ಅಮೆರಿಕಕ್ಕೆ ಆಮದಾಗುವ ಕಾರುಗಳು ಮತ್ತು ಅದರ ಬಿಡಭಾಗಗಳ ಮೇಲೆ ಶೇಕಡ 25ರಷ್ಟು ಸುಂಕ ವಿಧಿಸುವ ನಿರ್ಧಾರವನ್ನು ಅಧ್ಯಕ್ಷ ಡೊನಾಲ್ಡ್ ಟ್ರಂಪ್ ಬುಧವಾರ (ಮಾ.26) ಪ್ರಕಟಿಸಿದ್ದಾರೆ.
ಈ ಕ್ರಮವು ದೇಶೀಯ ಉತ್ಪಾದನೆಯನ್ನು ಉತ್ತೇಜಿಸುತ್ತದೆ. ಆದರೆ, ಜಾಗತಿಕ ಪೂರೈಕೆ ಸರಪಳಿಗಳನ್ನು ಅವಲಂಬಿಸಿರುವ ವಾಹನ ತಯಾರಕರ ಮೇಲೆ ಆರ್ಥಿಕ ಒತ್ತಡವನ್ನುಂಟು ಮಾಡುತ್ತದೆ ಎಂದು ಶ್ವೇತಭವನ ಹೇಳಿಕೊಂಡಿದೆ.
ಶ್ವೇತಭವನವು ವಾರ್ಷಿಕವಾಗಿ 100 ಶತಕೋಟಿ ಡಾಲರ್ ಆದಾಯ ಸಂಗ್ರಹಿಸುವ ನಿರೀಕ್ಷೆ ಹೊಂದಿರುವ ಈ ಸುಂಕ ವಿಧಿಸುವ ನಿರ್ಧಾರವು, ವಿದೇಶಗಳಲ್ಲಿ ಘಟಕಗಳನ್ನು ಹೊಂದಿರುವ ಅಮೆರಿಕದ ಕಾರು ತಯಾರಕರಿಗೂ ಹೊರೆಯಾಗಲಿದೆ.
ಸುಂಕ ವಿಧಿಸುವ ಆದೇಶ ಏಪ್ರಿಲ್ 3ರಿಂದ ಜಾರಿಯಾಗಲಿದೆ. ಇದರಿಂದ ಕಾರು ತಯಾರಕರು ಹೆಚ್ಚಿನ ವೆಚ್ಚ ಮತ್ತು ಕಡಿಮೆ ಮಾರಾಟದ ಸಮಸ್ಯೆಗಳನ್ನು ಎದುರಿಸಬೇಕಾಗುತ್ತದೆ. ಆದರೆ, ಈ ನಿರ್ಧಾರವು ಅಮೆರಿಕದಲ್ಲಿ ಹೆಚ್ಚಿನ ಕಾರ್ಖಾನೆಗಳು ತೆರೆಯಲು ಕಾರಣವಾಗಲಿದೆ ಮತ್ತು ಕಾರುಗಳ ಬಿಡಿಭಾಗಗಳು ಮತ್ತು ಸಿದ್ದಪಡಿಸಿದ ಕಾರುಗಳಿಗಾಗಿ ಅಮೆರಿಕ, ಕೆನಡಾ, ಮೆಕ್ಸಿಕೊದಾದ್ಯಂತ ಹರಡಿರುವ ‘ಹಾಸ್ಯಾಸ್ಪದ’ ಪೂರೈಕೆ ಸರಪಳಿ ಅಂತ್ಯವಾಗಲಿದೆ. ತಾನು ಸಹಿ ಮಾಡಿರುವ ಆದೇಶ ಶಾಶ್ವತ ಎಂದು ಟ್ರಂಪ್ ಹೇಳಿದ್ದಾರೆ.
