ಎಂಎಸ್‌ಪಿಗೆ ಕಾನೂನು ಖಾತರಿ ಸೇರಿದಂತೆ ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಪಂಜಾಬ್- ಹರಿಯಾಣ ನಡುವಿನ ಶಂಭು ಮತ್ತು ಖಾನೌರಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದ ರೈತರನ್ನು ಬುಧವಾರ (ಮಾ.19) ತಡರಾತ್ರಿ ಪೊಲೀಸರು ತೆರವುಗೊಳಿಸಿದ್ದಾರೆ.
ಪ್ರತಿಭಟನೆಯ ನೇತೃತ್ವ ವಹಿಸಿದ್ದ ರೈತ ನಾಯಕರಾದ ಕಿಸಾನ್ ಮಜ್ದೂರ್ ಮೋರ್ಚಾದ (ಕೆಎಂಎಂ) ಸರ್ವಾನ್ ಸಿಂಗ್ ಪಂಧೇರ್ ಮತ್ತು ಸಂಯುಕ್ತ ಕಿಸಾನ್ ಮೋರ್ಚಾದ (ರಾಜಕೀಯೇತರ) ಜಗಜಿತ್ ಸಿಂಗ್ ದಲ್ಲೆವಾಲ್ ಕೇಂದ್ರ ಸರ್ಕಾರದ ಜೊತೆ ಏಳನೇ ಸುತ್ತಿನ ಮಾತುಕತೆ ನಡೆಸಿ ಶಂಭು, ಖಾನೌರಿ ಗಡಿಗಳಿಗೆ ವಾಪಾಸ್ಸಾಗುವಾಗ ಅವರನ್ನು ಪೊಲೀಸರು ಬಂಧಿಸಿದ್ದಾರೆ. ಆ ಬಳಿಕ ಪ್ರತಿಭಟನಾ ಸ್ಥಳದಲ್ಲಿ ರೈತರು ನಿರ್ಮಿಸಿಕೊಂಡಿದ್ದ ತಾತ್ಕಾಲಿಕ ವೇದಿಕೆಗಳನ್ನು ಕೆಡವಿದ್ದಾರೆ. ಟ್ರ್ಯಾಕ್ಟರ್ ಸೇರಿದಂತೆ ಇತರ ವಾಹನಗಳನ್ನು ವಶಕ್ಕೆ ಪಡೆದಿದ್ದಾರೆ.
#WATCH | Punjab Police demolished the tents erected by farmers at the Punjab-Haryana Shambhu Border, where they were sitting on a protest over various demands.
The farmers are also being removed from the Punjab-Haryana Shambhu Border. pic.twitter.com/TzRZKEjvXD
— ANI (@ANI) March 19, 2025
ರೈತ ನಾಯಕರ ಬಂಧನ ಬಳಿಕ ಶಂಭು ಗಡಿಯ ಪ್ರತಿಭಟನಾ ಸ್ಥಳಕ್ಕೆ ಹಿರಿಯ ಅಧಿಕಾರಿಗಳ ನೇತೃತ್ವದಲ್ಲಿ ಆಗಮಿಸಿದ ಪೊಲೀಸರು, ರೈತರನ್ನು ವಶಕ್ಕೆ ಪಡೆದು ತಮ್ಮ ವಾಹನಗಳಲ್ಲಿ ಕುಳಿತುಕೊಳ್ಳುವಂತೆ ಸೂಚಿಸಿದ್ದಾರೆ. ಖಾನೌರಿ ಗಡಿಯಲ್ಲಿ ರೈತರು ವಿರೋಧ ವ್ಯಕ್ತಪಡಿಸಿದ ಕಾರಣ ಪೊಲೀಸರು ಬಲ ಪ್ರಯೋಗಿಸಿದ್ದಾರೆ. ನಂತರ ಎರಡೂ ಕಡೆಗಳಲ್ಲಿ ಜೆಸಿಬಿಗಳ ಸಹಾಯದಿಂದ ರೈತರ ತಾತ್ಕಾಲಿಕ ಪ್ರತಿಭಟನಾ ವೇದಿಕೆ ಮತ್ತು ಡೇರೆಗಳನ್ನು ತೆರವುಗೊಳಿಸಿ, ಅವರ ಟ್ರ್ಯಾಕ್ಟರ್‌ಗಳನ್ನು ವಶಕ್ಕೆ ಪಡೆದಿದ್ದಾರೆ ಎಂದು ವರದಿಗಳು ಹೇಳಿವೆ.
