ಲೋಕಸಭೆಯಲ್ಲಿ ಅಂಗೀಕಾರ ಪಡೆದ ಬಳಿಕ ವಿವಾದಿತ ವಕ್ಫ್ ತಿದ್ದುಪಡಿ ಮಸೂದೆಯನ್ನು ಕೇಂದ್ರ ಅಲ್ಪಸಂಖ್ಯಾತ ವ್ಯವಹಾರಗಳ ಸಚಿವ ಕಿರಣ್ ರಿಜಿಜು ಅವರು ಗುರುವಾರ (ಏ.3) ರಾಜ್ಯಸಭೆಯಲ್ಲಿ ಮಂಡಿಸಿದರು.
ಬುಧವಾರ ಲೋಕಸಭೆಯಲ್ಲಿ ಮಸೂದೆ ಮಂಡನೆ ಮಾಡಲಾಗಿತ್ತು. ಸಂಸತ್ತಿನ ಕೆಳಮನೆಯಲ್ಲಿ ಸುದೀರ್ಘ 12 ಗಂಟೆಗೂ ಹೆಚ್ಚು ಸಮಯ, ಅಂದರೆ ತಡರಾತ್ರಿ 2 ಗಂಟೆಯವರೆಗೂ ಮಸೂದೆ ಮೇಲೆ ಚರ್ಚೆ ನಡೆದು, ಬಳಿಕ ಅಂಗೀಕಾರ ಪಡೆಯಲಾಗಿದೆ. ಲೋಕಸಭೆಯಲ್ಲಿ ಮಸೂದೆ ಪರ 288 ಮತಗಳು ಮತ್ತು ವಿರುದ್ಧ 232 ಮತಗಳು ಚಲಾವಣೆಯಾಗಿವೆ.
ರಾಜ್ಯಸಭೆಯಲ್ಲಿ ಮಸೂದೆ ಮಂಡಿಸಿದ ಕಿರಣ್ ರಿಜಿಜು ಅವರು, “ಈ ಮಸೂದೆಯನ್ನು ಸಂಸತ್ತಿನಲ್ಲಿ ಮಂಡಿಸುವ ಮೊದಲು ನಾವು ರಾಜ್ಯ ಸರ್ಕಾರಗಳು, ಅಲ್ಪಸಂಖ್ಯಾತ ಆಯೋಗಗಳು ಮತ್ತು ವಕ್ಫ್ ಮಂಡಳಿಗಳೊಂದಿಗೆ ಸಮಾಲೋಚಿಸಿದ್ದೇವೆ. ರಾಜ್ಯಸಭೆ ಮತ್ತು ಲೋಕಸಭೆಯ ಪ್ರತಿನಿಧಿಗಳನ್ನು ಒಳಗೊಂಡ ಜಂಟಿ ಸಂಸದೀಯ ಸಮಿತಿ (ಜೆಪಿಸಿ) ರಚಿಸಲಾಗಿತ್ತು. ಜೆಪಿಸಿಯ ಸಮಾಲೋಚನೆಗಳ ಬಗ್ಗೆ ಸಂದೇಹಗಳು ಎದ್ದಿದ್ದರೂ, ವ್ಯಾಪಕ ಚರ್ಚೆಗಳ ನಂತರ ಮಸೂದೆಯನ್ನು ನಿನ್ನೆ ಲೋಕಸಭೆಯಲ್ಲಿ ಅಂಗೀಕರಿಸಲಾಗಿದೆ ಎಂದು ಹೇಳಿದರು.
ವಕ್ಫ್ ಆಸ್ತಿಗಳ ಸರಿಯಾದ ಬಳಕೆ ಭಾರತವನ್ನು ಅಭಿವೃದ್ದಿಯತ್ತ ಕೊಂಡಯ್ಯಲಿದೆ ಎಂದ ರಿಜಿಜು, ಕಾಂಗ್ರೆಸ್ ಸೇರಿದಂತೆ ಇತರ ಪ್ರತಿಪಕ್ಷಗಳಿಗೆ ಮಸೂದೆಯನ್ನು ಬೆಂಬಲಿಸುವಂತೆ ಮನವಿ ಮಾಡಿದರು.
ವಿಶ್ವದಲ್ಲಿಯೇ ಅತಿ ಹೆಚ್ಚು ವಕ್ಫ್ ಆಸ್ತಿಗಳು ಭಾರತದಲ್ಲಿದೆ. ಭಾರತೀಯ ಸೇನೆ ಮತ್ತು ರೈಲ್ವೆ ಬಳಿಕ ಅತೀ ಹೆಚ್ಚು ಆಸ್ತಿ ವಕ್ಫ್ ಮಂಡಳಿಗಳ ಬಳಿ ಇದೆ. ಇಷ್ಟು ಆಸ್ತಿ ಇದ್ದರೂ ಬಡ ಮುಸ್ಲಿಮರಿಗೆ ಇದರಿಂದ ಏನೂ ಪ್ರಯೋಜನ ಆಗುತ್ತಿಲ್ಲ. ಹಾಗಾಗಿ, ನಾವು ವಕ್ಫ್ ಆಸ್ತಿಗಳು ಮುಸ್ಲಿಂ ಸಮುದಾಯಕ್ಕೆ ಉಪಯೋಗವಾಗುವಂತೆ ಮಾಡುತ್ತಿದ್ದೇವೆ ಎಂದರು.