ಕಾರುಗಳ ಆಮದುಗಳ ಮೇಲೆ ಸುಂಕ ವಿಧಿಸುವುದು ತನ್ನ ಅಧಿಕಾರವಧಿಯ ನಿರ್ಣಾಯಕ ನೀತಿಯಾಗಿರುತ್ತವೆ ಎಂದು ಟ್ರಂಪ್ ಬಹಳ ಹಿಂದಿನಿಂದಲೂ ಹೇಳುತ್ತಿದ್ದರು. ತೆರಿಗೆಗಳಿಂದ ಉಂಟಾಗುವ ವೆಚ್ಚಗಳು ಹೆಚ್ಚಿನ ಉತ್ಪಾದನೆಯನ್ನು ಅಮೆರಿಕಕ್ಕೆ ಸ್ಥಳಾಂತರಿಸಲು ಕಾರಣವಾಗುತ್ತವೆ ಮತ್ತು ಬಜೆಟ್ ಕೊರತೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ ಎನ್ನುತ್ತಿದ್ದರು.
ಅಮೆರಿಕ ಮತ್ತು ವಿದೇಶಿ ಕಾರು ತಯಾರಕರು ಸ್ಪರ್ಧಾತ್ಮಕ ಬೆಲೆಗಳನ್ನು ಕಾಯ್ದುಕೊಳ್ಳುವಾಗ ಜಾಗತಿಕ ಮಾರಾಟವನ್ನು ಸರಿಹೊಂದಿಸಲು ಪ್ರಪಂಚದಾದ್ಯಂತ ಘಟಕಗಳನ್ನು ಹೊಂದಿದ್ದಾರೆ. ಆದ್ದರಿಂದ, ಟ್ರಂಪ್ ಹೇಳಿದಂತೆ ಅಮೆರಿಕದಲ್ಲಿ ಹೊಸ ಕಾರ್ಖಾನೆಗಳನ್ನು ವಿನ್ಯಾಸಗೊಳಿಸಲು, ನಿರ್ಮಿಸಲು ಮತ್ತು ತೆರೆಯಲು ಕಂಪನಿಗಳಿಗೆ ವರ್ಷಗಳೇ ತೆಗೆದುಕೊಳ್ಳಬಹುದು ಎಂದು ವರದಿಗಳು ಹೇಳಿವೆ.
ಕಾರು ಆಮದಿನ ಮೇಲೆ ಸುಂಕ ವಿಧಿಸುವುದರಿಂದ ಅವುಗಳ ಬೆಲೆ ಹೆಚ್ಚಾಗಬಹುದು, ಆಯ್ಕೆಗಳು ಕಡಿಮೆಯಾಗಬಹುದು. ಈ ರೀತಿಯ ತೆರಿಗೆಗಳು ಮಧ್ಯಮ ಮತ್ತು ಕಾರ್ಮಿಕ ವರ್ಗದ ಮೇಲೆ ಹೆಚ್ಚು ಪರಿಣಾಮ ಬೀರುತ್ತದೆ ಎಂದು ಇನ್ಸ್ಟಿಟ್ಯೂಟ್ ಫಾರ್ ಇಂಟರ್ನ್ಯಾಷನಲ್ ಎಕನಾಮಿಕ್ಸ್‌ನ ಹಿರಿಯ ಅರ್ಥಶಾಸ್ತ್ರಜ್ಞೆ ಮೇರಿ ಲವ್ಲಿ ಹೇಳಿದ್ದಾರೆ.
ಈಗಾಗಲೇ ಸರಾಸರಿ ಕಾರು ಬೆಲೆ 49 ಸಾವಿರ ಡಾಲರ್‌ಗಳಷ್ಟಿರುವುದರಿಂದ ಹಲವು ಕುಟುಂಬಗಳು ಹೊಸ ಕಾರು ಮಾರುಕಟ್ಟೆಯಿಂದ ವಿಮುಖವಾಗಲಿವೆ ಮತ್ತು ಹಳೆಯ ವಾಹನಗಳನ್ನು ಇಟ್ಟುಕೊಳ್ಳುವುದು ಅನಿವಾರ್ಯವಾಗಲಿದೆ ಎಂದಿದ್ದಾರೆ.
ಸ್ಥಳೀಯ ಬುಡಕಟ್ಟು ಸಮುದಾಯದ ಭೂಮಿ ವಶಕ್ಕೆ ಯತ್ನ | ನಿತ್ಯಾನಂದನ ಕೈಲಾಸದ ಸದಸ್ಯರನ್ನು ಗಡೀಪಾರು ಮಾಡಿದ ಬೊಲಿವಿಯಾ


