ರಾಜ್ಯದ ಸಚಿವರು ಮತ್ತು ಇತರ ರಾಜಕಾರಣಿಗಳನ್ನು ಒಳಗೊಂಡ “ಹನಿ-ಟ್ರ್ಯಾಪ್” ಪ್ರಯತ್ನದ ಬಗ್ಗೆ ಸಿಬಿಐ ತನಿಖೆ ನಡೆಸಬೇಕೆಂದು ಸಲ್ಲಿಸಲಾದ ಅರ್ಜಿಯನ್ನು ಸುಪ್ರೀಂ ಕೋರ್ಟ್ ಬುಧವಾರ ವಜಾಗೊಳಿಸಿದೆ. ಸಾಮಾಜಿಕ ಹೋರಾಟಗಾರ ಬಿನಯ್ ಕುಮಾರ್ ಸಿಂಗ್ ಸಲ್ಲಿಸಿದ್ದ ಸಾರ್ವಜನಿಕ ಹಿತಾಸಕ್ತಿ ಮೊಕದ್ದಮೆ (ಪಿಐಎಲ್) ಅನ್ನು ನ್ಯಾಯಮೂರ್ತಿಗಳಾದ ವಿಕ್ರಮ್ ನಾಥ್, ಸಂಜಯ್ ಕರೋಲ್ ಮತ್ತು ಸಂದೀಪ್ ಮೆಹ್ತಾ ಅವರ ತ್ರಿಸದಸ್ಯ ಪೀಠ ವಜಾಗೊಳಿಸಿದೆ. ಹನಿಟ್ರ್ಯಾಪ್ ಆರೋಪ
ಸುಪ್ರೀಂ ಕೋರ್ಟ್ ಅಥವಾ ನಿವೃತ್ತ ಸುಪ್ರೀಂ ಕೋರ್ಟ್ ನ್ಯಾಯಾಧೀಶರ ನೇತೃತ್ವದ ಸಮಿತಿಯಿಂದ ತನಿಖೆ ನಡೆಸಬೇಕೆಂದು ಅರ್ಜಿಯಲ್ಲಿ ಕೋರಲಾಗಿತ್ತು. ಅರ್ಜಿದಾರರ ಪರವಾಗಿ ಹಾಜರಾದ ವಕೀಲ ಬರುಣ್ ಕುಮಾರ್ ಸಿನ್ಹಾ, ಮಾಧ್ಯಮಗಳಲ್ಲಿ ವರದಿಯಾದ ಆರೋಪಕ್ಕೆ ಅದರ ಹಿಂದಿನ ವ್ಯಕ್ತಿಗಳ ವಿರುದ್ಧ ಸಂಪೂರ್ಣ ತನಿಖೆ ಅಗತ್ಯವಿದೆ ಎಂದು ಹೇಳಿದ್ದಾರೆ. ಹನಿಟ್ರ್ಯಾಪ್ ಆರೋಪ
ಕೆಲವು ಸ್ಥಾಪಿತ ಹಿತಾಸಕ್ತಿಗಳು ನ್ಯಾಯಾಧೀಶರ “ಹನಿ ಟ್ರ್ಯಾಪ್” ನಡೆಸಿದ್ದು, ಇದು ನ್ಯಾಯಾಂಗದ ಸ್ವಾತಂತ್ರ್ಯ ಮತ್ತು ಕಾನೂನಿನ ಆಡಳಿತಕ್ಕೆ ಗಂಭೀರ ಬೆದರಿಕೆಯಾಗಿ ಪರಿಣಮಿಸುತ್ತದೆ ಎಂದು ಅರ್ಜಿಯಲ್ಲಿ ಹೇಳಲಾಗಿದೆ. “ಕರ್ನಾಟಕದ ಮುಖ್ಯಮಂತ್ರಿಯಾಗಲು ಆಕಾಂಕ್ಷಿಯಾಗಿರುವ ವ್ಯಕ್ತಿಯೊಬ್ಬರು ನ್ಯಾಯಾಧೀಶರು ಸೇರಿದಂತೆ ಹಲವಾರು ವ್ಯಕ್ತಿಗಳನ್ನು ಹನಿಟ್ರ್ಯಾಪ್ ಮಾಡುವಲ್ಲಿ ಯಶಸ್ವಿಯಾಗಿದ್ದಾರೆ” ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ಆರೋಪಿಸಿದ್ದಾರೆ ಎಂದು ಡೆಕ್ಕನ್ ಹೆರಾಲ್ಡ್ ವರದಿ ಮಾಡಿದೆ.
