ದೆಹಲಿ ಹೈಕೋರ್ಟ್ ನ್ಯಾಯಮೂರ್ತಿ ಯಶವಂತ್ ವರ್ಮಾ ಅವರ ಮನೆಯಲ್ಲಿ ಭಾರೀ ಪ್ರಮಾಣದಲ್ಲಿ ಹಣ ಪತ್ತೆಯಾಗಿದ್ದು, ದೇಶದಾದ್ಯಂತ ಬಿಸಿ ಬಿಸಿ ಚರ್ಚೆಯಾಗುತ್ತಿದೆ. ಸುಪ್ರೀಂ ಕೋರ್ಟ್ ಈ ಬಗ್ಗೆ ಆಂತರಿಕ ತನಿಖೆ ಪ್ರಾರಂಭಿಸಿದೆ ಎಂದು Bar & Bench ವರದಿ ಮಾಡಿದೆ.
ನ್ಯಾಯಮೂರ್ತಿ ಯಶವಂತ್ ವರ್ಮಾ ಊರಲ್ಲಿ ಇಲ್ಲದ ವೇಳೆ, ಮಾರ್ಚ್ 14 ರಂದು ಬೆಳಿಗ್ಗೆ 11.30ಕ್ಕೆ ದೆಹಲಿಯ ನ್ಯಾಯಾಂಗ ಬಡಾವಣೆಯ ಅವರ ಮನೆಯಲ್ಲಿ ಬೆಂಕಿ ಅವಘಡ ಸಂಭವಿಸಿತ್ತು. ಕುಟುಂಬಸ್ಥರು ಅಗ್ನಿಶಾಮಕ ದಳ ಮತ್ತು ಪೊಲೀಸರಿಗೆ ಕರೆ ಮಾಡಿದ್ದರು. ಸ್ಥಳಕ್ಕೆ ಬಂದ ಅಗ್ನಿಶಾಮಕದ ದಳದ ಸಿಬ್ಬಂದಿ ಬೆಂಕಿ ನಂದಿಸಿದ್ದಾರೆ. ನಂತರ ಮನೆಯ ಒಂದು ಕೋಣೆಯಲ್ಲಿ ಪೊಲೀಸರಿಗೆ ಭಾರೀ ಪ್ರಮಾಣದ ಹಣ ಕಂಡು ಬಂದಿದೆ.
ಈ ಬಗ್ಗೆ ಸ್ಥಳೀಯ ಪೊಲೀಸರು ಅವರ ಹಿರಿಯ ಅಧಿಕಾರಿಗಳಿಗೆ ಮಾಹಿತಿ ನೀಡಿದ್ದರು. ಅವರು ಹಿರಿಯ ಸರ್ಕಾರಿ ಅಧಿಕಾರಿಗಳ ಗಮನಕ್ಕೆ ತಂದಿದ್ದರು. ಈ ಮಾಹಿತಿ ಸುಪ್ರೀಂ ಕೋರ್ಟ್ ಮುಖ್ಯ ನ್ಯಾಯಮೂರ್ತಿ (ಸಿಜೆಐ) ಸಂಜೀವ್ ಖನ್ನಾ ಅವರಿಗೆ ತಲುಪಿತ್ತು. ಅವರು ಗುರುವಾರ (ಮಾ.20) ಸಂಜೆ ತುರ್ತು ಕೊಲಿಜಿಯಂ ಸಭೆ ಕರೆದಿದ್ದರು. ಕೊಲಿಜಿಯಂ, ನ್ಯಾಯಮೂರ್ತಿ ವರ್ಮಾ ಅವರನ್ನು ಅವರ ಮಾತೃ ನ್ಯಾಯಾಲಯವಾದ ಅಲಹಾಬಾದ್ ಹೈಕೋರ್ಟ್‌ಗೆ ವರ್ಗಾಯಿಸಲು ಸರ್ವಾನುಮತದಿಂದ ನಿರ್ಧರಿಸಿದೆ.
ಆದಾಗ್ಯೂ, ಕೊಲಿಜಿಯಂನ ಕೆಲ ಸದಸ್ಯರು ವರ್ಮಾ ಅವರನ್ನು ವರ್ಗಾವಣೆ ಮಾಡುವುದರಿಂದ ನ್ಯಾಯಾಂಗದ ಖ್ಯಾತಿಗೆ ಧಕ್ಕೆಯಾಗಬಹುದು ಎಂದು ಕಳವಳ ವ್ಯಕ್ತಪಡಿಸಿದ್ದಾರೆ ಮತ್ತು ಅವರು ರಾಜೀನಾಮೆ ನೀಡಬೇಕು ಅಥವಾ ಆಂತರಿಕ ತನಿಖೆ ಎದುರಿಸಬೇಕು ಎಂದು ಅಭಿಪ್ರಾಯ ವ್ಯಕ್ತಪಡಿಸಿದ್ದಾರೆ.
