ಬ್ಯಾಂಕಾಕ್‌ನಲ್ಲಿ ಶುಕ್ರವಾರ (ಮಾ.28) ಸಂಭವಿಸಿದ ಪ್ರಬಲ ಭೂಕಂಪದಿಂದ ಸರ್ಕಾರಿ ಕಚೇರಿಗಳಿಗಾಗಿ ನಿರ್ಮಾಣ ಹಂತದಲ್ಲಿದ್ದ 30 ಅಂತಸ್ತಿನ ಗಗನಚುಂಬಿ ಕಟ್ಟಡ ಕುಸಿದು 43 ಕಾರ್ಮಿಕರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ ಎಂದು ದಿ ನ್ಯೂ ಇಂಡಿಯನ್ ಎಕ್ಸ್‌ಪ್ರೆಸ್ ವರದಿ ಮಾಡಿದೆ.
ಮ್ಯಾನ್ಮಾರ್‌ನಲ್ಲಿ ಕೇಂದ್ರಿತವಾಗಿರುವ 7.7 ತೀವ್ರತೆಯ ಪ್ರಬಲ ಭೂಕಂಪದ ನಂತರ ಥಾಯ್ ರಾಜಧಾನಿಯ ಉತ್ತರದಲ್ಲಿದ್ದ ಕಟ್ಟಡ ಕೆಲವೇ ಸೆಕೆಂಡುಗಳಲ್ಲಿ ಧರಾಶಾಹಿಯಾಗಿದೆ.
Over 40 construction workers are reported missing, following the collapse of an under construction high-rise building in the Thai capital of Bangkok, as a result of today’s 7.7 magnitude earthquake in Myanmar. pic.twitter.com/ydkbxExorf
— OSINTdefender (@sentdefender) March 28, 2025
ಶುಕ್ರವಾರ ಮಧ್ಯಾಹ್ನ ಮ್ಯಾನ್ಮಾರ್‌ನ ಸಾಗೈಂಗ್ ನಗರದ ವಾಯುವ್ಯ ಪ್ರದೇಶದಲ್ಲಿ ಕೇಂದ್ರಿತವಾಗಿ 7.7 ತೀವ್ರತೆಯ ಭೂಕಂಪ ಸಂಭವಿಸಿದೆ ಎಂದು ಯುನೈಟೆಡ್ ಸ್ಟೇಟ್ಸ್ ಭೂವೈಜ್ಞಾನಿಕ ಸಮೀಕ್ಷೆ ತಿಳಿಸಿದೆ. ಇದಾದ ಕೆಲವೇ ನಿಮಿಷಗಳಲ್ಲಿ ಅದೇ ಪ್ರದೇಶದಲ್ಲಿ 6.4 ತೀವ್ರತೆಯ ಮತ್ತೊಂದು ಕಂಪನ ಸಂಭವಿಸಿದೆ ಎಂದು ಹೇಳಿದೆ.
ಥಾಯ್ ಅಧಿಕಾರಿಗಳು ಬ್ಯಾಂಕಾಕ್‌ನಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದ್ದಾರೆ ಎಂದು ಪ್ರಧಾನಿ ಪೇಟೊಂಗ್‌ಟಾರ್ನ್ ಶಿನವಾತ್ರ ತಿಳಿಸಿದ್ದಾರೆ.
ಮ್ಯಾನ್ಮಾರ್‌ನಲ್ಲಿ ಕಂಪನ
ಎಎಫ್‌ಪಿ ಪತ್ರಕರ್ತರ ಪ್ರಕಾರ, ಭೂಕಂಪದ ನಂತರ ಮ್ಯಾನ್ಮಾರ್ ರಾಜಧಾನಿ ನೇಪಿಡಾವ್‌ನಲ್ಲಿ ಕಟ್ಟಡಗಳ ಛಾವಣಿ ತುಂಡುಗಳು ರಸ್ತೆಯಲ್ಲಿ ಬಿದ್ದಿರುವ ದೃಶ್ಯ ಕಂಡು ಬಂದಿದೆ. ನೇಪಿಡಾವ್ 20 ಪಥಗಳ ಹೆದ್ದಾರಿಗಳನ್ನು ಹೊಂದಿರುವ ವಿಸ್ತಾರವಾದ ಯೋಜಿತವಾಗಿ ನಿರ್ಮಿಸಿದ ನಗರವಾಗಿದೆ.
