ಕಳೆದ ಸೋಮವಾರ (ಮಾ.17) ರಾತ್ರಿ ಹಿಂಸಾಚಾರ ನಡೆದ ಮಹಾರಾಷ್ಟ್ರದ ನಾಗ್ಪುರ ನಗರದ ವಿವಿಧ ಪ್ರದೇಶಗಳಲ್ಲಿ ಕರ್ಫ್ಯೂ ಮುಂದುವರಿದಿದ್ದು, ಭಾರೀ ಭದ್ರತೆಯನ್ನು ನಿಯೋಜಿಸಲಾಗಿದೆ. ಘಟನೆಗೆ ಸಂಬಂಧಿಸಿದಂತೆ ಬಜರಂಗದಳ ಮತ್ತು ವಿಎಚ್‌ಪಿಯ ಎಂಟು ಸದಸ್ಯರು ಸೇರಿದಂತೆ 78 ಜನರನ್ನು ಪೊಲೀಸರು ಬಂಧಿಸಿದ್ದಾರೆ.
“ಗಲಭೆಯ ಹಿಂದಿನ ಪ್ರಮುಖ ಆರೋಪಿ ಎಂದು ಪೊಲೀಸರು ಗುರುತಿಸಿರುವ 38 ವರ್ಷದ ಫಾಹೀಮ್ ಖಾನ್ ಅವರನ್ನು ನಗರದ ಅವರ ಮನೆಯಿಂದ ಬುಧವಾರ ಬೆಳಗಿನ ಜಾವ ನಡೆಸಿದ ದಾಳಿಯಲ್ಲಿ ಪೊಲೀಸರು ಬಂಧಿಸಿದ್ದಾರೆ. ಬುರ್ಖಾ ಮಾರಾಟಗಾರ ಹಾಗೂ ಸೈಕಲ್ ರಿಪೇರಿ ಅಂಗಡಿ ಮಾಲೀಕರ ಮಗನಾಗಿರುವ ಖಾನ್, 2024ರ ಲೋಕಸಭಾ ಚುನಾವಣೆಯಲ್ಲಿ ಕೇಂದ್ರ ಸಚಿವ ನಿತಿನ್ ಗಡ್ಕರಿ ವಿರುದ್ಧ ಸ್ಪರ್ಧಿಸಿ 1,000 ಮತಗಳನ್ನು ಗಳಿಸಿದ್ದರು” ಎಂದು ಟೈಮ್ಸ್ ಆಫ್ ಇಂಡಿಯಾ ವರದಿ ಮಾಡಿದೆ.
ಛತ್ರಪತಿ ಸಂಭಾಜಿನಗರ ಜಿಲ್ಲೆಯಲ್ಲಿರುವ ಮೊಘಲ್ ಚಕ್ರವರ್ತಿ ಔರಂಗಜೇಬ್ ಸಮಾಧಿಯನ್ನು ತೆಗೆದು ಹಾಕಬೇಕೆಂದು ಒತ್ತಾಯಿಸಿ ಬಜರಂಗದಳ ಮತ್ತು ವಿಎಚ್‌ಪಿ ನಡೆಸಿದ ಪ್ರತಿಭಟನೆ ವೇಳೆ ಔರಂಗಜೇಬ್ ಪ್ರತಿಕೃತಿ ಮತ್ತು ಮುಸ್ಲಿಮರ ಧಾರ್ಮಿಕ ಚಾದರ್ ಸುಟ್ಟಿದ್ದಕ್ಕಾಗಿ ದೂರು ದಾಖಲಿಸಲು ನಾಗ್ಪುರದ ಗಣೇಶಪೇಟೆ ಪೊಲೀಸ್ ಠಾಣೆಗೆ ತೆರಳಿದ್ದ ಜನರ ಗುಂಪಿ ನೇತೃತ್ವವನ್ನು ಫಾಹೀಮ್ ಖಾನ್ ವಹಿಸಿದ್ದರು ಎಂದು ವರದಿ ಹೇಳಿದೆ.
