ಹೈದರಾಬಾದ್ ಕೇಂದ್ರಿಯ ವಿಶ್ವವಿದ್ಯಾಲಯದ (ಯುಒಹೆಚ್) ಜಾಗಕ್ಕೆ ಹೊಂದಿಕೊಂಡಿರುವ ‘ಕಾಂಚ ಗಚಿಬೌಲಿ’ಯ 400 ಎಕರೆ ಅರಣ್ಯ ನಾಶ ಪ್ರಕರಣಕ್ಕೆ ಸಂಬಂಧಿಸಿದಂತೆ ಬುಧವಾರ (ಏ.2) ನೀಡಿರುವ ಮಧ್ಯಂತರ ಆದೇಶವನ್ನು ತೆಲಂಗಾಣ ಗುರುವಾರ ಹೈಕೋರ್ಟ್ ವಿಸ್ತರಿಸಿದೆ. ಮುಂದಿನ ವಿಚಾರಣೆಯನ್ನು ಏಪ್ರಿಲ್ 7ಕ್ಕೆ ನಿಗದಿಪಡಿಸಿದೆ.
ಈ ನಡುವೆ ಪ್ರಕರಣ ಸುಪ್ರೀಂ ಕೋರ್ಟ್ ಮೆಟ್ಟಿಲೇರಿದ್ದು, ಸರ್ವೋಚ್ಚ ನ್ಯಾಯಾಲಯ ಕೂಡ ಮರಗಳನ್ನು ತೆರವುಗೊಳಿಸುವ ಪ್ರಕ್ರಿಯೆಗೆ ತಡೆ ನೀಡಿದೆ. ಮುಂದಿನ ಆದೇಶದವರೆಗೆ ಮರಗಳನ್ನು ಉರುಳಿಸದಂತೆ ನೋಡಿಕೊಳ್ಳಲು ತೆಲಂಗಾಣ ರಾಜ್ಯ ಸರ್ಕಾರದ ಮುಖ್ಯ ಕಾರ್ಯದರ್ಶಿಗೆ ಸೂಚಿಸಿದೆ. ಸುಪ್ರೀಂ ಕೋರ್ಟ್ ವಿಚಾರಣೆ ಕೈಗೆತ್ತಿಕೊಂಡಿರುವುದರಿಂದ ಹೈಕೋರ್ಟ್ ವಿಚಾರಣೆಗೆ ಯಾವುದೇ ಅಡ್ಡಿಯಾಗುವುದಿಲ್ಲ ಎಂದು ಹೇಳಿದೆ. ಬುಧವಾರ ತೆಲಂಗಾಣ ಹೈಕೋರ್ಟ್ ಕೂಡ ಮರಗಳ ತೆರವಿಗೆ ತಡೆ ನೀಡಿತ್ತು.
ತೆಲಂಗಾಣದ ಸರ್ಕಾರದ ಪರ ಸುಪ್ರೀಂ ಕೋರ್ಟ್‌ನಲ್ಲಿ ವಾದ ಮಂಡಿಸಿದ ಹಿರಿಯ ವಕೀಲ ಅಭಿಷೇಕ್ ಮನು ಸಿಂಘಿ ಅವರು, “ವಿವಾದಿತ ಭೂಮಿಯು ಅರಣ್ಯ ಎಂದು ಎಲ್ಲೂ ಉಲ್ಲೇಖಿಸಿಲ್ಲ. ಅದರ ಸುತ್ತಮುತ್ತಲಿನಲ್ಲಿ ಪ್ರದೇಶಗಳಲ್ಲಿ ಗಾಲ್ಫ್ ಕೋರ್ಸ್ ಮತ್ತು ಬಯೋ ಡೈವರ್ಸಿಟಿ ಪಾರ್ಕ್‌ನಂತಹ ಹಸಿರು ಸ್ಥಳಗಳಿವೆ. ಈ ಭೂಮಿಯನ್ನು ಐಎಂಜಿ ಭಾರತ್ ಎಂಬ ಸಂಸ್ಥೆಗೆ ನೀಡಲಾಗಿತ್ತು ಎಂದು ಹೇಳಿದ್ದಾರೆ.