ಭೂಕಂಪ ಸಂಭವಿಸಿ ಕಟ್ಟಡಗಳು ನಡುಗಲು ಪ್ರಾರಂಭಿಸಿದಾಗ ಪತ್ರಕರ್ತರ ತಂಡ ನೇಪಿಡಾವ್‌ನಲ್ಲಿರುವ ರಾಷ್ಟ್ರೀಯ ವಸ್ತುಸಂಗ್ರಹಾಲಯದಲ್ಲಿತ್ತು.
ಸಮವಸ್ತ್ರ ಧರಿಸಿದ ಸಿಬ್ಬಂದಿ ಹೊರಗೆ ಓಡಿ ಹೋಗುತ್ತಿದ್ದಂತೆ ಸೀಲಿಂಗ್‌ನಿಂದ ಛಾವಣಿ ತುಂಡುಗಳು ಬಿದ್ದವು ಮತ್ತು ಗೋಡೆಗಳು ಬಿರುಕು ಬಿಟ್ಟವು. ಈ ವೇಳೆ ಕೆಲವರು ನಡುಗುತ್ತಾ ಕಣ್ಣೀರು ಸುರಿಸುತ್ತಿದ್ದರು. ಇನ್ನು ಕೆಲವರು ತಮ್ಮ ಸಂಬಂಧಿಕರನ್ನು ಸಂಪರ್ಕಿಸಲು ಮೊಬೈಲ್ ಫೋನ್‌ಗಳನ್ನು ಎತ್ತಿಕೊಂಡರು ಎಂದು ಪತ್ರಕರ್ತರ ತಂಡ ಭೂಕಂಪದ ಸಂದರ್ಭವನ್ನು ವಿವರಿಸಿದೆ.
ಮ್ಯಾನ್ಮಾರ್‌ನಲ್ಲಿ ಸುಮಾರು ಅರ್ಧ ನಿಮಿಷಗಳ ಕಾಲ ಭೂಮಿ ಕಂಪಿಸಿದೆ. ಭೂಕಂಪದ ನಂತರ ಸಾವು ನೋವುಗಳ ಬಗ್ಗೆ ತಕ್ಷಣಕ್ಕೆ ಖಚಿತ ವರದಿಗಳು ಬಂದಿಲ್ಲ. ಆದರೆ, ಉತ್ತರ ಥೈಲ್ಯಾಂಡ್‌ನ ನಗರಗಳಲ್ಲಿ ಮತ್ತು ರಾಜಧಾನಿ ಬ್ಯಾಂಕಾಕ್‌ನಲ್ಲಿ ಭೂಕಂಪದಿಂದ ಜನರು ಭಯಭೀತರಾಗಿದ್ದಾರೆ ಎಂದು ವರದಿಗಳು ತಿಳಿಸಿವೆ.
ಕಟ್ಟಡಗಳಿಗೆ ಹಾನಿ
ಭೂಕಂಪದಿಂದಾಗಿ ಬ್ಯಾಂಕಾಕ್‌ನಲ್ಲಿ ಕಟ್ಟಡಗಳಿಗೆ ಹಾನಿಯಾಗಿದೆ. ಅಲ್ಲಿನ ನಗರಗಳಲ್ಲಿ ಮೆಟ್ರೋ ಮತ್ತು ಲಘು ರೈಲು ಸೇವೆಗಳನ್ನು ಸ್ಥಗಿತಗೊಳಿಸಲಾಗಿದೆ.
ಚೀನಾದ ನೈಋತ್ಯ ಯುನ್ನಾನ್ ಪ್ರಾಂತ್ಯದಲ್ಲೂ ಶುಕ್ರವಾರ ಕಂಪನದ ಅನುಭವವಾಗಿದೆ ಎಂದು ಬೀಜಿಂಗ್‌ನ ಭೂಕಂಪನ ಸಂಸ್ಥೆ ತಿಳಿಸಿದೆ. ಭೂಕಂಪದ ತೀವ್ರತೆಯು ರಿಕ್ಟರ್ ಮಾಪಕದಲ್ಲಿ 7.9 ರಷ್ಟಿತ್ತು ಎಂದು ಅದು ಹೇಳಿದೆ.


