ಈದುಲ್ ಫಿತರ್ (ರಂಝಾನ್) ಹಬ್ಬಕ್ಕೂ ಮುನ್ನ ನಗರದಲ್ಲಿ ಭದ್ರತಾ ಕ್ರಮಗಳನ್ನು ಹೆಚ್ಚಿಸಿರುವ ಉತ್ತರ ಪ್ರದೇಶದ ಮೀರತ್ ಪೊಲೀಸರು, ರಸ್ತೆಯಲ್ಲಿ ನಮಾಝ್ ಮಾಡದಂತೆ ಎಚ್ಚರಿಕೆ ನೀಡಿದ್ದಾರೆ. ಉಲ್ಲಂಘಿಸುವವರ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಿಸಲಾಗುವುದು. ಪಾಸ್‌ಪೋರ್ಟ್ ಮತ್ತು ಡ್ರೈವಿಂಗ್ ಲೈಸನ್ಸ್ ರದ್ದುಗೊಳಿಸಲಾಗುವುದು ಎಂದಿದ್ದಾರೆ.
ಬುಧವಾರ, ಮೀರತ್ ಪೊಲೀಸರು ಜಿಲ್ಲಾ ಮ್ಯಾಜಿಸ್ಟ್ರೇಟ್ ಡಾ. ವಿಜಯ್ ಕುಮಾರ್ ಸಿಂಗ್ ಅವರಿಗೆ ಎಂಟು ಜನರ ಪಟ್ಟಿಯನ್ನು ಸಲ್ಲಿಸಿದ್ದು, ಅವರು ಕಳೆದ ವರ್ಷದ ಈದ್ ಸಮಯದಲ್ಲಿ ರಸ್ತೆಯಲ್ಲಿ ನಮಾಝ್ ಮಾಡಬಾರದು ಎಂಬ ಆದೇಶವನ್ನು ಉಲ್ಲಂಘಿಸಿದ್ದಾರೆ ಎಂದು ಆರೋಪಿಸಿದ್ದಾರೆ. ಪೊಲೀಸರು ಆ ಎಂಟು ಜನರ ಡ್ರೈವಿಂಗ್ ಲೈಸನ್ಸ್ ಮತ್ತು ಪಾಸ್‌ಪೋರ್ಟ್‌ಗಳನ್ನು ರದ್ದುಗೊಳಿಸುವ ಪ್ರಕ್ರಿಯೆ ಪ್ರಾರಂಭಿಸಿದ್ದಾರೆ.
“ಜನರು ಹತ್ತಿರದ ಮಸೀದಿಯಲ್ಲಿ ನಮಾಝ್ ಮಾಡಬೇಕು ಅಥವಾ ಸಮಯಕ್ಕೆ ಸರಿಯಾಗಿ ಈದ್ಗಾ ತಲುಪಬೇಕು ಎಂದು ನಾವು ಮನವಿ ಮಾಡಿದ್ದೇವೆ. ಯಾವುದೇ ಕಾರಣಕ್ಕೂ ರಸ್ತೆಗಳಲ್ಲಿ ಪ್ರಾರ್ಥನೆಗೆ ಅವಕಾಶ ನೀಡಲಾಗುವುದಿಲ್ಲ ಎಂದು ನಾವು ಕಟ್ಟುನಿಟ್ಟಿನ ಸೂಚನೆಗಳನ್ನು ನೀಡಿದ್ದೇವೆ” ಎಂದು ಮೀರತ್ ನಗರ ಎಸ್ಪಿ ಆಯುಷ್ ವಿಕ್ರಮ್ ಸಿಂಗ್ ಹೇಳಿದ್ದಾರೆ.