ರೈತ ನಾಯಕರು ಮತ್ತು ಕೇಂದ್ರ ಸರ್ಕಾರದ ನಡುವಿನ 7ನೇ ಸುತ್ತಿನ ಮಾತುಕತೆಯೂ ವಿಫಲವಾಗಿದೆ ಎನ್ನಲಾಗಿದೆ. ಈ ಬೆನ್ನಲ್ಲೇ ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಲಾಗಿದೆ.
ತಮ್ಮ ಬೇಡಿಕೆಗಳನ್ನು ಈಡೇರಿಸುವಂತೆ ಕಳೆದ ವರ್ಷದ ಫೆಬ್ರವರಿ 13ರಿಂದ ರೈತರು ಶಂಭು, ಖಾನೌರಿ ಗಡಿಗಳಲ್ಲಿ ಪ್ರತಿಭಟನೆ ನಡೆಸುತ್ತಿದ್ದಾರೆ. ನವೆಂಬರ್‌ನಿಂದ ರೈತ ನಾಯಕ ಜಗಜಿತ್ ಸಿಂಗ್ ದಲ್ಲೆವಾಲ್ ಉಪವಾಸ ಸತ್ಯಾಗ್ರಹ ಕೈಗೊಂಡಿದ್ದಾರೆ.
ರೈತರನ್ನು ತೆರವುಗೊಳಿಸಿದ ಬಳಿಕವೂ ಬ್ಯಾರಿಕೇಡ್ ಮತ್ತು ಇತರ ವಸ್ತುಗಳಿಂದ ಗಡಿಗಳನ್ನು ಮುಚ್ಚಿರುವ ಪೊಲೀಸರು, ರೈತರು ದೆಹಲಿ ಕಡೆ ಹೋಗದಂತೆ ನಿಗಾ ಇಟ್ಟಿದ್ದಾರೆ.
ಬಂಧನದ ಬಳಿಕ ಸರ್ವಾನ್ ಸಿಂಗ್ ಪಂಧೇರ್ ಅವರನ್ನು ಪಟಿಯಾಲಾದ ಬಹದ್ದೂರ್‌ಗಢ ಫೋರ್ಟ್ ಕಮಾಂಡೋ ಪೊಲೀಸ್ ತರಬೇತಿ ಕೇಂದ್ರಕ್ಕೆ ಕರೆದೊಯ್ಯಲಾಗಿದೆ. ಇದನ್ನು ತಾತ್ಕಾಲಿಕ ಬಂಧನ ಕೇಂದ್ರವಾಗಿ ಪರಿವರ್ತಿಸಲಾಗಿದ್ದು, ದಲ್ಲೆವಾಲ್ ಹೊರತುಪಡಿಸಿ ಹೆಚ್ಚಿನ ರೈತ ಮುಖಂಡರು ಮತ್ತು ಪ್ರತಿಭಟನಾ ನಿರತ ರೈತರನ್ನು ಅಲ್ಲಿಗೆ ಕರೆದೊಯ್ಯಲಾಗಿದೆ.
ಖಾನೌರಿಯಲ್ಲಿ ಸುಮಾರು 200 ರೈತರನ್ನು ಮತ್ತು ಶಂಭುವಿನಲ್ಲಿ ಸುಮಾರು 40 ರೈತರನ್ನು ಬಂಧಿಸಲಾಗಿದೆ. ಶಂಭು ಗಡಿಯ ಸುತ್ತಮುತ್ತಲಿನ ಅನೇಕ ಪ್ರದೇಶಗಳಲ್ಲಿ ಇಂಟರ್ನೆಟ್ ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ ಮತ್ತು ಹತ್ತಿರದ ಹಳ್ಳಿಗಳಲ್ಲಿ ಭಾರೀ ಪೊಲೀಸ್ ಪಡೆಗಳನ್ನು ನಿಯೋಜಿಸಲಾಗಿದೆ.
