ಪ್ರತಿನಿತ್ಯ ಸಾವು-ನೋವುಗಳನ್ನು ನೋಡುತ್ತಾ ಕುಗ್ಗಿ ಹೋಗಿರುವ ಗಾಝಾದ ಜನತೆ ಹಮಾಸ್ ಗುಂಪಿನ ವಿರುದ್ದವೇ ತಿರುಗಿ ಬಿದ್ದಿದ್ದು, ಇಸ್ರೇಲ್ ಜೊತೆಗಿನ ಯುದ್ಧ ನಿಲ್ಲಿಸುವಂತೆ ಆಗ್ರಹಿಸಿ ಪ್ರತಿಭಟಿಸಿದ್ದಾರೆ ಎಂದು ವರದಿಯಾಗಿದೆ.
ಕದನ ವಿರಾಮ ಒಪ್ಪಂದ ಮುರಿದುಬಿದ್ದ ಕಾರಣ ಇಸ್ರೇಲ್ ಮತ್ತೆ ಆಕ್ರಮಣ ನಡೆಸುತ್ತಿದೆ. ಪ್ರತಿನಿತ್ಯ ನೂರಾರು ಜನರು ಸಾಯುತ್ತಿದ್ದಾರೆ. ಇಸ್ರೇಲ್‌ಗೆ ಏನೂ ಮಾಡಲು ನಮಗೆ ಸಾಧ್ಯವಾಗುತ್ತಿಲ್ಲ. ಹಾಗಾಗಿ , ಹಮಾಸ್ ಮೇಲೆ ಒತ್ತಡ ಹೇರಲು ಪ್ರತಿಭಟಿಸಿರುವುದಾಗಿ ಉತ್ತರ ಗಾಝಾದ ಜನತೆ ಹೇಳಿದ್ದಾರೆ ಎಂದು ವರದಿಗಳು ತಿಳಿಸಿವೆ.
ಪ್ರಮುಖ ಜನವಸತಿ ಪ್ರದೇಶವಾಗಿದ್ದ ಉತ್ತರ ಗಾಝಾ ಇಸ್ರೇಲ್‌ನ ನಿರಂತರ ದಾಳಿಯಿಂದ ಬರೀ ಕಟ್ಟಡ ಅವಶೇಷಗಳ ರಾಶಿಯಾಗಿ ಪರಿವರ್ತನೆಗೊಂಡಿದೆ. ಇಲ್ಲಿನ ಕಂದಮ್ಮಗಳು ಸೇರಿದಂತೆ ಸಾವಿರಾರು ಜನರನ್ನು ಇಸ್ರೇಲ್ ಹತ್ಯೆ ನಡೆಸಿದೆ. ಕಟ್ಟಡಗಳನ್ನು ಧ್ವಂಸ ಮಾಡಿದೆ. ಎಲ್ಲಾ ಮೂಲಭೂತ ಸೌಲಭ್ಯಗಳನ್ನು ಹಾಳುಗೆಡವಿದೆ. ಸಾವಿರಾರು ಜನರು ತಮ್ಮದೆಲ್ಲವನ್ನು ಬಿಟ್ಟು ಬೇರೆಡೆಗೆ ಪಲಾಯನ ಮಾಡಿದ್ದಾರೆ.
ಕಳೆದ ಮಂಗಳವಾರ ಉತ್ತರ ಗಾಝಾದ ಬೈತ್ ಲಾಹಿಯಾದ ಬೀದಿಗಳಲ್ಲಿ ಜಮಾಯಿಸಿದ ನೂರಾರು ಜನರು “ದೇವರ ದಯೆಯಿಂದ ಹಮಾಸ್ ತೊಲಗಲಿ, ಹಮಾಸ್‌ನವರು ಭಯೋತ್ಪಾದಕರು, ನಾವು ಯುದ್ದವನ್ನು ಕೊನೆಗೊಳಿಸಲು ಭಯಸುತ್ತೇವೆ” ಎಂಬ ಘೋಷಣೆಗಳನ್ನು ಕೂಗಿ ನೋವು ಹೊರಹಾಕಿದ್ದಾರೆ. ಬುಧವಾರ ಮತ್ತು ಗುರುವಾರ ಕೂಡ ಪ್ರತಿಭಟನೆ ಮುಂದುವರಿದಿದೆ ಎಂದು ವರದಿಯಾಗಿದೆ.