“ಕಳೆದ ವರ್ಷ ಈದ್ ಹಬ್ಬದಂದು ಕೆಲವರು ರಸ್ತೆಯಲ್ಲಿ ನಮಾಝ್ ಮಾಡಿದ್ದರು. ನಾವು ಅವರ ವಿರುದ್ಧ ಎಫ್ಐಆರ್ ದಾಖಲಿಸಿದ್ದೇವೆ. ಈ ಬಾರಿಯೂ ಯಾರಾದರೂ ಓಪನ್ ಜಾಗದಲ್ಲಿ ಪ್ರಾರ್ಥನೆಗೆ ಕುಳಿತರೆ ಕಠಿಣ ಕ್ರಮ ಕೈಗೊಳ್ಳಲಾಗುವುದು. ನಾವು ನಿರಂತರವಾಗಿ ಮನವಿ ಮಾಡುತ್ತಿದ್ದೇವೆ” ಎಂದಿದ್ದಾರೆ.
ಒಬ್ಬ ವ್ಯಕ್ತಿಯ ವಿರುದ್ಧ ಕ್ರಿಮಿನಲ್ ಪ್ರಕರಣ ದಾಖಲಾದರೆ, ಅದು ಅವರ ಲೈಸನ್ಸ್ ಮತ್ತು ಪಾಸ್‌ಪೋರ್ಟ್ ರದ್ದತಿಗೆ ಕಾರಣವಾಗಬಹುದು. ಪ್ರಕರಣ ದಾಖಲಾದ ವ್ಯಕ್ತಿಗೆ ಪಾಸ್‌ಪೋರ್ಟ್ ಅಥವಾ ಲೈಸನ್ಸ್‌ಗೆ ಅರ್ಜಿ ಸಲ್ಲಿಸಲು ಎನ್‌ಒಸಿ (ನಿರಾಕ್ಷೇಪಣಾ ಪ್ರಮಾಣಪತ್ರ) ಸಿಗುವುದಿಲ್ಲ ಎಂದು ತಿಳಿಸಿದ್ದಾರೆ.
ನಿಯಮಗಳನ್ನು ಉಲ್ಲಂಘಿಸುವವರು ಪ್ರಕರಣ ದಾಖಲಿಸುವುದು ಮತ್ತು ಬಂಧನ ಸೇರಿದಂತೆ ತಕ್ಷಣದ ದಂಡನಾತ್ಮಕ ಕ್ರಮಗಳನ್ನು ಎದುರಿಸಬೇಕಾಗುತ್ತದೆ ಎಂದು ಮೀರತ್ ವಲಯದ ಡಿಐಜಿ ಕಲಾನಿಧಿ ನೈಥಾನಿ ಹೇಳಿದ್ದಾರೆ.
ಸಂಭಾಲ್‌ನಲ್ಲಿ, ಎಸ್‌ಪಿ ಕೃಷ್ಣ ಕುಮಾರ್ ಬಿಷ್ಣೋಯ್ ಅವರು, ರಸ್ತೆಗಳಲ್ಲಿ ಪ್ರಾರ್ಥನೆ ಸಲ್ಲಿಸುವುದರ ವಿರುದ್ಧ ಪೊಲೀಸರು ಸೂಚನೆ ನೀಡಿದ್ದಾರೆ. ಯಾರೂ ರಸ್ತೆಗಳಲ್ಲಿ ನಮಾಝ್ ಮಾಡಬಾರದು. ಮನೆಗಳಲ್ಲಿ ಸಾಮೂಹಿಕ ನಮಾಝ್‌ಗೆ ಅವಕಾಶವಿಲ್ಲ. ಜನರು ತಮ್ಮ ಮನೆಯಲ್ಲಿ ಪ್ರಾರ್ಥನೆ ಸಲ್ಲಿಸಬಹುದು. ಆದರೆ, ಯಾವುದೇ ಅಹಿತಕರ ಘಟನೆ ನಡೆಯದಂತೆ ಅವರು ಜಾಗರೂಕರಾಗಿರಬೇಕು” ಎಂದಿದ್ದಾರೆ.