“ಈ ಆರೋಪಗಳನ್ನು ಹಾಲಿ ಸಚಿವರೊಬ್ಬರು ಮಾಡಿದ್ದಾರೆ. ಅವರು ತಮ್ಮನ್ನು ಬಲಿಪಶು ಎಂದು ಹೇಳಿಕೊಂಡಿದ್ದಾರೆ. ಇದು ಆರೋಪವನ್ನು ಪುಷ್ಠೀಕರಿಸುತ್ತದೆ. ಅಷ್ಟೇ ಅಲ್ಲ, ಸರ್ಕಾರದ ಮತ್ತೊಬ್ಬರು ಸಚಿವರು ಈ ಆರೋಪಕ್ಕೆ ಧ್ವನಿಗೂಡಿಸಿದ್ದಾರೆ. ಈ ಪ್ರಕರಣವು ಈಗ ಮಾಡಿರುವ ಆರೋಪಕ್ಕಿಂತ ಹತ್ತು ಪಟ್ಟು ದೊಡ್ಡದಿದೆ” ಎಂದು ಅರ್ಜಿದಾರರು ತಮ್ಮ ಅರ್ಜಿಯಲ್ಲಿ ತಿಳಿಸಿದ್ದಾಗಿ ವರದಿ ವಿವರಿಸಿದೆ.
“ಹನಿಟ್ರ್ಯಾಪ್‌ನಂತಹ ವಿಧಾನಗಳಿಂದ ನ್ಯಾಯಾಧೀಶರು ರಾಜಿ ಮಾಡಿಕೊಳ್ಳುವುದರಿಂದ ನ್ಯಾಯಾಂಗದ ಸ್ವಾತಂತ್ರ್ಯಕ್ಕೆ ಗಂಭೀರ ಅಪಾಯ ಎದುರಾಗುತ್ತದೆ ಮತ್ತು ನ್ಯಾಯಾಂಗದ ಮೇಲಿನ ಸಾರ್ವಜನಿಕರ ವಿಶ್ವಾಸಕ್ಕೆ ಗಂಭೀರ ಹಾನಿಯಾಗುತ್ತದೆ” ಎಂದು ಅರ್ಜಿದಾರರು ಹೇಳಿದ್ದಾರೆ.
“ಹಲವಾರು ಮಾಧ್ಯಮ ವರದಿಗಳು ಮತ್ತು ಸಾಮಾಜಿಕ ಮಾಧ್ಯಮಗಳಿಂದ, ಈ ಪ್ರಕರಣದ ಸಂಬಂಧ ಜನರಲ್ಲಿ ಈಗಾಗಲೇ ಸಾಕಷ್ಟು ಆಕ್ರೋಶ ಉಂಟಾಗಿದೆ. ಈ ಹಿನ್ನೆಲೆಯಲ್ಲಿ, ದೇಶದ ನ್ಯಾಯಾಂಗ ವ್ಯವಸ್ಥೆಯಲ್ಲಿನ ಖ್ಯಾತಿ ಮತ್ತು ಸಾರ್ವಜನಿಕ ವಿಶ್ವಾಸವನ್ನು ಉಳಿಸಲು ನ್ಯಾಯಾಲಯವು ಈ ಪ್ರಕರಣದಲ್ಲಿ ಮಧ್ಯಪ್ರವೇಶಿಸುವುದು ಅತ್ಯಗತ್ಯ” ಎಂದು ಅರ್ಜಿಯಲ್ಲಿ ತಿಳಿಸಿದ್ದಾರೆ.
ಧನ್ಬಾದ್ ನಿವಾಸಿಯಾಗಿರುವ ಅರ್ಜಿದಾರರು ಮಾಧ್ಯಮ ವರದಿಗಳ ಆಧಾರದ ಮೇಲೆ ಅರ್ಜಿ ಸಲ್ಲಿಸಿದ್ದಾರೆ ಎಂದು ವರದಿ ಹೇಳಿದೆ. ರಾಜಿ ಮಾಡಿಕೊಂಡ ನ್ಯಾಯಾಂಗವು ಪ್ರಜಾಪ್ರಭುತ್ವಕ್ಕೆ ಗಂಭೀರ ಬೆದರಿಕೆಯಾಗಿದೆ ಎಂದು ಅವರು ಕಳವಳ ವ್ಯಕ್ತಪಡಿಸಿದ್ದಾರೆ ಎಂದಿದೆ.
