ಸಹಕಾರ ಸಚಿವ ಕೆ. ಎನ್. ರಾಜಣ್ಣ ಅವರು ತಮ್ಮ ಮತ್ತು ಇತರ ರಾಜಕಾರಣಿಗಳ ಹನಿಟ್ರ್ಯಾಪ್ ಪ್ರಯತ್ನದ ಆರೋಪದ ಬಗ್ಗೆ ತನಿಖೆ ನಡೆಸುವಂತೆ ಇನ್ನೂ ದೂರು ದಾಖಲಿಸಿಲ್ಲ ಎಂದು ಗೃಹ ಸಚಿವ ಜಿ. ಪರಮೇಶ್ವರ ಮಂಗಳವಾರ ಹೇಳಿದ್ದಾರೆ. ರಾಜ್ಯದ ವಿರೋಧ ಪಕ್ಷದವರು ಸೇರಿದಂತೆ ರಾಜಕೀಯ ನಾಯಕರ ಫೋನ್ ಕದ್ದಾಲಿಕೆಗೆ ಸಂಬಂಧಿಸಿದಂತೆ ನಿರ್ದಿಷ್ಟ ದೂರು ಇದ್ದರೆ, ಅದನ್ನು ತನಿಖೆ ಮಾಡಲಾಗುವುದು ಎಂದು ಅವರು ಇದೆ ವೇಳೆ ಹೇಳಿದ್ದಾರೆ. ಹನಿಟ್ರ್ಯಾಪ್ ಆರೋಪ
“ಮೊದಲು ದೂರು ನೀಡಬೇಕು. ಅದು ಬಂದ ನಂತರ ತನಿಖೆ ನಡೆಸಲಾಗುವುದು. ನೀವು ಎಷ್ಟು ಬಾರಿ ಕೇಳಿದರೂ ಇದು ನನ್ನ ಪ್ರತಿಕ್ರಿಯೆಯಾಗಿರುತ್ತದೆ” ಎಂದು ಪರಮೇಶ್ವರ ಬೆಂಗಳೂರಿನಲ್ಲಿ ಸುದ್ದಿಗಾರರಿಗೆ ತಿಳಿಸಿದ್ದಾರೆ. ಹನಿಟ್ರ್ಯಾಪ್ ಪ್ರಕರಣದ ತನಿಖೆಗೆ ನಿರ್ದೇಶನ ಕೋರಿ ಸುಪ್ರೀಂಕೋರ್ಟ್‌ನಲ್ಲಿ ಸಲ್ಲಿಸಲಾದ ಸಾರ್ವಜನಿಕ ಹಿತಾಸಕ್ತಿ ಅರ್ಜಿಯ ಕುರಿತ ಪ್ರಶ್ನೆಗೆ ಅವರು, “ತೀರ್ಪು ಏನು ಎಂದು ನೋಡೋಣ” ಎಂದು ಹೇಳಿದ್ದಾರೆ. ಹನಿಟ್ರ್ಯಾಪ್ ಆರೋಪ
ಶಾಸಕಾಂಗ ಸಭೆಯಲ್ಲಿ ವಿಷಯ ಪ್ರಸ್ತಾಪಿಸಿ ಆರು ದಿನಗಳ ನಂತರವೂ, ಹನಿ ಟ್ರ್ಯಾಪ್ ಪ್ರಯತ್ನಕ್ಕೆ ಸಂಬಂಧಿಸಿದಂತೆ ಸಚಿವ ರಾಜಣ್ಣ ಯಾವುದೇ ದೂರು ದಾಖಲಿಸಿಲ್ಲವೆ ಎಂಬ ವರದಿಗಾರರ ಪ್ರಶ್ನೆಗೆ ಉತ್ತರಿಸಿದ ಅವರು, “ಈ ಪ್ರಶ್ನೆಯನ್ನು ನೀವು (ರಾಜಣ್ಣ ಅವರನ್ನು) ಕೇಳಬೇಕು. ಆದರೆ, ಅದರ ಬದಲಾಗಿ ನೀವು ನನ್ನನ್ನು ಕೇಳುತ್ತಿದ್ದೀರಿ. ನಾನು ಅವರಿಂದ ದೂರು ದಾಖಲಿಸಲು ಸಾಧ್ಯವೇ? ಅವರು ಸೂಕ್ತವೆನಿಸಿದಾಗಲೆಲ್ಲಾ ದೂರು ದಾಖಲಿಸಬೇಕು, ನಂತರ ಇಲಾಖೆಯ ಕೆಲಸ ಪ್ರಾರಂಭವಾಗುತ್ತದೆ” ಎಂದು ಹೇಳಿದ್ದಾರೆ.