ಅರ್ಜಿದಾರರ ಪರ ಹಿರಿಯ ವಕೀಲ ನಿರಂಜನ್ ರೆಡ್ಡಿ ವಾದ ಮಂಡಿಸಿ, “ಅರಣ್ಯನಾಶದ ವಿರುದ್ಧ ಪ್ರತಿಭಟನೆ ನಡೆಸುತ್ತಿರುವ ವಿದ್ಯಾರ್ಥಿಗಳ ಮೇಲೆ ಪೊಲೀಸ್ ದೌರ್ಜನ್ಯ ನಡೆಸಲಾಗಿದೆ. ಪ್ರಕರಣ ನ್ಯಾಯಾಲಯದಲ್ಲಿದ್ದರೂ ಮರ ತೆರವು ಮುಂದುವರೆದಿದೆ. ಅದರ ವಿಡಿಯೋ ಚಿತ್ರೀಕರಣ ಮಾಡುತ್ತಿದ್ದ ವಿದ್ಯಾರ್ಥಿಯನ್ನು ಬಂಧಿಸಲಾಗಿದೆ ಎಂದು ಆರೋಪಿಸಿದ್ದಾರೆ.
ವಾದ ಆಲಿಸಿದ ಸುಪ್ರೀಂ ಕೋರ್ಟ್, ಏಪ್ರಿಲ್ 7ರಂದು ನಡೆಯುವ ಮುಂದಿನ ವಿಚಾರಣೆಗೂ ಮೊದಲು ಮಧ್ಯಂತರ ಅರ್ಜಿ ಸಲ್ಲಿಸುವಂತೆ ತೆಲಂಗಾಣ ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಿದೆ. ವಿವಾದಿತ ಪ್ರದೇಶದಲ್ಲಿ ಮರಗಳನ್ನು ಕಡಿಯುವುದನ್ನು ತಡೆಹಿಡಿದು ಸುಪ್ರೀಂ ಕೋರ್ಟ್ ಮಧ್ಯಂತರ ಆದೇಶ ನೀಡಿದೆ.
ದೊಡ್ಡ ಪ್ರಮಾಣದ ಅರಣ್ಯನಾಶದ ಆರೋಪದ ವರದಿಗಳನ್ನು ಗಮನಿಸಿದ ನ್ಯಾಯಮೂರ್ತಿ ಬಿ.ಆರ್. ಗವಾಯಿ ಮತ್ತು ನ್ಯಾಯಮೂರ್ತಿ ಎ.ಜಿ. ಮಸಿಹ್ ಅವರನ್ನೊಳಗೊಂಡ ಪೀಠವು, ತೆಲಂಗಾಣ ಹೈಕೋರ್ಟ್‌ನ ರಿಜಿಸ್ಟ್ರಾರ್ (ನ್ಯಾಯಾಂಗ) ಅವರಿಗೆ ಸ್ಥಳವನ್ನು ಪರಿಶೀಲಿಸಿ ವರದಿ ಸಲ್ಲಿಸುವಂತೆ ನಿರ್ದೇಶಿಸಿದೆ.
ಏನಿದು ಅರಣ್ಯ ನಾಶ ವಿವಾದ?
ಹೈದರಾಬಾದ್ ಕೇಂದ್ರೀಯ ವಿವಿಯ ಜಮೀನಿಗೆ ಹೊಂದಿಕೊಂಡಿರುವ ನಗರದ ‘ಕಾಂಚಿ ಗಚಿಬೌಲಿ’ಯ 400 ಎಕರೆ ಅರಣ್ಯವನ್ನು ನಾಶ ಮಾಡಿ ಅಲ್ಲಿ ಐಟಿ ಪಾರ್ಕ್ ಸ್ಥಾಪಿಸಲು ತೆಲಂಗಾಣದ ಕಾಂಗ್ರೆಸ್ ಸರ್ಕಾರ ಮುಂದಾಗಿದೆ ಎಂದು ಆರೋಪಿಸಲಾಗಿದೆ.
ವಿವಾದಿತ ಜಾಗವನ್ನು ಕಾಂಕ್ರೀಟ್ ಕಾಡಾಗಿ ಮಾರ್ಪಟ್ಟಿರುವ ಹೈದಾರಾಬಾದ್‌ನ ಐಟಿ ಹಬ್ ಫಿನಾಶಿಯಲ್ ಡಿಸ್ಟ್ರಿಕ್‌ನ ‘ಶ್ವಾಸಕೋಶ’ ಎಂದು ಕರೆಯಲಾಗುತ್ತದೆ. ಫಿನಾಶಿಯಲ್ ಡಿಸ್ಟ್ರಿಕ್ ಸಂಪೂರ್ಣ ಕಾಂಕ್ರೀಟ್ ಕಟ್ಟಡಗಳಿಂದ ತುಂಬಿದ್ದು, ಈ ವಿವಾದಿತ ಜಾಗ ಮಾತ್ರ ವನ್ಯ ಜೀವಿಗಳ ಏಕೈಕ ಅಶ್ರಯ ತಾಣವಾಗಿ ಉಳಿದಿದೆ.