“ಜನರು ನಿರಂತರ ಆಕ್ರಮಣದಿಂದ ಬಸವಳಿದು ಹೋಗಿದ್ದಾರೆ. ಅವರಿಗೆ ಇನ್ನು ಹೋಗಲು ಜಾಗವಿಲ್ಲ. ಹಾಗಾಗಿ, ಯುದ್ದ ನಿಲ್ಲಿಸಿ ಎಂದು ಸ್ವಯಂ ಪ್ರೇರಿತರಾಗಿ ಬೀದಿಗಿಳಿದು ಪ್ರತಿಭಟಿಸಿದ್ದಾರೆ” ಎಂದು ಪ್ರತ್ಯಕ್ಷದರ್ಶಿಯೊಬ್ಬರನ್ನು ಉಲ್ಲೇಖಿಸಿ ರಾಯಿಟರ್ಸ್ ವರದಿ ಮಾಡಿದೆ.
ಬುಧವಾರ ಗಾಝಾದಲ್ಲಿ ಕನಿಷ್ಠ 9 ಪ್ರತಿಭಟನಾ ಮೆರವಣಿಗೆಗಳು ನಡೆದಿವೆ. ” ನಮ್ಮ ರಕ್ತವನ್ನು ಮಾರಿದ ಎಲ್ಲರಿಗೂ ನಮ್ಮ ಧ್ವನಿ ತಲುಪಲಿ” ಎಂಬ ಘೋಷಣೆಗಳನ್ನು ಕೂಗುತ್ತಾ ಜನರು ಆಕ್ರೋಶ ವ್ಯಕ್ತಪಡಿಸಿದ್ದಾರೆ ಎಂದು ಸಾಮಾಜಿಕ ಮಾಧ್ಯಮ ಪೋಸ್ಟ್‌ಗಳು ತಿಳಿಸಿವೆ.
Palestinians are out protesting on the Gaza Strip calling for the war with Israel to end.
Incredibly courageous, all things considered.
I hope they stay safe. pic.twitter.com/ksffAAE1Mq
— Art Candee 🍿🥤 (@ArtCandee) March 25, 2025
ಗಾಝಾದಲ್ಲಿ ಹಮಾಸ್ ವಿರುದ್ದ ಪ್ರತಿಭಟನೆ ನಡೆಯುತ್ತಿರುವ ಬಗ್ಗೆ ಪ್ರತಿಕ್ರಿಯಿಸಿರುವ ಇಸ್ರೇಲ್ ಪ್ರಧಾನಿ ಬೆಂಜಮಿನ್ ನೆತನ್ಯಾಹು,”ದಾಳಿ ಪುನರಾರಂಭಿಸುವ ನಮ್ಮ ನಿರ್ಧಾರ ಗಾಝಾದಲ್ಲಿ ಕೆಲಸ ಮಾಡುತ್ತಿದೆ. ಹಮಾಸ್ ಕದನ ವಿರಾಮಕ್ಕೆ ಗೌರವ ಕೊಟ್ಟಿಲ್ಲ. ಒಪ್ಪಂದ ಮುರಿಯಲು ಅವರೇ ಕಾರಣ” ಎಂದು ದೂಷಿಸಿದ್ದಾರೆ.
ಅಕ್ಟೋಬರ್ 2023ರಿಂದ ಗಾಝಾದ ಮೇಲೆ ಇಸ್ರೇಲ್ ನಡೆಸುತ್ತಿರುವ ಆಕ್ರಮಣದಲ್ಲಿ ಇದುವರೆಗ ಸಾವನ್ನಪ್ಪಿದವರ ಸಂಖ್ಯೆ 50 ಸಾವಿರ ದಾಟಿದೆ.
ಗಾಜಾ ನಗರದ ಜೈಟೌನ್ ಬಳಿ ಇಸ್ರೇಲ್ ನಡೆಸಿದ ದಾಳಿಯಲ್ಲಿ ಎಂಟು ಮಂದಿ ಸಾವನ್ನಪ್ಪಿದ್ದು, ಅದರಲ್ಲಿ ಹೆಚ್ಚಿನವರು ಮಹಿಳೆಯರು ಮತ್ತು ಮಕ್ಕಳು. ಕಳೆದ 24 ಗಂಟೆಯಲ್ಲಿ ಯುದ್ಧಪೀಡಿತ ಪ್ರದೇಶದಾದ್ಯಂತ ನಡೆದ ದಾಳಿಗಳಲ್ಲಿ 40 ಮಂದಿ ಸಾವನ್ನಪ್ಪಿದ್ದಾರೆ ಎಂದು ವರದಿಯಾಗಿದೆ.


