ಬುಧವಾರ (ಏ.2) ಸಂಸತ್ತಿನಲ್ಲಿ ಮಂಡನೆಯಾದ ವಕ್ಫ್ ತಿದ್ದುಪಡಿ ಮಸೂದೆಯ ಕುರಿತು ಮಾತನಾಡಿದ ಲೋಕಸಭೆಯ ಪ್ರತಿಪಕ್ಷದ ಉಪ ನಾಯಕ ಹಾಗೂ ಕಾಂಗ್ರೆಸ್ ಸಂಸದ ಗೌರವ್ ಗೊಗೊಯ್ “ನರೇಂದ್ರ ಮೋದಿ ಸರ್ಕಾರದ ವಕ್ಫ್ ತಿದ್ದುಪಡಿ ಮಸೂದೆ ಮೂಲಕ ‘ಸಂವಿಧಾನವನ್ನು ದುರ್ಬಲಗೊಳಿಸಲು’ ಪ್ರಯತ್ನಿಸುತ್ತಿದೆ ಎಂದು ವಾಗ್ದಾಳಿ ನಡೆಸಿದರು.
“ಈ ಮಸೂದೆಯು ಸಂವಿಧಾನವನ್ನು ದುರ್ಬಲಗೊಳಿಸುವ, ಅಲ್ಪಸಂಖ್ಯಾತ ಸಮುದಾಯವನ್ನು ಅವಮಾನಿಸುವ, ಭಾರತೀಯ ಸಮಾಜವನ್ನು ವಿಭಜಿಸುವ ಮತ್ತು ಅಲ್ಪಸಂಖ್ಯಾತರ ಹಕ್ಕುಗಳನ್ನು ಕಸಿದುಕೊಳ್ಳುವ ಗುರಿಯನ್ನು ಹೊಂದಿದೆ” ಎಂದರು.
ಮಸೂದೆ ಕುರಿತ ಎಲ್ಲಾ ಪಕ್ಷಗಳ ಅಭಿಪ್ರಾಯಗಳನ್ನು ಪರಿಗಣಿಸಿ ಜಂಟಿ ಸಂಸದೀಯ ಸಮಿತಿಯಲ್ಲಿ (ಜೆಪಿಸಿ) ಚರ್ಚೆ ನಡೆದಿದೆ ಎಂಬ ಕೇಂದ್ರ ಗೃಹ ಸಚಿವ ಅಮಿತ್ ಶಾ ಮತ್ತು ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರ ಸಮರ್ಥನೆಯನ್ನು ತಿರಸ್ಕರಿಸಿದ ಗೊಗೊಯ್ “ನಿಮಯ ಪ್ರಕಾರ ಚರ್ಚೆ ನಡೆದಿಲ್ಲ” ಎಂದು ಹೇಳಿದರು.
ವಿರೋಧ ಪಕ್ಷಗಳು ಸೂಚಿಸಿದ ಒಂದೇ ಒಂದು ತಿದ್ದುಪಡಿಯನ್ನು ಅಂಗೀಕರಿಸಿಲ್ಲ. ಅಭಿಪ್ರಾಯ ಸಂಗ್ರಹಿಸುವಾಗ ವಕ್ಫ್ ಬಗ್ಗೆ ಮಾಹಿತಿ ಇಲ್ಲದವರನ್ನು ಜೆಪಿಸಿಗೆ ಆಹ್ವಾನಿಸಲಾಗಿದೆ ಎಂದರು.
ಸರ್ಕಾರವು ಭವಿಷ್ಯದಲ್ಲಿ ಇತರ ಅಲ್ಪಸಂಖ್ಯಾತರ ಮೇಲೂ ದಾಳಿ ನಡೆಸಲಿದೆ. ಇಂದು ಒಂದು ಸಮುದಾಯದ ಭೂಮಿಯನ್ನು ಗುರಿಯಾಗಿಸಿಕೊಂಡಿದ್ದಾರೆ; ನಾಳೆ ಇವರು ಇನ್ನೊಂದು ಸಮುದಾಯದ ಮೇಲೆ ದಾಳಿ ಮಾಡುತ್ತಾರೆ ಎಂದು ಗೊಗೊಯ್ ಎಚ್ಚರಿಸಿದರು.