ಪ್ರತಿಭಟನೆಗಳಿಂದ ಗಣನೀಯ ವೆಚ್ಚವಾಗುತ್ತಿದೆ ಎಂದು ಕಳವಳ ವ್ಯಕ್ತಪಡಿಸಿದ ಎಎಪಿಯ ಉನ್ನತ ಪದಾಧಿಕಾರಿಗಳು ಮತ್ತು ಕೈಗಾರಿಕೋದ್ಯಮಿಗಳ ನಡುವಿನ ಸಭೆಯ ನಂತರ, ಪ್ರತಿಭಟನಾ ನಿರತ ರೈತ ಸಂಘಗಳ ವಿರುದ್ಧ ಕ್ರಮ ಕೈಗೊಳ್ಳುವ ನಿರ್ಧಾರವನ್ನು ಮಂಗಳವಾರ ರಾತ್ರಿ ತೆಗೆದುಕೊಳ್ಳಲಾಗಿದೆ ಎಂದು ವರದಿಯಾಗಿದೆ.
ರಾಜ್ಯದ ಆರ್ಥಿಕ ಬೆಳವಣಿಗೆಗೆ ಈ ಕ್ರಮ ಅಗತ್ಯವಾಗಿತ್ತು ಎಂದು ಪಂಜಾಬ್ ಹಣಕಾಸು ಸಚಿವ ಹರ್ಪಾಲ್ ಸಿಂಗ್ ಚೀಮಾ ಹೇಳಿದ್ದಾರೆ.
ಖಾನೌರಿ ಗಡಿಯಲ್ಲಿದ್ದ ಪೊಲೀಸ್ ಉಪ ನಿರೀಕ್ಷಕ (ಪಟಿಯಾಲ ವಲಯ) ಮಂದೀಪ್ ಸಿಂಗ್ ಸಿಧು ಮತ್ತು ಶಂಭು ಗಡಿಯಲ್ಲಿದ್ದ ಪಟಿಯಾಲದ ಹಿರಿಯ ಪೊಲೀಸ್ ವರಿಷ್ಠಾಧಿಕಾರಿ ನಾನಕ್ ಸಿಂಗ್ ಅವರು, “ನಮ್ಮೊಂದಿಗೆ ಸಹಕರಿಸಲು ಮತ್ತು ರಸ್ತೆಯನ್ನು ತೆರವುಗೊಳಿಸಲು ವಿನಂತಿಸಲಾಗಿದೆ” ಎಂದು ಹೇಳಿದ್ದಾರೆ.
“ತಮ್ಮ ಸ್ವಂತ ಸ್ಥಳಗಳಿಗೆ ಹೋಗಲು ಇಚ್ಛಿಸುವ ರೈತರನ್ನು ಕಳುಹಿಸಲಾಗಿದೆ” ಎಂದು ನಾನಕ್ ಸಿಂಗ್ ತಿಳಿಸಿದ್ದು, ರಸ್ತೆಯನ್ನು ತೆರವುಗೊಳಿಸಿ ಸುಗಮ ಸಂಚಾರಕ್ಕೆ ಅನುವು ಮಾಡಿಕೊಡಲಾಗುವುದು ಎಂದಿದ್ದಾರೆ.
“ನಾವೆಲ್ಲರೂ ರೈತರ ಮಕ್ಕಳು, ಪ್ರತಿಭಟನಾ ಸ್ಥಳಗಳನ್ನು ತೆರವುಗೊಳಿಸಲು ಸಹಕರಿಸುವಂತೆ ಅವರಿಗೆ ಹೇಳಿದ್ದೇವೆ” ಎಂದು ಸಿಧು ತಿಳಿಸಿದ್ದಾರೆ.