ಸೇನೆ ಮತ್ತು ರೈಲ್ವೆ ಆಸ್ತಿಗಳು ಸರ್ಕಾರಿ ಆಸ್ತಿಯಾಗಿದ್ದು, ಅದು ರಾಷ್ಟ್ರದ ಆಸ್ತಿ. ಆದರೆ, ವಕ್ಫ್ ಖಾಸಗಿ ಆಸ್ತಿ, ಇಷ್ಟು ದೊಡ್ಡ ಮಟ್ಟದಲ್ಲಿ ಖಾಸಗಿ ಆಸ್ತಿಗಳು ಇರುವಾಗ ಅದರ ಲೆಕ್ಕಾಚಾರಗಳು ಬೇಕಿದೆ. ಹಾಗಾಗಿ, ಈ ಮಸೂದೆಯನ್ನು ತರುತ್ತಿದ್ದೇವೆ ಎಂದು ಹೇಳಿದರು.
ವಕ್ಫ್ ತಿದ್ದುಪಡಿ ಮಸೂದೆಯು ಕೇವಲ ಬಳಕೆಯ ಕಾರಣಕ್ಕೆ ದಾಖಲೆಗಳಿಲ್ಲದೆ ಯಾವುದೇ ಆಸ್ತಿಯನ್ನು ವಕ್ಫ್ ಆಸ್ತಿ ಎಂದು ಘೋಷಣೆ ಮಾಡುವುದನ್ನು ತಡೆಯಲಿದೆ. ಆದಿವಾಸಿಗಳ ಆಸ್ತಿಗಳನ್ನು ವಕ್ಫ್ ಆಸ್ತಿ ಎನ್ನಲು ಅವಕಾಶ ನೀಡುವುದಿಲ್ಲ ಎಂದು ತಿಳಿಸಿದರು.
ವಕ್ಫ್ ಕಾಯ್ದೆಯ ಸೆಕ್ಷನ್ 40 ಅನ್ನು ದುರ್ಬಳಕೆ ಮಾಡಲಾಗುತ್ತಿದೆ. ಕೇರಳದಲ್ಲಿ ಕ್ರೈಸ್ತ ಸಮುದಾಯದವರು ವಾಸಿಸುತ್ತಿರುವ ಒಂದು ಇಡೀ ಗ್ರಾಮವನ್ನೇ ವಕ್ಫ್ ಆಸ್ತಿ ಎನ್ನಲಾಗಿದೆ. ಇದರು ವಿರುದ್ದ ಕ್ರೈಸ್ತ ಸಮುದಾಯ ನಮಗೆ ದೂರು ನೀಡಿದೆ. ಇಂತಹ ಉದಾಹರಣೆಗಳು ಕರ್ನಾಟಕ, ಹರಿಯಾಣದಲ್ಲಿ ನಡೆದಿವೆ. ಇಂತಹ ದುರ್ಬಳಕೆಯನ್ನು ತಿದ್ದುಪಡಿ ಮಸೂದೆಯ ತಡೆಯಲಿದೆ ಎಂದು ಹೇಳಿದರು.
ಪ್ರಸ್ತುತ, ದೇಶದಲ್ಲಿ 8.72 ಲಕ್ಷ ವಕ್ಫ್ ಆಸ್ತಿಗಳಿವೆ. 2006ರಲ್ಲಿ ಸಾಚಾರ್ ಸಮಿತಿಯು 4.9 ಲಕ್ಷ ವಕ್ಫ್ ಆಸ್ತಿಗಳಿಂದ 12,000 ಕೋಟಿ ರೂ.ಗಳ ಆದಾಯವನ್ನು ಅಂದಾಜಿಸಿದ್ದರೆ, ಈ ಆಸ್ತಿಗಳ ಈಗಿನ ಆದಾಯ ಎಷ್ಟಿರಬಹುದು ಊಹಿಸಿ ಎಂದು ಹೇಳಿದರು.
ಈ ಮಸೂದೆಗೆ ಸಂಬಂಧಿಸಿದಂತೆ ಪ್ರತಿಪಕ್ಷ ಸದಸ್ಯರು ಯಾವುದೇ ಗೊಂದಲಗಳಿದ್ದರೂ ಚರ್ಚೆ ನಡೆಸಬಹುದು. ನಿಮ್ಮ ಎಲ್ಲಾ ಪ್ರಶ್ನೆಗಳನ್ನು ಆಲಿಸಲು ನಾನು ಸಿದ್ದ ಎಂದು ಸಚಿವ ರಿಜಿಜು ಹೇಳಿದರು.
ವಕ್ಫ್ ತಿದ್ದುಪಡಿ ಮಸೂದೆ ಸಂವಿಧಾನದ ಮೇಲಿನ ‘ಲಜ್ಜೆಗೆಟ್ಟ ದಾಳಿ’: ಸೋನಿಯಾ ಗಾಂಧಿ


