ಕ್ಷೇತ್ರ ಪುನರ್‌ವಿಂಗಡನೆಗೆ ಸಂಬಂಧಿಸಿದಂತೆ ರಚಿಸಲಾದ ಜಂಟಿ ಕ್ರಿಯಾ ಸಮಿತಿಯ (ಜೆಎಸಿ) ಮೊದಲ ಸಭೆಯಲ್ಲಿ ಕೈಗೊಂಡ ನಿರ್ಣಯಗಳ ಕುರಿತು ವಿವರಿಸಲು ಪ್ರಧಾನಿ ನರೇಂದ್ರ ಮೋದಿ ಬಳಿಗೆ ವಿವಿಧ ಪಕ್ಷಗಳ ಸಂಸದರ ನಿಯೋಗ ಕೊಂಡೊಯ್ಯಲು ತಮಿಳುನಾಡು ಮುಖ್ಯಮಂತ್ರಿ ಎಂ.ಕೆ ಸ್ಟಾಲಿನ್ ಮುಂದಾಗಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪ್ರಧಾನಿಗೆ ಬರೆದಿರುವ ಪತ್ರದ ಪ್ರತಿಯನ್ನು ಹಂಚಿಕೊಂಡಿರುವ ಸ್ಟಾಲಿನ್, ಮಾರ್ಚ್ 22ರಂದು ನಡೆದ ಸಭೆಯಲ್ಲಿ ವ್ಯಕ್ತವಾದ ಅಭಿಪ್ರಾಯಗಳು ರಾಜಕೀಯ ಗಡಿಗಳನ್ನು ಮೀರಿ ಸಂಸದೀಯ ಪ್ರಜಾಪ್ರಭುತ್ವದಲ್ಲಿ ನ್ಯಾಯಯುತ ಪ್ರಾತಿನಿಧ್ಯವನ್ನು ಬಯಸುವ ವಿವಿಧ ಪ್ರದೇಶಗಳ ನಾಗರಿಕರ ಬೇಡಿಕೆಗಳನ್ನು ಸಾಕಾರಗೊಳಿಸುತ್ತವೆ ಎಂದು ಹೇಳಿದ್ದಾರೆ.
Hon'ble PM Thiru @NarendraModi,
I have requested a meeting with you, alongside MPs from various parties, to present our memorandum on the concerns surrounding the proposed delimitation. This follows resolutions from the #JointActionCommittee meeting for #FairDelimitation in… pic.twitter.com/kkSoqgNjmG— M.K.Stalin (@mkstalin) April 2, 2025
“ಈ ವಿಷಯವು (ಕ್ಷೇತ್ರ ಪುನರ್‌ವಿಂಗಡನೆ) ನಮ್ಮ ರಾಜ್ಯಗಳು ಮತ್ತು ನಾಗರಿಕರಿಗೆ ಅತ್ಯಂತ ಮಹತ್ವದ್ದಾಗಿರುವುದರಿಂದ, ಜಂಟಿ ಕ್ರಿಯಾ ಸಮಿತಿಯ ಪರವಾಗಿ ಜ್ಞಾಪಕ ಪತ್ರವನ್ನು ಔಪಚಾರಿಕವಾಗಿ ಸಲ್ಲಿಸಲು ನಿಮ್ಮೊಂದಿಗೆ ಸಭೆ ನಡೆಸಲು ಸಮಯ ನೀಡುವಂತೆ ವಿನಂತಿಸುತ್ತೇನೆ” ಎಂದು ಸ್ಟಾಲಿನ್ ಪತ್ರದಲ್ಲಿ ತಿಳಿಸಿದ್ದಾರೆ.
ಕ್ಷೇತ್ರ ಪುನರ್‌ವಿಂಗಡನೆಗೆ ಸಂಬಂಧಿಸಿದಂತೆ ರಚಿಸಿರುವ ಜಂಟಿ ಕ್ರಿಯಾ ಸಮಿತಿಯ ಮೊದಲ ಸಭೆಯಲ್ಲಿ ಕೇರಳ ಮುಖ್ಯಮಂತ್ರಿ ಪಿಣರಾಯಿ ವಿಜಯನ್, ತೆಲಂಗಾಣ ಮುಖ್ಯಮಂತ್ರಿ ರೇವಂತ್ ರೆಡ್ಡಿ, ಪಂಜಾಬ್ ಮುಖ್ಯಮಂತ್ರಿ ಭಗವಂತ್ ಮಾನ್ ಮತ್ತು ಕರ್ನಾಟಕದ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹಾಗೂ ಇತರ ಪಕ್ಷಗಳ ನಾಯಕರು ಭಾಗವಹಿಸಿದ್ದರು.
