ಹೊಸದಾಗಿ ರಚನೆಯಾದ ಎಂಟನೇ ದೆಹಲಿ ವಿಧಾನಸಭೆಯ ಮೊದಲ ಬಜೆಟ್ ಅಧಿವೇಶನದ ಕೊನೆಯ ದಿನ ಕಾನೂನು ಮತ್ತು ನ್ಯಾಯ ಸಚಿವ ಕಪಿಲ್ ಮಿಶ್ರಾ ಅವರ ರಾಜೀನಾಮೆಗೆ ಒತ್ತಾಯಿಸಿ ಎಎಪಿ ಶಾಸಕರು ಪ್ರತಿಭಟನೆ ನಡೆಸಿದ್ದರಿಂದ ಭಾರೀ ಗದ್ದಲ ಉಂಟಾಯಿತು.
2020ರ ದೆಹಲಿ ಗಲಭೆಯಲ್ಲಿ ಕಪಿಲ್ ಮಿಶ್ರಾ ಪಾತ್ರಕ್ಕೆ ಸಂಬಧಿಸಿದಂತೆ ಎಫ್‌ಐಆರ್ ದಾಖಲಿಸಿ ತನಿಖೆ ನಡೆಸಲು ಮಂಗಳವಾರ ನ್ಯಾಯಾಲಯ ಆದೇಶಿಸಿದೆ. ಈ ಹಿನ್ನೆಲೆ ಮಿಶ್ರಾ ರಾಜೀನಾಮೆಗೆ ಎಎಪಿ ಸದಸ್ಯರು ಪಟ್ಟು ಹಿಡಿದರು.
ಎಎಪಿ ಶಾಸಕರು ವಿಧಾನಸಭೆಯಲ್ಲಿ ಭಿತ್ತಿ ಪತ್ರಗಳನ್ನು ಹಿಡಿದುಕೊಂಡು ಸದನದ ಬಾವಿಗಿಳಿದು ಪ್ರತಿಭಟಿಸಿದರು. ಈ ಕಾರಣಕ್ಕೆ ಸ್ಪೀಕರ್ ವಿಜೇಂದರ್ ಗುಪ್ತಾ ಅವರು ಎಎಪಿ ಶಾಸಕರಾದ ಕುಲದೀಪ್ ಕುಮಾರ್, ಸಂಜೀವ್ ಝಾ, ಮುಖೇಶ್ ಅಹ್ಲಾವತ್, ಸುರೇಂದ್ರ ಕುಮಾರ್, ಜರ್ನೈಲ್ ಸಿಂಗ್, ಆಲೆ ಮೊಹಮ್ಮದ್ ಮತ್ತು ಅನಿಲ್ ಝಾ ಅವರನ್ನು ಅಮಾನತುಗೊಳಿಸಿದ್ದಾರೆ.
ವಿರೋಧ ಪಕ್ಷದ ನಾಯಕಿ ಅತಿಶಿ ಮರ್ಲೇನಾ ಅವರು ಎಎಪಿ ಶಾಸಕರ ಪ್ರತಿಭಟನೆಯ ನೇತೃತ್ವ ವಹಿಸಿದ್ದರು. ಮಾಧ್ಯಮಗಳೊಂದಿಗೆ ಮಾತನಾಡಿದ ಅವರು, ಬಿಜೆಪಿ ಕಪಿಲ್ ಮಿಶ್ರಾ ಅವರನ್ನು ರಕ್ಷಿಸುತ್ತಿದೆ. ದೆಹಲಿ ಗಲಭೆಯ ಎಲ್ಲಾ ಆರೋಪಿಗಳು ಜೈಲಿನಲ್ಲಿದ್ದಾರೆ. ಕಪಿಲ್ ಮಿಶ್ರಾ ಏಕೆ ಜೈಲಿನಲ್ಲಿಲ್ಲ? ನಾವು ಅವರ ರಾಜೀನಾಮೆಗೆ ಒತ್ತಾಯಿಸುತ್ತಿದ್ದೇವೆ. ಆದರೆ, ಬಿಜೆಪಿ ಅವರನ್ನು ರಕ್ಷಿಸುತ್ತಿದೆ” ಎಂದು ಹೇಳಿದ್ದಾರೆ.
ಕಲಾಪದ ವೇಳೆ ಅಮಾನತುಗೊಂಡ ಶಾಸಕರು ಸದನದ ಆವರಣದಲ್ಲಿಯೇ ಇದ್ದಾರೆಯೇ? ಅಮಾನತು ಆದೇಶದ ಬಳಿಕವೂ ಪ್ರತಿಭಟನೆ ಮುಂದುವರಿಸುತ್ತಿದ್ದಾರೆಯೇ ಎಂದು ಪರಿಶೀಲಿಸುವಂತೆ ಸ್ಪೀಕರ್ ಗುಪ್ತಾ ಅವರು ವಿಧಾನಸಭಾ ಕಾರ್ಯದರ್ಶಿಗೆ ಸೂಚನೆ ನೀಡಿದ ಪ್ರಸಂಗವೂ ನಡೆಯಿತು.