ಈದ್ ಪ್ರಾರ್ಥನೆಗಳಿಗೆ ಸಂಬಂಧಿಸಿದಂತೆ ಯಾವುದೇ ನಿರ್ದಿಷ್ಟ ಆದೇಶ ಹೊರಡಿಸಲಾಗಿಲ್ಲ ಎಂದು ಅಲಿಘರ್ ಎಸ್ಪಿ ಮೃಗಾನಿಕ್ ಶೇಖರ್ ಪಾಠಕ್ ಹೇಳಿದ್ದಾರೆ. “ಸಾರ್ವಜನಿಕ ಸ್ಥಳಗಳಲ್ಲಿ ಯಾವುದೇ ಪ್ರಾರ್ಥನೆ ಸಲ್ಲಿಸಬಾರದು ಎಂಬ ಯುಪಿ ಸರ್ಕಾರದ ಸಲಹೆಯನ್ನು ನಾವು ಪಾಲಿಸುತ್ತೇವೆ. ಶಾಂತಿ ಸಮಿತಿ ಸಭೆಯನ್ನು ಕರೆಯಲಾಗಿದೆ ಮತ್ತು ಜನರಿಗೆ ಸಲಹೆಗಳನ್ನು ನೀಡಲಾಗಿದೆ ಎಂದು ಅವರು ಹೇಳಿದ್ದಾರೆ.
“ನಾವು ಯಾವುದೇ ನಿರ್ದಿಷ್ಟ ಆದೇಶವನ್ನು ಹೊರಡಿಸಿಲ್ಲ ಎಂದು ಹತ್ರಾಸ್ ಎಸ್ಪಿ ಚಿರಂಜೀವ್ ನಾಥ್ ಸಿನ್ಹಾ ಹೇಳಿದ್ದಾರೆ. “ಸಮುದಾಯವನ್ನು ಲೆಕ್ಕಿಸದೆ ಯಾರಿಗೂ ರಸ್ತೆಗಳಲ್ಲಿ ಅಥವಾ ಯಾವುದೇ ಸಾರ್ವಜನಿಕ ಸ್ಥಳದಲ್ಲಿ ಪ್ರಾರ್ಥನೆ ಸಲ್ಲಿಸಲು ನಾವು ಅವಕಾಶ ನೀಡುವುದಿಲ್ಲ. ಇದು ಜನರ ಹಬ್ಬ ಮತ್ತು ಅವರು ತಮ್ಮ ಮನೆಯಲ್ಲಿ ಆಚರಿಸಬಹುದು” ಎಂದು ಎಂದಿದ್ದಾರೆ.
ಜನದಟ್ಟಣೆ ಇದ್ದಲ್ಲಿ, ಜನರು ಪಾಳಿಯಲ್ಲಿ ಪ್ರಾರ್ಥನೆ ಸಲ್ಲಿಸುವಂತೆ ಮನವಿ ಮಾಡಿದ್ದೇವೆ ಎಂದು ಗಾಝಿಯಾಬಾದ್ ಪೊಲೀಸರು ತಿಳಿಸಿದ್ದಾರೆ. “ನಾವು ಎಲ್ಲಾ ಸೂಕ್ಷ್ಮ ಪ್ರದೇಶಗಳಲ್ಲಿ ಮಸೀದಿಗಳು ಮತ್ತು ಈದ್ಗಾ ಬಳಿ ಭದ್ರತಾ ಪಡೆಗಳನ್ನು ನಿಯೋಜಿಸಿದ್ದೇವೆ. ಡ್ರೋನ್‌ಗಳ ಮೂಲಕ ನಿರಂತರ ಕಣ್ಗಾವಲು ಇರುತ್ತದೆ” ಎಂದು ಟ್ರಾನ್ಸ್-ಹಿಂಡನ್‌ನ ಡಿಸಿಪಿ ದಶರಥ್ ನಿಮಿಷ್ ಪಾಟೀಲ್ ತಿಳಿಸಿದ್ದಾರೆ.
ಈದ್ ಶಾಪಿಂಗ್ ಮುಗಿಸಿ ಮನೆಗೆ ಮರಳುತ್ತಿದ್ದ ಮುಸ್ಲಿಂ ಬಾಲಕನ ಮೇಲೆ ಪೊಲೀಸರಿಂದ ಮಾರಣಾಂತಿಕ ಹಲ್ಲೆ: ವೀಡಿಯೋ ವೈರಲ್


