ಶೇಕಡ 100 ಫಲಿತಾಂಶ ಸಾಧಿಸಬೇಕು ಎಂಬ ಕಾರಣಕ್ಕೆ, ದಕ್ಷಿಣ ಕನ್ನಡ ಜಿಲ್ಲೆ ಬೆಳ್ತಂಗಡಿ ತಾಲೂಕಿನ ಪದ್ಮುಂಜ ಸರ್ಕಾರಿ ಪ್ರೌಢ ಶಾಲೆಯ ಇಬ್ಬರು ವಿದ್ಯಾರ್ಥಿನಿಯರಿಗೆ ಎಸ್‌ಎಸ್‌ಎಲ್‌ಸಿ ಪರೀಕ್ಷೆ ಬರೆಯಲು ಅವಕಾಶ ನಿರಾಕರಿಸುವ ಮೂಲಕ ಶಿಕ್ಷಕರು ಮಹಾ ಅನ್ಯಾಯವೆಸಗಿದ ಆರೋಪ ಕೇಳಿ ಬಂದಿದೆ.
ವಿದ್ಯಾರ್ಥಿನಿಯರು ಕಲಿಕೆಯಲ್ಲಿ ಹಿಂದುಳಿದಿದ್ದಾರೆ. ಪರೀಕ್ಷೆ ಬರೆದು ಫೇಲ್ ಆದರೆ ಶಾಲೆಗೆ 100 ಶೇಕಡ ಫಲಿತಾಂಶ ಬರುವುದಿಲ್ಲ ಎಂಬ ಕಾರಣಕ್ಕೆ, ಅವರಿಗೆ ಹಾಲ್ ಟಿಕೆಟ್ ಕೊಡದೆ ಪರೀಕ್ಷೆ ಬರೆಯುವ ಅವಕಾಶ ತಪ್ಪಿಸಲಾಗಿದೆ ಎಂದು ಆರೋಪಿಸಲಾಗಿದೆ.
ಈ ಕುರಿತು ನಾನುಗೌರಿ.ಕಾಂ ಜೊತೆ ಮಾತನಾಡಿರುವ ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಸಂಚಾಲಕ ಮೊಯ್ದಿನ್ ಕುಟ್ಟಿ, “ಕಲಿಕೆಯಲ್ಲಿ ಹಿಂದುಳಿದಿದ್ದಾರೆ ಎನ್ನಲಾದ ಸುಮಾರು 6 ಮಕ್ಕಳ ಪೋಷಕರನ್ನು ಎರಡು ತಿಂಗಳ ಹಿಂದೆ ಶಾಲೆಗೆ ಕರೆಸಿದ್ದ ಶಿಕ್ಷಕರು “ನಿಮ್ಮ ಮಕ್ಕಳು ಕಲಿಕೆಯಲ್ಲಿ ಹಿಂದೆ ಇದ್ದಾರೆ. ಪರೀಕ್ಷೆ ಬರೆದರೆ ಫೇಲ್ ಆಗುವ ಸಾಧ್ಯತೆ ಇದೆ. ಅವರನ್ನು ಮುಂದಿನ ಏಪ್ರಿಲ್‌ನಲ್ಲಿ ಪರೀಕ್ಷೆಗೆ ಕೂರಿಸುತ್ತೇವೆ” ಎಂದು ಹೇಳಿದ್ದರು.