“ನ್ಯಾಯಾಧೀಶರನ್ನು ಬ್ಲ್ಯಾಕ್‌ಮೇಲ್ ಮಾಡಲು ಅಥವಾ ಪಕ್ಷಪಾತದ ತೀರ್ಪುಗಳನ್ನು ನೀಡುವಂತೆ ಒತ್ತಾಯಿಸಲು ಸಾಧ್ಯವಾದರೆ, ಕಾನೂನಿನ ನಿಯಮವೇ ಕುಸಿಯುತ್ತದೆ. ಇದು ದಬ್ಬಾಳಿಕೆ, ಭ್ರಷ್ಟಾಚಾರ ಮತ್ತು ಅನ್ಯಾಯಕ್ಕೆ ದಾರಿ ಮಾಡಿಕೊಡುತ್ತದೆ. ನ್ಯಾಯಾಂಗದ ಮೇಲಿನ ಜನರ ನಂಬಿಕೆಯು ಈ ಆರೋಪಗಳಿಗೆ ತ್ವರಿತ ಮತ್ತು ರಾಜಿಯಾಗದ ಕ್ರಮದ ಮೇಲೆ ಅವಲಂಬಿತವಾಗಿದೆ” ಎಂದು ಅರ್ಜಿಯಲ್ಲಿ ತಿಳಿಸಲಾಗಿದೆ.
“ಸತ್ಯವನ್ನು ಬಯಲು ಮಾಡಲು ಮತ್ತು ನ್ಯಾಯಾಂಗ ವ್ಯವಸ್ಥೆಯಲ್ಲಿ ಸಾರ್ವಜನಿಕ ವಿಶ್ವಾಸವನ್ನು ಪುನಃಸ್ಥಾಪಿಸಲು ಸುಪ್ರೀಂ ಕೋರ್ಟ್ ಮೇಲ್ವಿಚಾರಣೆಯಲ್ಲಿ ತಟಸ್ಥ ಮತ್ತು ಸ್ವತಂತ್ರ ಸಂಸ್ಥೆಯ ನೇತೃತ್ವದಲ್ಲಿ ತನಿಖೆ ನಡೆಸುವುದು ಏಕೈಕ ಮಾರ್ಗವಾಗಿದೆ” ಎಂದು ಅರ್ಜಿದಾರರು ಹೇಳಿದ್ದಾರೆ.
ಈ ಪ್ರಕರಣವನ್ನು ಸ್ವತಂತ್ರ ಸಂಸ್ಥೆಯಿಂದ, ಅಂದರೆ ಕೇಂದ್ರ ತನಿಖಾ ದಳ ಅಥವಾ ಕರ್ನಾಟಕ ರಾಜ್ಯದ ನಿಯಂತ್ರಣ ಅಥವಾ ಪ್ರಭಾವಕ್ಕೆ ಒಳಪಡದ ಸಮಗ್ರತೆಯ ಪೊಲೀಸ್ ಅಧಿಕಾರಿಗಳನ್ನು ಒಳಗೊಂಡ ವಿಶೇಷ ತನಿಖಾ ತಂಡದಿಂದ ತನಿಖೆ ನಡೆಸಿ, ಈ ನ್ಯಾಯಾಲಯಕ್ಕೆ ವರದಿಯನ್ನು ಸಲ್ಲಿಸುವಂತೆ ನಿರ್ದೇಶನ ನೀಡುವಂತೆ ಅರ್ಜಿಯಲ್ಲಿ ಕೋರಲಾಗಿದೆ.
ತನಿಖೆಯನ್ನು ಸುಪ್ರೀಂ ಕೋರ್ಟ್ ಅಥವಾ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಾಧೀಶರ ನೇತೃತ್ವದ ಮೇಲ್ವಿಚಾರಣಾ ಸಮಿತಿಯು ಮೇಲ್ವಿಚಾರಣೆ ಮಾಡಬೇಕು ಎಂದು ಮನವಿ ಮಾಡಲಾಗಿದೆ.
