“ಮೊದಲಿಂದಲೂ ಪರಿಶಿಷ್ಟ ಜಾತಿಗಳ ವಿಭಜನೆಗೆ ಪ್ರಯತ್ನ ನಡೆಯುತ್ತಲೇ ಇದೆ; ಈಗಲೂ ನಡೆಯುತ್ತಿದೆ. ದಲಿತರನ್ನು ಒಡೆಯುವುದೇ ಕೋಮುವಾದಿಗಳು ಹಾಗೂ ಆರ್‌ಎಸ್‌ಎಸ್ ಅಜೆಂಡಾ” ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕರಾದ ಮಾವಳ್ಳಿ ಶಂಕರ್ ಹೇಳಿದರು.
ಬೆಂಗಳೂರಿನ ಖಾಸಗಿ ಹೋಟೆಲ್‌ನಲ್ಲಿ ದಲಿತ ಸಂಘರ್ಷ ಸಮಿತಿಗಳ ಒಕ್ಕೂಟ ಏರ್ಪಡಿಸಿದ್ದ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, “ಬಾಬಾ ಸಾಹೇಬ್ ಬಿ.ಆರ್. ಅಂಬೇಡ್ಕರ್ ಅವರು ಬೌದ್ಧ ಧರ್ಮ ಸ್ವೀಕಾರ ಮಾಡಿದ್ದರು. ಅನೇಕ ದಲಿತರೂ ಕೂಡ ತಮ್ಮನ್ನು ತಾವು ಬೌದ್ಧರು ಎಂದು ಹೇಳಿಕೊಳ್ಳುತ್ತೇವೆ. 1991 ರಲ್ಲಿ ಅಂದಿನ ಕೇಂದ್ರ ಸರ್ಕಾರ, ‘ಬೌದ್ಧ ಧರ್ಮಕ್ಕೆ ಮತಾಂತರ ಆದವರಿಗೂ ಮೀಸಲಾತಿ ಮುಂದುವರಿಯಲಿದೆ’ ಎಂದು ಹೇಳಿದೆ. ಈ ಬಗ್ಗೆ ಹಲವರಿಗೆ ಗೊಂದಲ ಹಾಗೂ ಭಯ ಇದೆ. ಸರ್ಕಾರ ಹಾಗೂ ನಾಗಮೋಹನ್ ದಾಸ್ ಆಯೋಗ ಜನರ ಅನುಮಾನಗಳಿಗೆ ತೆರೆ ಎಳೆಯಬೇಕು” ಎಂದು ಮನವಿ ಮಾಡಿದರು.
“ಸಿಖ್ ಧರ್ಮಕ್ಕೆ ಮತಾಂತರ ಆದ ದಲಿತರಿಗೆ ಮೀಸಲಾತಿ ಮುಂದುವರೆದಿದೆ. ಒಳ ಮೀಸಲಾತಿಯಲ್ಲಿ ಕೂಡ ಧರ್ಮಾಂತರಗೊಂಡ ಪರಿಶಿಷ್ಟ ಜಾತಿ ಜನರಿಗೆ ಮೀಸಲಾತಿ ಮುಂದುವರಿಯಬೇಕು. ಈ ಬಗ್ಗೆ ಚಾಲ್ತಿಯಲ್ಲಿರುವ ಗೊಂದಲ ನಿವಾರಣೆ ಮಾಡಬೇಕು ಎಂಬುದು ನಮ್ಮ ಮನವಿ” ಎಂದರು.
