Homeಮುಖಪುಟಝಾಕಿಯಾ ಜಾಫ್ರಿ: ವೈಯಕ್ತಿಕ ದುರಂತದಾಚೆಗೆ ನ್ಯಾಯಕ್ಕಾಗಿ ಹೋರಾಡಿದ ದಿಟ್ಟ ಮಹಿಳೆ

ಝಾಕಿಯಾ ಜಾಫ್ರಿ: ವೈಯಕ್ತಿಕ ದುರಂತದಾಚೆಗೆ ನ್ಯಾಯಕ್ಕಾಗಿ ಹೋರಾಡಿದ ದಿಟ್ಟ ಮಹಿಳೆ

- Advertisement -
- Advertisement -

2002ರ ಗುಜರಾತ್ ಹತ್ಯಾಕಾಂಡದ ಸಂತ್ರಸ್ತರಿಗೆ ನ್ಯಾಯ ದೊರಕಿಸಿಕೊಡಲೆಂದು ಎರಡು ದಶಕಗಳಿಗೂ ಹೆಚ್ಚುಕಾಲ ಕಾನೂನು ಹೋರಾಟ ನಡೆಸಿದವರು ಝಾಕಿಯಾ ಜಾಫ್ರಿ. ಅವರು ಫೆಬ್ರವರಿ 1ರಂದು ಅಹಮದಾಬಾದ್‌ನಲ್ಲಿ ತಮ್ಮ86ನೇ ವಯಸ್ಸಿನಲ್ಲಿ ನಮ್ಮನ್ನಗಲಿದರು. ಹತ್ಯಾಕಾಂಡದಲ್ಲಿ ಅಹಮದಾಬಾದ್‌ನ ಮುಸ್ಲಿಂ ಬಾಹುಳ್ಯವುಳ್ಳ ಪ್ರದೇಶ ಗುಲ್ಬರ್ಗ ಸೊಸೈಟಿಯಲ್ಲಿ 69 ಜನರ ಕೊಲೆಯಾಗಿದ್ದರು. ಅವರಲ್ಲಿ ಮಾಜಿ ಕಾಂಗ್ರೆಸ್ ಸಂಸದರಾಗಿದ್ದ ಎಹ್ಸಾನ್ ಜಾಫ್ರಿಯೂ ಒಬ್ಬರು, ಎಹ್ಸಾನ್ ಝಾಕಿಯಾ ಜಾಫ್ರಿಯವರ ಪತಿ.

“ಗುಜರಾತಿನಲ್ಲಿ ದಾಖಲಾದ ನೂರಾರು ಪ್ರಕರಣಗಳಲ್ಲಿ, ಝಾಕಿಯಾ ಜಾಫ್ರಿ ಅವರ ಪ್ರಕರಣವು ಕೇವಲ ವೈಯಕ್ತಿಕ ದುರಂತವಾಗಿರಲಿಲ್ಲ. ಬದಲಿಗೆ, ಇದು ಒಂದಿಡೀ ಸಮುದಾಯದ ಜನರ ಮೇಲೆ ನಡೆದ ದಾಳಿ” ಎಂದು ’ದಿ ಲಕ್ಕಿ ಒನ್ಸ್: ಎ ಮೆಮೋಯೈರ್’ ಪುಸ್ತಕದ ಲೇಖಕಿ ಝಾರಾ ಚೌಧರಿಯವರು ಪತ್ರಕರ್ತೆ ಗ್ರೀಷ್ಮಾ ಕುತ್ತಾರ್ ಅವರಿಗೆ ತಿಳಿಸಿದರು. ಮುಕ್ತ ಸಂಭಾಷಣೆಯೊಂದರಲ್ಲಿ, ಚೌಧರಿ ಮತ್ತು ಕುತ್ತಾರ್ ಅವರು ಝಾಕಿಯಾ ಜಾಫ್ರಿ ಅವರ ಹೋರಾಟ ಮತ್ತದರ ಕೊಡುಗೆಗಳ ಬಗ್ಗೆ; ಸಮುದಾಯವೊಂದರ ಸ್ಮೃತಿಯನ್ನು ಅಳಿಸಿಹಾಕಲು ನಡೆಯುತ್ತಿರುವ ಪ್ರಯತ್ನಗಳ ಬಗ್ಗೆ; 2002ರ ಹತ್ಯಾಕಾಂಡದ ಹಿನ್ನೆಲೆಯಲ್ಲಿ ಹೆಣೆಯಲಾಗಿರುವ ಚೌಧರಿಯವರ ಪುಸ್ತಕದ ಬಗ್ಗೆ; ಹಾಗೂ ಇತರೆ ಹಲವು ವಿಚಾರಗಳ ಕುರಿತು ಚರ್ಚಿಸಿದ್ದಾರೆ. ಅದರ ಆಯ್ದ ಭಾಗಗಳು ಇಲ್ಲಿವೆ:

  • ಬರಹಗಾರ್ತಿ, ಪ್ರಾಧ್ಯಾಪಕಿ ಮತ್ತು ಅವೆಲ್ಲಕ್ಕಿಂತಲೂ ಮುಖ್ಯವಾಗಿ, ’ದಿ ಲಕ್ಕಿ ಒನ್ಸ್’ ಪುಸ್ತಕದ ಲೇಖಕಿ ಝಾರಾ ಚೌಧರಿ ಅವರೊಂದಿಗಿನ ಈ ಸಂಭಾಷಣೆಗೆ ಎಲ್ಲರಿಗೂ ಸ್ವಾಗತ. ಈ ಪುಸ್ತಕವನ್ನು ಆತ್ಮಚರಿತ್ರೆಯ ಪುಟಗಳೆಂದು ಪರಿಗಣಿಸಲಾಗುತ್ತದೆ. ಆದರೂ ಇದರ ಬರವಣಿಗೆ ಶೈಲಿ ಒಂದು ಸಮ್ಮಿಶ್ರಣವಾಗಿದೆ; ಇದರಲ್ಲಿ ಆತ್ಮಚರಿತ್ರೆ, ಪತ್ರಿಕಾ ಲೋಕದ ಬರವಣಿಗೆ ಮತ್ತು ಸೃಜನ ಹಾಗೂ ವಿಚಾರ ಸಾಹಿತ್ಯದ ಬರವಣಿಗೆ ಶೈಲಿ ಹದವಾಗಿ ಬೆರೆತಿವೆ. ಇದು ಅಗತ್ಯವಾಗಿ ಓದಬೇಕಾದ ಕೃತಿ. ಫ್ರಂಟ್‌ಲೈನ್ ಪತ್ರಿಕೆಯ ಈ ತಿಂಗಳ ಸಂಚಿಕೆಯಲ್ಲಿ ಈ ಪುಸ್ತಕದ ವಿಮರ್ಶೆ ಪ್ರಕಟವಾಗಿದೆ. ಆದ್ದರಿಂದ, ಪುಸ್ತಕವನ್ನು ಓದಬೇಕೆ ಎಂದು ನಿರ್ಧರಿಸುವ ಮೊದಲು ನೀವಿದನ್ನು ಪರಿಶೀಲಿಸಬಹುದು.

ಈ ಸಂವಾದವನ್ನು ನಾನೊಂದು ಭಿತ್ತಿಯಲ್ಲಿರಿಸಲು ಪ್ರಯತ್ನಿಸುತ್ತೇನೆ. ನಾವು ಝಾರಾ ಅವರ ಪುಸ್ತಕದ ಬಗ್ಗೆ ಚರ್ಚಿಸುತ್ತಿರುವಾಗ, ಇತ್ತೀಚೆಗಷ್ಟೇ ನಿಧನರಾದ ಶ್ರೀಮತಿ ಝಾಕಿಯಾ ಜಾಫ್ರಿ ಅವರನ್ನು ಸಹ ನೆನಪಿಸಿಕೊಳ್ಳುತ್ತಿದ್ದೇವೆ. ಝಾರಾ, ನಮ್ಮನ್ನು ಕೂಡಿಕೊಂಡದ್ದಕ್ಕೆ ಧನ್ಯವಾದಗಳು. ನಿಮ್ಮ ಪುಸ್ತಕವನ್ನೋದಿ ಅರಗಿಸಿಕೊಳ್ಳಲು ಕಷ್ಟವೆನಿಸಿದರೂ, ಅದು ತಟ್ಟುವಂತಿತ್ತು. ಅಂತೆಯೇ, ಈ ಸಂವಾದವೂ ಕ್ಲಿಷ್ಟವೇ ಆಗಿರುತ್ತದೆ ಬಹುಶಃ ಇತ್ತೀಚಿನ ವರ್ಷಗಳಲ್ಲಿ ನಾನು ಓದಿದ ಅತ್ಯಂತ ಪ್ರಭಾವಶಾಲಿ ’ನೆನಪಿನ ಪುಟ’ಗಳಿವು.

ಮೊದಲಿಗೆ, ನಿಮ್ಮ ಪುಸ್ತಕದ ಪುಟವೊಂದರಲ್ಲಿ, “ನನ್ನ ಬಾಲ್ಯ ಒಂದರ್ಥದಲ್ಲಿ ಜಾರಿಯಲ್ಲಿದ್ದ ಹತ್ಯಾಕಾಂಡವೇ ಆಗಿತ್ತು,” ಎಂದು ಉಲ್ಲೇಖಿಸುತ್ತೀರಿ. ಆ ಸಾಲು ನನ್ನನ್ನು ಕಾಡಿತು. ಪುಸ್ತಕದುದ್ದಕ್ಕೂ, ಅಪರಾಧಿಗಳ ಬಗ್ಗೆ ಬರೆಯುವಾಗಲೂ ಸಹಾಯಭೂತಿಯನ್ನು ಕಾಯ್ದುಕೊಳ್ಳುತ್ತಲೇ ಆ ಹಂತವನ್ನು ಕಟ್ಟಿಕೊಡುತ್ತೀರಿ ಎಂಬುದು ಗಮನಾರ್ಹವಾಗಿತ್ತು. ಇಂತಹ ಆರೋಪಿಗಳನ್ನು ರೂಪಿಸಿದ ಸಾಂಸ್ಥಿಕ ಶಕ್ತಿಗಳನ್ನು ನೀವು ವಿಶ್ಲೇಷಿಸುತ್ತೀರಿ. ಇದು ನಾವೆಂದುಕೊಳ್ಳುವಷ್ಟು ಸುಲಭವೇನಲ್ಲ.

ಇವೆಲ್ಲವೂ ನನಗೆ ಗುಜರಾತಿನಲ್ಲಿ ನಡೆದ ಊನಾ ಹಿಂಸಾಚಾರದ ನಂತರದಲ್ಲಿ ಗೋಮತಿಪುರದಲ್ಲಿ ನಡೆದ ಸಭೆಯೊಂದನ್ನು ನೆನಪಿಸಿತು. ಅಲ್ಲಿ ಮುಸ್ಲಿಮರು ಮತ್ತು ಪರಿಶಿಷ್ಟ ಜಾತಿ ಸಮುದಾಯವೊಂದರ ಜನರು ಕಹಿ ಮರೆತು ಪರಸ್ಪರ ಹೊಂದಾಣಿಕೆಯ ಪ್ರಕ್ರಿಯೆಯಲ್ಲಿ ಭಾಗಿಯಾಗಿದ್ದರು; ಅವರಲ್ಲಿ ಕೆಲವರು ಹಿಂಸಾಚಾರದಲ್ಲಿ ಭಾಗಿಯಾಗಿದ್ದರೂ ಕೂಡ- ನಿಮ್ಮ ಪುಸ್ತಕದಲ್ಲಿರುವಂತೆಯೇ- ಎರಡೂ ಕಡೆಯವರು ಸಹಾನುಭೂತಿಯಿಂದ, ಕಾರಣ್ಯದಿಂದ ಈ ಇಡೀ ಪ್ರಕ್ರಿಯೆಯಲ್ಲಿ ತೊಡಗಿಸಿಕೊಂಡಿದನ್ನು ನಾನು ಗಮನಿಸಿದ್ದೆದೆ. ಇಂತಹ ದೃಷ್ಟಿಕೋನವು ನಿಮಗೆ ಮುಖ್ಯವೆನಿಸಿದ್ದು ಏಕೆ? ಹಿಂಸೆಯ ಬಗ್ಗೆ, ಅಪರಾಧಿಗಳ ಬಗ್ಗೆ ಮಾತ್ರವಲ್ಲದೇ ನಿಮ್ಮ ಕುಟುಂಬದ ಬಗ್ಗೆಯೂ ಹೀಗೆ ಆಲೋಚಿಸಬೇಕೆಂದು ನಿಮಗೆ ಅನಿಸಿದ್ದು ಏಕೆ?

ಝಾರಾ: ಧನ್ಯವಾದಗಳು. ಜನರ ಜೀವನದಲ್ಲಿ ಸಂಭವಿಸುವ ಘಟನೆಗಳನ್ನೂ ಮೀರಿ ಅವರ ವ್ಯಕ್ತಿತ್ವವನ್ನು ಗಮನನಿಸುತ್ತಿದ್ದೀರಿ. ಇದು ಪ್ರಶಂಸನೀಯ. ಅಂತಹ ದೃಷ್ಟಿಕೋನ ಬಹಳ ಮುಖ್ಯ – ಅದು ಪತ್ರಿಕೋದ್ಯಮದಲ್ಲಿರಲಿ, ಆತ್ಮಚರಿತ್ರೆ ಬರೆಯುವದರಲ್ಲಿರಲಿ, ಸೃಜನಶೀಲ ಬರವಣಿಗೆಯಲ್ಲಿರಲಿ ಅಥವಾ ಚಿತ್ರಕಲೆಯೇ ಆಗಿರಲಿ. ನಮ್ಮ ಸುತ್ತಲಿನ ಜನರನ್ನು ನಾವು ಮೊದಲು ಮನುಷ್ಯರನ್ನಾಗಿಯೇ ಕಾಣುತ್ತಿಲ್ಲ ಎಂದಾದರೆ, ಅವರನ್ನು ಜಗತ್ತಿನ ವಿಶಾಲವಾದ ಭಿತ್ತಿಯಲ್ಲಿರಿಸಿ ಗಮನಿಸಲು ಸಾಧ್ಯವಾಗುತ್ತಿಲ್ಲ ಎಂದಾದರೆ, ನಾವು ಮಾಡುತ್ತಿರುವುದಾದರೂ ಏನು ಎಂಬ ಪ್ರಶ್ನೆ ಮೂಡುತ್ತದೆ.

ಈ ಕಥೆಯ ಕೇಂದ್ರದಲ್ಲಿ ನನ್ನನ್ನು ನಾನು ಇರಿಸಿ ನೋಡಿದಾಗ, ನನ್ನನ್ನು ಕೂಡ ನನ್ನ ಸುತ್ತಮುತ್ತಲಿನ ವಾತಾವರಣ ರೂಪಿಸಿದೆ ಎಂಬುದನ್ನು ಗುರುತಿಸಿಕೊಳ್ಳಬೇಕಾಯಿತು. ಮಹಿಳೆಯರಾಗಿ, ನಾವು ಯಾರು ಎಂಬುದನ್ನು ಕಂಡುಕೊಳ್ಳುವದಕ್ಕೇ ನಮ್ಮ ಜೀವನದ ಆರಂಭಿಕ ಕಾಲಘಟ್ಟದ ಬಹುಭಾಗವನ್ನು ವ್ಯಯಿಸಿರುತ್ತೇವೆ. ವಯಸ್ಕರಾದಂತೆ ನಾನ್ಯಾರು ಎಂಬ ಬಗೆಗಿನ ಒಂದು ನಿಲುವನ್ನು ಒಪ್ಪಿಕೊಂಡು ಅದರಲ್ಲಿ ನೆಲೆಯೂರುವುದು ಸುಲಭವಾಗುತ್ತದೆ. ಆದರೆ, ನೆನಪಿನ ಚಿತ್ರಣದ ಪುಟಗಳ ಈ ನಿಲುವಿನ ಹಲವು ಪದರಗಳನ್ನು ಎಳೆಎಳೆಯಾಗಿ ಬಿಡಿಸುತ್ತದೆ. ಜಗತ್ತು ನಮ್ಮನ್ನು ಹೇಗೆ ರೂಪಿಸಿದೆ ಎಂಬುದನ್ನು ಮತ್ತೊಮ್ಮೆ ಗಮನಿಸುವಂತೆ ಅದು ನಮ್ಮನ್ನು ಒತ್ತಾಯಿಸುತ್ತದೆ. ಇಷ್ಟೆಲ್ಲಾ ಅವಕಾಶಗಳನ್ನು ನನಗೆ ನಾನು ಕೊಡುವುದಕ್ಕೆ ಸಾಧ್ಯವಾದರೆ, ಇಂತಹದ್ದೇ ಅವಕಾಶಗಳನ್ನು ಇತರರಿಗೇಕೆ ನಾನು ನೀಡಬಾರದು? ಸಹಾನುಭೂತಿ ಎಂಬುದು ಸರಿಯಾದ ಪದವೇ? ಗೊತ್ತಿಲ್ಲ. ಆದರೆ, ಮಾನವರಾಗಿರುವ ನಿಟ್ಟಿನಲ್ಲಿ ಇದೂ ಒಂದು ಪ್ರಕ್ರಿಯೆ ಎನಿಸುತ್ತಿದೆ.

