ಶುಕ್ರವಾರ (ಮಾ.28) ಸಂಭವಿಸಿದ 7.7 ತೀವ್ರತೆಯ ಪ್ರಬಲ ಭೂಕಂಪದದಿಂದ ಮ್ಯಾನ್ಮಾರ್‌ನಲ್ಲಿ ಸಾವಿಗೀಡಾದವರ ಸಂಖ್ಯೆ 694ಕ್ಕೆ ಏರಿಕೆಯಾಗಿದ್ದು, ಸುಮಾರು 1,670 ಜನರು ಗಾಯಗೊಂಡಿದ್ದಾರೆ ಎಂದು ಸರ್ಕಾರಿ ಸ್ವಾಮ್ಯದ ಎಂಆರ್‌ಟಿವಿ ತನ್ನ ಟೆಲಿಗ್ರಾಮ್ ಮೆಸೇಜಿಂಗ್ ಅಪ್ಲಿಕೇಶನ್‌ನಲ್ಲಿ ತಿಳಿಸಿರುವುದಾಗಿ ರಾಯಿಟರ್ಸ್ ವರದಿ ಮಾಡಿದೆ. (ಈ ಸುದ್ದಿ ಬರೆಯುವ ವೇಳೆಗೆ-ಮಾ.29 ಬೆಳಿಗ್ಗೆ 9 ಗಂಟೆ)
ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್ ಮತ್ತು ಸುತ್ತಮುತ್ತಲಿನ ಪ್ರದೇಶಗಳಲ್ಲೂ ಶುಕ್ರವಾರ ಭೂಕಂಪ ಉಂಟಾಗಿತ್ತು. ಮ್ಯಾನ್ಮಾರ್‌ನಲ್ಲಿ ಸಂಭವಿಸಿದ ಭೂಕಂಪ ಬ್ಯಾಕಾಂಕ್‌ನಲ್ಲಿ ಪರಿಣಾಮ ಬೀರಿದೆ ಎನ್ನಲಾಗಿದೆ.
ಕಂಪನದಿಂದ ಬ್ಯಾಂಕಾಕ್‌ನಲ್ಲಿ ಸರ್ಕಾರಿ ಕಚೇರಿಗಳಿಗಾಗಿ ನಿರ್ಮಾಣ ಹಂತದಲ್ಲಿದ್ದ ಬಹುಮಹಡಿ ಕಟ್ಟಡ ಕುಸಿದು ಕನಿಷ್ಠ 8 ಮಂದಿ ಸಾವನ್ನಪ್ಪಿದ್ದಾರೆ ಮತ್ತು 117ಕ್ಕೂ ಹೆಚ್ಚು ಜನರು ಕಾಣೆಯಾಗಿದ್ದಾರೆ. ಕಟ್ಟಡ ಕುಸಿದಾಗ ಸುಮಾರು 43 ಕಾರ್ಮಿಕರು ಅವಶೇಷಗಳಡಿ ಸಿಲುಕೊಂಡಿರುವ ಶಂಕೆ ವ್ಯಕ್ತವಾಗಿತ್ತು. ಭೂಕಂಪದ ಬಳಿಕ ಬ್ಯಾಂಕಾಕ್ ಅನ್ನು ‘ವಿಪತ್ತು ಪ್ರದೇಶ’ವೆಂದು ಘೋಷಿಸಲಾಗಿದೆ.
ಮ್ಯಾನ್ಮಾರ್‌ನ ಮಿಲಿಟರಿ ಸರ್ಕಾರ ದೇಶದ ಹಲವು ಪ್ರದೇಶಗಳಲ್ಲಿ ತುರ್ತು ಪರಿಸ್ಥಿತಿ ಘೋಷಿಸಿದೆ. ಸರ್ಕಾರದ ದೂರದರ್ಶನದಲ್ಲಿ ಮಾತನಾಡಿರುವ ಮಿಲಿಟರಿ ಮುಖ್ಯಸ್ಥ ಮಿನ್ ಆಂಗ್ ಹ್ಲೈಂಗ್, “ಹೆಚ್ಚಿನ ಸಾವು-ನೋವುಗಳು ಸಂಭವಿಸುವ ಸಾಧ್ಯತೆಯಿದೆ. ಯಾವುದಾದರು ದೇಶ ಸಹಾಯ ನೀಡುವಂತೆ ಕೋರಿದ್ದೇನೆ” ಎಂದಿದ್ದಾರೆ.
ಯುನೈಟೆಡ್ ಸ್ಟೇಟ್ಸ್ ಜಿಯೋಲಾಜಿಕಲ್ ಸರ್ವೇ (ಯುಎಸ್‌ಜಿಎಸ್) ಭೂಕಂಪದ ಕೇಂದ್ರ ಬಿಂದು ಮ್ಯಾನ್ಮಾರ್‌ನ ಎರಡನೇ ಅತಿದೊಡ್ಡ ನಗರವಾದ ಮಂಡಲೆಯಿಂದ ಸುಮಾರು 17.2 ಕಿ.ಮೀ ದೂರದಲ್ಲಿ ಭೂಮಿಯ 10 ಕಿ.ಮೀ ಆಳದಲ್ಲಿ ಪತ್ತೆಯಾಗಿದೆ ಎಂದು ತಿಳಿಸಿದೆ. ಮಂಡಲೆ ಸುಮಾರು 1.2 ಮಿಲಿಯನ್ ಜನಸಂಖ್ಯೆಯನ್ನು ಹೊಂದಿರುವ ನಗರವಾಗಿದೆ. ಶುಕ್ರವಾರ ಇಲ್ಲಿ 7.7 ತೀವ್ರತೆಯ ಮೊದಲ ಭೂಕಂಪ ಸಂಭವಿಸಿದ ಸ್ವಲ್ಪ ಸಮಯದ ನಂತರ 6.4 ತೀವ್ರತೆಯ ಮತ್ತೊಂದು ಭೂಕಂಪ ಸಂಭವಿಸಿದೆ.
