ಅಮೆರಿಕದ ಬಿಲಿಯನೇರ್ ಎಲಾನ್ ಮಸ್ಕ್ ಒಡೆತನದ ಸಾಮಾಜಿಕ ಮಾಧ್ಯಮ ದೈತ್ಯ ‘ಎಕ್ಸ್’ ಭಾರತ ಸರ್ಕಾರದ ವಿರುದ್ಧ ಕರ್ನಾಟಕ ಹೈಕೋರ್ಟ್‌ನಲ್ಲಿ ‘ಕಾನೂನುಬಾಹಿರ ವಿಷಯ ನಿಯಂತ್ರಣ ಮತ್ತು ಅನಿಯಂತ್ರಿತ ಸೆನ್ಸಾರ್‌ಶಿಪ್’ ಪ್ರಶ್ನಿಸಿ ಮೊಕದ್ದಮೆ ಹೂಡಿದೆ.
ಮಾಹಿತಿ ತಂತ್ರಜ್ಞಾನ (ಐಟಿ) ಕಾಯ್ದೆಯ ಕುರಿತ ಕೇಂದ್ರದ ವ್ಯಾಖ್ಯಾನದ ಬಗ್ಗೆ, ವಿಶೇಷವಾಗಿ ಸೆಕ್ಷನ್ 79(3)(b)ಬಳಕೆಯ ಬಗ್ಗೆ ಕಳವಳ ವ್ಯಕ್ತಪಡಿಸಿರುವ ಎಕ್ಸ್, ಈ ಸೆಕ್ಷನ್ ಸುಪ್ರೀಂ ಕೋರ್ಟ್ ತೀರ್ಪುಗಳನ್ನು ಉಲ್ಲಂಘಿಸುತ್ತದೆ ಮತ್ತು ಆನ್‌ಲೈನ್‌ನಲ್ಲಿ ಮುಕ್ತ ಅಭಿವ್ಯಕ್ತಿಯನ್ನು ದುರ್ಬಲಗೊಳಿಸುತ್ತದೆ ಹೇಳಿದೆ.
ಐಟಿ ಕಾಯ್ದೆಯ ಸೆಕ್ಷನ್ 69Aಯಲ್ಲಿ ವಿವರಿಸಿರುವ ರಚನಾತ್ಮಕ ಕಾನೂನು ಪ್ರಕ್ರಿಯೆಗೆ ಬದಲಾಗಿ, ಆನ್‌ಲೈನ್ ವಿಷಯಗಳನ್ನು ನಿರ್ಬಂಧಿಸಲು ಸರ್ಕಾರ ಸೆಕ್ಷನ್ 79(3)(b) ದುರ್ಬಳಕೆ ಮಾಡುತ್ತಿದೆ ಎಂದು ಎಕ್ಸ್ ಆರೋಪಿಸಿದೆ.
ಸರಿಯಾದ ನ್ಯಾಯಾಂಗ ಪ್ರಕ್ರಿಯೆಯ ಮೂಲಕ ಅಥವಾ ಸೆಕ್ಷನ್ 69A ಅಡಿಯಲ್ಲಿ ಕಾನೂನುಬದ್ಧವಾಗಿ ವ್ಯಾಖ್ಯಾನಿಸಲಾದ ಮಾರ್ಗದ ಮೂಲಕ ಮಾತ್ರ ವಿಷಯವನ್ನು ನಿರ್ಬಂಧಿಸಬಹುದು ಎಂದು 2015ರಲ್ಲಿ ಶ್ರೇಯಾ ಸಿಂಘಾಲ್ ಪ್ರಕರಣದಲ್ಲಿ ಸುಪ್ರೀಂ ಕೋರ್ಟ್ ನೀಡಿರುವ ತೀರ್ಪಿಗೆ ಸರ್ಕಾರದ ವಿಧಾನವು ವಿರುದ್ದವಾಗಿದೆ ಎಂದು ಎಕ್ಸ್ ವಿವರಿಸಿದೆ.