ರಾಜಣ್ಣ ಅಥವಾ ಅವರ ಮೇಲೆ ಯಾವುದಾದರೂ ಒತ್ತಡವಿದೆಯೇ ಎಂಬ ಪ್ರಶ್ನೆಗೆ ಉತ್ತರಿಸುತ್ತಾ,”ನನಗೆ ಗೊತ್ತಿಲ್ಲ, ಈ ಬಗ್ಗೆ ಅವರನ್ನೇ ಕೇಳಿ. ಪ್ರಕರಣಕ್ಕೆ ಸಂಬಂಧಿಸಿದಂತೆ ನನ್ನ ಮೇಲೆ ಯಾವುದೇ ಒತ್ತಡವಿಲ್ಲ. ದೂರು ನೀಡಿದ ನಂತರ ತನಿಖೆ ಆರಂಭವಾಗಲಿದೆ….ನಾನು ಈಗಾಗಲೇ ಉನ್ನತ ಮಟ್ಟದ ತನಿಖೆಯನ್ನು ಘೋಷಿಸಿದ್ದೇನೆ. ಮುಖ್ಯಮಂತ್ರಿ ತನಿಖೆಯ ಸ್ವರೂಪ ಮತ್ತು ಮಟ್ಟವನ್ನು ನಿರ್ಧರಿಸುತ್ತಾರೆ, ಆದರೆ ಕ್ರಮಕ್ಕೆ ಕಾರಣದ ಅವಶ್ಯಕತೆಯಿದೆ, ಆದ್ದರಿಂದ ದೂರು ಬರಬೇಕಾಗಿದೆ” ಎಂದು ಹೇಳಿದ್ದಾರೆ.
ಗುರುವಾರ ವಿಧಾನಸಭೆಯಲ್ಲಿ ಮಾತನಾಡಿದ್ದ ರಾಜಣ್ಣ ಅವರು, ತನ್ನ ಮೇಲೆ ಹನಿ ಟ್ರ್ಯಾಪ್ ಪ್ರಯತ್ನಗಳು ನಡೆದಿವೆ ಮತ್ತು ಬೇರೆ ಪಕ್ಷಗಳು ಸೇರಿದಂತೆ ಕನಿಷ್ಠ 48 ರಾಜಕಾರಣಿಗಳು ಇದಕ್ಕೆ ಬಲಿಯಾಗಿದ್ದಾರೆ ಎಂದು ಹೇಳಿದ್ದರು. ಈ ವಿಷಯ ವಿಧಾನಸಭೆಯಲ್ಲಿ ಗದ್ದಲ ಸೃಷ್ಟಿಸಿತ್ತು. ಗೃಹ ಸಚಿವರು ಇದರ ಬಗ್ಗೆ ಉನ್ನತ ಮಟ್ಟದ ತನಿಖೆಯನ್ನು ಘೋಷಿಸಿದ್ದರೂ, ಪ್ರತಿಪಕ್ಷಗಳು ಹಾಲಿ ಹೈಕೋರ್ಟ್ ನ್ಯಾಯಾಧೀಶರಿಂದ ನ್ಯಾಯಾಂಗ ತನಿಖೆಗೆ ಒತ್ತಾಯಿಸಿವೆ.
ಫೋನ್ ಟ್ಯಾಪಿಂಗ್ ಆರೋಪಗಳಿಗೆ ಸಂಬಂಧಿಸಿದಂತೆ ಮಾತನಾಡಿದ ಪರಮೇಶ್ವರ ಅವರು, ಈ ಸಂಬಂಧ ತಮಗಾಗಲಿ ಅಥವಾ ಯಾವುದೇ ಪೊಲೀಸ್ ಠಾಣೆಗೆ ಯಾರೂ ದೂರು ನೀಡಿಲ್ಲ ಎಂದು ಹೇಳಿದ್ದಾರೆ.
“ವಿಪಕ್ಷ ನಾಯಕ ಆರ್. ಅಶೋಕ್ ಅವರು ಫೋನ್ ಟ್ಯಾಪಿಂಗ್ ಬಗ್ಗೆ ಮಾತನಾಡಿರುವುದನ್ನು ನಾನು ಗಮನಿಸಿದ್ದೇನೆ. ನನಗೆ ಅಂತಹ ಯಾವುದೇ ವಿಷಯದ ಬಗ್ಗೆ ದೂರು ಬಂದಿಲ್ಲ. ಯಾರಾದರೂ ನಿರ್ದಿಷ್ಟ ದೂರು ನೀಡಿದರೆ, ನಾವು ಅದರ ಬಗ್ಗೆ ಕ್ರಮ ತೆಗೆದುಕೊಂಡು ಅದನ್ನು ಪರಿಶೀಲಿಸಲಿದ್ದೇವೆ” ಎಂದು ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದ್ದಾರೆ.
