ಕಳೆದ ಒಂದು ದಶಕದಲ್ಲಿ (2014-2024) ಬ್ಯಾಂಕ್‌ಗಳು ರೈಟ್ ಆಫ್ ಮಾಡಿರುವ ವಸೂಲಾಗದ ಸಾಲದ (ಎನ್‌ಪಿಎ) ಒಟ್ಟು ಮೊತ್ತವು 16.35 ಲಕ್ಷ ಕೋಟಿ ರೂಪಾಯಿ ಎಂದು ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಲೋಕಸಭೆಯಲ್ಲಿ ತಿಳಿಸಿದ್ದಾರೆ.
2018-19ರ ಹಣಕಾಸು ವರ್ಷದಲ್ಲಿ ಅತಿ ಹೆಚ್ಚು, 2,36,265 ಕೋಟಿ ರೂಪಾಯಿ ಸಾಲ ರೈಟ್ ಆಫ್ ಮಾಡಲಾಗಿದೆ. 2014-15ರ ಹಣಕಾಸು ವರ್ಷದಲ್ಲಿ ಅತಿ ಕಡಿಮೆ, 58,786 ಕೋಟಿ ರೂ. ರೈಟ್ ಆಫ್ ಮಾಡಲಾಗಿದೆ ಎಂದು ಸುದ್ದಿ ಸಂಸ್ಥೆ ಪಿಟಿಐ ವರದಿ ಮಾಡಿದೆ.
2023-24ರ ಆರ್ಥಿಕ ವರ್ಷದಲ್ಲಿ ಬ್ಯಾಂಕ್‌ಗಳು 1,70,270 ಕೋಟಿ ರೂ. ವಸೂಲಾಗದ ಸಾಲ ರೈಟ್ ಆಫ್ ಮಾಡಿವೆ. ಇದು ಹಿಂದಿನ ಹಣಕಾಸು ವರ್ಷದಲ್ಲಿ ರೈಟ್ ಆಫ್ ಮಾಡಿದ 2,16,324 ಕೋಟಿ ರೂ.ಗೆ ಹೋಲಿಸಿದರೆ ಕಡಿಮೆಯಾಗಿದೆ.
ಭಾರತೀಯ ರಿಸರ್ವ್ ಬ್ಯಾಂಕ್‌ನ (ಆರ್‌ಬಿಐ) ಮಾರ್ಗಸೂಚಿ ಹಾಗೂ ಆಡಳಿತ ಮಂಡಳಿ ಒಪ್ಪಿದ ನೀತಿಗೆ ಅನುಗುಣವಾಗಿ ಬ್ಯಾಂಕ್‌ಗಳು ತಾವು ನೀಡಿದ ಸಾಲವು ವಸೂಲಾಗದ ಸಾಲ ಎಂದು ವರ್ಗೀಕರಣ ಆದ ನಾಲ್ಕು ವರ್ಷಗಳ ನಂತರ, ಆ ಸಾಲವನ್ನು ರೈಟ್ ಆಫ್ ಮಾಡುತ್ತವೆ ಎಂದು ಸಚಿವೆ ನಿರ್ಮಲಾ ಸೀತಾರಾಮನ್ ವಿವರಿಸಿದ್ದಾರೆ.
ರೈಟ್ ಆಫ್ ಅಂದರೆ ಸಾಲ ಪಡೆದವನ ಹೊಣೆಗಾರಿಕೇಯೇನೂ ಕಡಿಮೆಯಾಗುವುದಿಲ್ಲ. ಆತನಿಗೆ ಇದರಿಂದ ಲಾಭವೇನೂ ಆಗುವುದಿಲ್ಲ. ಬ್ಯಾಂಕ್‌ಗಳು ಸಾಲ ವಸೂಲಾತಿ ಪ್ರಕ್ರಿಯೆಯನ್ನು ವಿವಿಧ ಮಾರ್ಗಗಳ ಮೂಲಕ ಮುಂದುವರಿಸುತ್ತವೆ ಎಂದು ಅವರು ಸ್ಪಷ್ಟಪಡಿಸಿದ್ದಾರೆ.