“ಪ್ರಕರಣದಿಂದ (ಹನಿಟ್ರ್ಯಾಪ್) ನೇರವಾಗಿ/ಪರೋಕ್ಷವಾಗಿ ಲಾಭ ಪಡೆದ ಎಲ್ಲಾ ಅಧಿಕಾರಿಗಳು/ವ್ಯಕ್ತಿಗಳ ಪಾತ್ರದ ಬಗ್ಗೆಯೂ ಮೇಲ್ವಿಚಾರಣಾ ಸಮಿತಿಯು ತನಿಖೆ ನಡೆಸಬೇಕು” ಎಂದು ಕೋರಲಾಗಿದೆ.
ಕರ್ನಾಟಕ ಸರ್ಕಾರದ ಸಹಕಾರ ಸಚಿವ ಕೆ.ಎನ್ ರಾಜಣ್ಣ ಅವರು ವಿಧಾನಸಭೆಯಲ್ಲಿ ಇತ್ತೀಚೆಗೆ ತಮ್ಮ ಮೇಲೆ ಹನಿಟ್ರ್ಯಾಪ್ ಪ್ರಯತ್ನ ನಡೆದಿದ್ದು, ತಾನು ಮಾತ್ರ ಅಲ್ಲದೆ ವಿವಿಧ ಪಕ್ಷಗಳ 48 ನಾಯಕರನ್ನು ಹನಿಟ್ರ್ಯಾಪ್ ಜಾಲ ಗುರಿಯಾಗಿಸಿಕೊಂಡಿದೆ ಎಂದು ಹೇಳಿಕೊಂಡಿದ್ದರು. ಅದು ಈಗ ರಾಷ್ಟ್ರ ಮಟ್ಟದಲ್ಲಿ ಚರ್ಚಾ ವಿಷಯವಾಗಿ ಮಾರ್ಪಟ್ಟಿದೆ.
ಬಿಜೆಪಿ ಶಾಸಕ ಬಸನಗೌಡ ಪಾಟೀಲ್ ಯತ್ನಾಳ್ ಅವರು ಸಹಕಾರ ಸಚಿವರನ್ನು ಹನಿಟ್ರ್ಯಾಪ್ ಮಾಡಲಾಗಿದೆ ಎಂದು ವಿಧಾನಸಭೆಯ ಬಜೆಟ್ ಅಧಿವೇಶನದಲ್ಲಿ ವಿಷಯ ಪ್ರಸ್ತಾಪಿಸಿದ್ದರು. ಅದಕ್ಕೆ ಬಿಜೆಪಿ ಶಾಸಕರಾದ ಸುನಿಲ್ ಕುಮಾರ್ ಮತ್ತು ಮುನಿರತ್ನ ಧ್ವನಿಗೂಡಿಸಿದ್ದರು.
ಈ ಸಂಬಂಧ ಪ್ರತಿಕ್ರಿಯಿಸಿದ್ದ ಸಚಿವ ರಾಜಣ್ಣ ಅವರು, ಹನಿಟ್ರ್ಯಾಪ್ ಯತ್ನ ನಡೆದಿರುವುದನ್ನು ಒಪ್ಪಿಕೊಂಡಿದ್ದರು. ಗೃಹ ಸಚಿವ ಡಾ.ಜಿ ಪರಮೇಶ್ವರ್ ಮತ್ತು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಕರಣದ ಕುರಿತು ಉನ್ನತ ಮಟ್ಟದ ತನಿಖೆ ನಡೆಸುವ ಭರವಸೆ ನೀಡಿದ್ದಾರೆ.
ಇಲ್ಲಿ ಕ್ಲಿಕ್ ಮಾಡಿ
ಇದನ್ನೂಓದಿ: ಹನಿಟ್ರ್ಯಾಪ್ ಆರೋಪ | ಸಚಿವ ರಾಜಣ್ಣ ಇನ್ನೂ ದೂರು ದಾಖಲಿಸಿಲ್ಲ ಎಂದ ಗೃಹ ಸಚಿವ ಪರಮೇಶ್ವರ್
ಹನಿಟ್ರ್ಯಾಪ್ ಆರೋಪ | ಸಚಿವ ರಾಜಣ್ಣ ಇನ್ನೂ ದೂರು ದಾಖಲಿಸಿಲ್ಲ ಎಂದ ಗೃಹ ಸಚಿವ ಪರಮೇಶ್ವರ್

