ತೆಲಂಗಾಣ ಸರ್ಕಾರ ಹಿಂದುಳಿದ ವರ್ಗಗಳಿಗೆ ಮೀಸಲಾತಿ ಹೆಚ್ಚಿಸುವ ಭರವಸೆಯನ್ನು ಈಡೇರಿಸಿದೆ ಎಂದು ಕಾಂಗ್ರೆಸ್ ನಾಯಕರಾದ ರಾಹುಲ್ ಗಾಂಧಿ ಮತ್ತು ಪ್ರಿಯಾಂಕಾ ಗಾಂಧಿ ವಾದ್ರಾ ಹೇಳಿದ್ದಾರೆ. “ಸಾಮಾಜಿಕ ನ್ಯಾಯದ ಕಡೆಗೆ ಒಂದು ಕ್ರಾಂತಿಕಾರಿ ಹೆಜ್ಜೆ” ಎಂದು ಇಬ್ಬರೂ ನಾಯಕರು ಕರೆದಿದ್ದಾರೆ.
ಶಿಕ್ಷಣ, ಉದ್ಯೋಗ ಮತ್ತು ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ಹಿಂದುಳಿದ ವರ್ಗಗಳಿಗೆ (ಬಿ.ಸಿ.) ಮೀಸಲಾತಿಯನ್ನು ಶೇಕಡಾ 42 ಕ್ಕೆ ಹೆಚ್ಚಿಸಲು ತೆಲಂಗಾಣ ವಿಧಾನಸಭೆ ಎರಡು ಮಸೂದೆಗಳನ್ನು ಅಂಗೀಕರಿಸಿದ ಮರುದಿನ, ಅವರು ತೆಲಂಗಾಣ ಸರ್ಕಾರವನ್ನು ಅಭಿನಂದಿಸಿದರು.
ರಾಜ್ಯದಲ್ಲಿ ವೈಜ್ಞಾನಿಕ ಜಾತಿ ಜನಗಣತಿಯ ಮೂಲಕ ಪಡೆದ ಒಬಿಸಿ ಸಮುದಾಯದ ನಿಜವಾದ ಸಂಖ್ಯೆಯನ್ನು ಅಂಗೀಕರಿಸಲಾಗಿದೆ. ಶಿಕ್ಷಣ, ಉದ್ಯೋಗ ಮತ್ತು ರಾಜಕೀಯದಲ್ಲಿ ಅವರ ಸಮಾನ ಭಾಗವಹಿಸುವಿಕೆಯನ್ನು ಖಚಿತಪಡಿಸಿಕೊಳ್ಳಲು ವಿಧಾನಸಭೆಯಲ್ಲಿ ಶೇಕಡಾ 42 ರಷ್ಟು ಮೀಸಲಾತಿಗಾಗಿ ಮಸೂದೆಯನ್ನು ಅಂಗೀಕರಿಸಲಾಗಿದೆ ಎಂದು ರಾಹುಲ್ ಗಾಂಧಿ ‘ಎಕ್ಸ್’ ನಲ್ಲಿ ಪೋಸ್ಟ್ ಮಾಡಿದ್ದಾರೆ.
“ಇದು ನಿಜಕ್ಕೂ ಸಾಮಾಜಿಕ ನ್ಯಾಯದ ಕಡೆಗೆ ಒಂದು ಕ್ರಾಂತಿಕಾರಿ ಹೆಜ್ಜೆಯಾಗಿದ್ದು, ಇದರ ಮೂಲಕ ರಾಜ್ಯದಲ್ಲಿ ಶೇ. 50 ಮೀಸಲಾತಿಯ ಗೋಡೆಯನ್ನು ಸಹ ಕೆಡವಲಾಗಿದೆ” ಎಂದು ರಾಹುಲ್ ಗಾಂಧಿ ಬರೆದಿದ್ದಾರೆ.