ಥೆರಪಿ ಮತ್ತು ಮಾನಸಿಕ ಆರೋಗ್ಯದ ಬಗೆಗಿನ ಚರ್ಚೆಯನ್ನು ಬಳಸಿ ನಮ್ಮನ್ನೇ ನಾವು ವಿವರಿಸಿಕೊಳ್ಳುವ ಮತ್ತು ಇತರರನ್ನು ತಿಳಿಯುವ ಪ್ರಯತ್ನಗಳು ಅಪಾರವಾಗಿರುವ ಜಗತ್ತಿನಲ್ಲಿ ನಾವು ಬದುಕುತ್ತಿದ್ದೇವೆ. ನಾರ್ಸಿಸಿಸ್ಟಿಕ್ ಅಥವಾ ಪ್ರಾಬ್ಲಮ್ಯಾಟಿಕ್ ಎನ್ನುವಂತಹ ಪದಗಳನ್ನು ನಾವು ಪದೇಪದೇ ಕೇಳುತ್ತೇವೆಯಾದರೂ, ನಮ್ಮ ಸುತ್ತಲಿನ ಜಗತ್ತು ಮತ್ತು ನಾವು ಪಡೆದುಕೊಂಡ ಅನುಭವಗಳನ್ನು ನಮ್ಮನ್ನು ಹೇಗೆ ರೂಪಿಸುತ್ತವೆ ಎನ್ನುವುದನ್ನು ಒಪ್ಪಿಕೊಳ್ಳಲು ವಿಫಲರಾಗುತ್ತೇವೆ. ಹಿಂಸಾಚಾರವು ಕೇವಲ ಹತ್ಯಾಕಾಂಡಕ್ಕೆ ಸಂಬಂಧಿಸಿಲ್ಲ ಭಾರತದೊಳಗೂ, ಭಾರತದ ಹೊರಗೂ ನಮ್ಮ ಸಮುದಾಯಗಳಲ್ಲಿ ಬೇರುಬಿಟ್ಟಿರುವ, ನಿಧಾನವಾಗಿ, ಒಳಗಿನಿಂದಲೇ ಹಾನಿಯನ್ನುಂಟುಮಾಡುವ ಪ್ರಕ್ರಿಯೆ ಇದಾಗಿದೆ. ಹಾಗಾಗಿ, ಅಂತಹ ಅಹಿತಕರ ಪ್ರಕ್ರಿಯೆಯಲ್ಲಿ ತೊಡಗಿಕೊಳ್ಳಲೆಂದೇ ನಾನೀ ಪುಸ್ತಕವನ್ನು ಬರೆದೆ. ನಿಮಗೆ ಯಾವೆಲ್ಲದಕ್ಕೆ ಅನುಮತಿ ಇದೆಯೋ, ಅದನ್ನು ಮೀರುವಕೊಳ್ಳುವ ಪ್ರಕ್ರಿಯೆ ಬರವಣಿಗೆ.

  • ನಿಮ್ಮ ಪುಸ್ತಕದ ಉಪಸಂಹಾರದ ಒಂದು ಭಾಗವನ್ನು ನಾನಿಲ್ಲಿ ಓದಲು ಬಯಸುತ್ತೇನೆ:

“ಅದೆಷ್ಟೇ ಕಷ್ಟವಾದರೂ, ರಕ್ತಬಸಿದು, ಭೂಮಿಕೊಟ್ಟಾದರೂ, ನಾವು ಮುಸಲ್ಮಾನರಾಗಿ, ನಮ್ಮ ಪೂರ್ವಜರ ಸ್ಪೂರ್ತಿಯನ್ನು ಹೊತ್ತು, ಎಂಥ ಅಡೆತಡೆಯಿದ್ದರೂ ಸತ್ಯದ ಪಥದಲ್ಲಿ ನಡೆಯಬೇಕು ಎಂಬುದೇ ನಾವು ನಮ್ಮ ತಾತ-ಅಜ್ಜಿ, ಅಪ್ಪ-ಅಮ್ಮಂದಿರಿಂದ, ನಮ್ಮ ಶಿಕ್ಷಕರಿಂದ ನಮ್ಮನ್ನುಳಿಸಿದ ಅಜ್ಞಾತ ಜನರಿಂದ ಕಲಿತದ್ದು. ಇದುವೇ ನಮ್ಮ ಭಾರತದ ಕಲ್ಪನೆ. ನಾವೇನಾಗಿದ್ದೆವು ಎಂಬುದೇ ನನಗೆ ಭಾರತದ ಬಗೆಗಿನ ನೆನಪು. ಈ ನೆನಪೇ ನನ್ನ ಮನೆ. ಅಲ್ಲಿಯೇ ನಾನು ವಾಸಿಸುತ್ತೇನೆ. ಇದನ್ನು ಅಳಿಸಿಹಾಕಲು ಏನೆಲ್ಲಾ ಪ್ರಯತ್ನಗಳು ನಡೆದರೂ, ಈ ಕಥೆಯನ್ನು ಇತಿಹಾಸದಲ್ಲಿ ಬರೆಯುವುದೇ ನನ್ನ ದಂಗೆ.”

  • ಈ ಮಾತುಗಳು ನಿಮ್ಮ ಹಾಗೂ ಶ್ರೀಮತಿ ಝಾಕಿಯಾ ಜಾಫ್ರಿ ಅವರ ಜೀವನದ ಬಗ್ಗೆ ಪ್ರಶ್ನೆಯೊಂದನ್ನು ಹುಟ್ಟುಹಾಕುತ್ತದೆ. ಎಲ್ಲರಿಗೂ ದಕ್ಕಬೇಕಾದ ಸಾಂಸ್ಥಿಕ ನ್ಯಾಯವನ್ನು ನಿಮಗೆ ನಿರಾಕರಿಸಲಾಗಿದ್ದು- ಅದುವೇ ನಿಮ್ಮ ಅಸ್ತಿತ್ವದ ಗುರುತಾಗಿರುವಾಗ – ಹಿಂಸೆಗೊಳಪಟ್ಟ ಗುಂಪು ನ್ಯಾಯವನ್ನೆಲ್ಲಿ ಕಂಡುಕೊಳ್ಳುತ್ತದೆ? ನೀವೇ ಹೇಳುತ್ತಿರುವಂತೆ ನಿಮ್ಮ ಹೋರಾಟವಿದ್ದದ್ದು ಇದರ ಕಥನವನ್ನು ದಾಖಲಿಸಿ ಅದನ್ನೊಂದು ಸಾಕ್ಷಿಯಾಗಿ ಉಳಿಸಲಿಕ್ಕೆ ಎಂದು. ಹೀಗಿರುವಾಗ, ನಿಮ್ಮ ಮತ್ತು ಶ್ರೀಮತಿ ಜಾಫ್ರಿ ಅವರ ಜೀವನ ಪಯಣದಲ್ಲಿ ನೀವು ನ್ಯಾಯವನ್ನು ಹೇಗೆ ಅರ್ಥೈಸಿಕೊಳ್ಳುತ್ತೀರಿ?

ಝಾರಾ: ಅವರ ಬಗ್ಗೆಯೇ ಮೊದಲು ಮಾತನಾಡುವೆ. ಝಾಕಿಯಾ ಮೇಡಂರ ಕೊನೆಯ ವರ್ಷಗಳಲ್ಲಿ ಅವರು ಅಮೆರಿಕಾದಲ್ಲಿದ್ದಾಗ ಅವರನ್ನು ದೂರದಿಂದ ಮಾತ್ರ ಕೇಳಿತಿಳಿದಿದ್ದೆ. ಪ್ರತಿವರ್ಷ ಫೆಬ್ರವರಿ 27 ಮತ್ತು 28 ರಂದು, ಅವರ ಮನಸ್ಸಿನಲ್ಲಿ ಏನು ಓಡುತ್ತಿರಬಹುದೆಂದು ಯೋಚಿಸುತ್ತಿದ್ದೆ.

ನಮಗೆ, ಅಂದರೆ ಮುಸ್ಲಿಮರಿಗೆ, ಹಕ್ ಅಥವಾ ನ್ಯಾಯದ ಪರಿಕಲ್ಪನೆ ನಮ್ಮ ಧಾರ್ಮಿಕ ನಂಬಿಕೆಯೊಂದಿಗೆ ಆಳವಾಗಿ ಬೇರೂರಿದೆ. ಅಂತಿಮ ನ್ಯಾಯ ಎಂಬುದು ಅಲ್ಲಾಹ್‌ನಲ್ಲಿ ನೆಲೆಸಿದೆ ಎಂದು ನಾವು ನಂಬಿದ್ದೇವೆ. ಮಾರ್ಟಿನ್ ಲೂಥರ್ ಕಿಂಗ್ ಇಡೀ ಜಗತ್ತಿನ ನೈತಿಕತೆಯೇ ನ್ಯಾಯದ ಕಡೆ ಬಾಗಿರುವುದರ ಬಗ್ಗೆ ಮಾತನಾಡಿದ್ದರು. ಹಿಂಸೆಗೊಳಪಟ್ಟ ಅನೇಕರಲ್ಲಿ ನಾನು ಅಂತಹದ್ದೇ ದೇವತಾಶಾಸ್ತ್ರದ ನೆಲೆಯನ್ನು ಗಮನಿಸಿದ್ದೇನೆ. ಕೆಲವೊಮ್ಮೆ, ನಿಜವಾಗಿಯೂ ನ್ಯಾಯ ದೊರಕಿಸಿಕೊಡುವ ನಿಟ್ಟಿನಲ್ಲಿ ನಮ್ಮ ಅತಿ ಚಿಕ್ಕದಾದ, ಪುಟ್ಟ ಮಾನವ ನಿರ್ಮಿತ ಸಂಸ್ಥೆಗಳು ಅಶಕ್ತ ಎನಿಸಿಬಿಡುತ್ತದೆ. ಆದ್ದರಿಂದ, ಅದಕ್ಕಿಂತಲೂ ಹಿರಿದಾದದ್ದರ ಕೆಡೆಗೆ ನಾವು ಮುಖ ಮಾಡುತ್ತೇವೆ.

ಅದಕ್ಕಾಗಿಯೇ ’ಸರ್ವೊಚ್ಚ ನ್ಯಾಯಾಲಯ’ದಂತಹ ಪದಗಳು ನಮ್ಮ ದಿನನಿತ್ಯದ ಬಳಕೆಯಲ್ಲಿವೆ- ನ್ಯಾಯ ದೊರಕಿಸಿಕೊಡುವಲ್ಲಿ ಇದುವೇ ಅಂತಿಮ ಪ್ರಾಧಿಕಾರವಾಗಿರಬೇಕು ಎಂಬುದು ಇದರ ಹಿಂದಿನ ಗುಟ್ಟು. ಆದರೆ ನಮಗೆ, ನಿಜವಾಗಿಯೂ ನ್ಯಾಯ ದೊರೆಯುವುದು ’ಅಲ್ಲಾಹುವಿನ ದರ್ಬಾರಿ’ ನಲ್ಲಿಯೇ ವಿನಃ, ಹಿಂಸೆಯೊಂದಿಗೆ ರಾಜಿ ಮಾಡಿಕೊಂಡಿರುವ, ಮಾನವನೇ ಸೃಷ್ಟಿಸಿಕೊಂಡಿರುವ ಇಂತಹ ಸಂಸ್ಥೆಗಳಲ್ಲಿ ಅಲ್ಲ. 20 ವರ್ಷಗಳಿಗೂ ಹೆಚ್ಚುಕಾಲ ತನ್ನ ಮುಂದಿದ್ದ ಪ್ರತಿಯೊಂದು ಬಾಗಿಲನ್ನು ತಟ್ಟಿ ನ್ಯಾಯಕ್ಕಾಗಿ ಹೋರಾಡಿದ್ದು, ಝಾಕಿಯಾ ಜಾಫ್ರಿಯವರ ನಂಬಿಕೆಗೆ ಹಿಡಿದ ಕೈಗನ್ನಡಿಯಾಗಿದೆ. ಅಲ್ಲಾಹ್ ನಿಮಗೆ ನ್ಯಾಯವನ್ನು ದೊರಕಿಸಿಕೊಡುತ್ತಾನೆ ಎಂದು ನೀವು ನಂಬಿದರೆ, ನ್ಯಾಯದ ಹೊರೆಯನ್ನು ವರ್ಗಾಯಿಸಿದಂತೆಯೇ. ಆಗ ನೀವು ಮಾನವ ವ್ಯವಸ್ಥೆಗಳನ್ನು ನಂಬಿ ಕೂತು-ಕೊರಗುವುದಿಲ್ಲ; ಬದಲಿಗೆ, ಇರುವ ಪ್ರತಿಯೊಂದು ಕದವನ್ನೂ ತಟ್ಟಿ, ನಿಮ್ಮ ಕರ್ತವ್ಯವನ್ನು ಪೂರೈಸುತ್ತೀರಿ. ಅವು ತೆರೆಯುತ್ತವೋ ಇಲ್ಲವೋ, ಅದು ಬೇರೆಯದೇ ಮಾತು. ಆದರೆ ನೀವು ಒಂದೊಂದು ಬಾಗಿಲನ್ನೂ ತಟ್ಟುತ್ತಿರುತ್ತೀರಿ.

ಝಾಕಿಯಾ ಅವರ ಮತ್ತು ಇತರರೆಲ್ಲರ ಪರಂಪರೆ ನನ್ನದೂ ಕೂಡ ಎಂದೆನಿಸುತ್ತದೆ. ಇವರು ನನ್ನ ಹಿರಿಯರು. ನಿರಂತರತೆಯೇ ಜೀವನ ಎಂಬುದನ್ನು ಇವರೆಲ್ಲರೂ ನನಗೆ ಕಲಿಸಿದ್ದಾರೆ. ಈ ಪುಸ್ತಕವನ್ನು ಬರೆಯಲು ನಾನು ತೆಗೆದುಕೊಂಡ ಏಳು ವರ್ಷಗಳ ಕಾಲವೂ ಕೂಡ ಬಹಳ ಕುಗ್ಗಿಸುವಂತಿತ್ತು. ಅದಕ್ಕೆ ಮುಖ್ಯಕಾರಣವೆಂದರೆ, ತವರಿನಲ್ಲಿ (ಭಾರತ) ಪರಿಸ್ಥಿತಿ ಹದಗೆಡುತ್ತಿರುವುದನ್ನು ನಾವು ಗಮನಿಸುತ್ತಿದ್ದೆವು. ಸಾಮಾಜಿಕ ಮಾಧ್ಯಮಗಳಲ್ಲಿ ದಿನದಿನವೂ ಹೊಸಹೊಸ ಆಘಾತಕಾರಿ ಬೆಳವಣಿಗೆಳು ಕಾಣಿಸತೊಡಗಿದ್ದವು. ಎಷ್ಟೋ ದಿನಗಳು ಅಸಹಾಯಕತೆಯಿಂದ ನರಳಿ ಅಳುತ್ತಾ ಮೂಲೆ ಸೇರಿದ್ದೆನಾದರೂ ಯಾವುದೋ ಒಂದು ವಿಚಾರ ನನ್ನನ್ನು ವಾಪಸ್ಸು ಕೆಲಸದ ಮೇಜಿಗೆ ಎಳೆತಂದು ಕೂರಿಸುತ್ತಿತ್ತು.