ಮಾಹಿತಿ ಮತ್ತು ಪ್ರಸಾರ ಸಚಿವಾಲಯದ ಪ್ರಕಾರ, ಸೆಕ್ಷನ್ 79(3)(b) ನ್ಯಾಯಾಲಯದ ಆದೇಶ ಅಥವಾ ಸರ್ಕಾರ ನೋಟಿಸ್ ನೀಡಿದ ಬಳಿಕ ‘ಕಾನೂನುಬಾಹಿರ ವಿಷಯ’ವನ್ನು ಆನ್‌ಲೈನ್ ಪ್ಲಾಟ್‌ಫಾರ್ಮ್‌ಗಳು ತೆಗೆದು ಹಾಕುವುದನ್ನು ಕಡ್ಡಾಯಗೊಳಿಸುತ್ತದೆ. ಸಾಮಾಜಿಕ ಮಾಧ್ಯಮ ವೇದಿಕೆ 36 ಗಂಟೆಗಳ ಒಳಗೆ ಸೂಚನೆ ಅನುಸರಿಸಲು ವಿಫಲವಾದರೆ ಕಾನೂನು ಕ್ರಮವನ್ನು ಎದುರಿಸಬಹುದು.
ಸೆಕ್ಷನ್ 79(3)(b) ಕುರಿತ ಸರ್ಕಾರದ ಈ ವ್ಯಾಖ್ಯಾನವನ್ನು ಪ್ರಶ್ನಿಸಿರುವ ಎಕ್ಸ್, ಈ ನಿಬಂಧನೆಯು ಸರ್ಕಾರಕ್ಕೆ ವಿಷಯವನ್ನು ನಿರ್ಬಂಧಿಸಲು ಸ್ವತಂತ್ರ ಅಧಿಕಾರವನ್ನು ನೀಡುವುದಿಲ್ಲ, ಅಂದರೆ ಸೆಕ್ಷನ್ ಹೇಳಿದ್ದೇ ಒಂದು ಸರ್ಕಾರ ಮಾಡುತ್ತಿರುವುದೇ ಒಂದು ಎಂದು ವಾದಿಸಿದೆ. ಅಧಿಕಾರಿಗಳು ಸರಿಯಾದ ಪ್ರಕ್ರಿಯೆಯನ್ನು ಅನುಸರಿಸದೆ ಅನಿಯಂತ್ರಿತ ಸೆನ್ಸಾರ್‌ಶಿಪ್ ವಿಧಿಸಲು ಕಾನೂನನ್ನು ದುರುಪಯೋಗಪಡಿಸಿಕೊಳ್ಳುತ್ತಿದ್ದಾರೆ ಎಂದು ಆರೋಪಿಸಿದೆ.
ಐಟಿ ಕಾಯ್ದೆಯ ಸೆಕ್ಷನ್ 69A ಅಡಿಯಲ್ಲಿ, ರಾಷ್ಟ್ರೀಯ ಭದ್ರತೆ, ಸಾರ್ವಭೌಮತ್ವ ಅಥವಾ ಸಾರ್ವಜನಿಕ ಸುವ್ಯವಸ್ಥೆಗೆ ಬೆದರಿಕೆ ಎಂದು ಪರಿಗಣಿಸಿದರೆ, ಡಿಜಿಟಲ್ ವಿಷಯಕ್ಕೆ ಸಾರ್ವಜನಿಕ ಪ್ರವೇಶವನ್ನು ನಿರ್ಬಂಧಿಸುವ ಅಧಿಕಾರ ಸರ್ಕಾರಕ್ಕೆ ಇದೆ.
ಆದಾಗ್ಯೂ, ಈ ಪ್ರಕ್ರಿಯೆಯನ್ನು 2009ರ ಮಾಹಿತಿ ತಂತ್ರಜ್ಞಾನ (ಸಾರ್ವಜನಿಕರಿಂದ ಮಾಹಿತಿ ಪ್ರವೇಶವನ್ನು ನಿರ್ಬಂಧಿಸುವ ಕಾರ್ಯವಿಧಾನ ಮತ್ತು ಸುರಕ್ಷತಾ ಕ್ರಮಗಳು) ನಿಯಮಗಳಿಂದ ನಿಯಂತ್ರಿಸಲಾಗಿದೆ. ಅದರ ಪ್ರಕಾರ, ವಿಷಯ ನಿರ್ಬಂಧಿಸುವ ನಿರ್ಧಾರಗಳನ್ನು ತೆಗೆದುಕೊಳ್ಳುವ ಮೊದಲು ರಚನಾತ್ಮಕ ಪರಿಶೀಲನಾ ಪ್ರಕ್ರಿಯೆಯ ಅಗತ್ಯವಿರುತ್ತದೆ.
