ಕೇರಳದ ಮಲಪ್ಪುರಂ ಜಿಲ್ಲೆಯಲ್ಲಿ ವಲಸೆ ಕಾರ್ಮಿಕರು ಮತ್ತು ಮಾದಕ ವಸ್ತು ಬಳಸುವ ಯುವಕರು ಸೇರಿದಂತೆ ಹತ್ತು ಜನರಿಗೆ ಎಚ್‌ಐವಿ ಪಾಸಿಟಿವ್ ಕಂಡುಬಂದಿದೆ.
ಕೇರಳ ರಾಜ್ಯ ಏಡ್ಸ್ ನಿಯಂತ್ರಣ ಸೊಸೈಟಿ (ಕೆಎಸ್‌ಎಸಿಎಸ್) ಪ್ರಕಾರ, ಕೇರಳದಲ್ಲಿ ಪ್ರತಿ ತಿಂಗಳು ಸರಾಸರಿ 130 ರಿಂದ 140 ಹೊಸ ಎಚ್‌ಐವಿ ಪಾಸಿಟಿವ್ ಪ್ರಕರಣಗಳು ವರದಿಯಾಗುತ್ತಿವೆ. ಹೊಸದಾಗಿ ಪತ್ತೆಯಾಗುತ್ತಿರುವ ಎಚ್‌ಐವಿ ಪಾಸಿಟಿವ್ ಪ್ರಕರಣಗಳಲ್ಲಿ 18-25 ವರ್ಷ ವಯಸ್ಸಿನ ಯುವಕರು ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಕಂಡುಬಂದಿದೆ. ಮಾದಕ ವಸ್ತು ಸೇವನೆಯೇ ಪ್ರಮುಖ ಕಾರಣವೆಂದು ಅಂದಾಜಿಸಲಾಗಿದೆ. ರಾಜ್ಯದಲ್ಲಿ ಎಚ್‌ಐವಿ ಚಿಕಿತ್ಸೆ ಪಡೆಯುತ್ತಿರುವ ಒಟ್ಟು ವ್ಯಕ್ತಿಗಳು ಸುಮಾರು 17,000.
ಕೆಎಸ್‌ಎಸಿಎಸ್ ನಡೆಸಿದ ಸ್ಕ್ರೀನಿಂಗ್ ಸಮಯದಲ್ಲಿ ಮಲಪ್ಪುರಂನಲ್ಲಿ ಈ ಗುಂಪನ್ನು ಗುರುತಿಸಲಾಯಿತು. ಅವರು ಮಾದಕ ವಸ್ತು ಸೇವನೆಗಾಗಿ ಸಿರಿಂಜ್‌ಗಳನ್ನು ಹಂಚಿಕೊಳ್ಳುತ್ತಿದ್ದಾರೆ ಎಂದು ಶಂಕಿಸಲಾಗಿದೆ.
ಹೆಚ್ಚಿನ ವ್ಯಕ್ತಿಗಳು ಎಚ್‌ಐವಿ ಸೋಂಕಿಗೆ ಒಳಗಾಗಿದ್ದಾರೆಯೇ ಎಂದು ಕಂಡುಹಿಡಿಯಲು ಮತ್ತಷ್ಟು ಸ್ಕ್ರೀನಿಂಗ್ ನಡೆಸಲಾಗುತ್ತಿದೆ ಎಂದು ಮಲಪ್ಪುರಂ ಜಿಲ್ಲಾ ವೈದ್ಯಾಧಿಕಾರಿ ಆರ್ ರೇಣುಕಾ ಮಾಧ್ಯಮಗಳಿಗೆ ತಿಳಿಸಿದ್ದಾರೆ.
ಕೇರಳದಲ್ಲಿ ಮಾದಕ ವಸ್ತು ಸೇವನೆಯಲ್ಲಿ, ವಿಶೇಷವಾಗಿ ಯುವಕರಲ್ಲಿ ಆತಂಕಕಾರಿ ಹೆಚ್ಚಳ ಕಂಡುಬಂದಿದೆ. ಕೊಲೆಗಳಂತಹ ಗಂಭೀರ ಅಪರಾಧಗಳಲ್ಲಿ ಮಾದಕ ವ್ಯಸನಿಗಳು ಭಾಗಿಯಾಗಿರುವ ಹಲವಾರು ಪ್ರಕರಣಗಳ ಹಿನ್ನೆಲೆಯಲ್ಲಿ ಕಳೆದ ಕೆಲವು ವಾರಗಳಿಂದ ರಾಜ್ಯಾದ್ಯಂತ ಪೊಲೀಸ್ ಮತ್ತು ಅಬಕಾರಿ ಇಲಾಖೆಗಳು ಕಾರ್ಯಾಚರಣೆ ನಡೆಸುತ್ತಿವೆ.
ಕೆಎಸ್‌ಎಸಿಎಸ್, ಶಿಕ್ಷಣ ಸಂಸ್ಥೆಗಳ ಮೂಲಕ ಮತ್ತು ವಲಸೆ ಕಾರ್ಮಿಕರಲ್ಲಿ ಬೃಹತ್ ಜಾಗೃತಿ ಚಟುವಟಿಕೆಗಳನ್ನು ನಡೆಸುತ್ತಿದೆ. ವಲಸೆ ಕಾರ್ಮಿಕರ ಸಂಖ್ಯೆ ಹೆಚ್ಚಾಗಿರುವುದು ಹಾಗೂ ಅವರು ತಮ್ಮ ಗುರುತನ್ನು ಬಹಿರಂಗಪಡಿಸಲು ಸಿದ್ದರಿಲ್ಲದೆ ಇರುವುದು ವಲಸೆ ಕಾರ್ಮಿಕರನ್ನು ಪರೀಕ್ಷಿಸುವಲ್ಲಿ ಎದುರಿಸುತ್ತಿರುವ ಪ್ರಮುಖ ಸವಾಲುಗಳಾಗಿವೆ.
ಕೇರಳದಲ್ಲಿ ಪತ್ತೆಯಾಗುತ್ತಿರುವ ಹೊಸ ಎಚ್‌ಐವಿ ಪಾಸಿಟಿವ್ ಪ್ರಕರಣಗಳಲ್ಲಿ ಲೈಂಗಿಕ ಕಾರ್ಯಕರ್ತರು ಹಾಗೂ ಸಲಿಂಗಿಗಳು ಸಹ ಹೆಚ್ಚಿನ ಸಂಖ್ಯೆಯಲ್ಲಿದ್ದಾರೆ ಎಂದು ಕಂಡುಬಂದಿದೆ.
ನಕಲಿ ಶಾಲೆಗಳಲ್ಲಿ ದಾಖಲಾಗಿರುವ ವಿದ್ಯಾರ್ಥಿಗಳಿಗೆ ಬೋರ್ಡ್ ಪರೀಕ್ಷೆಗಿಲ್ಲ ಅವಕಾಶ: ಸಿಬಿಎಸ್‌ಸಿ