ಝಾಕಿಯಾ ಜಾಫ್ರಿಯವರನ್ನು ನ್ಯಾಯವನ್ನು ಅರಸುತ್ತಿದ್ದ ವಿಧವೆಯಾಗಷ್ಟೇ ನೋಡಬಾರದು. ಅವರ ವ್ಯಕ್ತಿತ್ವ ಅದಕ್ಕೂ ಮೀರಿದ್ದಾಗಿತ್ತು. ಅವರು ತಾಯಿಯೂ, ಅಜ್ಜಿಯೂ ಆಗಿದ್ದರು ಮಾತ್ರವಲ್ಲ, ಅವರು ತನ್ನ ಸಮುದಾಯದ ಕ್ರಿಯಾಶೀಲ ವ್ಯಕ್ತಿಗಳಲ್ಲೊಬ್ಬರಾಗಿದ್ದರು. ತಮ್ಮೊಟ್ಟಿಗೆ ಇತರರನ್ನೂ ಕರೆದೊಯ್ಯುತ್ತಿದ್ದರು. ಶಿಯಾ ಪರಂಪರೆಯಲ್ಲಿ ನ್ಯಾಯಕ್ಕಾಗಿ ಒತ್ತಾಯಿಸುವ ಬಗ್ಗೆ ನನ್ನ ಸ್ನೇಹಿತೆ ಜೆಹ್ರಾ ಮೆಹದಿ ಹೇಳುತ್ತಿದ್ದ ಕತೆಯೊಂದು ನೆನಪಾಗುತ್ತಿದೆ. ತನ್ನಿಡೀ ಕುಟುಂಬ ಹತ್ಯೆಗೊಳಗಾದರೂ ಕೂಡ ಹಜ್ರತ್ ಅಲಿಯ ಮಗಳೂ, ಪ್ರವಾದಿ ಮುಹಮ್ಮದ್‌ನ ಮೊಮ್ಮಗಳೂ ಆದ ಹಜ್ರತ್ ಝೈನಬ್ ಬದುಕುಳಿದುಬಿಡುತ್ತಾಳೆ. ಅವರೆಲ್ಲರನ್ನು ಕೊಂದ ಕ್ರೂರಿಯ ಎದುರುನಿಂತು ಆಕೆ ನ್ಯಾಯಕ್ಕಾಗಿ ಒತ್ತಾಯಿಸುತ್ತಾಳೆ. ಇಲ್ಲಿ ಗಮನಿಸಬೇಕಾದ ಅಂಶವೆಂದರೆ, ಆಕೆ ನ್ಯಾಯ ಬೇಡುವುದು ತನ್ನ ವೈಯಕ್ತಿಕ ನಷ್ಟಕ್ಕಾಗಿ ಮಾತ್ರವಲ್ಲ, ಬದಲಿಗೆ ತನ್ನಿಡೀ ಸಮುದಾಯಕ್ಕೆ. ಈ ವ್ಯತ್ಯಾಸವನ್ನು ಗುರುತಿಸುವುದು ಬಹಳ ಮುಖ್ಯ.

ಸಮಾಜದ ಅಂಚಿನಲ್ಲಿರುವ ಸಮುದಾಯಗಳಲ್ಲಿ, ನಮ್ಮ ಮೇಲಿರುವ ಹೊರೆಗಳನ್ನು ನಾವೆಂದಿಗೂ ಒಬ್ಬಂಟಿಯಾಗಿ ಹೊರುವುದಿಲ್ಲ. ದಲಿತ ವಿಮೋಚನೆಗಾಗಿ ಶ್ರಮಿಸಿದ ಚಳವಳಿಗಳಲ್ಲಿಯೂ ಈ ಸೆಲೆ ಮೈಗೂಡಿರುವುದನ್ನು ನಾವು ಕಾಣಬಹುದು- ಇಡೀ ಸಮುದಾಯಗಳೊಟ್ಟಿಗೆಯೇ ನಾವು ಮುನ್ನಡೆಯುತ್ತೀವಿ. ಗುಜರಾತಿನಲ್ಲಿ ದಾಖಲಾದ ನೂರಾರು ಪ್ರಕರಣಗಳ ಪೈಕಿ, ಝಾಕಿಯಾ ಜಾಫ್ರಿ ಅವರ ಪ್ರಕರಣವು ವೈಯಕ್ತಿಕ ದುರಂತ ಮಾತ್ರವಲ್ಲ. ಬದಲಿಗೆ, ಇದು ಒಂದಿಡೀ ಸಮುದಾಯದ ಜನರ ಮೇಲೆ ನಡೆದ ದಾಳಿ. ತಮ್ಮನ್ನು ತಾವು ದೊಡ್ಡದೊಂದು ಹೋರಾಟದ ಭಾಗವೆಂದು ಭಾವಿಸುವ ಈ ಅನನ್ಯತೆಯೇ ನನಗೆ ಪ್ರೇರಣೆ. ನಾನು ಬರವಣಿಗೆ ನಡೆಸುತ್ತಿರುವಾಗ ಒಬ್ಬಂಟಿಯಲ್ಲ. ನನ್ನ ನಡಿಗೆಯಲ್ಲಿ ನಾನು ಒಬ್ಬಂಟಿಯಲ್ಲ. ನಮ್ಮನ್ನಗಲಿರುವವರೂ ನನ್ನೊಂದಿಗಿದ್ದಾರೆ. ಏನೇ ಕಷ್ಟಗಳು ಎದುರಾದರೂ, ಅದು ನಮ್ಮೆಲ್ಲರಿಗೂ ಎದುರಾಗುತ್ತದೆ.

  • ಆದರೆ, ಝಾಕಿಯಾ ಅವರು ಸಾಧಿಸಿರುವುದು ಏನು ಎಂದು ಯೋಚಿಸಿದಾಗ – ಅವರು ದೇಶದ ಅತ್ಯಂತ ಶಕ್ತಿಶಾಲಿ ವ್ಯಕ್ತಿಗಳಲ್ಲಿ ಒಬ್ಬರಾದ, ಹಾಲಿ ಪ್ರಧಾನಮಂತ್ರಿಯವರನ್ನು ಒಳಗೊಂಡು ಗುಜರಾತ್ ರಾಜ್ಯದ ’ಜನಪ್ರಿಯ’ ರಾಜಕೀಯ ನಾಯಕರೆಲ್ಲರನ್ನೂ ಎದುರಿಸಿದರು. ನಿಮ್ಮ ಕೆಲಸ- ನೀವು ಬರೆದಿರುವ ಪುಸ್ತಕವು- ಅವೆಲ್ಲದರ ಸಾಕ್ಷ್ಯವಾಗಿ, ದಾಖಲೆಯಾಗಿದೆ. ನಿಮ್ಮ ಸಮುದಾಯವನ್ನು ಮುಂದಕ್ಕೆ ಕೊಂಡೊಯ್ಯುವ ಮನಸ್ಸಿನಾಳದ ಬಯಕೆಯ ಭಾಗವಾಗಿಯೇ ಹೊರಬಂದಿರುವುದು ಎಂದು ನೀವು ಹೇಳುವಾಗ ನನಗದು ಅರ್ಥವಾಗುತ್ತಿದೆ.

ಆದರೆ ಆ ಹೊರೆ ದೊಡ್ಡದಲ್ಲವೇ? ಈ ಹಾದಿಗೆ ವೈಯಕ್ತಿಕ ನೆಲೆಗಳಿವೆಯಲ್ಲವೇ? ಆ ಒಂದು ಅಂಶ ಸಾಕಷ್ಟು ಚರ್ಚೆಗೆ ಒಳಪಟ್ಟಿಲ್ಲ ಎಂದೆನಿಸುತ್ತಿದೆ. ಅದೆಷ್ಟೇ ಬೆಂಬಲ ದೊರೆತರೂ ಕೊನೆಗೆ ಒಬ್ಬ ವ್ಯಕ್ತಿಯೇ ಅಲ್ಲವೇ. ಈ ಪುಸ್ತಕವನ್ನು ನೀವು ಬರೆಯುವಾಗ, ಬಾಲ್ಯದಿಂದ ನಡೆದಿದ್ದೆಲ್ಲವನ್ನೂ ದಾಖಲಿಸುವುದು, ಈ ದಾಖಲೀಕರಣಕ್ಕಾಗಿಯೇ ನಿಮ್ಮಿಡೀ ಪ್ರೌಢಾವಸ್ಥೆಯನ್ನು ಮುಡಿಪಾಗಿಟ್ಟದ್ದು ಪ್ರಶಂಸನೀಯ. ಇಲ್ಲಿಯವರೆಗೆ ನೀವು ಸವೆಸಿರುವ ವೈಯಕ್ತಿಕ ಹಾದಿಯ ಬಗ್ಗೆ ತಿಳಿಯಲಿಚ್ಛಿಸುತ್ತೇನೆ. ನೀವು ಎದುರಿಸಿದ ಸವಾಲುಗಳು ಯಾವುವು? ಶ್ರೀಮತಿ ಜಾಫ್ರಿ ಅವರು ಸವೆಸಿದ ಕಲ್ಲುಮುಳ್ಳಿನ ಹಾದಿಗೂ ನೀವು ಸವೆಸಿರುವ ಹಾದಿಗೂ ಒಂದು ಸಮಾನಾಂತರವನ್ನು ಕಾಣುತ್ತಿದ್ದೇನೆ.

ಝಾರಾ: ಧನ್ಯವಾದಗಳು. ನೀವು ಪ್ರೀತಿ-ಅಕ್ಕರೆಗಳಿಂದ ಹೇಳುತ್ತಿದ್ದರೂ ನಾನೇನೋ ಮಹತ್ತರವಾದದನ್ನು ಸಾಧಿಸಿದ್ದೇನೆ ಎಂಬ ಕಲ್ಪನೆ ನನ್ನಲ್ಲಿ ಒಂದು ರೀತಿಯ ಇರಿಸು ಮುರುಸನ್ನುಂಟುಮಾಡುತ್ತದೆ – ಕಾರಣ, ಅಂತಹ ಮಹತ್ತರವಾದ ಏನನ್ನೂ ನಾನು ಸಾಧಿಸಿಲ್ಲ. ಈ ಪುಸ್ತಕದಲ್ಲಿನ ಯಾವ ವಿಚಾರವೂ, ಅದರಲ್ಲೂ ವಿಶೇಷವಾಗಿ ಹಿಂಸೆಯನ್ನು ಚರ್ಚಿಸುವ ಯಾವುದೇ ಭಾಗ ನನ್ನ ಅನುಭವಗಳನ್ನು ಆಧರಿಸಿಲ್ಲ. ಈ ಎಲ್ಲವೂ ಕೂಡ ಹಲವು ಬಾರಿ ವರದಿಯಾಗಿದೆ. ನಾನು ಆಯ್ಕೆ ಮಾಡಿಕೊಂಡಿರುವ ಯಾವುದೇ ವಿಚಾರವನ್ನು ಪ್ರಸ್ತಾಪಿಸುವ ಕನಿಷ್ಟ ಐದು ಸುದ್ದಿ ಮೂಲಗಳನ್ನು ನಾನು ಸೂಚಿಸಬಹುದು. ಕೆಲವೊಮ್ಮೆ, ನಾನು ನಯವಂಚಕಿಯೆಂಬಂತೆ ಭಾಸವಾಯಿತು- ಎಲ್ಲಾ ರೀತಿಯ ಮಾಹಿತಿಗಳು ಲಭ್ಯವಿದ್ದರೂ ಒಂದು ಸಮುದಾಯ ಅಥವಾ ದೇಶವಾಗಿ ಯಾವುದೇ ಲೆಕ್ಕ ಚುಪ್ತ ಆಗಿಲ್ಲ. ಹಾಗಾಗಿ, ಇರುವ ಎಲ್ಲಾ ಮಾಹಿತಿಯನ್ನು ಆಧರಿಸಿ, ಅವೆಲ್ಲವನ್ನು ಒಂದು ರೀತಿಯಲ್ಲಿ ಜೋಡಿಸಿಟ್ಟು ಅವನ್ನು ನೇಯ್ಗೆ ಮಾಡುವ ನೇಕಾರಿಕೆ ಕೆಲಸ ನನ್ನದಾಯಿತು. ಇದು, ಹತ್ಯಾಕಾಂಡವನ್ನು ನಿರಾಕರಿಸಲಾಗದಂತೆ ಮಾಡಿತು- ಈ ಹತ್ಯಾಕಾಂಡ ಕೇವಲ ಒಂದು ಸಮುದಾಯದ ಮೇಲೆ ಉಂಟುಮಾಡಿದ ಪ್ರಭಾವವಲ್ಲ, ಬದಲಿಗೆ ಇಡೀ ದೇಶದ ಮೇಲೆ ಅದು ಉಂಟುಮಾಡಿರುವ ಪ್ರಭಾವ.

ನೀವು ಪುಸ್ತಕವನ್ನೋದಿದಾಗ, ದೈಹಿಕವಾಗಿ, ಮಾನಸಿಕವಾಗಿ, ಭಾವನಾತ್ಮಕವಾಗಿ ಮತ್ತು ಪಿತೃಪ್ರಧಾನವಾಗಿ ಹಿಂಸೆಗೆ ನೆಲೆಯಾಗಿದ್ದ ಮನೆಯೊಂದರಲ್ಲಿಯೇ ನಾನು ಬೆಳೆದು ಬಂದಿರುವುದನ್ನು ಗಮನಿಸುತ್ತೀರಿ. ಆದರೆ, ನನ್ನ ಕುಟುಂಬದ ಬಗೆಗಿನ ಸತ್ಯವನ್ನು ಮಾತನಾಡುವುದನ್ನೇ ನೆವವಾಗಿಸಿಕೊಂಡು ನನ್ನ ಸಮುದಾಯದವನನ್ನು ಕೆಟ್ಟದಾಗಿ ಕಾಣುವ, ಬಿಂಬಿಸುಬಂತಹ ಜಗತ್ತಿನಲ್ಲಿ ನಾವಿಂದು ಬದುಕುತ್ತಿದ್ದೇವೆ. ನನ್ನ ಸಮುದಾಯದ ಗಂಡಸರನ್ನು ಮತ್ತಷ್ಟೂ ಅಪರಾಧೀಕರಿಸಲು ಅದನ್ನು ಬಳಸಬಹುದಾಗಿದೆ. ಆ ಕತೆ ನನ್ನ ಗಂಟಲಿನಲ್ಲಿಯೇ ಸಿಕ್ಕಿಕೊಂಡು ಹೊರಬರಲು ತವಕಿಸುತ್ತಿದೆಯಾದರೂ ಪ್ರತ್ಯೇಕವಾಗಿ ಅದನ್ನು ಹೇಳುವ ಸವಲತ್ತು ನನಗಿಲ್ಲ- ನಮ್ಮದು ಒಂದು ಕಟ್ಟಡದಲ್ಲಿರುವ ಮತ್ತೊಂದು ಮಧ್ಯಮ ವರ್ಗದ ಮುಸ್ಲಿಂ ಕುಟುಂಬ. ತಮ್ಮ ಪಾಡಿಗೆ ತಮ್ಮ ದೈನಂದಿನ ಜೀವನವನ್ನು ನಡೆಸುತಿದ್ದಾರೆ. ಕಾದಂಬರಿಗಳು ಮತ್ತು ಆತ್ಮಚರಿತ್ರೆಗಳು ಆ ವಿಧಾನವನ್ನು ಅನುಸರಿಸುವುದನ್ನು ನಾನು ಕಂಡಿದ್ದೇನೆಯಾದರೂ, ನನಗೆ ಅಂತಹ ಸ್ವಾತಂತ್ರ್ಯ ಇರಲಿಲ್ಲ.