ಇದಕ್ಕೂ ಮೊದಲು, ವಕ್ಫ್ ತಿದ್ದುಪಡಿ ಮಸೂದೆ ಮಂಡಿಸಿದ ಸಚಿವ ಕಿರಣ್ ರಿಜಿಜು “ಸಂವಿಧಾನದ 25(1) ನೇ ವಿಧಿಯಲ್ಲಿ ಉಲ್ಲೇಖಿಸಿರುವಂತೆ “ಧರ್ಮವನ್ನು ಪ್ರತಿಪಾದಿಸುವ, ಆಚರಿಸುವ ಮತ್ತು ಪ್ರಚಾರ ಮಾಡುವ” ಯಾರ ಸ್ವಾತಂತ್ರ್ಯದಲ್ಲೂ ನರೇಂದ್ರ ಮೋದಿ ಸರ್ಕಾರ ಹಸ್ತಕ್ಷೇಪ ಮಾಡುತ್ತಿಲ್ಲ” ಎಂದು ಹೇಳಿದರು.
“ಈ ಮಸೂದೆಯು ವಕ್ಫ್ ಆಸ್ತಿಗಳ ನಿರ್ವಹಣೆಗೆ ಸಂಬಂಧಿಸಿದೆ. ಇತರರ ಧರ್ಮಗಳಲ್ಲಿ ಹಸ್ತಕ್ಷೇಪ ಮಾಡುವುದಕ್ಕೂ ಇದಕ್ಕೂ ಯಾವುದೇ ಸಂಬಂಧವಿಲ್ಲ” ಎಂದು ರಿಜಿಜು ಸ್ಪಷ್ಟಪಡಿಸಿದರು.
ಒಬ್ಬ ವ್ಯಕ್ತಿ ಐದು ವರ್ಷಗಳ ಕಾಲ ಇಸ್ಲಾಂ ಧರ್ಮವನ್ನು ಪಾಲಿಸಿದ್ದರೆ ಮಾತ್ರ ಆಸ್ತಿಯನ್ನು ವಕ್ಫ್ ಮಾಡಲು ಅವರು ಅರ್ಹರು ಎಂಬ ಸಚಿವ ರಿಜಿಜು ಹೇಳಿಕೆಯನ್ನು ಪ್ರಶ್ನಿಸಿದ ಗೊಗೊಯ್ “ಇತರ ಧರ್ಮಗಳ ಜನರಿಗೆ ನೀವು ಐದು ವರ್ಷಗಳಿಂದ ಧರ್ಮ ಪಾಲಿಸುತ್ತಿದ್ದೀರಾ? ಎಂದು ಸರ್ಕಾರ ಪ್ರಮಾಣ ಪತ್ರ ಕೇಳುತ್ತದಯೇ? ಹೀಗಿರುವಾಗ ಈ ಮಸೂದೆಯಲ್ಲಿ ಮಾತ್ರ ಈ ಮಾನದಂಡವನ್ನು ಅಳವಡಿಸಲಾಗಿದೆ. ಸರ್ಕಾರ ಧರ್ಮದ ವಿಚಾರದಲ್ಲಿ ಏಕೆ ಹಸ್ತಕ್ಷೇಪ ಮಾಡುತ್ತಿದೆ ಎಂದು ಕೇಳಿದರು.
ಮಸೂದೆಯಲ್ಲಿ ಪ್ರಸ್ತಾಪಿಸಲಾದ ತಿದ್ದುಪಡಿಗಳು ಭಾರತದಲ್ಲಿ ಹೆಚ್ಚಿನ ಮೊಕದ್ದಮೆಗಳಿಗೆ ಕಾರಣವಾಗುತ್ತವೆ ಎಂದ ಗೊಗೊಯ್, ತಿದ್ದುಪಡಿಗಳು ಮಸೂದೆಯನ್ನು ಬಲಪಡಿಸುವ ಗುರಿಯನ್ನು ಹೊಂದಿರಬೇಕೇ ಹೊರತು, ಹೆಚ್ಚಿನ ವಿವಾದಗಳನ್ನು ಸೃಷ್ಟಿಸಬಾರದು ಎಂದರು.
ವಕ್ಫ್ ಮಸೂದೆ ವಿರುದ್ದ ಕಾನೂನು ಹೋರಾಟ: ಮುಸ್ಲಿಂ ವೈಯಕ್ತಿಕ ಕಾನೂನು ಮಂಡಳಿ