ಪೊಲೀಸ್ ಠಾಣೆಯಿಂದ ಹೊರಬಂದ ಸ್ವಲ್ಪ ಸಮಯದ ನಂತರ, ಪ್ರತಿಭಟನೆ ಹಮ್ಮಿಕೊಂಡಿದ್ದ ಬಜರಂಗದಳ ಮತ್ತು ವಿಹೆಚ್‌ಪಿ ಕಾರ್ಯಕರ್ತರನ್ನು ರಕ್ಷಿಸುತ್ತಿದ್ದಾರೆ ಎಂದು ಆರೋಪಿಸಿ ಪೊಲೀಸರನ್ನು ದೂಷಿಸುವ ಮತ್ತು ಅಲ್ಪಸಂಖ್ಯಾತ ಆಯೋಗದ ಅಧ್ಯಕ್ಷರನ್ನು ಟೀಕಿಸುವ ವಿಡಿಯೋವನ್ನು ರೆಕಾರ್ಡ್ ಮಾಡಿದ್ದರು. ಈ ವಿಡಿಯೋ ತ್ವರಿತವಾಗಿ ವೈರಲ್ ಆಗಿದ್ದು, ಇದು ಆರ್‌ಎಸ್‌ಎಸ್ ಪ್ರಧಾನ ಕಚೇರಿಯಿಂದ ಕೇವಲ 2 ಕಿಮೀ ದೂರದಲ್ಲಿರುವ ಕೇಂದ್ರ ನಾಗ್ಪುರದ ಮಹಲ್ ಪ್ರದೇಶದಲ್ಲಿ ಗಲಭೆಗೆ ಕಾರಣವಾಯಿತು ಎಂದು ಪೊಲೀಸರು ಹೇಳಿದ್ದಾರೆ.
ಗಣೇಶಪೇಟೆ ಠಾಣೆಯಲ್ಲಿ ದಾಖಲಾಗಿರುವ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಬಂಧಿಸುವ ಮುನ್ನವೇ ಎಂಟು ಮಂದಿ ಬಜರಂಗದಳ ಮತ್ತು ವಿಎಚ್‌ಪಿ ಸದಸ್ಯರು ಕೊತ್ವಾಲಿ ಪೊಲೀಸ್ ಠಾಣೆಯಲ್ಲಿ ಶರಣಾಗಿದ್ದಾರೆ. ನ್ಯಾಯಾಲಯವು ಅವರಿಗೆ ಜಾಮೀನು ನೀಡಿದೆ. ಆದರೆ, ಒಂಬತ್ತು ಗಂಟೆಗಳ ವಿಚಾರಣೆಯ ನಂತರ ಇತರ 27 ಮಂದಿಯನ್ನು ಪೊಲೀಸ್ ಕಸ್ಟಡಿಗೆ ನೀಡಲಾಗಿದೆ.
ಹಿಂಸಾಚಾರದ ವೇಳೆ ತೀವ್ರವಾಗಿ ಗಾಯಗೊಂಡ ಒಬ್ಬರು ಅಪ್ರಾಪ್ತ ಮತ್ತು ವೆಂಟಿಲೇಟರ್ ಸಹಾಯದಲ್ಲಿರುವ 40 ವರ್ಷದ ವ್ಯಕ್ತಿ ಪ್ರಸ್ತುತ ಅಪಾಯದಿಂದ ಪಾರಾಗಿದ್ದಾರೆ. ಅವರು ಸರ್ಕಾರಿ ಆಸ್ಪತ್ರೆಗಳಲ್ಲಿ ಚೇತರಿಸಿಕೊಳ್ಳುತ್ತಿದ್ದಾರೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಹಿಂಸಾಚಾರಕ್ಕೆ ಸಂಬಂಧಿಸಿದಂತೆ ದಾಖಲಾದ ಆರು ಪ್ರಕರಣಗಳ ಶಂಕಿತರಿಗಾಗಿ ಹುಡುಕಾಟವನ್ನು ವಿಸ್ತರಿಸುವುದರ ಜೊತೆಗೆ ಸಿಸಿಟಿವಿ ದೃಶ್ಯಾವಳಿಗಳನ್ನು ಸಂಗ್ರಹಿಸಲು ಮತ್ತು ಹೆಚ್ಚುವರಿ ಸಾಕ್ಷ್ಯಗಳನ್ನು ಸಂಗ್ರಹಿಸಲು ನಗರದಾದ್ಯಂತ ಪೊಲೀಸ್ ತಂಡಗಳನ್ನು ನಿಯೋಜಿಸಲಾಗಿದೆ. ಪೊಲೀಸರು 1,200ಕ್ಕೂ ಹೆಚ್ಚು ಜನರ ಮೇಲೆ ವಿವಿಧ ಆರೋಪಗಳನ್ನು ಹೊರಿಸಿದ್ದಾರೆ. ಮಧ್ಯ ನಾಗ್ಪುರದಲ್ಲಿ ಹಿಂಸಾಚಾರ ನಡೆದ ಪ್ರದೇಶಗಳ 70 ಸೇರಿದಂತೆ ಕನಿಷ್ಠ 1,500 ಕಣ್ಗಾವಲು ಕ್ಯಾಮರಾಗಳ ವೈಫಲ್ಯ ಪೊಲೀಸರು ಪ್ರಯತ್ನಗಳಿಗೆ ಅಡ್ಡಿಯಾಗಿದೆ ಎಂದು ವರದಿಯಾಗಿದೆ.