ಸಭೆಯಲ್ಲಿ ಕ್ಷೇತ್ರ ಪುನರ್‌ವಿಂಗಡನೆಯನ್ನು ಮುಂದಿನ 25 ವರ್ಷಗಳ ಅವಧಿಗೆ ಮುಂದೂಡುವಂತೆ ಕೇಂದ್ರ ಸರ್ಕಾರವನ್ನು ಒಕ್ಕೊರೊಳಿನಿಂದ ಒತ್ತಾಯಿಸಲಾಗಿದೆ.
ಪ್ರಜಾಪ್ರಭುತ್ವದ ವಿಷಯ ಮತ್ತು ಸ್ವರೂಪವನ್ನು ಸುಧಾರಿಸುವ ಕ್ಷೇತ್ರ ಪುನರ್‌ವಿಂಗಡನೆ ಪ್ರಕ್ರಿಯೆಯನ್ನು ಪಾರದರ್ಶಕವಾಗಿ ನಡೆಸಬೇಕು ಮತ್ತು ರಾಜಕೀಯ ಪಕ್ಷಗಳು, ರಾಜ್ಯ ಸರ್ಕಾರಗಳು ಮತ್ತು ಇತರ ಪಕ್ಷಕಾರರಿಗೆ ಚರ್ಚಿಸಲು ಮತ್ತು ಅಭಿಪ್ರಾಯ ವ್ಯಕ್ತಪಡಿಸಲು ಮುಕ್ತ ಅವಕಾಶ ನೀಡಬೇಕು ಎಂದು ಸಭೆಯಲ್ಲಿ ಆಗ್ರಹಿಸಲಾಗಿದೆ.
ಜನಸಂಖ್ಯಾ ನಿಯಂತ್ರಣ ಕ್ರಮಗಳನ್ನು ಪರಿಣಾಮಕಾರಿಯಾಗಿ ಜಾರಿಗೆ ತಂದ ರಾಜ್ಯಗಳನ್ನು ರಕ್ಷಿಸಲು ಮತ್ತು ಪ್ರೋತ್ಸಾಹಿಸಲು ಕ್ಷೇತ್ರ ಪುನರ್‌ವಿಂಗಡನೆಗೆ ಸಂಬಂಧಿಸಿದ 42, 84 ಮತ್ತು 87 ನೇ ಸಾಂವಿಧಾನಿಕ ತಿದ್ದುಪಡಿಗಳನ್ನು ಜಾರಿಗೆ ತರಲಾಗಿದೆ. ರಾಷ್ಟ್ರೀಯ ಜನಸಂಖ್ಯಾ ಸ್ಥಿರೀಕರಣದ ಗುರಿಯನ್ನು ಇನ್ನೂ ಸಾಧಿಸಲಾಗಿಲ್ಲ. ಹಾಗಾಗಿ, 1971ರ ಜನಗಣತಿಯ ಜನಸಂಖ್ಯೆಯ ಆಧಾರದ ಮೇಲೆ ಸಂಸದೀಯ ಕ್ಷೇತ್ರಗಳ ಮೇಲಿನ ಪುನರ್‌ವಿಂಗಡನೆಯನ್ನು 25 ವರ್ಷಗಳವರೆಗೆ ವಿಸ್ತರಿಸಬೇಕು” ಸಭೆಯಲ್ಲಿ ಒತ್ತಾಯಿಸಲಾಗಿದೆ.
ತಮಿಳುನಾಡು| ಕಚ್ಚತೀವು ಮರಳಿ ಪಡೆಯುವ ನಿರ್ಣಯ ಮಂಡಿಸಲು ಮುಂದಾದ ಎಂ.ಕೆ. ಸ್ಟಾಲಿನ್


