ಮಾರ್ಚ್ 9ರಂದು ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ಭಾರತ ಜಯಗಳಿಸಿದ ಬಳಿಕ ಮಧ್ಯ ಪ್ರದೇಶದ ದೇವಾಸ್‌ನಲ್ಲಿ ನಡೆದ ಸಂಭ್ರಮಾಚರಣೆ ವೇಳೆ, ಪೊಲೀಸ್ ಸಿಬ್ಬಂದಿಯೊಂದಿಗೆ ಘರ್ಷಣೆ ನಡೆಸಿದ ಆರೋಪದ ಮೇಲೆ ಬಂಧನಕ್ಕೊಳಗಾದ ಒಂಬತ್ತು ಯುವಕರ ತಲೆ ಬೋಳಿಸಿ ವಿಕೃತಿ ಮೆರೆದ ಬಗ್ಗೆ ವರದಿಯಾಗಿದೆ.
ಪೊಲೀಸರು ಬಂಧಿತ ಯುವಕರ ತಲೆ ಬೋಳಿಸಿ, ಅವರನ್ನು ರಸ್ತೆಯಲ್ಲಿ ಮೆರವಣಿಗೆ ಮಾಡಿದ್ದಾರೆ ಎನ್ನಲಾಗಿದ್ದು, ಮಂಗಳವಾರ (ಮಾ.12) ಈ ಕುರಿತ ವಿಡಿಯೋಗಳು ವೈರಲ್ ಆದ ಬಳಿಕ ಆಕ್ರೋಶ ಭುಗಿಲೆದ್ದಿದೆ.
ಪೊಲೀಸರ ಕ್ರಮವನ್ನು ದೇವಾಸ್ ಬಿಜೆಪಿ ಶಾಸಕಿ ಗಾಯತ್ರಿ ರಾಜೇ ಪವಾರ್ ಖಂಡಿಸಿದ್ದು, “ಪೊಲೀಸರು ಅಮಾಯಕರನ್ನು ಬಂಧಿಸಿದ್ದಾರೆ. ಬಂಧನದಲ್ಲಿರುವವರು ನಿರಪರಾಧಿಗಳು” ಎಂದಿದ್ದಾರೆ.
ದೇವಾಸ್ ಪೊಲೀಸ್ ವರಿಷ್ಠಾಧಿಕಾರಿ ಪುನೀತ್ ಗೆಹ್ಲೋಡ್ ಅವರನ್ನು ಭೇಟಿಯಾದ ಶಾಸಕಿ, ಈ ವಿಷಯದ ಬಗ್ಗೆ ಸಮಗ್ರ ತನಿಖೆ ನಡೆಸುವಂತೆ ಮನವಿ ಮಾಡಿದ್ದಾರೆ.
ಈ ಹಿನ್ನೆಲೆ, ಪೊಲೀಸರೊಂದಿಗೆ ಯುವಕರ ಘರ್ಷಣೆ, ಅವರ ತಲೆ ಬೋಳಿಸಿ ಮೆರವಣಿಗೆ ಮಾಡಿರುವುದು ಮತ್ತು ವಿವೇಚನಾರಹಿತ ಬಲಪ್ರಯೋಗ ಸೇರಿದಂತೆ ಇಡೀ ಪ್ರಕರಣದ ತನಿಖೆ ಮಾಡುವ ಜವಾಬ್ದಾರಿಯನ್ನು ಹೆಚ್ಚುವರಿ ಎಸ್ಪಿ ಜೈವೀರ್ ಸಿಂಗ್ ಭಡೋರಿಯಾ ಅವರಿಗೆ ವಹಿಸಲಾಗಿದೆ. ಏಳು ದಿನಗಳಲ್ಲಿ ಒಟ್ಟಾರೆ ಪ್ರಕರಣದ ವರದಿ ನೀಡುವಂತೆ ಸೂಚಿಸಲಾಗಿದೆ.
“ನಾವು ಈ ವಿಷಯವನ್ನು ಎಲ್ಲಾ ಕೋನಗಳಿಂದ ತನಿಖೆ ಮಾಡುತ್ತೇವೆ. ಏಳು ದಿನಗಳಲ್ಲಿ ಎಲ್ಲಾ ವಿಷಯವನ್ನು ಬಹಿರಂಗಪಡಿಸುತ್ತೇವೆ. ತಪ್ಪಿತಸ್ಥರ ವಿರುದ್ದ ಕ್ರಮ ಕೈಗೊಳ್ಳುತ್ತೇವೆ” ಎಂದು ಎಸ್ಪಿ ಗೆಹ್ಲೋಡ್ ಸುದ್ದಿ ಸಂಸ್ಥೆ ಎಎನ್‌ಐಗೆ ತಿಳಿಸಿದ್ದಾರೆ.
ಮಾರ್ಚ್ 9ರ ರಾತ್ರಿ ಭಾರತೀಯ ಪುರುಷರ ಕ್ರಿಕೆಟ್ ತಂಡ ಐಸಿಸಿ ಚಾಂಪಿಯನ್ಸ್ ಟ್ರೋಫಿಯಲ್ಲಿ ನ್ಯೂಜಿಲೆಂಡ್ ಅನ್ನು ಸೋಲಿಸಿ ಪ್ರಶಸ್ತಿ ಗೆದ್ದ ನಂತರ, ದೇವಾಸ್‌ನ ಕೆಲವು ಭಾಗಗಳಲ್ಲಿ ಘರ್ಷಣೆಗಳು ಮತ್ತು ವಿಧ್ವಂಸಕ ಕೃತ್ಯಗಳು ನಡೆದಿರುವ ಬಗ್ಗೆ ವರದಿಯಾಗಿವೆ. ಅಂತಹ ಒಂದು ಘಟನೆಯಲ್ಲಿ, ಪಟಾಕಿ ಸಿಡಿಸುವುದಕ್ಕೆ ಸಂಬಂಧಿಸಿದಂತೆ ಕೆಲವು ಯುವಕರು ಕೊತ್ವಾಲಿ ಪೊಲೀಸ್ ಠಾಣೆಯ ಉಸ್ತುವಾರಿ ಅಜಯ್ ಗುರ್ಜರ್ ಅವರೊಂದಿಗೆ ಅನುಚಿತವಾಗಿ ವರ್ತಿಸಿದ್ದಾರೆ ಎಂದು ಆರೋಪಿಸಲಾಗಿದೆ.
ಬಂಗಾಳದಲ್ಲಿ ಬಿಜೆಪಿ ಗೆದ್ದ ಬಳಿಕ ಮುಸ್ಲಿಂ ಶಾಸಕರನ್ನು ವಿಧಾನಸಭೆಯಿಂದ ಹೊರಕ್ಕೆ ಎಸೆಯುತ್ತೇವೆ : ಸುವೇಂದು ಅಧಿಕಾರಿ