ಬ್ಯಾಂಕ್‌ಗಳು ಸಿವಿಲ್ ನ್ಯಾಯಾಲಯಗಳು ಅಥವಾ ಸಾಲ ವಸೂಲಾತಿ ನ್ಯಾಯಮಂಡಳಿಗಳಲ್ಲಿ ಮೊಕದ್ದಮೆ ಹೂಡುವುದು, ಹಣಕಾಸು ಆಸ್ತಿಗಳ ಭದ್ರತೆ, ಪುನರ್ನಿರ್ಮಾಣ ಮತ್ತು ಭದ್ರತಾ ಬಡ್ಡಿ ಕಾಯ್ದೆಯನ್ನು ಜಾರಿಗೊಳಿಸುವುದು, ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯಲ್ಲಿ ದಿವಾಳಿತನ ಮತ್ತು ದಿವಾಳಿತನ ಸಂಹಿತೆಯ ಅಡಿಯಲ್ಲಿ ಕ್ರಮ ಕೈಗೊಳ್ಳುವಂತಹ ವಿವಿಧ ಕಾರ್ಯವಿಧಾನಗಳ ಮೂಲಕ ವಸೂಲಾತಿ ಪ್ರಯತ್ನಗಳನ್ನು ಮುಂದುವರಿಯಲಿವೆ ಎಂದಿದ್ದಾರೆ.
ಡಿಸೆಂಬರ್ 31, 2024 ರ ಹೊತ್ತಿಗೆ ನಿಗದಿತ ವಾಣಿಜ್ಯ ಬ್ಯಾಂಕ್‌ಗಳು 29 ವಿಶಿಷ್ಟ ಸಾಲಗಾರ ಕಂಪನಿಗಳನ್ನು ಎನ್‌ಪಿಎಗಳಾಗಿ ವರ್ಗೀಕರಿಸಿದ್ದು, ಪ್ರತಿಯೊಂದೂ ರೂ. 1,000 ಕೋಟಿ ಅಥವಾ ಅದಕ್ಕಿಂತ ಹೆಚ್ಚಿನ ಬಾಕಿ ಸಾಲಗಳನ್ನು ಹೊಂದಿದ್ದು, ಒಟ್ಟಾರೆಯಾಗಿ ರೂ. 61,027 ಕೋಟಿಗಳಷ್ಟಿದೆ ಎಂದು ತಿಳಿಸಿದ್ದಾರೆ.
ಬಾಕಿ ವಸೂಲಾತಿಗಾಗಿ ಬ್ಯಾಂಕ್‌ಗಳು ಸಾಲಗಾರರಿಗೆ ಕರೆ ಮಾಡುವುದು, ಇಮೇಲ್ ಮಾಡುವುದು ಮುಂತಾದ ಕ್ರಮಗಳನ್ನು ತೆಗೆದುಕೊಳ್ಳುತ್ತವೆ. ಡೀಫಾಲ್ಟ್ ಮೊತ್ತವನ್ನು ಅವಲಂಬಿಸಿ ಬ್ಯಾಂಕ್‌ಗಳು ಕಾರ್ಪೊರೇಟ್ ಸಾಲಗಾರರಿಗಾಗಿ ರಾಷ್ಟ್ರೀಯ ಕಂಪನಿ ಕಾನೂನು ನ್ಯಾಯಮಂಡಳಿಯ ಮೂಲಕ ಕಾರ್ಪೊರೇಟ್ ದಿವಾಳಿತನ ಪರಿಹಾರ ಪ್ರಕ್ರಿಯೆಯನ್ನು ಪ್ರಾರಂಭಿಸಬಹುದು ಎಂದು ಹೇಳಿದ್ದಾರೆ.
ಕೆವೈಸಿ ದಾಖಲೆಗಾಗಿ ಗ್ರಾಹಕರಿಗೆ ಪದೇ ಪದೇ ಕರೆ ಮಾಡದಿರಿ: ಬ್ಯಾಂಕ್‌ಗಳಿಗೆ ಆರ್‌ಬಿಐ ಗವರ್ನರ್ ಸೂಚನೆ