  • ನಾನೂ ಇದನ್ನೇ ಹೇಳಲು ಹೊರಟದ್ದು- ಈ ಪುಸ್ತಕ ಹಿಂಸಾಚಾರವನ್ನು ದಾಖಲಿಸುವುದಕ್ಕೆ ಸೀಮಿತವಾಗದೆ, ಅದರೊಟ್ಟಿಗಿರುವ ಅಪಾಯಗಳೆಲ್ಲದರ ನಡುವೆಯೂ ವೈಯಕ್ತಿಕ ಅಂಶಗಳನ್ನೂ ನೀವು ಉದ್ದೇಶಪೂರ್ವಕವಾಗಿ ಉಲ್ಲೇಖಿಸಿದ್ದೀರಿ. ಇದು ನಿಮ್ಮ ಹಾದಿಯನ್ನು ಮತ್ತಷ್ಟು ಕಷ್ಟಕರಗೊಳಿಸಿರಬೇಕು. ಮಾಹಿತಿಗಳನ್ನು ಬೇರೆಬೇರೆ ಮೂಲಗಳಿಂದ ನೀವು ಪಡೆದುಕೊಂಡಿದ್ದರೂ, ನಿಮ್ಮ ಕಥೆಯನ್ನು ಕೇಂದ್ರವಾಗಿಸದೆ ಅದರ ಸುತ್ತ ಲಭ್ಯವಿದ್ದ ಮಾಹಿತಿಗಳಲ್ಲವನ್ನೂ ಒಟ್ಟಿಗೆ ನೇಯ್ಗೆ ಮಾಡುವ ಕಾರ್ಯ ಸುಲಭವಲ್ಲ.

ಝಾರಾ: ನಾನು ಯಾರೆಂಬುದನ್ನು ರೂಪಿಸುವುದರ ಹಿಂದೆ ಏನೆಲ್ಲಾ ಕೆಲಸ ಮಾಡಿದೆ ಎಂದು ಬಹಳ ಬಾರಿ ಅನ್ನಿಸಿದ್ದಿದೆ. ಮತ್ತದು ಕೇವಲ ಜೀವನಾನುಭವಗಳ ವಿಷಯಕ್ಕೆ ಸೀಮಿತವಾಗಿರಲಿಲ್ಲ – ವೈಯಕ್ತಿಕವಾಗಿ ಮತ್ತು ಸಮಷ್ಟಿಯಾಗಿ ಅನೇಕ ಜನರು ನನ್ನ ಬರವಣಿಗೆಗೆ ತಮ್ಮದೇ ಆದಂತಹ ಕೊಡುಗೆ ನೀಡಿದ್ದಾರೆ. ಒಂದೆಡೆ ನನ್ನ ಕುಟುಂಬದ ಕಥೆಯನ್ನು, ಮತ್ತೊಂದೆಡೆ ದೇಶದಲ್ಲಿ ನಡೆಯುತ್ತಿರುವ ಹಿಂಸಾಚಾರದ ನಡುವೆ ಸಮತೋಲನ ಕಾಯ್ದುಕೊಳ್ಳುತ್ತಾ, ನನಗೆ ನಾನೇ ಬಹಳಷ್ಟು ವಿಚಾರಗಳನ್ನು ಮನನ ಮಾಡಿಕೊಂಡೆ: ನನಗೆ ಏನಿಲ್ಲವೆಂದರೂ 15-20 ವರ್ಷಗಳಷ್ಟು ತರಬೇತಿಯಿದೆ. ಅದರೊಟ್ಟಿಗೆ ಅನುದಾನಗಳು ಸಿಕ್ಕಿವೆ. ಧನಸಹಾಯ ಒದಗಿಬಂದಿದೆ. ಮಾರ್ಗದರ್ಶಕರು ಸಿಕ್ಕಿದ್ದಾರೆ. ಜನರು ನನ್ನನ್ನು ಬೆಂಬಲಿಸಿದ್ದಾರೆ.

ನನ್ನೆಲ್ಲಾ ಕುಶಲತೆಯನ್ನು ಬಳಸಿಕೊಂಡು ಅದನ್ನು ನಿರಾಕರಿಸಲಾಗದಂತೆ ಕಟ್ಟಿಕೊಡಲಾಗದಿದ್ದರೆ, ನನ್ನ ಕುಶಲತೆಯ ಉಪಯೋಗವೇನು? ಕುಶಲತೆಯಿಲ್ಲದಿದ್ದರೆ ನಮ್ಮ ಕಥೆಗಳು ಸುಲಭವಾಗಿ ತಿರಸ್ಕೃತವಾಗುತ್ತವೆ. ಅದುವೇ ನನಗಿದ್ದ ಸವಾಲು: ನನ್ನ ತಂದೆ, ಎಹ್ಸಾನ್ ಸಾಹೇಬರು, ಸುನೀಲ್, ಬಿಲ್ಕಿಸ್ ಬಾನೋ, ಬಾನೋ ಅವರ ಮಗಳು- ಯಾರ ಬಗ್ಗೆಯೇ ನಾನು ಬರೆದರೂ ನಾನದನ್ನು ಬಹಳ ನಿಖರವಾಗಿಯೂ ಮತ್ತು ಸೃಜನಶೀಲ ತಂತ್ರಗಳನ್ನು ಬಳಸಿಕೊಂಡು, ಕಸಿದುಕೊಳ್ಳಲಾಗಿರುವ ಅವರ ಜೀವಪಸೆಯಲ್ಲಿ ಒಂದಂಶವನ್ನಾದರೂ ಪುನಃಸ್ಥಾಪಿಸುತ್ತಿದ್ದೇನೆ ಎಂಬುದನ್ನು ಖಚಿತಪಡಿಸಿಕೊಂಡಿರುವೆ. ನನಗಿದ್ದ ಒಂದೇ ಕೆಲಸವೆಂದರೆ, ಅವರ ಬಗ್ಗೆ ಓದುವಾಗ ಓದುಗರಿಗೆ ಅದನ್ನು ವಾಸ್ತವವಾಗಿ ಕಟ್ಟಿಕೊಡುವುದಾಗಿತ್ತು. ಇದರಲ್ಲಿ ನನ್ನ ಪಾತ್ರವೇನು? ಎಂಬ ಪ್ರಶ್ನೆಯನ್ನು ನನಗೆ ನಾನೇ ಪದೇಪದೇ ಕೇಳಿಕೊಂಡಿದ್ದೇನೆ. ಕಷ್ಟಗಳು ಎದುರಾದಾಗ, ಕುಸಿಯುವುದು ಸಲೀಸು. ನಾನು ಪಡೆದಿರುವ ತರಬೇತಿ ಇದಕ್ಕಾಗಿಯೇ ಎಂಬುದಾಗಿ ನನಗೆ ನಾನೇ ಪದೇಪದೇ ನೆನಪಿಸಿಕೊಳ್ಳಬೇಕಿತ್ತು.

  • ಆ ಕಾರ್ಯತಂತ್ರವು ಎಲ್ಲೆಡೆಯೂ ಸ್ಪಷ್ಟವಾಗಿ ಗೋಚರವಾಗುತ್ತದೆ. ನೆನಪುಗಳನ್ನು ತಂತ್ರವಾಗಿ ಬಳಸುವ ಬಗ್ಗೆ ಯೋಚಿಸಿದಾಗ, ವಾಲಿ ಗುಜರಾತಿಯವರ ಐಕ್ಯ ಸ್ಥಳದ ಕಥೆ ನನಗೆ ನೆನಪಾಗುತ್ತದೆ. ಜೊತೆಗೆ, ಗುರುತುಗಳೇ ಸಿಗದ 2002ರ ಹತ್ಯಾಕಾಂಡದಲ್ಲಿ ಕೊಲ್ಲಲ್ಪಟ್ಟವರ ಸಮಾಧಿಗಳೂ ನೆನಪಾಗುತ್ತವೆ. ಈ ಎರಡೂ ಉಲ್ಲೇಖಗಳ ನಡುವಿನ ಸಾಮ್ಯತೆಯೊಂದನ್ನು ನಾನು ಗುರುತಿಸಲು ಬಯಸುತ್ತೇನೆ. ಆದರೆ, ವಾಲಿ ಅವರ ದರ್ಗಾದ ಕಥೆಯನ್ನು ನೀವು ನಿಮ್ಮಜ್ಜನ ನೆನಪುಗಳಿಗೆ, ನಿಮ್ಮ ಕುಟುಂಬಕ್ಕೆ ಮತ್ತು ಅಂತಿಮವಾಗಿ ನಿಮ್ಮೊಟ್ಟಿಗೆಯೇ ಬಹಳ ಶಕ್ತಿಯುತವಾಗಿ ಜೋಡಿಸಿಕೊಂಡಿದ್ದೀರಿ. ಓದುತ್ತಾ ಸಾಗಿದಂತೆ ಅವೆಲ್ಲದಕ್ಕೂ ತೆರೆದುಕೊಳ್ಳುವ ಅವಕಾಶ ಮಾಡಿಕೊಡುವ ನೀವು ರೂಢಿಸಿಕೊಂಡಿರುವ ಕುಶಲತೆಯನ್ನಿಲ್ಲಿ ಮೆಚ್ಚಲೇಬೇಕು. ಆದರೆ, ಇದು ನೆನಪುಗಳ ಪರೀಕ್ಷೆಯೂ ಹೌದಲ್ಲವೇ? ದರ್ಗಾದ ರಸ್ತೆಯಲ್ಲಿ ನಡೆದುಹೋಗಿ, ಅದಕ್ಕಾಗಿ ಹುಡುಕಾಡಿ, ಕಂಡುಹಿಡಿಯಲಾಗದೆ, ತಾವು ಹೊತ್ತೊಯ್ದಿದ್ದ ಹೂವುಗಳನ್ನೆಲ್ಲಾ ಅಲ್ಲಿಯೇ ಅರ್ಪಿಸಿ ಹೋಗುತ್ತಿದ್ದಾರೆ ಎಂಬುದನ್ನು ನೀವು ಉಲ್ಲೇಖಿಸುತ್ತೀರಿ. ನೆನಪುಗಳನ್ನು ಶತಾಯಗತಾಯ ಅಳಿಸಬೇಕೆಂದಿರುವ ದೇಶದಲ್ಲಿ, ಇದನ್ನು ಅದಕ್ಕೆ ಸಲ್ಲಬೇಕಾದ ಘನತೆಯೊಂದಿಗೆ ನಡೆಸಿಕೊಳ್ಳುವುದು ಹೇಗೆ?

ಝಾರಾ: ಆ ಇಡೀ ಭಾಗವನ್ನು ನನ್ನ ಪುಸ್ತಕದಲ್ಲಿ ಉಳಿಸಿಕೊಳ್ಳಲು ನಾನು ಹೋರಾಟವನ್ನೇ ನಡೆಸಬೇಕಾಯಿತು. ನನ್ನ ಸಂಪಾದಕರ ಜೊತೆಯಲ್ಲಿಯೂ. ನಿಮಗೆ ನೆನಪಿದೆಯೋ ಇಲ್ಲವೋ, ಮುಸ್ಲಿಂ ಸಮುದಾಯದಲ್ಲಿ ಮಣ್ಣುಮಾಡುವಾಗಲಿನ ಹಲವು ಹಂತಗಳನ್ನು ನಾನು ಪಟ್ಟಿ ಮಾಡಿದ್ದೇನೆ.

  • ಹೌದು.

ಝಾರಾ: ಆ ಭಾಗದಲ್ಲಿ, ಹತ್ಯಾಕಾಂಡದಲ್ಲಿ ಕೊಲೆಯಾದವರ ಗುರುತುಗಳೇ ಇರದ ಸಮಾಧಿಗಳನ್ನು, ಇವರು ಇಂತಹವರು ಎನ್ನುವ ಗುರುತುಗಳನ್ನು ಹೊಂದಿರುವ ನನ್ನ ಕುಟುಂಬಸ್ಥರ ಸಮಾಧಿಗಳೊಂದಿಗೆ ಹೋಲಿಸುತ್ತೇನೆ. ಅದನ್ನು ಪುಸ್ತಕದಲ್ಲಿ ಉಳಿಸಿಕೊಳ್ಳಬೇಕೆ ಬೇಡವೇ ಎಂಬ ಬಗ್ಗೆ ಚರ್ಚೆ ನಡೆಯಿತು- ಮೇಲ್ನೋಟಕ್ಕೆ, ಇದು ಜನರು ಸತ್ತಾಗ ಅವರನ್ನು ಮಣ್ಣುಮಾಡುವ ವಿಧಿವಿಧಾನಗಳ ವಿವರಣೆಗಳಾಗಿ ಮಾತ್ರವೇ ಕಾಣುತ್ತದೆ. ಮಾತ್ರವಲ್ಲ, ಅದಕ್ಕಿಂತ ಹೆಚ್ಚಿನದೇನನ್ನೂ ಅದು ’ಹೇಳುತ್ತಿಲ್ಲ’ ಎಂದೆನಿಸುತ್ತದೆ. ಆದರೆ, ಆಚರಣೆಗಳು ಬಹಳ ಆಳವಾಗಿ ಬೇರುಬಿಟ್ಟಿರುವ ದೇಶ ಭಾರತ. ಇಲ್ಲಿ ಪ್ರತಿಯೊಂದು ಪುಟ್ಟ-ಪುಟ್ಟ ಸಂಸ್ಕೃತಿಯೂ ತನ್ನದೇ ಆದ ಕಟ್ಟುನಿಟ್ಟಾದ ಸಂಪ್ರದಾಯಗಳನ್ನು ಹೊಂದಿದೆ. ಇಲ್ಲಿ ಸಾವಿನ ಸಂದರ್ಭಗಳಲ್ಲಿ ಅತ್ಯಂತ ಹೆಚ್ಚು ಕಾಡುವ ಅಂಶವೆಂದರೆ, ಅವರು ನಮ್ಮನ್ನು ಅಗಲಿದರು ಎಂಬ ದುಃಖಕ್ಕಿಂತಲೂ ಆಚರಣೆಗಳೇ ನಮ್ಮನ್ನು ಆವರಿಸಿಕೊಂಡು, ಅವು ಆ ಶೋಕ, ದುಃಖ ಮತ್ತು ಶಾಂತತೆಯನ್ನು ಒಂದೋ ಕಸಿದುಕೊಳ್ಳುತ್ತವೆ ಇಲ್ಲ ಸಂಪೂರ್ಣವಾಗಿ ಹತ್ತಿಕ್ಕುತ್ತವೆ. ಇದರಿಂದಾಗಿ ನಾವು ಶೋಕಾಚರಿಸುವುದು ಕೂಡ ಕಷ್ಟಸಾಧ್ಯವಾಗುತ್ತದೆ. ನಾನು ಬೆಳೆಯುವಾಗ ಕಂಡಿರುವ ಹಾಗೆ, ಇಸ್ಲಾಮಿನ ಆಚರಣೆಗಳು ಹೀಗೆ ಶೋಕವನ್ನು ಹತ್ತಿಕ್ಕುವ ವರ್ಗಕ್ಕೆ ಸೇರಿದೆ. ಸಾವಿನ ಮೂರು ದಿನಗಳ ನಂತರ, ನಾವು ಅಳಬಾರದೆಂದೂ, ಹಾಗೆ ಕಣ್ಣೀರು ಸುರಿಸುವುದು ಮೃತರ ಆತ್ಮಕ್ಕೆ ನೋವುಂಟು ಮಾಡುತ್ತದೆ ಎಂದು ಹೇಳಲಾಗುತ್ತದೆ. ಅದೆಷ್ಟೋ ವರ್ಷಗಳವರೆಗೆ ನಾನದನ್ನು ನಂಬಿದ್ದೆ. ಆದರೆ, ಅದರ ಪರಿಣಾಮವೇನು? ಶೋಕವನ್ನು ಅನುಭವಿಸುವ ಹಕ್ಕನ್ನೂ ಕೂಡ ಅದು ನಮ್ಮಿಂದ ಕಸಿದುಕೊಳ್ಳುತ್ತದೆ.