ಜಾತಿ ಸಮೀಕ್ಷೆಯ ಡೇಟಾವನ್ನು ಬಳಸಿಕೊಂಡು ಪ್ರತಿಯೊಂದು ಸಮುದಾಯದ ಸಾಮಾಜಿಕ ಮತ್ತು ಆರ್ಥಿಕ ಸ್ಥಿತಿಗಳನ್ನು ವಿಶ್ಲೇಷಿಸುವ ಮೂಲಕ, ಎಲ್ಲರ ಯೋಗಕ್ಷೇಮವನ್ನು ಖಚಿತಪಡಿಸುವ ನೀತಿಗಳನ್ನು ರೂಪಿಸಲಾಗುವುದು ಎಂದು ಲೋಕಸಭೆಯ ವಿರೋಧ ಪಕ್ಷದ ನಾಯಕ ಹೇಳಿದರು. ತೆಲಂಗಾಣ ಸರ್ಕಾರವು ಇದಕ್ಕಾಗಿ ಸ್ವತಂತ್ರ ತಜ್ಞರ ಗುಂಪನ್ನು ಸಹ ರಚಿಸಿದೆ ಎಂದು ಅವರು ಗಮನಿಸಿದರು.
“ಎಕ್ಸ್-ರೇ, ಅಂದರೆ ಜಾತಿ ಜನಗಣತಿ ಮೂಲಕ ಮಾತ್ರ ಹಿಂದುಳಿದ ಮತ್ತು ವಂಚಿತ ಸಮುದಾಯಗಳು ತಮ್ಮ ಹಕ್ಕುಗಳನ್ನು ಪಡೆಯಬಹುದು ಎಂದು ನಾನು ನಿರಂತರವಾಗಿ ಹೇಳುತ್ತಿದ್ದೇನೆ. ತೆಲಂಗಾಣವು ದಾರಿ ತೋರಿಸಿದೆ, ಇಡೀ ದೇಶಕ್ಕೆ ಬೇಕಾಗಿರುವುದು ಇದೇ. ಭಾರತದಲ್ಲಿ ಜಾತಿ ಜನಗಣತಿ ಖಂಡಿತವಾಗಿಯೂ ನಡೆಯುತ್ತದೆ, ನಾವು ಅದನ್ನು ಪೂರ್ಣಗೊಳಿಸುತ್ತೇವೆ” ಎಂದು ರಾಹುಲ್ ಗಾಂಧಿ ಹೇಳಿದರು.
ಎಕ್ಸ್‌ನಲ್ಲಿನ ಪೋಸ್ಟ್ ಮಾಡಿರುವ ಪ್ರಿಯಾಂಕಾ ಗಾಂಧಿ, ತೆಲಂಗಾಣದ ಜನರನ್ನು ಅಭಿನಂದಿಸಿದ್ದಾರೆ. ಕಾಂಗ್ರೆಸ್ ಸರ್ಕಾರವು ಮತ್ತೊಂದು ಭರವಸೆಯನ್ನು ಈಡೇರಿಸಿದೆ ಎಂದು ಹೇಳಿದರು.
“ಹಿಂದುಳಿದ ವರ್ಗಗಳ ನಮ್ಮ ಜನರು ಈಗ ಶೇಕರಡ 42 ಮೀಸಲಾತಿಯನ್ನು ಪಡೆಯಲು ಸಾಧ್ಯವಾಗುತ್ತದೆ. ವಿಧಾನಸಭಾ ಚುನಾವಣೆಯ ಸಮಯದಲ್ಲಿ ನಾವು ನಿಮಗೆ ಈ ಭರವಸೆಯನ್ನು ನೀಡಿದ್ದೆವು, ಈಗ ನಾವು ಅದನ್ನು ಈಡೇರಿಸಿದ್ದೇವೆ. ಇದು ಸಾಮಾಜಿಕ ನ್ಯಾಯಕ್ಕಾಗಿ ತೆಗೆದುಕೊಂಡ ಬಹಳ ಮುಖ್ಯವಾದ ಹೆಜ್ಜೆಯಾಗಿದೆ, ಇದು ನಿಮ್ಮನ್ನು ಸಾಮಾಜಿಕವಾಗಿ ಮತ್ತು ಆರ್ಥಿಕವಾಗಿ ಸಬಲೀಕರಣಗೊಳಿಸುತ್ತದೆ. ನಾವು ಯಾವಾಗಲೂ ನಿಮ್ಮೊಂದಿಗೆ, ನಿಮಗಾಗಿ ಇದ್ದೇವೆ” ಎಂದು ಅವರು ಬರೆದಿದ್ದಾರೆ.
