಪ್ಪ ವಾಗ್ದಾಳಿ ನಡೆಸಿದರು.
‘ಜನ ಚಳವಳಿಗಳ ಬಜೆಟ್ ಅಧಿವೇಶನ’ದ ಅಧ್ಯಕ್ಷತೆ ವಹಿಸಿ ಮಾತನಾಡಿದ ಅವರು, “ರೈತ ಚಳವಳಿ ಹಿನ್ನೆಲೆಯಿಂದ ಬಂದಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ರೈತರು, ಕಾರ್ಮಿಕರು ಹಾಗೂ ಶ್ರಮಿಕರ ಪರವಾಗಿ ಬಜೆಟ್ ಮಂಡಿಸುತ್ತಾರೆ ಎಂಬ ನಮ್ಮ ನಿರೀಕ್ಷೆ ಹುಸಿಯಾಗಿದೆ. ಕೇಂದ್ರ ಸರ್ಕಾರ ನಮಗೆ ವಿಷದ ಬಾಟಲಿ ಕೊಟ್ಟರೆ, ರಾಜ್ಯ ಸರ್ಕಾರ ವಿಷದ ಮಾತ್ರೆ ಕೊಡುತ್ತಿದೆ. ಈ ಬಜೆಟ್ ಬಂಡವಾಳಶಾಹಿಗಳ ಆದಾಯ ಹೆಚ್ಚಿಸುತ್ತದೆ, ಬಡವರ ಪರವಾಗಿಲ್ಲ. ಬರೀ ಗಣಿ, ಅಬಕಾರಿ ಮತ್ತು ಮುದ್ರಾಂಕ ಶುಲ್ಕಕ್ಕೆ ಹೆಚ್ಚಿನ ಆದ್ಯತೆ ನೀಡಿದ್ದಾರೆ” ಎಂದರು.
“ಗಣಿಯಿಂದ ಆಗುವ ಪರಿಸರ ಹಾನಿಗೆ ಹೊಣೆ ಯಾರು? ಅದರಿಂದ ಯಾರಿಗೆ ಲಾಭವಾಗುತ್ತದೆ? ಬಡವರಿಗೆ ಲಾಭ ಇದೆಯಾ? ಸರ್ಕಾರ ಅಬಕಾರಿ ಲಾಭವನ್ನು ಬಡವರಿಂದ ನಿರೀಕ್ಷೆ ಮಾಡುತ್ತಿದೆ; ಅದೇ ಹಣದಲ್ಲಿ ಗ್ಯಾರಂಟಿಗೆ ಹಣ ಕೊಡುತ್ತಿದ್ದಾರೆ. ಜನ ಕುಡಿತದ ದಾಸರಾಗಿ ಖಜಾನೆ ತುಂಬಿಸುತ್ತಿದ್ದಾರೆ, ಕುಡಿತದಿಂದ ಜನರ ಆರೋಗ್ಯ ಹಾಳಾಗುತ್ತಿದೆ. ಜನಸಾಮಾನ್ಯರ ಆರ್ಥಿಕ ಸ್ಥಿತಿ ಸುಧಾರಿಸುವುದೇ ನಿಜವಾದ ಬಜೆಟ್. ಆದರೆ, ಈ ಬಜೆಟ್ ಶ್ರೀಮಂತರನ್ನು ಮತ್ತಷ್ಟು ಶ್ರೀಮಂತರನ್ನಾಗಿ ಮಾಡುವುದಾಗಿದೆ. ಈಗಿನ ನೀತಿಗಳ ಬಡವರನ್ನು ಮತ್ತಷ್ಟು ಬಡವರನ್ನಾಗಿಸುತ್ತಿದ್ದು, ಸಮಾನತೆ ತರುತ್ತಿಲ್ಲ” ಎಂದು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದರು.