ನನ್ನ ಅಜ್ಜನ ಸಾವಿರಬಹುದು, ನನ್ನ ತಂದೆಯ ಸಾವಿರಬಹುದು ಅಥವಾ 2002ರ ಸಾಮೂಹಿಕ ಸಾವುಗಳಿರಬಹುದು, ಆ ಎಲ್ಲಾ ಪ್ರಕರಣಗಳಲ್ಲಿ ನಾವು ನಮ್ಮಲ್ಲಿನ ಶೋಕವನ್ನಿನ್ನೂ ಅನುಭವಿಸಿಯೇ ಇಲ್ಲ. ಆ ಭಾಗಗಳನ್ನು ಬರೆಯುವುದೇ- ಯಾವುದೇ ಸದ್ದುಗದ್ದಲಗಳಿರದೆ ಅಕ್ಷರಗಳ ಮೌನದಲ್ಲಿ ಮುಳುಗಿ, ಸಾರ್ವಜನಿಕವಾಗಿ ಶೋಕಾಚರಿಸುವ ರೀತಿಯಾಗಿತ್ತು. ಓದುಗರಿಗೆ ಈ ಎಲ್ಲಾ ವಿಧಿವಿಧಾನಗಳನ್ನು ಕಟ್ಟಿಕೊಡುತ್ತಾ, ಶವವನ್ನು ಹೇಗೆ ಸ್ನಾನ ಮಾಡಿಸುತ್ತಾರೆ, ಮೆಕ್ಕಾಗೆ ಹೇಗೆ ಮುಖ ಮಾಡಿರಬೇಕು, ಅದನ್ನು ಹೇಗೆ ಮಣ್ಣು ಮಾಡುತ್ತಾರೆ ಎಂಬೆಲ್ಲದರ ಜೊತೆ ಓದುಗರನ್ನು ಕರೆದೊಯ್ಯಲು ಬಯಸಿದ್ದೆ. ಆದರೆ, ಸಾವಿನಲ್ಲಿಯೂ ತಮ್ಮ ವಿಧಿವಿಧಾನಗಳನ್ನು ಪಾಲಿಸುವ ಹಕ್ಕನ್ನು ನಿರಾಕರಿಸಲಾಗಿದೆಯಲ್ಲಾ. ಅವರ ಕತೆ? ಮಣ್ಣುಮಾಡಲಾಗಿರುವ ಶವಗಳನ್ನು ಹೊತ್ತೊಯ್ಯುತ್ತಾರೆ ಎಂದಾದರೆ ಸಮಾಧಿಗಳನ್ನು ಅಳಿಸಿದಂತೆಯೇ ಅಲ್ಲವೇ? ವಾಲಿ ಗುಜರಾತಿಯವರ ಸಮಾಧಿಯನ್ನು ನೆಲಸಮ ಮಾಡಲಾಯಿತು. ನಾವು ಮಾತನಾಡುತ್ತಿರುವಾಗಲೇ ಭಾರತದಲ್ಲಿರುವ ಅದೆಷ್ಟು ದರ್ಗಾಗಳನ್ನು ನೆಲಸಮ ಮಾಡಲಾಗುತ್ತಿದೆಯೋ. ಸತ್ತವರ ಘನತೆಯನ್ನು ಕಸಿದುಕೊಳ್ಳಲಾಗುತ್ತದೆ ನಿಜ- ಆದರೆ ಬಹಳ ಹಿಂದೆಯೇ ಸತ್ತು ಮಣ್ಣುಮಾಡಲಾಗಿರುವವರನ್ನು ನಿರ್ಮೂಲನೆ ಮಾಡಲಾಗುತ್ತಿದೆ. ಇದು ಈಗಲೂ ಮುಂದುವರಿಯುತ್ತಿದೆ..

  • ಖಂಡಿತಾ.

ಝಾರಾ: ಜನರನ್ನು ಹೀಗೆಲ್ಲಾ ವರ್ತಿಸುವಂತೆ ಪ್ರೇರೇಪಿಸುವ ಪ್ರಚೋದನೆಯ ಬಗ್ಗೆ ಮಾತನಾಡಬೇಕಿದೆ. ನಾನದನ್ನು ಪ್ರಶ್ನಿಸುತ್ತೇನೆ. ಚಿರನಿದ್ರೆಗೆ ಜಾರಿದವರನ್ನು ಅವರ ಸಮಾಧಿಗಳಿಂದ ಹೊರತೆಗೆದು ಅವುಗಳ ಪಾವಿತ್ರತೆಯನ್ನು ಹಾಳುಗೆಡುವುದಕ್ಕೆ ಜನರನ್ನು ಯಾವುದು ಪ್ರಚೋದಿಸುತ್ತದೆಯೋ ನಾನದನ್ನು ಪ್ರಶ್ನಿಸುತ್ತೇನೆ. ನಾವು ನೋಡನೋಡುತ್ತಿದ್ದಂತೆಯೇ ಗಾಜಾದಲ್ಲಿಯೂ ಹೀಗೇ ನಡೆಯುತ್ತಿದೆ- ಬುಲ್ಡೋಜರ್‌ಗಳು ಮತ್ತು ರೋಲರ್‌ಗಳು ಸ್ಮಶಾನಗಳ ನಿರ್ನಾಮಗೊಳಿಸುತ್ತಿವೆ. ಇದೆಂತಹ ವಿಕೃತಿ? ಇದು ಅಮೇರಿಕದಲ್ಲಿಯೂ ಸಂಭವಿಸಿದೆ. ಇಲ್ಲಿನ ಹ್ಯಾಲೋವೀನ್ ಚಲನಚಿತ್ರಗಳಲ್ಲಿ ಶೇ.50ರಷ್ಟಾದರೂ ಸಿನಿಮಾಗಳ ಕತೆಯು ನೆಲಸಮಗೊಂಡಿರುವ ಸಮಾಧಿಗಳ ಮೇಲೆ ನಿರ್ಮಿಸಲಾದ ಮನೆಗಳ ಸುತ್ತಲೇ ಸುತ್ತುತ್ತದೆ.

  • ಮಣಿಪುರದಲ್ಲಿ ಸಮಾಧಿಗಳಿಂದ ಶವಗಳನ್ನು ಹೊರಗೆಳೆದು ಸುಡುತ್ತಿರುವುದನ್ನು ನೋಡುವುದು ನನಗೆ ಆಘಾತಕಾರಿಯಾಗಿತ್ತು. ಇಂತಹ [ವಿಕೃತಿ] ಅರ್ಥವೇ ಆಗುವುದಿಲ್ಲ.

ಝಾರಾ: ಖಂಡಿತ. ಈ ರೀತಿಯ ಆಘಾತಗಳು ನಿಮ್ಮಲ್ಲಿಯೇ ಉಳಿದುಬಿಡುತ್ತವೆ. ಅದರಲ್ಲೂ ವಿಶೇಷವಾಗಿ ನೀವೇನಾದರೂ ಯುವಕ-ಯುವತಿಯರಾಗಿದ್ದರೆ ಅದು ಮತ್ತಷ್ಟು ಆಘಾತಕಾರಿಯಾಗಿಬಿಡುತ್ತದೆ. ಇತರರ ಘನತೆಯ ಹರಣದ ಜೊತೆಜೊತೆಗೆ ಅವರು ತಮ್ಮ ಘನತೆಯನ್ನು ಕಳೆದುಕೊಳ್ಳುತ್ತಾರೆ. ಹೀಗಾಗಿ, ಮನುಷ್ಯರು ಹೇಗೆ ತಮ್ಮ ಘನೆತಯನ್ನು ಕಳೆದುಕೊಳ್ಳುತ್ತಾರೆ ಎಂಬುದನ್ನು ಕಣ್ಣಾರೆ ಕಾಣುತ್ತೇವೆ. ನಿಮಗೆ ಅಗೌರವ ತೋರಿಸುತ್ತಿದ್ದೇವೆ, ನಿಮ್ಮನ್ನು ಗೌಣಗೊಳಿಸುತ್ತಿದ್ದೇವೆ ಎಂದವರು ಭಾವಿಸುತ್ತಿದ್ದರೂ ಅದು ನಿಜವಾಗಿಯೂ ಅವರಿಗೆ ಅವರೇ ಮಾಡಿಕೊಳ್ಳುತ್ತಿರುವ ಅಗೌರವ. ಈ ವಿಚಾರ ನನ್ನನ್ನು ಒಂದು ಭಯಾನಕ ರೀತಿಯಲ್ಲಿ ಆಕರ್ಷಿಸುತ್ತಿದೆ. ಜನರು ಹೀಗೆಲ್ಲಾ ವರ್ತಿಸುವಂತೆ ಪ್ರೇರೇಪಿಸುತ್ತಿರುವುದೇನು? ನಿಮ್ಮಲ್ಲಿ ದ್ವೇಷ ಎಷ್ಟು ಆಳದಲ್ಲಿ ಬೇರೂರಿರಬೇಕು? ಇತರರನ್ನು ಬಗ್ಗುಬಡಿಯಲೇಬೇಕು ಎಂಬ ಭಾವ ನಿಮ್ಮನ್ನು ಎಷ್ಟು ತೀವ್ರವಾಗಿ ಆವರಿಸಿಕೊಂಡಾಗ ಅದು ನಿಮ್ಮನ್ನು ಹೀಗೆ ಮಾಡಲು ಪ್ರೇರೇಪಿಸುತ್ತದೆ? ಅಷ್ಟಾದಮೇಲೂ ನೀವು ಮನುಷ್ಯರಾ? ಅದುವೇ ನನಗೆ ಅತ್ಯಂತ ಜ್ವಲಂತ ಪ್ರಶ್ನೆ.

  • ನನಗೆ ನಿಮ್ಮ ಪುಸ್ತಕದಲ್ಲಿನ ಕೆಲವು ಪಾತ್ರಗಳು ನೆನಪಿಗೆ ಬರುತ್ತಿವೆ. ನೀವು ಬಹಳ ಅಕ್ಕರೆಯಿಂದ ನೆನಪಿಸಿಕೊಳ್ಳುವ ಪ್ರೀತಿ ಮೇಡಂ ಅವರಲ್ಲಿ ಒಬ್ಬರಾದರೆ, ಮತ್ತೊಬ್ಬರು ಬಹಳ ದಿನಗಳ ನಂತರ, ಕರ್ಫ್ಯೂ ಜಾರಿಯಲ್ಲಿರುವ ಸಮಯದಲ್ಲಿ ಕರೆಮಾಡಿ ’ಸಿನಿಮಾಕ್ಕೆ ಹೋಗೋಣವಾ’ ಎಂದು ಸಹಜವಾಗಿಯೇ ಕರೆಯುವ ನಿಮ್ಮ ಸ್ನೇಹಿತರು. ಈ ವೈರುಧ್ಯಗಳನ್ನು – ಒಂದು ಪಾತ್ರವನ್ನು ಮತ್ತೊಂದಕ್ಕೆ ಹೋಲಿಸಿನೋಡುವ ಶೈಲಿ ಗಮನಾರ್ಹವಾಗಿದೆ. ಮುಸ್ಲಿಂಮೇತರರ- ಬಹಳ ಭಿನ್ನ ವ್ಯಕ್ತಿ ಚಿತ್ರಣಗಳನ್ನು ಕಟ್ಟಿಕೊಡುತ್ತೀರ: ಅವರಲ್ಲಿ ಕೆಲವರು ಉಗ್ರರಾಗಿದ್ದರೆ, ಇನ್ನೂ ಕೆಲವರು 2002ರಿಂದ ಇಲ್ಲಿಯವರೆಗೂ, ದಶಕಗಳ ನಂತರವೂ ತಾವು ಯಾವುದೇ ತಪ್ಪು ಮಾಡಿಲ್ಲವೆಂದು ನಂಬುವವರಿದ್ದಾರೆ. ಆದರೆ, ಈ ನಡುವೆ, ನಿಮ್ಮ ಸ್ನೇಹಿತರ ತರಹದವರೂ ಇದ್ದಾರೆ. ಅವರು ಇವೆಲ್ಲದರ ಬಗ್ಗೆ ತಲೆಕೆಡಿಸಿಕೊಳ್ಳುವುದಿಲ್ಲ ಎಂದಲ್ಲ. ಬದಲಿಗೆ, ಏನಾಗುತ್ತಿದೆ ಎಂಬುದು ತಿಳಿದೇ ಇಲ್ಲ ಎಂದು ನಟಿಸಲು ಇಚ್ಛಿಸುತ್ತಾರೆ. ಇದು ನಿಮ್ಮ ಬರವಣಿಗೆಯ ಬಹುಮುಖ್ಯ ಆಯಾಮ. ನೀವು ನಿಮ್ಮ ನೆನಪುಗಳನ್ನು ಮೆಲುಕು ಹಾಕುತ್ತಿದ್ದೀರಿ ಮಾತ್ರವಲ್ಲ, ಬದಲಿಗೆ ಅವರ ಮೌನವನ್ನು, ಯಾವುದಕ್ಕೂ ತಲೆಕೊಡದ ಅವರ ಮನಸ್ಥಿತಿಯನ್ನೂ ಪ್ರಶ್ನಿಸಿಕೊಳ್ಳುವಂತೆ ಜನರನ್ನು ಒತ್ತಾಯಿಸುತ್ತಿದ್ದೀರಿ.

ಝಾರಾ: ಹೌದು.

  • ನಿಮ್ಮ ಸ್ನೇಹಿತರ ಬಗ್ಗೆ ಬರೆಯುವಾಗ ನಿಮ್ಮಲ್ಲಿ ಯಾವೆಲ್ಲ ಭಾವನೆಗಳಿದ್ದವು? ನಿಮ್ಮ ಪುಸ್ತಕದಲ್ಲಿ ಅವರನ್ನು ಉಲ್ಲೇಖಿಸುವುದು ಏಕೆ ಮುಖ್ಯವೆನಿಸಿತು?

ಝಾರಾ: ಇವು ಪಾತ್ರಗಳು ಮಾತ್ರವಲ್ಲ; ನಿಜ ಜನರೂ ಆಗಿದ್ದಾರೆ. ಆ ಕತೆ ಅದು ನಡೆದಾಗ ಕಾಡಿದ್ದಕ್ಕಿಂತಲೂ ಹೆಚ್ಚು, ಈಗ ಕಳೆದ ಇಪ್ಪತ್ತು ವರ್ಷಗಳಲ್ಲಿ ಕಾಡಿದೆ. ಆಗ, ಅದು ನನ್ನ ವೈಯಕ್ತಿಕ ನೋವಾಗಿತ್ತು. ದಿನವೂ ಒಟ್ಟಿಗೆ ಶಾಲೆಗೆ ನಡೆದುಹೋಗುತ್ತಿದ್ದ, ಗಲಭೆಗಳು ನಡೆಯುವುದಕ್ಕಿಂತಲೂ ಮೊದಲೇ ನಾನು ಮನೆಯಲ್ಲಿ ಏನೆಲ್ಲಾ ಅನುಭವಿಸಿದ್ದೇನೆ ಎಂದು ತಿಳಿದಿದ್ದ ಸ್ನೇಹಿತೆ ಹಾಗೆ ನಡೆದುಕೊಂಡದ್ದು ನೋವು ತರಿಸಿತ್ತು. ಹದಿಹರೆಯದ ಗೆಳೆತನಗಳು ದುರ್ಬಲವೂ ಆಗಿರುತ್ತದೆ. ಈ ಗೆಳೆತನಗಳಿಗೆ ನಿಮ್ಮ ಜೀವನದ ಬಗ್ಗೆ ಬಹಳ ಆತ್ಮೀಯವಾದ, ಹತ್ತಿರದ ಇಣುಕುನೋಟಗಳಿರುತ್ತವೆ. ಆದರೆ, ಅವಳು ನದಿಯ ಆ ದಡದಲ್ಲಿ ಜೀವಿಸುತ್ತಿದ್ದ ಮಾತ್ರಕ್ಕೆ – ಅಂದರೆ, ಒಳ್ಳೆಯ ರಸ್ತೆ, ದೊಡ್ಡ ದೊಡ್ಡ ಮಾಲುಗಳು, ಮೆಕ್ ಡೊನಾಲ್ಡುಗಳಿರುವ ನಗರದ ಹೊಸ ಬಡಾವಣೆಗಳಲ್ಲಿ ನಲೆಸಿದ್ದ ಮಾತ್ರಕ್ಕೆ ನಮ್ಮ ನಡುವೆ ಒಂದು ಕಂದಕವಿತ್ತು.

  • ಮತ್ತು ನಗರದ ಆ ಭಾಗಕ್ಕೆ ಗುಜರಾತಿನ ಹಿಂದೂ ಶಾಸಕರುಗಳ ಅನುಕಂಪವಿತ್ತು.

