ಬಾಲಿವುಡ್ ನಟ ಸುಶಾಂತ್ ಸಿಂಗ್ ರಜಪೂತ್ ಸಾವಿಗೆ ಸಂಬಂಧಿಸಿದಂತೆ ಕೇಂದ್ರ ತನಿಖಾ ದಳ (ಸಿಬಿಐ) ಎರಡು ಪ್ರತ್ಯೇಕ ಮುಕ್ತಾಯ ವರದಿಗಳನ್ನು ಸಲ್ಲಿಸಿದೆ ಮತ್ತು ಪ್ರಕರಣದ ಹಿಂದೆ ಯಾವುದೇ ಕೈವಾಡಗಳಿಲ್ಲ ಎಂದು ಹೇಳಿದೆ.
ಸುಶಾಂತ್ ಸಿಂಗ್ ತಂದೆ ಕೆ.ಕೆ ಸಿಂಗ್ ದಾಖಲಿಸಿದ್ದ ಆತ್ಮಹತ್ಯೆಗೆ ಪ್ರಚೋದನೆ ದೂರು ಮತ್ತು ಸುಶಾಂತ್ ಸಹೋದರಿಯರ ವಿರುದ್ಧ ರಿಯಾ ಚಕ್ರವರ್ತಿ ದಾಖಲಿಸಿದ್ದ ಆತ್ಮಹತ್ಯೆಗೆ ಪ್ರಚೋದನೆ ದೂರಿಗೆ ಸಂಬಂಧಿಸಿದಂತೆ ಸಿಬಿಐ ಮುಕ್ತಾಯದ ವರದಿಗಳನ್ನು ನೀಡಿದೆ.
ಕೆ.ಕೆ ಸಿಂಗ್ ಅವರ ದೂರಿಗೆ ಸಂಬಂಧಿಸಿದ ತನಿಖೆಯ ಮುಕ್ತಾಯದ ವರದಿಯನ್ನು ಸಿಬಿಐ ಪಾಟ್ನಾದ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದರೆ, ಎರಡನೆಯ ವರದಿಯನ್ನು ಮುಂಬೈನ ವಿಶೇಷ ನ್ಯಾಯಾಲಯಕ್ಕೆ ಸಲ್ಲಿಸಿದೆ.
ನಟ ಸುಶಾಂತ್ ಸಿಂಗ್ (34) ಜೂನ್ 2020ರಲ್ಲಿ ಮುಂಬೈನ ಬಾಂದ್ರಾದ ತಮ್ಮ ಅಪಾರ್ಟ್‌ಮೆಂಟ್‌ನಲ್ಲಿ ಶವವಾಗಿ ಪತ್ತೆಯಾಗಿದ್ದರು. ಈ ಸಂಬಂಧ ಮುಂಬೈ ಪೊಲೀಸರು ಆಕಸ್ಮಿಕ ಸಾವು ಎಂದು ಪ್ರಕರಣ ದಾಖಲಿಸಿಕೊಂಡು, ಸುಶಾಂತ್ ಕುಟುಂಬಸ್ಥರು ಮತ್ತು ಬಾಲಿವುಡ್‌ನ ಕೆಲವು ವ್ಯಕ್ತಿಗಳು ಸೇರಿದಂತೆ 50ಕ್ಕೂ ಹೆಚ್ಚು ಜನರ ಹೇಳಿಕೆಗಳನ್ನು ದಾಖಲಿಸಿಕೊಂಡಿದ್ದರು.
ಸುಶಾಂತ್ ಆತ್ಮಹತ್ಯೆಗೆ ರಿಯಾ ಚಕ್ರವರ್ತಿ ಮತ್ತು ಅವರ ಕುಟುಂಬದವರು ಪ್ರಚೋದನೆ ನೀಡಿದ್ದಾರೆ ಮತ್ತು ಸುಶಾಂತ್ ಹಣವನ್ನು ಅವರು ದುರುಪಯೋಗಪಡಿಸಿಕೊಂಡಿದ್ದಾರೆ ಎಂದು ಆರೋಪಿಸಿ ಸುಶಾಂತ್ ತಂದೆ ಕೆ.ಕೆ ಸಿಂಗ್ 2020ರ ಜುಲೈನಲ್ಲಿ ಪಾಟ್ನಾ ಪೊಲೀಸರಿಗೆ ದೂರು ನೀಡಿದ್ದರು.
