ಕೇಂದ್ರ ಸಚಿವ ಹೆಚ್.ಡಿ ಕುಮಾರಸ್ವಾಮಿ ಮತ್ತು ಅವರ ಕುಟುಂಬದವರು ರಾಮನಗರ ಜಿಲ್ಲೆ ಬಿಡದಿ ಹೋಬಳಿಯ ಕೇತಗಾನಹಳ್ಳಿಯಲ್ಲಿ ಒತ್ತುವರಿ ಮಾಡಿರುವ ಸರ್ಕಾರಿ ಜಮೀನಿನ ತೆರವು ಕಾರ್ಯಾಚರಣೆ ಮಂಗಳವಾರ (ಮಾ.18) ಆರಂಭಗೊಂಡಿದೆ.
ಕಂದಾಯ ಇಲಾಖೆ ಅಧಿಕಾರಿಗಳು ಪೊಲೀಸ್ ಬಂದೋಬಸ್ತ್‌ನಲ್ಲಿ ಒತ್ತುವರಿ ತೆರವು ಪ್ರಾಂಭಿಸಿದ್ದು, ಕುಮಾರಸ್ವಾಮಿ ಅವರು ಒತ್ತುವರಿ ಮಾಡಿರುವ 5 ಎಕರೆ 25 ಗುಂಟೆ ಸೇರಿದಂತೆ ಒತ್ತುವರಿಯಾಗಿರುವ ಅರ್ಧದಷ್ಟು ಜಾಗದಲ್ಲಿ ಮಂಗಳವಾರ ಗುಂಡಿ ತೋಡಿ ಕಲ್ಲುಗಳನ್ನು ನೆಟ್ಟು , ಬಣ್ಣದಿಂದ ಗೆರೆ ಎಳೆದಿದ್ದಾರೆ. ಉಳಿದ ಜಾಗದ ಕಾರ್ಯಾಚರಣೆ ಬುಧವಾರ ಮುಂದುವರಿಯಲಿದೆ ಎಂದು ವರದಿಯಾಗಿದೆ.
ಕೇತಗಾನಹಳ್ಳಿಯ ಸರ್ವೆ ನಂಬರ್ 7, 8, 9, 16/2 ಹಾಗೂ 79ರಲ್ಲಿ 11 ಎಕರೆ 23 ಗುಂಟೆ ಸರ್ಕಾರಿ ಜಮೀನು ಒತ್ತುವರಿ ಆಗಿರುವುದನ್ನು ಕಂದಾಯ ಇಲಾಖೆ ಮತ್ತು ಸರ್ವೆ ಇಲಾಖೆಯ ಅಧಿಕಾರಿಗಳು ಗುರುತಿಸಿದ್ದಾರೆ. ಇದರಲ್ಲಿ ಕುಮಾರಸ್ವಾಮಿ ಒತ್ತುವರಿ ಮಾಡಿರುವ 5 ಎಕರೆ 25 ಗುಂಟೆ ಜಾಗವೂ ಸೇರಿದೆ.
ಮಂಗಳವಾರ ನಾಲ್ಕು ಜೆಸಿಬಿ ಮತ್ತು ಎರಡು ಟ್ರ್ಯಾಕ್ಟರ್‌ಗಳೊಂದಿಗೆ ಕುಮಾರಸ್ವಾಮಿ ಅವರ ತೋಟದ ಮನೆ ಬಳಿ ಅಧಿಕಾರಿಗಳು ತೆರಳಿದ್ದಾರೆ. ಮುನ್ನೆಚ್ಚರಿಕ ಕ್ರಮವಾಗಿ ಸ್ಥಳದಲ್ಲಿ 25ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜಿಸಲಾಗಿತ್ತು.
ಒತ್ತುವರಿ ತೆರವು ಆರಂಭಕ್ಕೂ ಮುನ್ನ ರಾಮನಗರ ಜಿಲ್ಲಾಧಿಕಾರಿ ಯಶವಂತ್ ವಿ.ಗುರುಕರ್ ಅವರು ಅಧಿಕಾರಿಗಳೊಂದಿಗೆ ಬೆಳಿಗ್ಗೆ ಸಭೆ ನಡೆಸಿದ್ದರು.
ಹೆಚ್‌ಡಿಕೆ ಜಾಗದಲ್ಲಿ ಕಾಂಪೌಂಡ್, ಶೆಡ್
“ಸರ್ವೆ ನಂಬರ್ 8 ಮತ್ತು 9ರ ಜಮೀನಿನಲ್ಲಿ ಕುಮಾರಸ್ವಾಮಿ ತೋಟದ ಮನೆ ಹೊಂದಿದ್ದು, ಅವರು 5 ಎಕರೆ 25 ಗುಂಟೆ ಜಾಗ ಒತ್ತುವರಿ ಮಾಡಿಕೊಂಡಿದ್ದಾರೆ. ಆ ಜಾಗದಲ್ಲಿ ಕಾಂಪೌಂಡ್ ಹಾಗೂ ಶೆಡ್ ನಿರ್ಮಿಸಿದ್ದಾರೆ. ಉಳಿದ ಜಾಗದಲ್ಲಿ ಅಡಿಕೆ ಮತ್ತು ತೆಂಗು ಬೆಳೆಯಲಾಗಿದೆ” ಎಂದು ವರದಿಗಳು ಹೇಳಿವೆ.