ಎಸ್‌ಎಸ್‌ಎಲ್‌ಸಿ ಪರೀಕ್ಷಾ ವ್ಯವಸ್ಥೆಯ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲದ ವಿದ್ಯಾರ್ಥಿಗಳ ಪೋಷಕರು ಅದಕ್ಕೆ ಒಪ್ಪಿಗೆ ಸೂಚಿಸಿದ್ದರು. ಆದರೆ, ಇಬ್ಬರನ್ನು ಹೊರತುಪಡಿಸಿ ನಾಲ್ವರು ವಿದ್ಯಾರ್ಥಿಗಳು ಕಡೆ ಕ್ಷಣದಲ್ಲಿ ಪರೀಕ್ಷೆಗೆ ಹಾಜರಾಗಿದ್ದಾರೆ. ಇಬ್ಬರು ವಿದ್ಯಾರ್ಥಿನಿಯರು ಮಾತ್ರ ಶಿಕ್ಷಕರ ಮಾತು ಕೇಳಿಕೊಂಡು ಪರೀಕ್ಷೆ ಬರೆದಿಲ್ಲ. ಅವರಿಗೆ ಹಾಲ್ ಟಿಕೆಟ್ ಕೂಡ ಕೊಟ್ಟಿಲ್ಲ ಎನ್ನಲಾಗ್ತಿದೆ. ಪೋಷಕರು ಹಾಲ್ ಟಿಕೆಟ್ ಬಗ್ಗೆ ಕೇಳಿದಾಗ, “ಅದು ಬಂದಿಲ್ಲ” ಎಂಬ ಸಬೂಬು ನೀಡಿದ್ದಾರಂತೆ. ಈ ಮೂಲಕ ವಿದ್ಯಾರ್ಥಿನಿಯರು ಮಹತ್ವದ ಪರೀಕ್ಷೆ ಬರೆಯುವ ಅವಕಾಶವನ್ನು ಶಿಕ್ಷಕರು ತಪ್ಪಿಸಿದ್ದಾರೆ. ಇದು ಘೋರ ಅನ್ಯಾಯ. ತಪ್ಪಿತಸ್ಥರ ಮೇಲೆ ಕ್ರಮ ಜರುಗಿಸಬೇಕು” ಎಂದು ಆಗ್ರಹಿಸಿದ್ದಾರೆ.
“ಖಾಸಗಿ ಶಾಲೆಗಳು ಶೇಕಡ 100 ಫಲಿತಾಂಶಕ್ಕಾಗಿ ಕಲಿಕೆಯಲ್ಲಿ ಹಿಂದಿರುವ ಮಕ್ಕಳನ್ನು ಒಂಬತ್ತನೇ ತರಗತಿಯಿಂದಲೇ ಬೇರೆ ಶಾಲೆಗೆ ವರ್ಗಾಯಿಸುತ್ತಿರುವ ಬಗ್ಗೆ ದೂರುಗಳು ಸಹಜವಾಗಿ ಬರುತ್ತಿವೆ. ಸರ್ಕಾರಿ ಶಾಲೆಗಳು ಎಲ್ಲಾ ತರಹದ ಮಕ್ಕಳಿಗೂ ಸಮಾನ ಶಿಕ್ಷಣ ಹಾಗೂ ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಗೆ ಪೂರಕವಾಗಿ ನಡೆಯಬೇಕು. ಆದರೆ, ಪದ್ಮುಂಜ ಸರ್ಕಾರಿ ಪ್ರೌಢ ಶಾಲೆಯ ಶಿಕ್ಷಕ ವೃಂದ 100 ಶೇಕಡ ಫಲಿತಾಂಶದ ಗೀಳಿಗೆ ಬಿದ್ದು ಇಬ್ಬರು ಹೆಣ್ಣು ಮಕ್ಕಳಿಗೆ ಪರೀಕ್ಷೆ ಬರೆಯಲು ಅವಕಾಶ ಕೊಡದಿರುವುದು ಅಕ್ಷಮ್ಯ ಅಪರಾಧವಾಗಿದೆ.