ವಿವಿಧ ಬೇಡಿಕೆಗಳನ್ನು ಮುಂದಿಟ್ಟುಕೊಂಡು ಕಳೆದ ವರ್ಷದ ಫೆಬ್ರವರಿ 13ರಂದು ರೈತರು ದೆಹಲಿ ಚಲೋ ಹೆಸರಿನಲ್ಲಿ ದೆಹಲಿಗೆ ಪ್ರತಿಭಟನಾ ಮೆರವಣಿಗೆ ಹಮ್ಮಿಕೊಂಡಿದ್ದರು. ಅದನ್ನು ಭದ್ರತಾ ಪಡೆಗಳು ವಿಫಲಗೊಳಿಸಿದಾಗಿನಿಂದ ರೈತರು ಪಂಜಾಬ್ ಮತ್ತು ಹರಿಯಾಣ ನಡುವಿನ ಶಂಭು (ಶಂಭು-ಅಂಬಾಲಾ) ಮತ್ತು ಖಾನೌರಿ (ಸಂಗ್ರೂರ್-ಜಿಂದ್) ಗಡಿ ಬಿಂದುಗಳಲ್ಲಿ ಮೊಕ್ಕಾಂ ಹೂಡಿದ್ದರು.
ರೈತರನ್ನು ಬಂಧಿಸಿ, ಪ್ರತಿಭಟನಾ ಸ್ಥಳವನ್ನು ತೆರವುಗೊಳಿಸಿದ ಪೊಲೀಸರ ಕ್ರಮವನ್ನು ಖಂಡಿಸಿರುವ ಪಂಜಾಬ್‌ನ ವಿರೋಧ ಪಕ್ಷದ ನಾಯಕರು, ಎಎಪಿ ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
ರೈತರ ಮೇಲಿನ ಪೊಲೀಸ್ ದೌರ್ಜನ್ಯವನ್ನು ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ರವನೀತ್ ಬಿಟ್ಟು ತೀವ್ರವಾಗಿ ಖಂಡಿಸಿದ್ದಾರೆ. ಮಾಜಿ ಮುಖ್ಯಮಂತ್ರಿ ಮತ್ತು ಸಂಸದ ಚರಣ್‌ಜಿತ್ ಸಿಂಗ್ ಚನ್ನಿ, ಎಎಪಿ ಸರ್ಕಾರ ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರದ ಒತ್ತಡಕ್ಕೆ ಮಣಿದು ರೈತರ ವಿರುದ್ಧ ಕ್ರಮ ಕೈಗೊಂಡಿದೆ ಎಂದು ಹೇಳಿದ್ದಾರೆ.
ಪಂಜಾಬ್ ಕಾಂಗ್ರೆಸ್ ಮುಖ್ಯಸ್ಥ ಅಮರಿಂದರ್ ಸಿಂಗ್ ರಾಜಾ ವಾರಿಂಗ್ ಅವರು ಕೇಂದ್ರ ಬಿಜೆಪಿ ಸರ್ಕಾರ ಮತ್ತು ರಾಜ್ಯದ ಎಎಪಿ ಸರ್ಕಾರಗಳ ವಿರುದ್ದ ವಾಗ್ದಾಳಿ ನಡೆಸಿದ್ದು, “ಅವರು ರೈತರಿಗೆ ದ್ರೋಹ ಬಗೆದು ಬೆನ್ನಿಗೆ ಇರಿದಿದ್ದಾರೆ” ಎಂದು ಕಿಡಿಕಾರಿದ್ದಾರೆ.
ಕೇಂದ್ರ ಸರ್ಕಾರ ಮತ್ತು ರೈತರ ನಡುವೆ ಈಗಾಗಲೇ ಮಾತುಕತೆ ನಡೆಯುತ್ತಿರುವಾಗ ಪಂಜಾಬ್ ಪೊಲೀಸರು ರೈತ ನಾಯಕರನ್ನು ಬಂಧಿಸುವ ಅಗತ್ಯವೇನಿತ್ತು ಎಂದು ಅವರು ಪ್ರಶ್ನಿಸಿದ್ದಾರೆ.
ನಿಂದನೀಯ ಪದ ಬಳಕೆ | ಗ್ರೋಕ್ ಎಐಯನ್ನು ಪರಿಶೀಲಿಸುತ್ತಿರುವ ಕೇಂದ್ರ ಐಟಿ ಸಚಿವಾಲಯ!