11 ಪೊಲೀಸ್ ಠಾಣೆ ವ್ಯಾಪ್ತಿಗಳಲ್ಲಿ ಕರ್ಫ್ಯೂ ನಿರ್ಬಂಧಗಳನ್ನು ತೆಗೆದುಹಾಕುವಂತೆ ವ್ಯಾಪಾರ ಗುಂಪುಗಳು ಮತ್ತು ಇತರ ಸಮುದಾಯ ಸಂಘಟನೆಗಳಿಂದ ಒತ್ತಡ ಹೆಚ್ಚಾಗಿದ್ದು, ಹಿರಿಯ ಅಧಿಕಾರಿಗಳು ಪರಿಸ್ಥಿತಿಯನ್ನು ಪರಿಶೀಲಿಸಿದ್ದಾರೆ. ಗುರುವಾರ ಅಧಿಕಾರಿಗಳು ಕರ್ಫ್ಯೂ ನಿರ್ಬಂಧವನ್ನು ಮರುಪರಿಶೀಲಿಸುವ ನಿರೀಕ್ಷೆಯಿದೆ.
ಆಪಾದಿತ ಮಾಸ್ಟರ್ ಮೈಂಡ್ ಫಾಹೀಮ್ ಖಾನ್ ಈ ಹಿಂದೆ ಧಾರ್ಮಿಕ ವಿಷಯಕ್ಕೆ ಸಂಬಂಧಿಸಿದಂತೆ ಪ್ರತಿಭಟನೆಗಳನ್ನು ಆಯೋಜಿಸಿದ್ದರು. ಅವರ ವಿರುದ್ದ ದ್ವೇಷ ಭಾಷಣದ ಆರೋಪ ಹೊರಿಸಲಾಗಿತ್ತು. ಕಾಲೇಜು ಬಿಟ್ಟಿರುವ ಅವರು, 2019 ರಿಂದ ಛತ್ತೀಸ್‌ಗಢ ಮತ್ತು ಮಧ್ಯಪ್ರದೇಶದಲ್ಲಿ ಸಕ್ರಿಯವಾಗಿರುವ ಸುನ್ನಿ ಯೂಥ್ ಫೋರ್ಸ್‌ನೊಂದಿಗೆ ಸಂಯೋಜಿತವಾಗಿರುವ ಮೈನಾರಿಟಿ ಡೆಮಾಕ್ರಟಿಕ್ ಪಾರ್ಟಿಯ (MDP)ಸ್ಥಾಪಕ-ಸದಸ್ಯರಾಗಿದ್ದಾರೆ.
ಬಲಪಂಥೀಯ ನಿರೂಪಕ ಸುಧೀರ್ ಚೌಧರಿಯೊಂದಿಗೆ ₹15 ಕೋಟಿಗೆ ಒಪ್ಪಂದ ಮಾಡಿಕೊಂಡ ಡಿಡಿ ನ್ಯೂಸ್!