ಇದರ ಬಗ್ಗೆ ಖುದ್ದು ಅವಕಾಶ ವಂಚಿತರಾಗಿರುವ ಹೆಣ್ಣು ಮಕ್ಕಳು ಮಕ್ಕಳ ಹಕ್ಕುಗಳ ಆಯೋಗ, ಶಿಕ್ಷಣ ಇಲಾಖೆಯ ಉಪನಿರ್ದೇಶಕರು, ಕ್ಷೇತ್ರ ಶಿಕ್ಷಣಾಧಿಕಾರಿ ಹಾಗೂ ಕರ್ನಾಟಕ ರಾಜ್ಯ ಎಸ್‌ಡಿಎಂಸಿ ಸಮನ್ವಯ ಕೇಂದ್ರ ವೇದಿಕೆಯ ಸಂಚಾಲಕರಿಗೆ ಪತ್ರ ಬರೆದಿದ್ದಾರೆ. ಇದರ ಬಗ್ಗೆ ಕೂಲಂಕುಷವಾಗಿ ತನಿಖೆ ನಡೆಸಿ, ತಪ್ಪಿತಸ್ಥ ಶಿಕ್ಷಕರ ಮೇಲೆ ಕಾನೂನು ಕ್ರಮ ಕೈಗೊಳ್ಳುವುದರೊಂದಿಗೆ, ಆ ಮಕ್ಕಳಿಗೆ ಇನ್ನುಳಿದ ಪರೀಕ್ಷೆಗಳನ್ನು ಬರೆಯಲು ಕೂಡಲೇ ವ್ಯವಸ್ಥೆ ಮಾಡಿಕೊಡಬೇಕು” ಎಂದು ಒತ್ತಾಯಿಸಿದ್ದಾರೆ.
ಪರೀಕ್ಷೆ ವಂಚಿತರಾದ ವಿದ್ಯಾರ್ಥಿನಿಯರು ಅಧಿಕಾರಿಗಳಿಗೆ ಬರೆದಿರುವ ಪತ್ರ ನಮಗೆ ದೊರೆತಿದ್ದು, ಅದರಲ್ಲಿ ಇಬ್ಬರೂ ಕೂಡ “ನಮ್ಮ ಅನುಮತಿ ಪಡೆಯದೆ, ಪರೀಕ್ಷೆ ಬರೆಯಲು ಅವಕಾಶ ನೀಡದೆ ಶಿಕ್ಷಕರು ಕಡ್ಡಾಯ ಶಿಕ್ಷಣ ಹಕ್ಕು ಕಾಯ್ದೆಯನ್ನು ಉಲ್ಲಂಘಿಸಿದ್ದಾರೆ. ನಮ್ಮನ್ನು ಶಿಕ್ಷಣದಿಂದ ವಂಚಿತರಾಗಿಸಿದ್ದಾರೆ ಎಂದು ಆರೋಪಿಸಿದ್ದಾರೆ. “ನಮಗೆ ಈ ಶೈಕ್ಷಣಿಕ ವರ್ಷದಲ್ಲೇ ಪರೀಕ್ಷೆ ಬರೆಯಲು ಅವಕಾಶ ಕೊಡಬೇಕು ಮತ್ತು ಈ ಬಗ್ಗೆ ತನಿಖೆ ನಡೆಸಿ ನಮಗೆ ನ್ಯಾಯ ಒದಗಿಸಿಕೊಡಬೇಕು” ಎಂದು ಆಗ್ರಹಿಸಿದ್ದಾರೆ.
ಪರಿಶಿಷ್ಟ ಜಾತಿ ಒಳ ಮೀಸಲಾತಿ: ನ್ಯಾ. ನಾಗಮೋಹನದಾಸ್ ಆಯೋಗದಿಂದ ಇಂದು ಮಧ್ಯಂತರ ವರದಿ ಸಲ್ಲಿಕೆ
ಪಕ್ಷ ವಿರೋಧಿ ಹೇಳಿಕೆ: ಬಸನಗೌಡ ಪಾಟೀಲ್ ಯತ್ನಾಳ್ ಬಿಜೆಪಿಯಿಂದ 6 ವರ್ಷ ಉಚ್ಚಾಟನೆ