ಝಾರಾ: ಖಂಡಿತ. ಬಲವಂತದ ಜಾತ್ಯತೀತ ಸ್ಥಳವಾದ ಶಾಲೆಯಲ್ಲಿ ನಾವು ನಾಗರಿಕರಾಗಿ ವರ್ತಿಸಬೇಕಾಗಿತ್ತು. ಮತ್ತು ಆ ನಿಟ್ಟಿನಲ್ಲಿ ಅವಳಿಗೆ ಶಾಲೆಯಲ್ಲಿ ಸ್ನೇಹ ಗಳಿಸಲೊಂದು ಸಾಧನ ಮಾತ್ರವೇ ಅಗಿದ್ದೆ ಎಂಬುದು ನನಗೆ ಆಗ, ಆ ಕ್ಷಣ ಅರಿವಿಗೆ ಬಂತು. ಆದರೆ ನಾವು ಆ ಜಾಗದಿಂದ ಬೇರ್ಪಟ್ಟ ತಕ್ಷಣವೇ- ನಾನು ಹಳೆಯ ಮುಸ್ಲಿಂ ಗುಡಿಸಲಿನಲ್ಲಿ, ಅವಳು ಐಷಾರಾಮಿ ಹಿಂದೂ ಪ್ರದೇಶಕ್ಕೆ ಹಿಂದಿರುಗುತ್ತಿದ್ದಳು. ಅಲ್ಲಿನ ಕಿಟಕಿಗಳೆಲ್ಲವೂ ಮುಚ್ಚಿರುತ್ತಿದ್ದವು. ನಾನಿದನ್ನು ಇತರ ಸ್ಥಳಗಳಲ್ಲಿಯೂ ಕಾಣುತ್ತೇನೆ. ಉದಾಹರಣೆಗೆ ವೆಸ್ಟ್ ಬ್ಯಾಂಕ್‌ನಲ್ಲಿ. ಅಲ್ಲಿ ಗೋಡೆಗಳು ಜನರನ್ನು ದೈಹಿಕವಾಗಿ ಬೇರ್ಪಡಿಸುತ್ತವೆ. ಅಹಮದಾಬಾದ್‌ನಲ್ಲಿ ಟ್ರಂಪ್ ಕೊಳಗೇರಿಗಳನ್ನು ನೋಡದಂತೆ ಗೋಡೆಗಳನ್ನು ನಿರ್ಮಿಸಲಾಯಿತು. ಆದರೆ ದೈಹಿಕ ಗೋಡೆಗಳಿಗಿಂತಲೂ ಹೆಚ್ಚು, ನಾನು ಮಾನಸಿಕ ಗೋಡೆಗಳ ಬಗ್ಗೆ ಯೋಚಿಸುತ್ತೇನೆ. ಅವರ ಪ್ರಜ್ಞೆಯೊಂದಿಗೆ ಅವರು ಸಂವಹಿಸಿದ ಕ್ಷಣವೇ ಆ ಗೋಡೆಗಳೆಲ್ಲಾ ಕುಸಿದುಬೀಳುತ್ತವೆ. ಮತ್ತದನ್ನು ನಾನು ಎಂದಿಗೂ ಪರೀಕ್ಷಿಸುತ್ತೇನೆ- ಆ ಗೋಡೆಗಳನ್ನು ಯಾವುದು ಬೀಳಿಸುತ್ತದೆ?

ಏಕೆಂದರೆ, ಸಹಾನುಭೂತಿ ಎಂಬುದು ನಾವು ಮೊದಲಿನಿಂದಲೂ ಕೇಳುತ್ತಿರುವ ಪ್ರಶ್ನೆ. ನಾನು ನಿಮ್ಮನ್ನು ಸಹಾನುಭೂತಿಯಿಂದಲೇ ಕಾಣುವೆಯಾದರೂ, ಆದೇಕ್ಷಣ, ನೀವು ನನ್ನ ವಾಸ್ತವಗಳನ್ನೇಕೆ ಪ್ರಶ್ನಿಸುತ್ತೀರಿ? ನನಗೆ ಕರೆ ಮಾಡಿ, ’ಓಹ್, ಎಲ್ಲವೂ ಚೆನ್ನಾಗಿದೆಯಲ್ಲಾ ಎಂದು ಹೇಳುತ್ತೀರಿ. ಇಂದಿಗೂ, ಅಹಮದಾಬಾದ್‌ನ ಜನರನ್ನು ಭೇಟಿಯಾದಾಗಲೆಲ್ಲಾ ಅವರಲ್ಲಿ ಹಲವರು ’ಮೂರು ದಿನಗಳವರೆಗೆ ಹಿಂಸಾಚಾರವು ನಡೆಯಿತು’ ಎನ್ನುತ್ತಾರೆ. ತಮ್ಮ 40 ಮತ್ತು 50ರ ಹರೆಯದಲ್ಲಿರುವ ಅವರುಗಳು, ’ನಮ್ಮನ್ನು ಕ್ಷಮಿಸಿ. ಏನಾಗುತ್ತಿದೆ ಎಂಬುದು ನಮಗಾಗ ತಿಳಿಯಲಿಲ್ಲ, ಎಂದು ಬರೆಯುತ್ತಾರೆ.

  • “ನಮಗಾಗ ತಿಳಿಯಲಿಲ್ಲ.”

ಝಾರಾ: ಇದು ನನ್ನನ್ನು ಬಹಳವೇ ಆಶ್ಚರ್ಯಕ್ಕೆ ದೂಡುತ್ತದೆ. ನಾನು ದಕ್ಷಿಣದಲ್ಲಿ ನೆಲೆಗೊಂಡಾಗ, ಗುಜರಾತಿಗೆ ಹೋಲಿಸಿದರೆ ಸಮುದಾಯಗಳು ಒಂದಕ್ಕೊಂದು ಹೇಗೆಲ್ಲಾ ಬೆಸೆದುಕೊಂಡಿವೆ ಎಂಬುದನ್ನು ಗಮನಿಸಿದೆ. ಚೆನ್ನೈನಂತಹ ನಗರದಲ್ಲಿ ಅಷ್ಟು ದೊಡ್ಡ ಪ್ರಮಾಣದ ಹತ್ಯಾಕಾಂಡ ಜನರ ಗಮನಕ್ಕೆ ಬಾರದೆ ಹೋಗುವುದು ಸಾಧ್ಯವೇ ಇಲ್ಲ. ಆದರೆ ಅಹಮದಾಬಾದ್ ಸಿದ್ಧಾಂತವೊಂದನ್ನು ಪರೀಕ್ಷಿಸುವ ಸ್ಥಳವಾಗಿತ್ತು. ಗುಜರಾತನ್ನು ಪ್ರಯೋಗಾಲಯ ಎಂದು ನಾವು ಕರೆಯುವಾಗ, ಅದರ ಅರ್ಥ ಈ ಸ್ಥಳ ಕೇವಲ ಭೌಗೋಳಿಕವಾಗಿ ವಿಭಜನೆಗೊಂಡಿದೆ ಎಂಬುದು ಮಾತ್ರವಲ್ಲ, ಸೈದ್ಧಾಂತಿಕ ವಿಭಜನೆಯೂ ಕೂಡಿದೆ. ಮತ್ತು ಇಂತಹ ಸೈದ್ಧಾಂತಿಕ ವಿಭಜನೆಗಳು ಮಕ್ಕಳಲ್ಲಿಯೂ ನೆಲೆಗೊಂಡಿದೆ.

ನನಗೆ ತಿಳಿದಿರುವ ಜೈನ ಹುಡುಗನ ಬಗ್ಗೆ ನಾನು ಬರೆದಿದ್ದೇನೆ. ನಾವವನ ಮನೆಯಲ್ಲಿ ಕ್ರಿಕೆಟ್ ವೀಕ್ಷಿಸುತ್ತಿದ್ದೆವು. ಆಗವನಿಗೆ ಆರು ಇಲ್ಲವೇ ಏಳು ವರ್ಷ; ನಾನು ಏಳನೇ ತರಗತಿಯಲ್ಲಿದ್ದೆ. ಒಂದು ದಿನ, ನಾನು ಪುದೀನಾ-ಹಸಿರು ಬಣ್ಣದ ಟಿ-ಶರ್ಟ್ ಧರಿಸಿದ್ದೆ. ಅದನ್ನು ಕಂಡ ಅವನು, ’ಪಾಕಿಸ್ತಾನ ಬಣ್ಣ’ ಎಂದು ಕೂಗಿದನು.

ಮೊದಲಿಗೆ ನನಗೆ ಕೋಪ ಉಕ್ಕಿತ್ತು. ಹಾಗೆಲ್ಲ ಮಾತನಾಡಲು ನಿನಗೆ ಹಕ್ಕು ನೀಡಿದವರು ಯಾರು? ಆರು ವರ್ಷದವನು ನೀನು. ವಯಸ್ಸಾದವರೊಂದಿಗೆ ಹೀಗೆ ಮಾತನಾಡುತ್ತೀಯ? ಆ ಕ್ಷಣಕ್ಕೆ ನನಗದು ರಾಷ್ಟ್ರೀಯತೆಯ ಬಗೆಗಿನ ಸಮಸ್ಯೆಯಾಗಿಯೂ ಕಾಣಲಿಲ್ಲ- ಅದು ಗೌರವಯುತವಾಗಿರಲಿಲ್ಲ. ಅಂದರೆ, ಆ ಹೊತ್ತಿಗಾಗಲೇ ಮಗುವಿಗೆ ಒಂದು ರೀತಿಯ ತರಬೇತಿ ಸಿಕ್ಕಿಯಾಗಿತ್ತು. ಮುಸ್ಲಿಮರನ್ನು ಹೇಗೆ ಮಾತನಾಡಿಸಬೇಕು, ಅವರನ್ನು ಹೇಗೆ ಅವಮಾನಿಸಬೇಕು ಎಂಬುದನ್ನೆಲ್ಲಾ ಅವನಾಗಲೇ ಕಲಿತಿದ್ದನು. ನಮ್ಮನ್ನು ಹೇಗೆ ಅವಮಾನಿಸಬೇಕೆಂದು ಹಿರಿಯರೇ ಮಕ್ಕಳಿಗೆ ಕಲಿಸಿಕೊಡುತ್ತಿದ್ದರು.

  • ನಾವು ಅಂತಹ ವಾಸ್ತವದಲ್ಲಿಂದು ಬದುಕುತ್ತಿದ್ದೇವೆ. ಇಂತಹ ಗೋಡೆಗಳು ಒಂದು ನಗರದಕ್ಕೆ ಸೀಮಿತವಾಗಿಲ್ಲ. 2002ರಿಂದ, ಅಥವಾ ಬಾಬ್ರಿ ಮಸೀದಿಯಿಂದ, ಇಲ್ಲಿಯವರೆಗೆ ದಶಕಗಳ ಕಾಲ ಏನಾಯಿತು ಎಂಬುದನ್ನು ಗಮನಿಸಿದರೆ- ಅದು ಒಂದೇ ರೀತಿಯಲ್ಲಿರುತ್ತದೆ. ಅಲ್ಲೇನೋ ನಡೆಯುತ್ತದೆ. ಆದರೆ, ಇಡೀ ದೇಶವು ಅಜ್ಞಾನದಲ್ಲಿ ಮುಳುಗಿರುತ್ತದೆ. ವರ್ಷಗಳು ಕಳೆದಂತೆಲ್ಲಾ, ಆ ಅಂತರ ಹೆಚ್ಚುತ್ತಲೇ ಇದೆ. ಮಣಿಪುರವನ್ನೇ ನೋಡಿ. ಜನರು ಅದನ್ನು ಗಮನಿಸಲೇ ಇಲ್ಲ. ಗಮನಿಸಿದರೂ ಗಮನಿಸದಂತೆ ಇದ್ದುಬಿಟ್ಟರು. ಸರ್ಕಾರಕ್ಕೂ ನೀವದನ್ನು ಗಮನಿಸುವುದು ಬೇಕಿಲ್ಲ. ಅದು ಹೇಗೆ ಸಾಧ್ಯ?

ಝಾರಾ: ನಾವು ವಿಚಲಿತತೆಯ ತುತ್ತತುದಿಯಲ್ಲಿ ಬದುಕುತ್ತಿದ್ದೇವೆ. ನಮ್ಮ ಗಮನವೇ ಅತ್ಯಂತ ಮೌಲ್ಯಯುತವಾದ ಸರಕಾಗಿಬಿಟ್ಟಿದೆ – ಅದನ್ನು ಸೆರೆಹಿಡಿಯಲು ಕಾರ್ಪೊರೇಟುಗಳು ಶತಕೋಟಿಗಳನ್ನು ಖರ್ಚು ಮಾಡುತ್ತವೆ. ರೀಲ್‌ನಲ್ಲಿ ಹತ್ತು ಸೆಕೆಂಡು, ಮತ್ತೊಂದು ಆಪ್‌ನಲ್ಲೊಂಡು 15 ಸೆಕೆಂಡ್‌ಗಳು, ಹೊಸ ಚಲನಚಿತ್ರ, ಆನ್‌ಲೈನ್ ಮಾರಾಟ- ಹೀಗೆ ಎಲ್ಲವೂ ನಮ್ಮ ಗಮನವನ್ನು ಬೇರೆಡೆಗೆ ಸೆಳೆಯಲೆಂದೇ ವಿನ್ಯಾಸಗೊಳಿಸಲಾಗಿದೆ. ಆದರೆ ವಾಸ್ತವಗಳು ಮಾತ್ರ ಬದಲಾಗಿಲ್ಲ. ಅವುಗಳ ನಡುವಿನ ವ್ಯತ್ಯಾಸ ಬೆರಗುಗೊಳಿಸುವಂತಿದೆ. ಸಾಮಾಜಿಕ ವಾಸ್ತವಗಳೆಡೆಗೆ ಜನರು ತಾಳ್ಮೆ ಕಳೆದುಕೊಂಡಿದ್ದಾರೆ. ಏಕೆಂದರೆ, ಅದು ಅನಾನುಕೂಲತೆ ಎಂದೆನಿಸುತ್ತದೆ. ಈ ಕಥೆಗಳನ್ನು ಹೇಳುವುದೇ ಹೇರಿಕೆಯೆನಿಸುತ್ತದೆ.

  • ನಿಜ.

ಝಾರಾ: ಆದರೆ, ಅವರಿಗಿಷ್ಟವಿರಲಿ ಬಿಡಲಿ, ಈ ಕಥೆಗಳು ಅವರನ್ನು ಬಾಧಿಸುತ್ತವೆ. ನೀವು ಬೆಂಗಳೂರಿನಲ್ಲಿರಬಹುದು; ಆದರೆ ಮಣಿಪುರದಲ್ಲಿ ಏನಾಗುತ್ತದೆ ಎಂಬುದು ನಿಮ್ಮನ್ನು ಬಾಧಿಸುತ್ತದೆ. ನಮಗೆ ಅವೆರಡು ಹೇಗೆ ಬೆಸೆದುಕೊಂಡಿದೆ ಎಂಬುದನ್ನು ಕಾಣಲಾಗುತ್ತಿಲ್ಲವಷ್ಟೇ. ಸಮಾಜಗಳು ಮತ್ತು ರಾಜಕೀಯ ಹೇಗೆ ಕಟ್ಟಲ್ಪಟ್ಟಿವೆ ಎಂಬುದನ್ನು ಅರ್ಥೈಸುವ ಸಾಮರ್ಥ್ಯವನ್ನೇ ಜನರು ಕಳೆದುಕೊಂಡಿದ್ದಾರೆ. ಗುಜರಾತನ್ನೇ ತೆಗೆದುಕೊಳ್ಳಿ: 2002 [ಹತ್ಯಾಕಾಂಡ] ನಡೆಯುತ್ತದೆ, ಜನರು ಆ ಬಗ್ಗೆ ಗಮನ ಹರಿಸುವುದನ್ನೇ ನಿಲ್ಲಿಸುತ್ತಾರೆ ಮತ್ತು ಒಂದು ದಶಕದ ನಂತರ, ಮತ್ತವರುಗಳೇ ಅಧಿಕಾರದಲ್ಲಿದ್ದಾರೆ. ಹೀಗೆ ಗಮನವಿಡಲು ಸಾಧ್ಯವಾಗದಿರುವುದೇ ಬಹಳಷ್ಟು ಸಂಗತಿಗಳು ಉಲ್ಬಣಗೊಳ್ಳುವುದಕ್ಕೆ ಅನುವು ಮಾಡಿಕೊಡುತ್ತದೆ.