ಪ್ರಕರಣದ ತನಿಖೆ ನಡೆಸಿದ ಸಿಬಿಐ ಮುಕ್ತಾಯದ ವರದಿಗಳನ್ನು ಸಲ್ಲಿಸಿದ್ದು, ಸುಶಾಂತ್ ಅವರ ಆತ್ಮಹತ್ಯೆಗೆ ಯಾರಾದರೂ ಪ್ರಚೋದನೆ ನೀಡಿದ್ದಾರೆ ಎಂಬುದಕ್ಕೆ ಯಾವುದೇ ಪುರಾವೆಗಳು ಕಂಡುಬಂದಿಲ್ಲ ಎಂದು ಹೇಳಿದೆ. ರಿಯಾ ಚಕ್ರವರ್ತಿ ಮತ್ತು ಆಕೆಯ ಕುಟುಂಬದ ಮೇಲಿನ ಆರೋಪಗಳನ್ನು ತೆರವುಗೊಳಿಸಿದೆ.
ಸಿಬಿಐ ಮುಕ್ತಾಯ ವರದಿ ಸಲ್ಲಿಸಿರುವ ಬಗ್ಗೆ ರಿಯಾ ಅವರ ವಕೀಲ ಸತೀಶ್ ಮನೆಶಿಂಡೆ ಪ್ರತಿಕ್ರಿಯಿಸಿದ್ದು, “ರಿಯಾ ಮತ್ತು ಆಕೆಯ ಕುಟುಂಬಸ್ಥರ ವಿರುದ್ದ ಮಾಧ್ಯಮಗಳಲ್ಲಿ ಸುಳ್ಳು ಆರೋಪ ಹೊರಿಸಿ ಸುದ್ದಿ ಹಬ್ಬಿಸಲಾಗಿತ್ತು. ಪ್ರಕರಣದ ತನಿಖೆಯ ವರದಿಯು ನ್ಯಾಯ ಮತ್ತು ನ್ಯಾಯಾಂಗದ ಮೇಲಿನ ನಂಬಿಕೆಯನ್ನು ಗಟ್ಟಿಗೊಳಿಸಿದೆ” ಎಂದು ಹೇಳಿದ್ದಾರೆ.
“ಸುಶಾಂತ್ ಸಿಂಗ್ ರಜಪೂತ್ ಅವರ ಸಾವಿಗೆ ಸಂಬಂಧಿಸಿದಂತೆ ಸುಮಾರು 4 ವರ್ಷಗಳ ನಂತರ ಸಿಬಿಐ ಮುಕ್ತಾಯ ವರದಿಯನ್ನು ಸಲ್ಲಿಸಿದೆ. ಪ್ರಕರಣದ ಪ್ರತಿಯೊಂದು ಅಂಶವನ್ನು ಎಲ್ಲಾ ಕೋನಗಳಿಂದ ಕೂಲಂಕಷವಾಗಿ ತನಿಖೆ ಮಾಡಿ ಪ್ರಕರಣವನ್ನು ಮುಕ್ತಾಯಗೊಳಿಸಿದ್ದಕ್ಕಾಗಿ ನಾವು ಸಿಬಿಐಗೆ ಕೃತಜ್ಞರಾಗಿರುತ್ತೇವೆ. ಸಾಮಾಜಿಕ ಮಾಧ್ಯಮ ಮತ್ತು ಎಲೆಕ್ಟ್ರಾನಿಕ್ ಮಾಧ್ಯಮಗಳಲ್ಲಿ ಸುಳ್ಳು ಆರೋಪ ಅನಗತ್ಯವಾಗಿತ್ತು” ಎಂದಿದ್ದಾರೆ.