ಈ ಜಾಗ ಬಫಲೋ ಲೇಕ್, ಪೀಕಾಕ್ ಲೇಕ್, ಮಶ್ರೂಮ್ ರಾಕ್‌ನಂತಹ ಪ್ರಮುಖ ವೈಶಿಷ್ಟ್ಯಗಳನ್ನು ಹೊಂದಿದೆ. ಜಿಂಕೆ, ನವಿಲು ಸೇರಿದಂತೆ ಅನೇಕ ವನ್ಯ ಜೀವಿಗಳ ಆಶ್ರಯ ತಾಣವಾಗಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚೆಗೆ ಸರ್ಕಾರ ಬುಲ್ಡೋಜರ್‌ಗಳನ್ನು ತಂದು ರಾತ್ರೋ ರಾತ್ರಿ ಮರಗಳ ತೆರವಿಗೆ ಮುಂದಾಗಿತ್ತು. ಇದಕ್ಕೆ ಹೈದರಾಬಾದ್ ವಿವಿಯ ವಿದ್ಯಾರ್ಥಿಗಳು, ವಿವಿಧ ಸಂಘಟನೆಗಳು, ರಾಜಕೀಯ ಪಕ್ಷಗಳು ಮತ್ತು ಪರಿಸರವಾದಿಗಳಿಂದ ತೀವ್ರ ವಿರೋಧ ವ್ಯಕ್ತವಾಗಿದೆ.
ಮರಗಳ ತೆರವು ವಿರೋಧಿಸಿ ಪ್ರತಿಭಟಿಸಿದ್ದ ಹೈದರಾಬಾದ್ ವಿವಿ ವಿದ್ಯಾರ್ಥಿಗಳ ಮೇಲೆ ಪೊಲೀಸರು ಲಾಠಿ ಪ್ರಹಾರ ಮಾಡಿ ದಬ್ಬಾಳಿಕೆ ನಡೆಸಿದ್ದಾರೆ. ಬುಲ್ಡೋಜರ್ ತಂದು ಮರಗಳನ್ನು ಧರೆಗುಳಿಸುತ್ತಿರುವುದನ್ನು ವಿಡಿಯೋ ಮಾಡಿದ ವಿದ್ಯಾರ್ಥಿಯೊಬ್ಬರನ್ನು ಬಂಧಿಸಿದ್ದಾರೆ.
ಸಾಮಾಜಿಕ ಜಾಲತಾಣಗಳಲ್ಲಿ ರೇವಂತ್ ರೆಡ್ಡಿ ಸರ್ಕಾರದ ವಿರುದ್ದ ದೊಡ್ಡ ಮಟ್ಟದ ಆಕ್ರೋಶ ಭುಗಿಲೆದ್ದಿದೆ. ರಾತ್ರಿ ಹೊತ್ತು ಮರಗಳನ್ನು ಉರುಳಿಸುವಾಗ ನವಿಲುಗಳು ಚೀರಾಡುವ, ಎಲ್ಲಿಗೆ ಹೋಗಬೇಕೆಂದು ದಿಕ್ಕು ತೋಚದೆ ಓಡಾಡುವ ಜಿಂಕೆಗಳು ಹಾಗೂ ಮತ್ತಿತರ ವನ್ಯ ಜೀವಿಗಳ ಮನಕಲಕುವ ವಿಡಿಯೋಗಳು ಭಾರೀ ವೈರಲ್ ಆಗಿವೆ.
ವಿವಾದಿತ ಭೂಮಿ ಹೈದರಾಬಾದ್ ವಿವಿಯದ್ದಾ?
ಸರ್ಕಾರ ಅರಣ್ಯ ನಾಶ ಮಾಡಿ ಐಟಿ ಪಾರ್ಕ್ ಸ್ಥಾಪಿಸಲು ಹೊರಟಿರುವ 400 ಎಕರೆ ಭೂಮಿ ಹೈದರಾಬಾದ್ ವಿವಿಯದ್ದು ಎಂದು ವಿದ್ಯಾರ್ಥಿಗಳು ಮತ್ತು ಇತರ ಹೋರಾಟಗಾರರು ವಾದಿಸುತ್ತಿದ್ದಾರೆ. ಸರ್ಕಾರ ಐಟಿ ಪಾರ್ಕ್ ಮಾಡಲು ಮುಂದಾಗಿರುವ ಜಾಗ ಕಂದಾಯ ಇಲಾಖೆಯದ್ದಲ್ಲ ಎಂದಿದ್ದಾರೆ.