ಝಾರಾ ಚೌಧರಿ

ಇದು ಹಿಂದೆಲ್ಲ ಹೀಗಿರಲಿಲ್ಲ. ನಿಮ್ಮ ವಯಸ್ಸು ನನಗೆ ತಿಳಿದಿಲ್ಲ, ಆದರೆ ನಾನು ದೂರದರ್ಶನದ ಯುಗದಲ್ಲಿ ಬೆಳೆದವಳು. ನಮ್ಮ ಮನೆಯಲ್ಲಿ ಯಾವಾಗಲೂ ನ್ಯೂಸ್ ಆನ್ ಆಗಿರುತ್ತಿತ್ತು- ಅದು ಕೇವಲ ಹಿನ್ನೆಲೆಯಲ್ಲಿ ಓಡುತ್ತಿರಲಿಲ್ಲ. ಸುದ್ದಿಯನ್ನು ಸಕ್ರಿಯವಾಗಿ ಆಲಿಸಿಕೊಳ್ಳಲಾಗುತ್ತಿತ್ತು. ಬಹು ಭಾಷೆಗಳಲ್ಲಿ ಪತ್ರಿಕೆಗಳು ಬರುತ್ತಿದ್ದವು. ನಮ್ಮ ಬೀದಿಯಲ್ಲಿ, ನಮ್ಮ ರಾಜ್ಯದಲ್ಲಿ, ಜಗತ್ತಿನೆಲ್ಲೆಡೆ ಏನಾಗುತ್ತಿದೆ ಎಂದು ತಿಳಿಯಲು ಉತ್ಸುಕರಾಗಿರುತ್ತಿದ್ದೆವು. ಆ ಕುತೂಹಲ ಇಂದು ಮಾಯವಾಗಿದೆ. ಜನರೀಗ ಅರಿವನ್ನು ಪ್ರದರ್ಶಿಸುತ್ತಾರೆ- ’ಬ್ಲ್ಯಾಕ್ ಲೈಫ್ ಮ್ಯಾಟರ್ಸ್’ ಎಂದರೆ ಇನ್‌ಸ್ಟಾಗ್ರಾಮ್‌ನಲ್ಲಿ ಕಪ್ಪು ಚೌಕ, ಪ್ಯಾಲೆಸ್ಟೀನ್ ಎಂದರೆ ಕೆಲವು ಟ್ರೆಂಡಿಂಗ್ ಹ್ಯಾಶ್‌ಟ್ಯಾಗ್‌ಗಳು. ಆದರೆ ತಮ್ಮದೇ ಸ್ವಂತ ನಗರಗಳ ಬಗ್ಗೆ ಅವರು ಕುರುಡರು. ಮುಸ್ಲಿಮರಿಗೆ ಮನೆಗಳು ಅಥವಾ ಉದ್ಯೋಗಗಳನ್ನು ನಿರಾಕರಿಸಲಾಗುತ್ತಿದೆ ಎಂಬುದು ಅವರಿಗೆ ತಿಳಿದಿಲ್ಲ. ಅವರ ಮುಂದೆಯೇ ದಿನನಿತ್ಯವೂ ನಡೆಯುತ್ತಿರುವ ತಾರತಮ್ಯದ ಅರಿವೇ ಅವರಿಗಿಲ್ಲ. ಅವರು ಪ್ಯಾಲೆಸ್ಟೀನ್ ಬಗ್ಗೆ ಮಾತನಾಡುತ್ತಾರೆ. ಆದರೆ ಗುಜರಾತನ್ನು ನಿರ್ಲಕ್ಷಿಸುತ್ತಾರೆ. ಇದು ತಲೆಕೆಳಗಾದ ಜಗತ್ತು.

  • ಇದು ಅಜ್ಞಾನ, ಹೌದು. ಆದರೆ ಇದು ಸ್ವೀಕಾರವೂ ಹೌದು. ’ಇದು ನನ್ನ ವಾಸ್ತವ’ ಎಂಬ ನಂಬಿಕೆ. ಮುಸ್ಲಿಮರು, ಶೋಷಿತ ಜಾತಿಗಳು ಬದುಕುವುದೇ ಹೀಗೆ. ನಾನದರ ಬಗ್ಗೆಯೆಲ್ಲಾ ಇಷ್ಟು ಮಾತ್ರವೇ ಯೋಚಿಸುತ್ತೇನೆ. ಅದಕ್ಕೆ ನಾನದನ್ನು ಇಷ್ಟು ಮಾತ್ರವೇ ಗಮನಿಸುತ್ತೇನೆ.

ಝಾರಾ: ನಿಜ.

  • ಜನರಿಗೆ ಹಿಂದೆಂದಿಗಿಂತಲೂ ಹೆಚ್ಚು ಮಾಹಿತಿ ಲಭ್ಯವಿರುವ ಸಂದರ್ಭದಲ್ಲಿ ನಾವಿದ್ದೇವೆ. ಹಿಂದೆ, ಕೇವಲ ಒಂದು ಸುದ್ದಿವಾಹಿನಿ ಇದ್ದಾಗ, ಅದು ನಿಮ್ಮ ಏಕೈಕ ಸುದ್ದಿ ಮೂಲವಾಗಿತ್ತು. ಆದರೀಗ, ಸುದ್ದಿ ಅಕ್ಷರಶಃ ನಿಮ್ಮ ಬೆರಳ ತುದಿಯಲ್ಲಿದೆ. ಇಷ್ಟಾದರೂ ಜನರು ಅಜ್ಞಾನವನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಅದು ನಮ್ಮ ಬಗ್ಗೆ- ಸಾಮಾಜಿಕ ವಾಸ್ತವಗಳಿಗೆ ನಮ್ಮ ಸಾಮೂಹಿಕ ಪ್ರತಿಕ್ರಿಯೆ- ಏನನ್ನು ಸೂಚಿಸುತ್ತಿದೆ? ನನ್ನನ್ನೂ ಒಳಗೊಂಡಂತೆ ಅನೇಕ ಪತ್ರಕರ್ತರನ್ನು ಅದು ಭ್ರಮನಿರಸನವಾಗಿಸಿದೆ. ನೀವದಕ್ಕೆ ಹೇಗೆ ಪ್ರತಿಕ್ರಿಯಿಸುತ್ತೀರಿ? ಅಜ್ಞಾನವನ್ನು ಹೇಗಾದರೂ ಮೌನವು ಸಮರ್ಥಿಸುತ್ತದೆ ಎಂಬಂತೆ, ಮೌನವನ್ನು ಆಯ್ಕೆ ಮಾಡುವ ಈ ವ್ಯಾಪಕ ಮನೋಭಾವವನ್ನು ನೀವು ಹೇಗೆ ನಿಭಾಯಿಸುತ್ತೀರಿ? ನಿಮಗೆ ನನ್ನ ಪ್ರಶ್ನೆ ಅರ್ಥವಾಗಿದೆ ಅನ್ನಿಸುತ್ತಿದೆ..

ಝಾರಾ: ನಿಜ. ಅದು ನಿಜವಾಗಿಯೂ ನಮ್ಮ ಆಸಕ್ತಿಯನ್ನು ಕೆರಳಿಸುವಂತದ್ದೇ. ಕೆಲವು ದಿನಗಳ ಹಿಂದೆ ನಾನೂ ಈ ಬಗ್ಗೆ ಯೋಚಿಸುತ್ತಿದ್ದೆ. ಈ ಪುಸ್ತಕದ ಬರವಣಿಗೆ ನನ್ನನ್ನು ಈ ಬಗ್ಗೆ ಮತ್ತಷ್ಟು ಯೋಚಿಸುವಂತೆ ಮಾಡಿದೆ. 2002ರ ಮೊದಲು, ನಾನು ಪ್ರೌಢಶಾಲೆಯಲ್ಲಿದ್ದಾಗ, ನಾವು [ಜರ್ಮನಿಯಲ್ಲಿ ಹಿಟ್ಲರನು ನಡೆಸಿದ ಹತ್ಯಾಕಾಂಡದ ಬಗ್ಗೆ ಓದಿದ್ದೇವೆ]. ನಾನು ಅದನ್ನು ಅರ್ಥಮಾಡಿಕೊಳ್ಳಲು ತುಂಬಾ ಉತ್ಸುಕಳಾಗಿದ್ದೆ ಎಂಬ ನೆನಪಿದೆ ನನಗೆ. ನನ್ನ ಯುವ ಮನಸ್ಸಿಗೆ ಮನುಷ್ಯರು ಸಮುದಾಯವೊಂದನ್ನು ನಿರ್ನಾಮ ಮಾಡಲು ಸುಧಾರಿತ-ವ್ಯವಸ್ಥಿತ ತಂತ್ರಜ್ಞಾನವನ್ನು ಬಳಸಿ- ಯಾವ ಮಟ್ಟಿಗೆ ಹೋಗಲು ಸಾಧ್ಯ ಎಂಬುದು ನನಗೆ ಗ್ರಹಿಸಲಾಗದ ಸಂಗತಿಯಾಗಿತ್ತು. ಅದು ನನ್ನ ವ್ಯವಸ್ಥೆಗೇ ಆಘಾತವನ್ನುಂಟುಮಾಡಿತ್ತು. ನಾನು ಉತ್ತರಗಳ ಹುಡುಕಾಡುತ್ತಿದ್ದೆ. ಜಾಗತಿಕ ಮಟ್ಟದಲ್ಲಿ ಇಂತಹದ್ದು ಹೇಗೆ ಸಂಭವಿಸಬಹುದು? ಇಷ್ಟೆಲ್ಲಾ ನಡೆಯುತ್ತಿರುವಾಗ ಯಾರೂ ಮಧ್ಯ ಪ್ರವೇಶಿಸಲಿಲ್ಲವೇ ಎಂದು ಕೇಳುತ್ತಲೇ ಇದ್ದೆ?

ಅದಾಗಿ, ಕೇವಲ ಒಂದು ವರ್ಷದ ನಂತರ, ಗುಜರಾತಿನ ಹತ್ಯಾಕಾಂಡ ನಡೆದೇಹೋಯಿತು. ಅಷ್ಟರಲ್ಲಾಗಲೇ ನನ್ನ ಮನಸ್ಸು ಆಘಾತಕ್ಕೊಳಗಾಗಿತ್ತು. ಆದರೆ, ಆ ಆಘಾತಕ್ಕೆ ನನ್ನನ್ನು ಜರ್ಮನಿಯಲ್ಲಿ ನಡೆದ ಹತ್ಯಾಕಾಂಡದ ಬಗ್ಗೆ ಮತ್ತಷ್ಟು ಓದುವುದನ್ನು ತಡೆಯಲಾಗಲಿಲ್ಲ. ಅದು ಇನ್ನಿತರ ನರಮೇಧಗಳನ್ನು ಮತ್ತಷ್ಟು ಆಳವಾಗಿ ಅರ್ಥಮಾಡಿಕೊಳ್ಳುವಂತೆ ನನ್ನನ್ನು ಪ್ರೇರೇಪಿಸಿತು. ನಾನು ಏನನ್ನು ಕಂಡಿದ್ದೆನೋ ಅದನ್ನು ವಿವರಿಸುವಂತಹ ಅರ್ಥಕ್ಕಾಗಿ, ಮಾದರಿಗಳಿಗಾಗಿ ನಾನು ಹುಡುಕಾಡುತ್ತಲೇ ಇದ್ದೆ.

ನನ್ನ ಪುಸ್ತಕವು ಕಳೆದ ವರ್ಷ ಭಾರತದಲ್ಲಿ ಬಿಡುಗಡೆಯಾದಾಗಿನಿಂದ, ಅದನ್ನು ಓದಿ ಇತರರಿಗೂ ಓದಲು ನೀಡಿರುವಂತಹವರೊಟ್ಟಿಗೆ ಮಾತನಾಡಿದ್ದೇನೆ. ಆದರೆ, “ನನ್ನ ಸ್ನೇಹಿತರಿಗೂ ಇದನ್ನೋದಲು ಒತ್ತಾಯಿಸುತ್ತಿದ್ದೇನೆ. ಆದರೆ ಇದು ನಮ್ಮನ್ನು ಖಿನ್ನತೆಗೆ ದೂಡುವಂತಿದೆ ಎನ್ನುತ್ತಾರೆ” ಎಂದು ಜನರು ಹೇಳುವುದನ್ನು ಕೂಡ ನಾನು ಕೇಳಿದ್ದೇನೆ. ಅವರ್‍ಯಾರಾದರೂ ಹೀಗೆಂದೊಡನೆಯೇ ನಾನೊಂದು ಪ್ರಶ್ನೆ ಕೇಳುತ್ತೇನೆ: ಅವರ ಯಾವ ಸಮುದಾಯಕ್ಕೆ ಸೇರಿದವರು? ಎಂದು. ಕಾರಣ, ನನಗೊಂದು ಕುತೂಹಲವಿದೆ- ನೀವು ಮುಸ್ಲಿಮರೋ, ದಲಿತರೋ, ಆದಿವಾಸಿಯೋ ಅಥವಾ ವ್ಯವಸ್ಥೆಯಿಂದ ವೈಯಕ್ತಿಕವಾಗಿ ಅನ್ಯಾಯವನ್ನು ಅನುಭವಿಸಿದವರಲ್ಲದಿದ್ದರೆ, ನಿಮ್ಮದೇ ಸ್ವಂತ ದೇಶದಲ್ಲಿ ಏನಾಗುತ್ತಿದೆ ಎಂಬುದನ್ನು ತಿಳಿದುಕೊಳ್ಳಲು ಸಾಧ್ಯವಾಗದಷ್ಟರಮಟ್ಟಿಗೆ ನಿಮ್ಮ ಸಮಯ ಮತ್ತು ಗಮನವನ್ನು ಆವರಿಸಿರುವುದಾದರೂ ಏನು? ನೀವು ಅಷ್ಟೊಂದು ಬ್ಯುಸಿಯಾಗಿರುವುದು ಯಾವುದರಲ್ಲಿ?

“ಜಗತ್ತಿನ ತುಂಬಾ ನೋವು, ದುಃಖ, ಖಿನ್ನತೆಗಳೇ ತುಂಬುದೆ; ಇದಕ್ಕಿಂತಲೂ ಹೆಚ್ಚಿನದನ್ನು ನನಗೆ ನಿಭಾಯಿಸಲು ಸಾಧ್ಯವಿಲ್ಲ ಎಂಬ ಈ ಮನೋಭಾವ ನನ್ನನ್ನು ಬೆರಗುಗೊಳಿಸುತ್ತದೆ. ಜಗತ್ತಿನ ತುಂಬಾ ಕತ್ತಲೆಯೇ ಏಕಿದೆ ಎಂಬುದರ ಬಗ್ಗೆ ನಿಮಗೆ ಕುತೂಹಲವಿಲ್ಲದಿದ್ದರೆ, ಅದು ಹೇಗೆ ಬದಲಾಗುತ್ತದೆ ಎಂದು ಹೇಗೆ ತಾನೇ ನಿರೀಕ್ಷಿಸುತ್ತೀರಿ? ಇದು ವಿಚಿತ್ರವಾದ ಲೂಪ್ ಒಂದನ್ನು ಸೃಷ್ಟಿಸುತ್ತದೆ. ಈ ಲೂಪಿನಲ್ಲಿ ದಬ್ಬಾಳಿಕೆಯನ್ನು ಎತ್ತಿಹಿಡಿಯುವ ಸಂರಚನೆಗಳನ್ನು ಜನರು ಎದುರಿಸದೆಯೇ ಜಗತ್ತು ತಾನೇತಾನಾಗಿ, ಮಾಂತ್ರಿಕವಾಗಿ ಅದಾಗದೆ ಸರಿಯಾಗಿಬಿಡಲಿ ಎಂದು ಬಯಸುತ್ತಾರೆ. ಅದಕ್ಕೆ ನಾನು ಹೇಳುವುದು: ಸರಿ, ನನ್ನ ಪುಸ್ತಕವನ್ನು ಓದಬೇಡಿ. ಪರವಾಗಿಲ್ಲ. ಆದರೆ, ಬೇರೆ ಏನನ್ನಾದರೂ ಓದಿ. ನಿಮಗೆ ಕುತೂಹಲವೇ ಇಲ್ಲದಿರಲು ಹೇಗೆ ಸಾಧ್ಯ?