ಸೋಮವಾರ ಮಾತನಾಡಿದ್ದ ವಿಪಕ್ಷ ನಾಯಕ ಅಶೋಕ್ ಅವರು, ಕಾಂಗ್ರೆಸ್ ಸರ್ಕಾರವು ಸಚಿವರು ಮತ್ತು ಆಡಳಿತ ಪಕ್ಷದ ಶಾಸಕರು ಸೇರಿದಂತೆ ರಾಜ್ಯದ ಪ್ರಮುಖ ನಾಯಕರ ಫೋನ್‌ಗಳನ್ನು “ಟ್ಯಾಪ್” ಮಾಡಿದೆ ಎಂದು ಆರೋಪಿಸಿದ್ದಾರೆ.
“ಭೋಜನ ಕೂಟ”ಗಳಲ್ಲಿ ಭಾಗಿಯಾಗಿರುವ ಕೆಲವು ಸಚಿವರ ಮೇಲೆ ಕಣ್ಣಿಡಲು ಯಾವುದಾದರೂ ಪ್ರಯತ್ನಗಳು ನಡೆದಿವೆಯೇ ಎಂಬ ಪ್ರಶ್ನೆಗೆ ಉತ್ತರಿಸಿದ ಪರಮೇಶ್ವರ್ ಅವರು, ಗುಪ್ತಚರ ಇಲಾಖೆ ಮುಖ್ಯಮಂತ್ರಿಯೊಂದಿಗೆ ಇತ್ತು ಮತ್ತು ಅವರು ಅಂತಹ ವಿಷಯಗಳ ಬಗ್ಗೆ ಕೇಳಿಲ್ಲ ಅಥವಾ ಅಂತಹ ಯಾವುದೇ ಅನುಮಾನಗಳನ್ನು ಹೊಂದಿಲ್ಲ ಎಂದು ಹೇಳಿದ್ದಾರೆ.
ಭೋಜನ ಸಭೆಗಳಲ್ಲಿ ಭಾಗಿಯಾಗಿರುವ ಸಚಿವರ ಮೇಲೆ “ಬಾಹ್ಯ ಗುಪ್ತಚರ” ಬೇಹುಗಾರಿಕೆ ನಡೆಸುತ್ತಿದೆ ಎಂಬ ಊಹಾಪೋಹಗಳ ಬಗ್ಗೆ ಉತ್ತರಿಸಿದ ಅವರು, “ಯಾರಾದರೂ ನಿಗಾ ಇಡಲಿ, ಯಾವುದೇ ಸಮಸ್ಯೆ ಇಲ್ಲ” ಎಂದು ಹೇಳಿದ್ದಾರೆ.
“ನಾವು ಅಂತಹ ಸಭೆಗಳನ್ನು ಅಡಗಿಕೊಂಡು ನಡೆಸುತ್ತಿಲ್ಲ. ಆಂತರಿಕ ಮೀಸಲಾತಿ (ಎಸ್‌ಸಿಗಳಲ್ಲಿ) ಕುರಿತು ಚರ್ಚಿಸಲು ನಾವು ಸಚಿವ ಮಹಾದೇವಪ್ಪ ಅವರ ಮನೆಯಲ್ಲಿ ಭೇಟಿಯಾಗಿದ್ದೆವು. ನಿನ್ನೆ ನಾವು ಈ ವಿಷಯದ ಬಗ್ಗೆ ಮುಖ್ಯಮಂತ್ರಿಯನ್ನು ಭೇಟಿಯಾಗಿದ್ದೆವು. ಸಿಎಂ ಜೊತೆಗಿನ ಸಭೆಯ ಸಿದ್ಧತೆಯ ಭಾಗವಾಗಿ, ನಾವೆಲ್ಲರೂ ಮೊದಲೇ (ಮಹದೇವಪ್ಪ ಅವರ ನಿವಾಸದಲ್ಲಿ) ಭೇಟಿಯಾಗಿದ್ದೆವು” ಎಂದು ಅವರು ಹೇಳಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ತನ್ನ ವಿರುದ್ಧ ‘ಅವಹೇಳನಕಾರಿ’ ಉಲ್ಲೇಖ ಮಾಡದಂತೆ ಸ್ಪೀಕರ್ ರಕ್ಷಣೆ ಕೋರಿದ ಗುಜರಾತ್‌ನ ಏಕೈಕ ಮುಸ್ಲಿಂ ಶಾಸಕ
ತನ್ನ ವಿರುದ್ಧ ‘ಅವಹೇಳನಕಾರಿ’ ಉಲ್ಲೇಖ ಮಾಡದಂತೆ ಸ್ಪೀಕರ್ ರಕ್ಷಣೆ ಕೋರಿದ ಗುಜರಾತ್‌ನ ಏಕೈಕ ಮುಸ್ಲಿಂ ಶಾಸಕ