“ಬಂಡವಾಳಶಾಹಿಗಳು ಭೂಮಿ ಬೆಲೆಯನ್ನು ಏರಿಸಿದ್ದಾರೆ; ಈಗಿನ ಬೆಲೆಯಲ್ಲಿ ರೈತರಿಗೆ ಭೂಮಿ ಕೊಳ್ಳಲು ಸಾಧ್ಯವಿಲ್ಲ. ಭೂಮಿಯನ್ನು ಕಾರ್ಪೊರೇಟ್ ಕಂಪನಿಗಳಿಗೆ ಕೊಡುತ್ತಿದ್ದಾರೆ. ನಾವು ಎಲ್ಲವನ್ನೂ ಬೆಳೆದು ಪೇಟೆಗಳಿಗೆ ಕೊಡುತ್ತಿದ್ದೇವೆ. ಆದರೆ, ಶ್ರೀಮಂತರಿಗೂ ಹಾಲನ್ನು ಕಡಿಮೆ ಬೆಲೆಗೆ ನಮ್ಮಿಂದ ಕೊಡಿಸುತ್ತಿದ್ದೀರಾ.. ಅವರಿಗೆ ಕಡಿಮೆ ಬೆಲೆ ಅಕ್ಕಿ ಕೊಡಿಸುತ್ತಿದ್ದೀರಾ.. ಬಡವರಿಗೆ ಕೊಟ್ಟರೆ ಬೇಡ ಎನ್ನುವುದಿಲ್ಲ. ಆದರೆ, ಶ್ರೀಮಂತರಿಗೆ ಯಾಕೆ ಇಷ್ಟು ಕಡಿಮೆ ಬೆಲೆಗೆ ಕೊಡಬೇಕು? ರೈತರಿಗೆ ಸಬ್ಸಿಡಿ ಬೇಡ, ನಮ್ಮ ಬೆಳೆಗಳಿಗೆ ಸೂಕ್ತ ಬೆಲೆ ಕೊಡಿ. ಏಕೆಂದರೆ, ಅರ್ಧ ಬೆಲೆಗೆ ಈ ದೇಶದ ಜನರ ಹೊಟ್ಟೆ ತುಂಬಿಸುತ್ತಿದ್ದೇವೆ” ಎಂದರು.
“ಒಂದು ಎಕರೆ, ಎರಡು ಎಕರೆ ಭೂಮಿ ಇಟ್ಟುಕೊಂಡಿದ್ದ ಭೂ ಮಾಲೀಕರನ್ನು ಇಂದು ಕಾರ್ಮಿಕರನ್ನಾಗಿ ಮಾಡುತ್ತಿದ್ದಾರೆ. ಭೂಮಿಯನ್ನು ಬಲವಂತಾಗಿ ಕಿತ್ತುಕೊಂಡು, ಕೈಗಾರಿಕೆಗಳಿಗೆ ಕೊಡುವುದಕ್ಕೆ ನಮ್ಮ ವಿರೋಧವಿದೆ. ಕೈಗಾರಿಕೆಗಳಿಗೆ ಕೊಡುವ ಭೂಮಿಗೆ ನಾವೇ ಮಾಲೀಕರಾಗಿರಬೇಕು. ಅದರಲ್ಲಿ ನಡೆಸುವ ಗಣಿಗಾರಿಕೆಯಲ್ಲಿ ಮಾಲೀಕರಿಗೂ ಪಾಲು ಇರಬೇಕು. ಮೂಲ ಬಂಡವಾಳ ಭೂಮಿ ಆಗಿದೆ; ನಮ್ಮಿಂದ ಭೂಮಿ ಕಿತ್ತುಕೊಂಡು ನಿರ್ಗತಿಕರಾಗಿ ಮಾಡಬೇಡಿ. ರೈತರು ಯಾರ ಮುಂದೆಯೂ ಕೈ ಚಾಚಿದವರಲ್ಲ; ಈ ದೇಶವನ್ನು ಸಾಕಿ ಸಲಹಿದವರು. ಕೇಂದ್ರ ಮತ್ತು ರಾಜ್ಯ ಎರಡೂ ಬಜೆಟ್‌ಗಳು ಜನ ವಿರೋಧಿ ಆಗಿವೆ, ನಾವು ಎರಡನ್ನೂ ವಿರೋಧಿಸುತ್ತೇವೆ” ಎಂದು ಹೇಳಿದರು.
ಭೂಮಿ-ವಸತಿ ಹಕ್ಕಿಗಾಗಿ ‘ಬೆಂಗಳೂರು ಚಲೋ’; ಫ್ರೀಡಂ ಪಾರ್ಕಿನಲ್ಲಿ ಪ್ರತಿಭಟನೆ