ತೆಲಂಗಾಣ ಹಿಂದುಳಿದ ವರ್ಗಗಳು, ಪರಿಶಿಷ್ಟ ಜಾತಿಗಳು ಮತ್ತು ಪರಿಶಿಷ್ಟ ಪಂಗಡಗಳ (ಶಿಕ್ಷಣ ಸಂಸ್ಥೆಗಳಲ್ಲಿ ಸ್ಥಾನಗಳು ಮತ್ತು ರಾಜ್ಯದ ಅಡಿಯಲ್ಲಿ ನೇಮಕಾತಿಗಳು ಅಥವಾ ಸೇವೆಗಳಲ್ಲಿನ ಹುದ್ದೆಗಳ ಮೀಸಲಾತಿ) ಮಸೂದೆ 2025 ಮತ್ತು ತೆಲಂಗಾಣ ಹಿಂದುಳಿದ ವರ್ಗಗಳ (ಗ್ರಾಮೀಣ ಮತ್ತು ನಗರ ಸ್ಥಳೀಯ ಸಂಸ್ಥೆಗಳಲ್ಲಿ ಸ್ಥಾನಗಳ ಮೀಸಲಾತಿ) ಮಸೂದೆ 2025 ಅನ್ನು ವಿಧಾನಸಭೆ ಸೋಮವಾರ ಅಂಗೀಕರಿಸಿತು.
ಬಿಸಿ ಮೀಸಲಾತಿಯನ್ನು ಶೇಕಡಾ 42 ಕ್ಕೆ ಹೆಚ್ಚಿಸುವುದರಿಂದ ಎಲ್ಲ ವರ್ಗಗಳಿಗೆ ಒಟ್ಟಾರೆ ಕೋಟಾಕ್ಕಾಗಿ ಸುಪ್ರೀಂ ಕೋರ್ಟ್ ವಿಧಿಸಿರುವ ಶೇಕಡಾ 50 ರ ಮಿತಿಯನ್ನು ಉಲ್ಲಂಘಿಸುತ್ತದೆ, ರಾಜ್ಯ ವಿಧಾನಸಭೆ ಅಂಗೀಕರಿಸಿದ ಮಸೂದೆಗಳಿಗೆ ಕೇಂದ್ರದ ಅನುಮೋದನೆ ಅಗತ್ಯವಿದೆ.
ವಿಧಾನಸಭೆಯು ಎರಡು ಮಸೂದೆಗಳನ್ನು ಅಂಗೀಕರಿಸಿದ ನಂತರ, ಮುಖ್ಯಮಂತ್ರಿ ಎ. ರೇವಂತ್ ರೆಡ್ಡಿ ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದು ರಾಜಕೀಯ ಪಕ್ಷಗಳ ನಾಯಕರೊಂದಿಗೆ ಅವರನ್ನು ಭೇಟಿ ಮಾಡಲು ಸಮಯ ಕೋರಿದರು.
ಕಾಂಗ್ರೆಸ್, ಬಿಜೆಪಿ, ಎಐಎಂಐಎಂ ಮತ್ತು ಸಿಪಿಐ ನಾಯಕರೊಂದಿಗೆ ಪ್ರಧಾನಿಯನ್ನು ಭೇಟಿ ಮಾಡಲು ಮುಖ್ಯಮಂತ್ರಿ ಸಮಯಾವಕಾಶ ಕೋರಿದರು.
ನವಭಾರತದಲ್ಲಿ ವಿಪಕ್ಷಗಳ ಧ್ವನಿಯನ್ನು ಮೌನಗೊಳಿಸಲಾಗಿದೆ: ರಾಹುಲ್ ಗಾಂಧಿ