  • ಅದು ಬಹಳ ಮುಖ್ಯ ಪ್ರಶ್ನೆ. ಈ ಸಂವಾದವನ್ನು ಮುಕ್ತಾಯಗೊಳಿಸಲು ಇದೇ ಸೂಕ್ತ ಮಾತುಗಳೆಂದು ನಾನು ಭಾವಿಸಿದ್ದೇನೆ. ನೀವು ಕೇಳುತ್ತಿರುವ ಪ್ರಶ್ನೆ ಕೇವಲ ನಿಮ್ಮ ಪುಸ್ತಕಕ್ಕೆ ಸಂಬಂಧಿಸಿದ್ದಲ್ಲ. ಬದಲಿಗೆ, ಭಾರತ ಮತ್ತು ಜಗತ್ತಿನಾದ್ಯಂತ ನಡೆಯುತ್ತಿರುವ ಎಲ್ಲದಕ್ಕೂ ನಮ್ಮ ಪ್ರತಿಕ್ರಿಯೆ ಏನು ಎಂಬುದಕ್ಕೆ ಸಂಬಂಧಿಸಿದೆ. ಫ್ರಂಟ್‌ಲೈನ್‌ನೊಟ್ಟಿಗೆ ಮಾತನಾಡಿದ್ದಕ್ಕಾಗಿ ನಿಮಗೆ ಧನ್ಯವಾದಗಳು.

ಕೃಪೆ: ಫ್ರಂಟ್‌ಲೈನ್ ಪತ್ರಿಕೆ

ಗ್ರೀಷ್ಮಾ ಕುತ್ತಾರ್

ಗ್ರೀಷ್ಮಾ ಕುತ್ತಾರ್
ತಮಿಳುನಾಡಿನ ಮೂಲದ ಪತ್ರಕರ್ತೆರು ಮತ್ತು ವಕೀಲರು. ಬಲಪಂಥೀಯ ಗುಂಪುಗಳು ಅನುಸರಿಸುವ ವಿಧಾನಗಳು ದಿನದಿನವೂ ಯಾವ ಹೊಸ ರೂಪಗಳನ್ನು ಪಡೆದುಕೊಳ್ಳುತ್ತಿವೆ, ಪ್ರಾದೇಶಿಕ ಮಟ್ಟದಲ್ಲಿ ಈ ಗುಂಪುಗಳು ಸಾಂಸ್ಕೃತಿಕ ರಾಷ್ಟ್ರೀಯತೆಯನ್ನು ಹೇಗೆ ಬಳಸಿಕೊಂಡಿವೆ ಮತ್ತು ಜಾತಿ ಅಸ್ಮಿತೆಗಳನ್ನು ಆರ್.ಎಸ್.ಎಸ್ ತನ್ನ ತೆಕ್ಕೆಗೆ ಹೇಗೆ ಸಂಯೋಜಿಸಿಕೊಳ್ಳಲು ಪ್ರಯತ್ನಿಸುತ್ತಿದೆ ಎಂಬುದರ ಬಗ್ಗೆ ತನಿಖೆ ನಡೆಸುವುದು ಅವರ ಆಸಕ್ತಿ ಕ್ಷೇತ್ರ.

 

ನುಡಿದಂತೆ ನಡೆಯುವ ಸರ್ಕಾರ ಎಂದು ಸಾಬೀತು ಮಾಡಲು ಕೇಂದ್ರದ ನೀತಿ ಸಾರಾ ಸಗಟಾಗಿ ತಿರಸ್ಕರಿಸಿ: ರಾಜ್ಯ ಸರ್ಕಾರಕ್ಕೆ ಸಂಯುಕ್ತ ಹೋರಾಟ ಸಮಿತಿ ಆಗ್ರಹ

ನಾನುಗೌರಿ.ಕಾಂಗೆ ದೇಣಿಗೆ ನೀಡಿ ಬೆಂಬಲಿಸಿ

LEAVE A REPLY

Please enter your comment!
Please enter your name here

- Advertisment -

ರೈಲುಗಳಲ್ಲಿ ಹಲಾಲ್ ಮಾಂಸ; ರೈಲ್ವೆಗೆ ಮಾನವ ಹಕ್ಕುಗಳ ಆಯೋಗ ನೋಟಿಸ್

ಭಾರತೀಯ ರೈಲ್ವೆ ತನ್ನ ರೈಲುಗಳಲ್ಲಿ ಹಲಾಲ್-ಸಂಸ್ಕರಿಸಿದ ಮಾಂಸವನ್ನು ಮಾತ್ರ ಪೂರೈಸುತ್ತದೆ ಎಂಬ ದೂರು ಬಂದ ನಂತರ ರಾಷ್ಟ್ರೀಯ ಮಾನವ ಹಕ್ಕುಗಳ ಆಯೋಗ (ಎನ್‌ಎಚ್‌ಆರ್‌ಸಿ) ರೈಲ್ವೆ ಮಂಡಳಿಗೆ ನೋಟಿಸ್ ನೀಡಿದೆ. "ಇದು ತಾರತಮ್ಯವನ್ನು ಸೃಷ್ಟಿಸುತ್ತದೆ,...

ಕರ್ತವ್ಯದಲ್ಲಿದ್ದಾಗ ಧಾರ್ಮಿಕ ಆಚರಣೆಗೆ ನಿರಾಕರಣೆ; ಹೈದರಾಬಾದ್ ಪೊಲೀಸರ ವಿರುದ್ಧ ಹಿಂದುತ್ವ ಗುಂಪಿನಿಂದ ಪ್ರತಿಭಟನೆ

ಕರ್ತವ್ಯದಲ್ಲಿರುವಾಗ ಸಬ್-ಇನ್ಸ್‌ಪೆಕ್ಟರ್ ಅವರಿಗೆ ಅಯ್ಯಪ್ಪ ದೀಕ್ಷಾ ಪದ್ಧತಿಗಳನ್ನು ಅನುಸರಿಸಲು ಅನುಮತಿ ನಿರಾಕರಿಸಿದ ಪೊಲೀಸ್ ಆಂತರಿಕ ಜ್ಞಾಪಕ ಪತ್ರವು ಸಾರ್ವಜನಿಕವಾಗಿ ಪ್ರಸಾರವಾದ ನಂತರ ಹೈದರಾಬಾದ್‌ನ ಆಗ್ನೇಯ ವಲಯ ಪೊಲೀಸರು ರಾಜಕೀಯ ವಿವಾದದ ಮಧ್ಯದಲ್ಲಿ ಸಿಲುಕಿದ್ದಾರೆ. ಮೇಲಧಿಕಾರಿಗಳು...

ಆನ್‌ಲೈನ್‌ ವಿಷಯಗಳ ನಿಯಂತ್ರಣ : ಸ್ವಾಯತ್ತ ಸಂಸ್ಥೆಯ ಅಗತ್ಯವಿದೆ ಎಂದ ಸುಪ್ರೀಂ ಕೋರ್ಟ್

ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳಲ್ಲಿ ಅಶ್ಲೀಲ, ಆಕ್ರಮಣಕಾರಿ ಅಥವಾ ಕಾನೂನುಬಾಹಿರ ವಿಷಯವನ್ನು ನಿಯಂತ್ರಿಸಲು 'ತಟಸ್ಥ, ಸ್ವತಂತ್ರ ಮತ್ತು ಸ್ವಾಯತ್ತ' ಸಂಸ್ಥೆಯ ಅಗತ್ಯವಿದೆ ಎಂದು ಸುಪ್ರೀಂ ಕೋರ್ಟ್ ಗುರುವಾರ (ನ. 27) ಒತ್ತಿ ಹೇಳಿದೆ. ಮಾಧ್ಯಮ ಸಂಸ್ಥೆಗಳು...

ಆರು ವರ್ಷದ ಬಾಲಕಿ ಮೇಲೆ ಅತ್ಯಾಚಾರ: ಕೃತ್ಯ ಎಸಗಿದವನನ್ನು ಗಲ್ಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಆಗ್ರಹ

ಮಧ್ಯಪ್ರದೇಶದ ಪಂಜ್ರಾ ಗ್ರಾಮದಲ್ಲಿ ಆರು ವರ್ಷದ ಬಾಲಕಿಯ ಮೇಲೆ ನಡೆದ ಅತ್ಯಾಚಾರ ಪ್ರಕರಣ ಪ್ರತಿಭಟನೆಗೆ ಕಾರಣವಾಯಿತು. ಕೃತ್ಯ ಎಸಗಿದ ಸಲ್ಮಾನ್‌ನನ್ನು ಗಲಗಲಿಗೇರಿಸುವಂತೆ ಹಿಂದೂ-ಮುಸ್ಲಿಂ ಸಮುದಾಯ ಒಗ್ಗಟ್ಟಾಗಿ ಆಗ್ರಹಿಸಿದೆ. ನ್ಯಾಯಕ್ಕಾಗಿ ಒತ್ತಾಯಿಸುತ್ತಿರುವ ಎರಡೂ ಸಮುದಾಯಗಳು ಕೃತ್ಯವನ್ನು...

ತೆಲಂಗಾಣ ಮಾಜಿ ಸರಪಂಚ್ ಭೀಕರ ಹತ್ಯೆ ಪ್ರಕರಣ; ಸುಪಾರಿ ಗ್ಯಾಂಗ್ ಬಂಧನ

ತೆಲಂಗಾಣ ರಾಜ್ಯದ ಗದ್ವಾಲ ಜಿಲ್ಲೆಯ ನಂದಿನ್ನಿ ಗ್ರಾಮದ ಮಾಜಿ ಸರಪಂಚ ಚಿನ್ನ ಭೀಮರಾಯ ಎಂಬುವವರನ್ನು ಕಳೆದ ಶುಕ್ರವಾರ ಮಧ್ಯಾಹ್ನ ಜಾಂಪಲ್ಲಿ ಗ್ರಾಮದ ಹತ್ತಿರ ದ್ವಿಚಕ್ರ ವಾಹನಕ್ಕೆ ಕಾರಿನಿಂದ ಡಿಕ್ಕಿ ಹೊಡೆದು ಕೊಲೆ ಮಾಡಲಾಗಿತ್ತು....

ಹಿರಿಯ ನಾಯಕರೊಂದಿಗೆ ಚರ್ಚಿಸಿ ಸಿಎಂ ಬದಲಾವಣೆ ಗೊಂದಲಕ್ಕೆ ತೆರೆ : ಮಲ್ಲಿಕಾರ್ಜುನ ಖರ್ಗೆ

ಕರ್ನಾಟಕದಲ್ಲಿ ಹೆಚ್ಚುತ್ತಿರುವ ನಾಯಕತ್ವದ ಜಗಳವನ್ನು ಪರಿಹರಿಸಲು ರಾಹುಲ್ ಗಾಂಧಿ, ಮುಖ್ಯಮಂತ್ರಿ ಸಿದ್ದರಾಮಯ್ಯ ಮತ್ತು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಸೇರಿದಂತೆ ಪಕ್ಷದ ಹಿರಿಯ ನಾಯಕರೊಂದಿಗೆ ನವದೆಹಲಿಯಲ್ಲಿ ಸಭೆ ನಡೆಸುವುದಾಗಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ...

ದಲಿತ ಎಂಬ ಕಾರಣಕ್ಕೆ ಅಯೋಧ್ಯೆ ಧ್ವಜಾರೋಹಣಕ್ಕೆ ನನ್ನನ್ನು ಆಹ್ವಾನಿಸಿಲ್ಲ: ಎಸ್‌ಪಿ ಸಂಸದ ಅವಧೇಶ್ ಪ್ರಸಾದ್

ಅಯೋಧ್ಯೆಯ ಶ್ರೀ ರಾಮ ಜನ್ಮಭೂಮಿ ದೇವಾಲಯದಲ್ಲಿ ನಡೆದ ಧ್ವಜಾರೋಹಣ ಸಮಾರಂಭಕ್ಕೆ ತಮ್ಮನ್ನು ಆಹ್ವಾನಿಸಲಾಗಿಲ್ಲ ಎಂದು ಸಮಾಜವಾದಿ ಪಕ್ಷದ ಸಂಸದ ಅವಧೇಶ್ ಪ್ರಸಾದ್ ಹೇಳಿದ್ದಾರೆ. ದಲಿತ ಸಮುದಾಯಕ್ಕೆ ಸೇರಿದವರಾಗಿರುವುದರಿಂದ ನನ್ನನ್ನು ಹೊರಗಿಡಲಾಗಿದೆ ಎಂದು ಅವರು...

ನೂರಾರು ಹುಡುಗಿಯರ ಮೇಲೆ ಲೈಂಗಿಕ ದೌರ್ಜನ್ಯ, ಜೈಲಿನಲ್ಲಿ ನಿಗೂಢ ಸಾವು : ಅಮೆರಿಕವನ್ನು ತಲ್ಲಣಗೊಳಿಸಿದ ಜೆಫ್ರಿ ಎಪ್‌ಸ್ಟೀನ್ ಯಾರು?

ಜೆಫ್ರಿ ಎಪ್‌ಸ್ಟೀನ್ ಎಂಬ ಅಮೆರಿಕದ ಈ ಪ್ರಭಾವಿ ವ್ಯಕ್ತಿಯ ಹೆಸರು ಕಳೆದ ದಿನಗಳಿಂದ ಭಾರೀ ಚರ್ಚೆಯಲ್ಲಿದೆ. 2019ರಿಂದಲೂ ಈತನ ಬಗ್ಗೆ ಜಾಗತಿಕ ಮಟ್ಟದಲ್ಲಿ ಚರ್ಚೆಗಳು ನಡೆದರೂ, ಈಗ ಮತ್ತೊಮ್ಮೆ ಈತನ ವಿಷಯ ಮುನ್ನೆಲೆಗೆ...

ಎಕ್ಸ್‌ಪ್ರೆಸ್ ರೈಲಿನಲ್ಲಿ ನೂಡಲ್ಸ್‌ ಬೇಯಿಸಿದ ಮಹಿಳೆ ಪುಣೆಯಲ್ಲಿ ಪತ್ತೆ; ಕ್ಷಮೆಯಾಚನೆ

ಎಕ್ಸ್‌ಪ್ರೆಸ್ ರೈಲಿನ ಕೋಚ್‌ನ ಪವರ್ ಸಾಕೆಟ್‌ಗೆ ಪ್ಲಗ್ ಮಾಡಲಾದ ಎಲೆಕ್ಟ್ರಿಕ್ ಕೆಟಲ್‌ನಿಂದ ಬಳಸಿ ನೂಡಲ್ಸ್ ತಯಾರಿಸುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿತ್ತು; ಆ ಮಹಿಳೆಯನ್ನು ಕೇಂದ್ರ ರೈಲ್ವೆ ಪತ್ತೆಹಚ್ಚಿದೆ. ಸರಿತಾ ಲಿಂಗಾಯತ್...

ಬೆಂಗಳೂರು ಪೊಲೀಸರಲ್ಲಿ ವಿಶ್ವಾಸಾರ್ಹತೆಯ ಬಿಕ್ಕಟ್ಟು: ಕಳೆದ ಹತ್ತು ತಿಂಗಳಲ್ಲಿ 124 ಪೊಲೀಸ್ ಸಿಬ್ಬಂದಿ ಅಮಾನತು

ಕಳೆದ ಹತ್ತು ತಿಂಗಳಲ್ಲಿ ಬೆಂಗಳೂರಿನಲ್ಲಿ ಕಾನ್‌ಸ್ಟೆಬಲ್‌ಗಳಿಂದ ಹಿಡಿದು ಐಪಿಎಸ್ ಅಧಿಕಾರಿಗಳವರೆಗೆ ಸುಮಾರು 124 ಪೊಲೀಸ್ ಸಿಬ್ಬಂದಿಯನ್ನು, ಭ್ರಷ್ಟಾಚಾರ, ಸುಲಿಗೆ, ದರೋಡೆ, ಕರ್ತವ್ಯ ಲೋಪ ಮತ್ತು ಮಾದಕವಸ್ತು ಮಾರಾಟದಂತಹ ಅಪರಾಧಗಳಿಗಾಗಿ ಅಮಾನತುಗೊಳಿಸಲಾಗಿದೆ. ಆದರೆ ಯಾವುದೇ ಪ್ರಕರಣವೂ...