ಒಳ ಮೀಸಲಾತಿ ಹೋರಾಟ ವಿಚಾರದಲ್ಲಿ ರಾಜ್ಯದ ದಲಿತರನ್ನು ಒಡೆಯುವ ಹುನ್ನಾರ ನಡೆಯುತ್ತಿದೆಯಾ ಎಂಬ ಪ್ರಶ್ನೆಗೆ ಉತ್ತರಿಸಿದ ಅವರು, “ಮೊದಲಿಂದಲೂ ಪರಿಶಿಷ್ಟ ಜಾತಿಗಳ ವಿಭಜನೆಗೆ ಪ್ರಯತ್ನ ನಡೆಯುತ್ತಲೇ ಇದೆ; ಈಗಲೂ ನಡೆಯುತ್ತಿದೆ. ದಲಿತರನ್ನು ಒಡೆಯುವುದೇ ಕೋಮುವಾದಿಗಳು ಹಾಗೂ ಆರ್‌ಎಸ್‌ಎಸ್ ಅಜೆಂಡಾ ಆಗಿದೆ. ದಲಿತ ಚಳವಳಿಯನ್ನು ಛಿದ್ರ ಮಾಡಲು ಸಾಧ್ಯವಾಗದ ಕಾರಣಕ್ಕೆ, ಜಾತಿಗಳ ವಿಭಜನೆಗೆ ಮುಂದಾಗಿದ್ದಾರೆ. ಆದರೆ, ರಾಜ್ಯದಲ್ಲಿ ದಲಿತ ಚಳವಳಿ ಇಂದಿಗೂ ಪರಿಶಿಷ್ಟರ ನಡುವೆ ಐಕ್ಯತೆ ಉಳಿಸಿಕೊಂಡಿದೆ. ದಲಿತ ಚಳವಳಿಯ ಬಗ್ಗೆ ಇತ್ತೀಚಿಗೆ ಕೆಲವರು ಮಾಡುತ್ತಿರುವ ಆಪಾದನೆಯನ್ನು ನಾವು ಗಂಭೀರವಾಗಿ ಪರಿಗಣಿಸಿಲ್ಲ. ಏಕೆಂದರೆ, ಇದು ಆರ್‌ಎಸ್‌ಎಸ್ ಹುನ್ನಾರ. ಬ್ರಾಹ್ಮಣ್ಯವಾದ ಬೇಕಾ ಅಥವಾ ಸಂವಿಧಾನ ವಾದ ಬೇಕಾ ಎಂಬುದನ್ನು ಸಮುದಾಯ ನಿರ್ಧಾರ ಮಾಡಬೇಕು” ಎಂದರು.

ಯಾವುದೇ ತೊಂದರೆ ಆಗದಂತೆ ಒಳ ಮೀಸಲಾತಿ ಜಾರಿಯಾಗಲಿ: ಗುರುಪ್ರಸಾದ್ ಕೆರಗೋಡು
“ಜಸ್ಟೀಸ್ ನಾಗಮೋಹನ್ ದಾಸ್ ಏಕ ಸದಸ್ಯ ಸಮಿತಿ ಮಧ್ಯಂತರ ವರದಿ ನೀಡಿದ್ದು, ಹೊಸ ಸಮೀಕ್ಷೆ ನಡೆಸುವ ಮೂಲಕ ಒಳ ಮೀಸಲಾತಿ ಜಾರಿ ಮಾಡಬೇಕು ಎಂದು ಹೇಳಿರುವುದನ್ನು ಸ್ವಾಗತಿಸುತ್ತೇನೆ. ಅದನ್ನು ಸರ್ಕಾರ ಕೂಡ ಒಪ್ಪಿಕೊಂಡು, ಹೊಸ ಸಮೀಕ್ಷೆಗೆ ಸಮರೋಪಾದಿಯಲ್ಲಿ ಅಗತ್ಯ ಕ್ರಮ ತೆಗೆದುಕೊಳ್ಳಬೇಕು. ಕಾಲಮಿತಿಯೊಳಗೆ ಒಳ ಮೀಸಲಾತಿ ಜಾರಿ ಮಾಡಬೇಕು. ಏಕೆಂದರೆ, ಪರಸ್ಪರ ಗುಮಾನಿ, ದ್ವೇಷ ಹಾಗೂ ಅಸೂಯೆಯಿಂದ ಪರಿಶಿಷ್ಟ ಜಾತಿಯೊಳಗಿನ ಉಪ ಪಂಗಡಗಳ ನಡುವೆ ಸಂಬಂಧ ಹದಗೆಡುತ್ತಿದೆ. ಹೆಚ್ಚಿನ ಅನಾಹುತಗಳಿಗೆ ಸರ್ಕಾರ ಆಸ್ಪದ ನೀಡಬಾರದು. ಒಳ ಮೀಸಲಾತಿ ಜಾರಿಗೆ ಯಾರೊಬ್ಬರೂ ಈವರೆಗೆ ವಿರೋಧ ಮಾಡಿಲ್ಲ. ಸುಪ್ರೀಂ ಕೋರ್ಟ್ ನಿರ್ದೇಶನದಂತೆ ವೈಜ್ಞಾನಿಕ ಅಂಕಿ-ಅಂಶಗಳ ಆಧಾರದಲ್ಲಿ ಒಳ ಮೀಸಲಾತಿ ಜಾರಿ ಆಗಲಿ ಎಂದು ಮನವಿ ಮಾಡುತ್ತಿದ್ದಾರೆ” ಎಂದು ದಲಿತ ಸಂಘರ್ಷ ಸಮಿತಿ ರಾಜ್ಯ ಪ್ರಧಾನ ಸಂಚಾಲಕ ಗುರುಪ್ರಸಾದ್ ಕೆರಗೋಡು ಹೇಳಿದರು.