ರಾಜ್ಯ ಸರ್ಕಾರದ ಷಡ್ಯಂತ್ರ
“ರೈತನಾಗಿ ಬದುಕಲು ಖರೀದಿಸಿರುವ ಜಮೀನಿನ ವಿಷಯದಲ್ಲಿ ಯಾವುದೇ ಅಕ್ರಮ ಎಸಗಿಲ್ಲ. ಸಾಮಾನ್ಯ ರೈತನ ಜಮೀನು ಒತ್ತುವರಿ ತೆರವು ಮಾಡುವುದಿದ್ದರೂ 15 ದಿನಗಳ ಮೊದಲು ನೋಟಿಸ್ ಕೊಡಬೇಕು. ಆದರೆ, ನನಗೆ ಯಾವುದೇ ನೋಟಿಸ್ ಬಂದಿಲ್ಲ. ಕಾಂಗ್ರೆಸ್ ನೇತೃತ್ವದ ಸರ್ಕಾರ ದಬ್ಬಾಳಿಕೆ ಮಾಡುತ್ತಿದೆ. ನನ್ನನ್ನು ಟಾರ್ಗೆಟ್ ಮಾಡಲಾಗಿದೆ. ದೇಶದ ಇತಿಹಾಸದಲ್ಲಿ ಮೊದಲ ಬಾರಿಗೆ ಈ ರೀತಿಯ ಪ್ರಕರಣಕ್ಕೆ ಎಸ್‌ಐಟಿ ರಚಿಸಲಾಗಿದೆ. ಇಂತಹ ನಡವಳಿಕೆಗೆ ಒಂದಲ್ಲ ಒಂದು ದಿನ ಬೇರೆ ರೀತಿಯ ಉತ್ತರ ಬರುತ್ತದೆ” ಎಂದು ಕುಮಾರಸ್ವಾಮಿ ಮಾಧ್ಯಮಗಳ ಮುಂದೆ ಹೇಳಿದ್ದಾರೆ.
ಕುಮಾರಸ್ವಾಮಿಗೆ ಗಾಬರಿ ಏಕೆ?
“ಕುಮಾರಸ್ವಾಮಿ ಒತ್ತುವರಿ ಮಾಡದಿದ್ದರೆ ಗಾಬರಿ ಆಗುತ್ತಿರುವುದು ಏಕೆ? ಎಲ್ಲದಕ್ಕೂ ಅಳತೆ, ದಾಖಲೆ ಇರುತ್ತದಲ್ಲವೇ. ಇದಕ್ಕೂ ಸಿದ್ದರಾಮಯ್ಯ ಹಾಗೂ ನನಗೂ ಯಾವುದೇ ಸಂಬಂಧ ಇಲ್ಲ. ನ್ಯಾಯಾಲಯ ಹೇಳಿದಂತೆ ಕಾನೂನು ಪ್ರಕಾರ ಕೆಲಸ ಮಾಡಲಾಗಿದೆ. ಕೇತಗಾನಹಳ್ಳಿ ವಿಚಾರಕ್ಕೆ ನಾವು ಯಾವತ್ತೂ ಹೋಗಿಲ್ಲ. ನಮಗೆ ಆ ವಿಚಾರ ಗೊತ್ತೂ ಇಲ್ಲ. ಯಾರೋ ಪಿಐಎಲ್ ಹಾಕಿದ್ದಾರೆ. ಕ್ರಮ ಕೈಗೊಳ್ಳದ್ದಕ್ಕೆ ನ್ಯಾಯಾಲಯ ಅಧಿಕಾರಿಗಳಿಗೆ ಛೀಮಾರಿ ಹಾಕಿದೆ. ನ್ಯಾಯಾಲಯ ಗಡುವು ವಿಧಿಸಿದ್ದಕ್ಕೆ ಅಧಿಕಾರಿಗಳು ಹೋಗಿ ಅಳತೆ ಮಾಡಿದ್ದಾರೆ” ಎಂದು ಉಪಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹೇಳಿದ್ದಾರೆ.
ಸೌಜನ್ಯ ಪರ ಸಭೆ, ಪ್ರತಿಭಟನೆಯನ್ನು ಪೊಲೀಸರು ತಡೆಯುವಂತಿಲ್ಲ: ಹೈಕೋರ್ಟ್ ಮಹತ್ವದ ಆದೇಶ