ಸಾಂವಿಧಾನಿಕ ನ್ಯಾಯಾಲಯದ ನ್ಯಾಯಾಧೀಶರ ವಿರುದ್ಧದ ಆರೋಪಗಳ ತನಿಖೆಯ ಸುಪ್ರೀಂ ಕೋರ್ಟ್‌ನ ಆಂತರಿಕ ಕಾರ್ಯವಿಧಾನದ ಪ್ರಕಾರ, ತನಿಖೆಯನ್ನು ಪ್ರಾರಂಭಿಸಬೇಕೆ ಅಥವಾ ಬೇಡವೇ ಎಂದು ನಿರ್ಧರಿಸುವ ಮೊದಲು ಸಿಜೆಐ ಆರೋಪಿತ ನ್ಯಾಯಾಧೀಶರ ಪ್ರತಿಕ್ರಿಯೆಯನ್ನು ಕೇಳುತ್ತಾರೆ. ಹೆಚ್ಚಿನ ತನಿಖೆ ಅಗತ್ಯವಿದ್ದರೆ, ಸುಪ್ರೀಂ ಕೋರ್ಟ್ ನ್ಯಾಯಾಧೀಶರು ಮತ್ತು ಇಬ್ಬರು ಹೈಕೋರ್ಟ್ ಮುಖ್ಯ ನ್ಯಾಯಮೂರ್ತಿಗಳನ್ನು ಒಳಗೊಂಡ ಸಮಿತಿಯನ್ನು ರಚಿಸಬಹುದು.
ನ್ಯಾಯಮೂರ್ತಿ ಯಶವಂತ್ ವರ್ಮಾ ಯಾರು?
ನ್ಯಾಯಮೂರ್ತಿ ಯಶವಂತ್ ವರ್ಮಾ ಅವರು ಜನವರಿ 6, 1969 ರಂದು ಅಲಹಾಬಾದ್‌ನಲ್ಲಿ ಜನಿಸಿದರು. ಅವರು ದೆಹಲಿ ವಿಶ್ವವಿದ್ಯಾಲಯದ ಹನ್ಸ್‌ರಾಜ್ ಕಾಲೇಜಿನಲ್ಲಿ ಬಿಕಾಂ (ಆನರ್ಸ್) ಪದವಿ ಪೂರ್ಣಗೊಳಿಸಿ, ನಂತರ ಮಧ್ಯಪ್ರದೇಶದ ರೇವಾ ವಿಶ್ವವಿದ್ಯಾಲಯದಿಂದ ಎಲ್‌ಎಲ್‌ಬಿ ಪದವಿ ಪಡೆದಿದ್ದಾರೆ. ಅವರು ಆಗಸ್ಟ್ 8,1992 ರಂದು ವಕೀಲ ವೃತ್ತಿಗೆ ಸೇರಿಕೊಂಡರು.
ಅಲಹಾಬಾದ್ ಹೈಕೋರ್ಟ್‌ನಲ್ಲಿ ತಮ್ಮ ಕಾನೂನು ವೃತ್ತಿಜೀವನದ ಅವಧಿಯಲ್ಲಿ, ನ್ಯಾಯಮೂರ್ತಿ ವರ್ಮಾ ಅವರು ಸಾಂವಿಧಾನಿಕ ಕಾನೂನು, ಕಾರ್ಮಿಕ ಮತ್ತು ಕೈಗಾರಿಕಾ ಕಾನೂನುಗಳು, ಕಾರ್ಪೊರೇಟ್ ಕಾನೂನುಗಳು, ತೆರಿಗೆ ಮತ್ತು ಸಂಬಂಧಿತ ಕ್ಷೇತ್ರಗಳಲ್ಲಿ ಪರಿಣತಿ ಹೊಂದಿದ್ದರು. ಅವರು 2006 ರಿಂದ ಬಡ್ತಿ ಪಡೆಯುವವರೆಗೆ ಅಲಹಾಬಾದ್ ಹೈಕೋರ್ಟ್‌ಗೆ ವಿಶೇಷ ವಕೀಲರಾಗಿ ಸೇವೆ ಸಲ್ಲಿಸಿದ್ದರು ಮತ್ತು ಹಿರಿಯ ವಕೀಲರಾಗಿ ನೇಮಕಗೊಳ್ಳುವ ಮೊದಲು 2012 ರಿಂದ 2013 ರವರೆಗೆ ಉತ್ತರ ಪ್ರದೇಶದ ಮುಖ್ಯ ಸ್ಥಾಯಿ ಸಲಹೆಗಾರರಾಗಿದ್ದರು.
ವರ್ಮಾ ಅವರನ್ನು ಅಕ್ಟೋಬರ್ 13, 2014 ರಂದು ಅಲಹಾಬಾದ್ ಹೈಕೋರ್ಟ್‌ಗೆ ಹೆಚ್ಚುವರಿ ನ್ಯಾಯಾಧೀಶರನ್ನಾಗಿ ನೇಮಿಸಲಾಯಿತು ಮತ್ತು ಫೆಬ್ರವರಿ 1, 2016 ರಂದು ಖಾಯಂ ನ್ಯಾಯಾಧೀಶರಾಗಿ ಬಡ್ತಿ ನೀಡಲಾಯಿತು. ನಂತರ ಅವರನ್ನು ಅಕ್ಟೋಬರ್ 11, 2021 ರಂದು ದೆಹಲಿ ಹೈಕೋರ್ಟ್‌ಗೆ ವರ್ಗಾಯಿಸಲಾಯಿತು.
ಉದ್ಯಮಿಯಿಂದ 2.5 ಲಕ್ಷ ಲಂಚ ಪಡೆದ ದೆಹಲಿ ಪೊಲೀಸ್ ಅಧಿಕಾರಿಯನ್ನು ಬಂಧಿಸಿದ ಸಿಬಿಐ