ಮ್ಯಾನ್ಮಾರ್‌ನಲ್ಲಿ, ದೇಶದ ಅತಿದೊಡ್ಡ ಧಾರ್ಮಿಕ ಕೇಂದ್ರಗಳಲ್ಲಿ ಒಂದಾದ ಮಾ ಸೋ ಯಾನೆಯ ಕಟ್ಟಡ ಸೇರಿದಂತೆ ಹಲವು ಕಟ್ಟಡಗಳು ಕುಸಿದಿವೆ. ನೇಪಿಡಾವ್‌ನಲ್ಲಿರುವ ಹಿಂದಿನ ರಾಜಭವನ ಮತ್ತು ಸರ್ಕಾರಿ ವಸತಿ ಕಟ್ಟಡಗಳಿಗೆ ಹಾನಿಯಾಗಿದೆ. ರಸ್ತೆಗಳು ಬಿರುಕು ಬಿಟ್ಟಿದ್ದು, ಸೇತುವೆಗಳು ಕುಸಿದು ಬಿದ್ದಿವೆ. ಅಣೆಕಟ್ಟು ಒಡೆದು ತಗ್ಗು ಪ್ರದೇಶಗಳಲ್ಲಿ ಪ್ರವಾಹ ಉಂಟಾಗಿದೆ ಎಂದು ಸುದ್ದಿ ಸಂಸ್ಥೆ ಎಪಿ ವರದಿ ಮಾಡಿದೆ.
ನೇಪಿಡಾವ್ ನಗರದ ನೈಋತ್ಯದಲ್ಲಿರುವ ಸಾಗೈಂಗ್ ಪ್ರದೇಶದಲ್ಲಿ, 90 ವರ್ಷ ಹಳೆಯ ಸೇತುವೆ ಕುಸಿದಿದ್ದು, ಮಂಡಲೆ ಮತ್ತು ಮ್ಯಾನ್ಮಾರ್‌ನ ಅತಿದೊಡ್ಡ ನಗರವಾದ ಯಾಂಗೊನ್ ಅನ್ನು ಸಂಪರ್ಕಿಸುವ ಹೆದ್ದಾರಿಯ ಕೆಲವು ಭಾಗಗಳು ಕೂಡ ಹಾನಿಗೊಳಗಾಗಿವೆ.
ಥೈಲ್ಯಾಂಡ್ ರಾಜಧಾನಿ ಬ್ಯಾಂಕಾಕ್‌ನಲ್ಲಿ ನಿರ್ಮಾಣ ಹಂತದಲ್ಲಿದ್ದ 33 ಅಂತಸ್ತಿನ ಕಟ್ಟಡ ಕುಸಿದು ಬಿದ್ದಿದೆ. ಇದರಿಂದ ಕನಿಷ್ಠ 8 ಜನರು ಸಾವನ್ನಪ್ಪಿದ್ದಾರೆ ಎಂದು ಅಧಿಕಾರಿಗಳು ದೃಢಪಡಿಸಿದ್ದಾರೆ. ರಕ್ಷಣಾ ತಂಡಗಳು ಅವಶೇಷಗಳ ಅಡಿಯಿಂದ ಏಳು ಜನರನ್ನು ಜೀವಂತ ಹೊರತೆಗೆದಿದ್ದಾರೆ. ಇನ್ನೂ ಅನೇಕರು ಅವಶೇಷಗಳಡಿ ಸಿಲುಕಿಕೊಂಡಿದ್ದಾರೆ.
ಭೂಕಂಪದ ಸಂಭವಿಸುತ್ತಿದ್ದಂತೆ ಬ್ಯಾಂಕಾಕ್ ನಗರದಾದ್ಯಂತ ಸೈರನ್‌ಗಳು ಮೊಳಗಿಸಿ ಜನರಿಗೆ ಎಚ್ಚರಿಕೆ ನೀಡಲಾಗಿತ್ತು. ಸುರಂಗಮಾರ್ಗ ಮತ್ತು ಎತ್ತರದ ಸಾರಿಗೆ ವ್ಯವಸ್ಥೆಗಳನ್ನು ಸ್ಥಗಿತಗೊಳಿಸಲಾಗಿತ್ತು. ಇದರಿಂದ ಹೆಚ್ಚಿನ ಅನಾಹುತಗಳು ತಪ್ಪಿದೆ ಎಂದು ಎಪಿ ವರದಿ ತಿಳಿಸಿದೆ.
ಸ್ಥಳೀಯ ಬುಡಕಟ್ಟು ಸಮುದಾಯದ ಭೂಮಿ ವಶಕ್ಕೆ ಯತ್ನ | ನಿತ್ಯಾನಂದನ ಕೈಲಾಸದ ಸದಸ್ಯರನ್ನು ಗಡೀಪಾರು ಮಾಡಿದ ಬೊಲಿವಿಯಾ