“ಕೋವಿಡ್ ಅವಧಿಯಲ್ಲಿ ದೇಶದಲ್ಲಿ ಬೇರೇನೂ ನಡೆಯದ ಕಾರಣ ಎಲ್ಲರೂ ಟಿವಿ ಮತ್ತು ಸಾಮಾಜಿಕ ಮಾಧ್ಯಮಗಳಿಗೆ ಅಂಟಿಕೊಂಡಿದ್ದರು. ಮುಗ್ಧ ಜನರನ್ನು ದಾರಿ ತಪ್ಪಿಸಿ ಅವರಿಗೆ ಸುಳ್ಳು ಸುದ್ದಿ ಹಬ್ಬಲಾಗಿತ್ತು. ಇನ್ಯಾವುದೇ ಸಂದರ್ಭದಲ್ಲೂ ಇದು ಪುನರಾವರ್ತನೆಯಾಗದಿರಲಿ ಎಂದು ನಾನು ಆಶಿಸುತ್ತೇನೆ” ಎಂದು ಸತೀಶ್ ಹೇಳಿದ್ದಾರೆ.
“ಮಾಧ್ಯಮಗಳ ಪ್ರಮುಖರು ತಾವು ಮಾಡಿದ್ದನ್ನು ಆತ್ಮಾವಲೋಕನ ಮಾಡಿಕೊಳ್ಳಬೇಕೆಂದು ನಾನು ವಿನಂತಿಸುತ್ತೇನೆ. ರಿಯಾ ಚಕ್ರವರ್ತಿ ಹೇಳಲಾಗದ ದುಃಖಗಳನ್ನು ಅನುಭವಿಸಬೇಕಾಯಿತು ಮತ್ತು ನ್ಯಾಯಮೂರ್ತಿ ಸಾರಂಗ್ ವಿ ಕೊತ್ವಾಲ್ ಅವರನ್ನು ಜಾಮೀನಿನ ಮೇಲೆ ಬಿಡುಗಡೆ ಮಾಡುವವರೆಗೆ ಯಾವುದೇ ತಪ್ಪಿಲ್ಲದೆ 27 ದಿನಗಳ ಕಾಲ ಜೈಲಿನಲ್ಲಿದ್ದರು. ಮೌನವಾಗಿದ್ದದಕ್ಕೆ ಮತ್ತು ಎಲ್ಲಾ ಯಾತನೆಗಳನ್ನು ಅನುಭವಿಸಿದ್ದಕ್ಕೆ ರಿಯಾ ಅವರಿಗೆ ಮತ್ತು ಅವರ ಕುಟುಂಬಕ್ಕೆ ನಾನು ವಂದನೆ ಸಲ್ಲಿಸುತ್ತೇನೆ” ಎಂದು ಸತೀಶ್ ಹೇಳಿಕೊಂಡಿದ್ದಾರೆ.
ರಿಯಾ ಅವರು ತನ್ನ ಗೆಳೆಯರು ಮತ್ತು ನನ್ನೊಂದಿಗೆ ಸೈನಿಕ ಶಾಲೆಯಲ್ಲಿ ಓದಿದ ನನ್ನ ಗೆಳೆಯನ ಜೊತೆ ನನ್ನ ಭೇಟಿಯಾಗಿ ಸಮಸ್ಯೆ ಹೇಳಿಕೊಂಡಿದ್ದರು. ನಾನು ಪ್ರಕರಣ ಕೈಗೆತ್ತಿಕೊಂಡ ಬಳಿಕ ಜೀವ ಬೆದರಿಕೆಗಳು ಬಂದಿತ್ತು. ಆದರೆ, ನಾನು ನನ್ನ ಕರ್ತವ್ಯ ನಿರ್ವಹಿಸುವುದಿರಂದ ತಡೆಯಲು ಯಾರಿಗೂ ಆಗಿಲ್ಲ” ಎಂದು ಸತೀಶ್ ತಿಳಿಸಿದ್ದಾರೆ.
ಬಿಕ್ಕಟ್ಟು-ದಾಳಿಗಳಿಂದಾಗಿ ದಲಿತ ನಾಯಕರು ರಾಜಕೀಯದಲ್ಲಿ ಬದುಕುಳಿಯುವುದು ಕಷ್ಟ: ಕೇರಳ ಸಂಸದ ಕೆ. ಸುರೇಶ್