ಮಾರ್ಚ್ 3ರಂದು ಎಂಟನೇ ವಿಧಾನಸಭೆಯ ಮೊದಲ ಅಧಿವೇಶನದಲ್ಲಿ ಸ್ಪೀಕರ್ ಗುಪ್ತಾಅವರು, ಅಮಾನತುಗೊಂಡ ಅಥವಾ ಮಾರ್ಷಲ್ ಔಟ್ ಆದ ಶಾಸಕರು ವಿಧಾನಸಭಾ ಆವರಣವನ್ನು ಸಂಪೂರ್ಣವಾಗಿ ಖಾಲಿ ಮಾಡಬೇಕು ಎಂದು ಹೇಳಿದ್ದರು.
ಅಮಾನತುಗೊಂಡ ಶಾಸಕರು ವಿಧಾನಸಭಾ ಸಂಕೀರ್ಣದ ಹುಲ್ಲುಹಾಸುಗಳು ಮತ್ತು ವಿರೋಧ ಪಕ್ಷದ ನಾಯಕರ ಕಚೇರಿಯಂತಹ ಕೆಲವು ಪ್ರದೇಶಗಳಲ್ಲಿ ಉಳಿಯಬಹುದೇ? ಎಂಬ ಗೊಂದಲಕ್ಕೆ ಪ್ರತಿಕ್ರಿಯೆಯಾಗಿ ಸ್ಪೀಕರ್ ಮೇಲಿನಂತೆ ತಿಳಿಸಿದ್ದರು.
“ಗಲಭೆ ಸಂಭವಿಸಿದಾಗ ಮಿಶ್ರಾ ಅವರು ಅಲ್ಲಿ ಇದ್ದಿದ್ದು ಸ್ಪಷ್ಟವಾಗಿದೆ. ಮೇಲ್ನೋಟಕ್ಕೆ ಗುರುತಿಸಬಹುದಾದ ಅಪರಾಧ ಗೋಚರಿಸುತ್ತಿದೆ. ಆದ್ದರಿಂದ ತನಿಖೆಯ ಅಗತ್ಯವಿದೆ” ಎಂದು ಹೆಚ್ಚುವರಿ ಮುಖ್ಯ ನ್ಯಾಯಾಂಗ ಮ್ಯಾಜಿಸ್ಟ್ರೇಟ್ ವೈಭವ್ ಚೌರಾಸಿಯಾ ಮಂಗಳವಾರ ಆದೇಶ ನೀಡುವಾಗ ಹೇಳಿದ್ದರು.
ಏಪ್ರಿಲ್ 16 ರೊಳಗೆ ಅನುಸರಣಾ ವರದಿಯನ್ನು ಸಲ್ಲಿಸುವಂತೆ ನ್ಯಾಯಾಲಯ ದೆಹಲಿ ಪೊಲೀಸರಿಗೆ ಆದೇಶಿಸಿದೆ.
ಫೆಬ್ರವರಿ 24, 2020ರಂದು ಈಶಾನ್ಯ ದೆಹಲಿಯಲ್ಲಿ ಭುಗಿಲೆದ್ದ 53 ಮಂದಿ ಸಾವನ್ನಪ್ಪಿ, ಹಲವಾರು ಜನರು ಗಾಯಗೊಂಡ ಕೋಮು ಹಿಂಸಾಚಾರದಲ್ಲಿ ಕಪಿಲ್ ಮಿಶ್ರಾ ಭಾಗಿಯಾಗಿದ್ದಾರೆ ಎಂದು ಆರೋಪಿಸಿ ಯಮುನಾ ವಿಹಾರ್ ನಿವಾಸಿ ಮೊಹಮ್ಮದ್ ಇಲ್ಯಾಸ್ ಅವರು ನೀಡಿದ ದೂರಿನ ಆಧಾರದ ಮೇಲೆ ನ್ಯಾಯಾಲಯ ಆದೇಶ ನೀಡಿದೆ.
ಗಲಭೆಯ ಹಿಂದೆ ಕಪಿಲ್ ಮಿಶ್ರಾ ಪಾತ್ರವಿಲ್ಲ. ಅವರನ್ನು ಪ್ರಕರಣದಲ್ಲಿ ಸಿಲುಕಿಸುವ ಪ್ರಯತ್ನ ಮಾಡಲಾಗುತ್ತಿದೆ ಎಂದು ದೆಹಲಿ ಪೊಲೀಸರು ಹೇಳಿದ್ದರು. ಆದರೆ, ನ್ಯಾಯಾಲಯದ ಆದೇಶ ಪೊಲೀಸರ ಕಾರ್ಯವೈಖರಿಯ ಮೇಲೆ ಅನುಮಾನ ಮೂಡುವಂತೆ ಮಾಡಿದೆ.
ರೈಲ್ವೆ, ರಕ್ಷಣಾ ಭೂಮಿ ಮಾರಿ ಆಯ್ತು, ಈಗ ವಕ್ಫ್ ಭೂಮಿ ಮಾರಾಟಕ್ಕೆ ಮುಂದಾಗಿದ್ದಾರೆ: ಅಖಿಲೇಶ್ ಯಾದವ್