ಸರ್ಕಾರ ಈ ಎಲ್ಲಾ ಕಾರ್ಯವಿಧಾನಗಳನ್ನು ಅನುಸರಿಸುವ ಬದಲು, ಸೆಕ್ಷನ್ 79(3)(b) ಅನ್ನು ಶಾರ್ಟ್‌ಕಟ್‌ನಂತೆ ಬಳಸುತ್ತಿದೆ. ಅಗತ್ಯ ಪರಿಶೀಲನೆಯಿಲ್ಲದೆ ವಿಷಯವನ್ನು ತೆಗೆದು ಹಾಕಲು ಸೂಚಿಸುತ್ತಿದೆ ಎಂದು ಎಕ್ಸ್ ದೂರಿದೆ.
ಸರ್ಕಾರದ ನಡೆಯನ್ನು, ಅನಿಯಂತ್ರಿತ ಸೆನ್ಸಾರ್‌ಶಿಪ್ ಅನ್ನು ತಡೆಗಟ್ಟಲು ಉದ್ದೇಶಿಸಲಾದ ಕಾನೂನು ಸುರಕ್ಷತೆಗಳ ನೇರ ಉಲ್ಲಂಘನೆ ಎಂದು ಎಕ್ಸ್ ಹೇಳಿದೆ.
ಮತ್ತೊಂದು ಪ್ರಮುಖ ಅಂಶವೆಂದರೆ ಸರ್ಕಾರದ ‘ಸಹಯೋಗ್’ ಪೋರ್ಟಲ್’ಗೆ ಎಕ್ಸ್ ವಿರೋಧ ವ್ಯಕ್ತಪಡಿಸಿದೆ.
ಗೃಹ ಸಚಿವಾಲಯದ ಅಡಿಯಲ್ಲಿ ಬರುವ ಭಾರತೀಯ ಸೈಬರ್ ಅಪರಾಧ ಸಮನ್ವಯ ಕೇಂದ್ರ (I4C) ರಚಿಸಿದ ಈ ಪೋರ್ಟಲ್ ಸೆಕ್ಷನ್ 79(3)(b)ಅಡಿಯಲ್ಲಿ ವಿಷಯಗಳನ್ನು ತೆಗೆದುಹಾಕುವ ಸೂಚನೆಗಳನ್ನು ನೀಡಲು ಮತ್ತು ಸಾಮಾಜಿಕ ಮಾಧ್ಯಮ ವೇದಿಕೆಗಳು ಮತ್ತು ಕಾನೂನು ಜಾರಿ ಸಂಸ್ಥೆಗಳ ನಡುವೆ ನೇರ ಸಂವಹನವನ್ನು ಸುಗಮಗೊಳಿಸಲು ವಿನ್ಯಾಸಗೊಳಿಸಲಾಗಿದೆ.
ಆದರೆ, ಎಕ್ಸ್ ‘ಸಹಯೋಗ್’ ಪೋರ್ಟಲ್‌ಗೆ ಉದ್ಯೋಗಿಯನ್ನು ಸೇರಿಸಿಕೊಳ್ಳಲು ನಿರಾಕರಿಸಿದೆ. ಇದು ಸರಿಯಾದ ಕಾನೂನು ಪರಿಶೀಲನೆಯಿಲ್ಲದೆ ವಿಷಯವನ್ನು ತೆಗೆದುಹಾಕಲು ಸಾಮಾಜಿಕ ಮಾಧ್ಯಮ ವೇದಿಕೆಗಳ ಮೇಲೆ ಒತ್ತಡ ಹೇರುವ “ಸೆನ್ಸಾರ್‌ಶಿಪ್ ಸಾಧನ” ವಾಗಿ ಕಾರ್ಯನಿರ್ವಹಿಸುತ್ತಿದೆ ಎಂದು ಹೇಳಿಕೊಂಡಿದೆ.
ನ್ಯಾಯಾಂಗದ ಮೇಲ್ವಿಚಾರಣೆಯಿಲ್ಲದೆ ಆನ್‌ಲೈನ್ ವಿಷಯಗಳನ್ನು ನಿಯಂತ್ರಿಸಲು ಸರ್ಕಾರ ಮಾಡಿದ ಮತ್ತೊಂದು ಪ್ರಯತ್ನ ಇದಾಗಿದೆ ಎಂದು ಮೊಕದ್ದಮೆಯಲ್ಲಿ ಎಕ್ಸ್ ವಾದಿಸಿದೆ.