“ರಾಜ್ಯ ಸರ್ಕಾರ ಜವಾಬ್ದಾರಿಯುತವಾಗಿ ನಡೆದುಕೊಳ್ಳಬೇಕು; ಕೂಡಲೇ ಸಂಪುಟ ಉಪ ಸಮಿತಿಯೊಂದನ್ನು ರಚಿಸಬೇಕು. ಇತರೆ ಸಮುದಾಯಗಳೂ ಸಮೀಕ್ಷೆಯಲ್ಲಿ ಒಳಗೊಳ್ಳುವಂತೆ ನೋಡಿಕೊಳ್ಳಬೇಕು. ಸಮೀಕ್ಷಾ ತಂಡದಿಂದ ಮಾತ್ರ ದಲಿತರನ್ನು ಹುಡುಕಿ ಮಾತನಾಡಿಸಲು ಸಾಧ್ಯವಿಲ್ಲ. ಹಳ್ಳಿಗಳಲ್ಲಿ ಪ್ರತ್ಯೇಕವಾಗಿ ವಾಸಿಸುವದರಿಂದ ಅವರನ್ನು ಪತ್ತೆಹಚ್ಚುವುದು ಸುಲಭ. ಆದರೆ, ನಗರಸಭೆ, ಪುರಸಭೆ ಹಾಗೂ ಮಹಾನಗರ ಪಾಲಿಕೆ ವ್ಯಾಪ್ತಿಯಲ್ಲಿ ಪರಿಶಿಷ್ಟರನ್ನು ಪತ್ತೆಹಚ್ಚುವುದು ಸ್ವಲ್ಪ ಕಷ್ಟವಾಗುತ್ತದೆ. ಆದ್ದರಿಂದ, ದಲಿತೇತರ ಸಮುದಾಯಗಳು ಒಳಗೊಳ್ಳಬೇಕು. ಹಾಗೆ ಮಾಡದಿದ್ದರೆ, ಕಾಂತರಾಜು ಆಯೋಗದ ವರದಿ ಅವೈಜ್ಞಾನಿಕ ಎಂದು ಅಪಸ್ವರ ಬಂದಂತೆ, ಈ ಸಮೀಕ್ಷೆಗೂ ಬರುವ ಸಾಧ್ಯತೆ ಇದೆ. ಉಪ ಸಮಿತಿ ಮಾಡಿ, ಅದರಲ್ಲಿ ಎಲ್ಲ ಸಮುದಾಯಗಳ ಮಂತ್ರಿಗಳನ್ನೂ ಸದಸ್ಯರನ್ನಾಗಿ ನೇಮಿಸಬೇಕು; ಮುಂದಿನ ದಿನಗಳಲ್ಲಿ ಯಾವುದೇ ರೀತಿಯ ತೊಂದರೆ ಆಗದಂತೆ ಒಳ ಮೀಸಲಾತಿ ಜಾರಿ ಮಾಡಬೇಕು” ಎಂದು ಸರ್ಕಾರಕ್ಕೆ ಸಲಹೆ ನೀಡಿದರು.
ಒಳ ಮೀಸಲಾತಿ ಸಮೀಕ್ಷೆಯಲ್ಲಿ ಅಲೆಮಾರಿ ಸಮುದಾಯಕ್ಕೆ ನ್ಯಾಯ ಸಿಗುವಂತೆ ಎಚ್ಚರಿಕೆ ವಹಿಸಬೇಕು: ಇಂದೂಧರ ಹೊನ್ನಾಪುರ