ಆದರೆ, ಸರ್ಕಾರ, ಅದು ವಿವಿಯ ಜಾಗವಲ್ಲ, ಸರ್ಕಾರದ ಜಾಗ. ಸರ್ವೆ ನಂಬರ್ 25ರ 400 ಎಕರೆ ಜಾಗವನ್ನು 2004 ರಲ್ಲಿ ಅವಿಭಜಿತ ಆಂಧ್ರಪ್ರದೇಶ ಸರ್ಕಾರ ಕ್ರೀಡಾ ಸೌಲಭ್ಯಗಳಿಗಾಗಿ ಖಾಸಗಿ ಸಂಸ್ಥೆಯಾದ ಐಎಂಜಿ ಅಕಾಡೆಮಿಸ್ ಭಾರತ್ ಪ್ರೈವೇಟ್ ಲಿಮಿಟೆಡ್‌ಗೆ ನೀಡಿತ್ತು.
ನಂತರ, ಆ ಸಂಸ್ಥೆಯ ನಿಷ್ಕ್ರಿಯತೆಯ ಕಾರಣ 2006ರಲ್ಲಿ ಭೂಮಿ ಹಂಚಿಕೆಯನ್ನು ರದ್ದುಗೊಳಿಸಿತ್ತು. ಕಾನೂನು ಹೋರಾಟದ ನಂತರ ಸರ್ಕಾರ ಜಾಗವನ್ನು ಮರಳಿ ಪಡೆದುಕೊಂಡಿತು. ಸುಪ್ರೀಂ ಕೋರ್ಟ್ ಮೇ 2024ರಲ್ಲಿ ಸರ್ಕಾರದ ಮಾಲೀಕತ್ವವನ್ನು ಎತ್ತಿಹಿಡಿದಿದೆ.
ಕಂದಾಯ ದಾಖಲೆಗಳು ಇದನ್ನು “ಕಾಂಚ ಅಸ್ತಬಲ್ ಪೊರಂಬೋಕೆ ಸರ್ಕಾರಿ” (ಸರ್ಕಾರಿ ಭೂಮಿ) ಎಂದು ವರ್ಗೀಕರಿಸಿದೆ. ಜುಲೈ 19, 2024ರಂದು ವಿವಿ ಅಧಿಕಾರಿಗಳ ಸಮ್ಮುಖದಲ್ಲಿ ಸಮೀಕ್ಷೆ ನಡೆಸಿ ವಿವಿಯ ಭೂಮಿಯಿಂದ 400 ಎಕರೆಯನ್ನು ಬೇರ್ಪಡಿಸಿ ಗಡಿ ನಿರ್ಣಯಿಸಲಾಗಿದೆ.
ವಿವಿ ಜಾಗದಲ್ಲಿರುವ ಬಫಲೋ ಲೇಕ್, ಪೀಕಾಕ್ ಲೇಕ್, ಮಶ್ರೂಮ್ ರಾಕ್‌ನಂತಹ ಪ್ರಮುಖ ವೈಶಿಷ್ಟ್ಯಗಳಿಗೆ ತೆಲಂಗಾಣ ಕೈಗಾರಿಕಾ ಮೂಲಸೌಕರ್ಯ ನಿಗಮ (ಟಿಜಿಐಐಸಿ) ಅಡಿಯಲ್ಲಿ ಕೈಗೊಳ್ಳುವ ಅಭಿವೃದ್ದಿ ಕಾಮಗಾರಿಗಳಿಂದ ಯಾವುದೇ ತೊಂದರೆಯಾಗುವುದಿಲ್ಲ ಎಂದು ವಾದಿಸಿದೆ.
ಅಂಡಮಾನ್ ನಿಕೋಬಾರ್‌ನ ನಿರ್ಬಂಧಿತ ಉತ್ತರ ಸೆಂಟಿನೆಲ್ ದ್ವೀಪಕ್ಕೆ ಭೇಟಿ ನೀಡಿದ ಅಮೆರಿಕ ಪ್ರಜೆಯ ಬಂಧನ



Mr revant redy don’t show the reddy buddi